ಎಲ್ಲರಿಗೂ ಅವರು ರಾಯರು. ಎಲ್ಲರಿಗೂ ಅವರು ಧಣಿಗಳು. ಈ ಪ್ರಪಂಚದಲ್ಲಿ ಎಲ್ಲರೂ ಅವರು ಹೇಳಿದಂತೆ ಕೇಳುವವರು. ಎಲ್ಲರೂ ಅವರ ಅಡಿಯಾಳುಗಳು. ರಾಯರು ನಮ್ಮ ಮೈಯಲ್ಲೇ ಇದ್ದಾರೆ ನಮ್ಮ ಬಾಳು… ಅದು ಅವರ ಆಳು…. ಆಗುತ್ತಿದೆ ಹಾಳು. ಇವರು ಎಲ್ಲರನ್ನೂ ಪೀಡಿಸುತ್ತಾರೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಇವರಿಗಾಗಿಯೇ ನಮ್ಮ ನಿತ್ಯ ದುಡಿತ. ಅವರು ಬೇರಾರೂ ಅಲ್ಲ ನಮ್ಮ ಹೊಟ್ಟೆರಾಯರು.

ನಮ್ಮ ದೇಹದಲ್ಲಿ ಇಷ್ಟೆಲ್ಲ ಅವಯವಗಳಿವೆ. ಆದರೆ ಹೊಟ್ಟೆಯಷ್ಟು ಸೇವೆಯನ್ನು ಕೇಳುವ ಅಂಗ ಯಾವುದೂ ಇಲ್ಲ. ಈ ಪ್ರಪಂಚದಲ್ಲಿ ಎರಡು ವರ್ಗಗಳು ಮೊದಲನೆಯದು ಬದುಕುವುದಕ್ಕಾಗಿ ತಿನ್ನುವವರು ಇನ್ನೊಂದು ತಿನ್ನುವುದಕ್ಕಾಗಿಯೇ ಬದುಕಿರುವವರು

ನಮ್ಮ ಎದೆಗಿಂತ ಹೊಟ್ಟೆ ಹಿಂದಿರಬೇಕು. ಏಕೆಂದರೆ ಎದೆ ಭಾವದ ಸಂಕೇತ ಹೊಟ್ಟೆ ದಾಹದ, ಹಸಿವಿನ ಸಂಕೇತ. ನಮ್ಮಲ್ಲಿ ಭಾವ ಮುಂದಿರಬೇಕು. ಆದರೆ ದಾಹ ಮುಂದಿರುವುದು ಹೆಚ್ಚು. ಇದು ವಿಪರ್ಯಾಸ. ನಮ್ಮ ಬದುಕು ಎನ್ನುವುದು ಹೊಟ್ಟೆ -ಎದೆಯ ತಾಕಲಾಟ. ಭಾವ- ಹಸಿವಿನ ತಾಕಲಾಟ. ಈ ತಾಕಲಾಟದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಹಸಿವೇ ಗೆಲ್ಲುತ್ತದೆ.

ಒಂದು ಕಡೆ ಭರ್ತೃಹರಿ ಹೇಳುತ್ತಾನೆ “ನನಗೆ ನಾರು ಬಟ್ಟೆ ಸಂತೋಷ ನೀಡಿದರೆ ನಿನಗೆ ಪೀತಾಂಬರ ಸಂತೋಷ ನೀಡುತ್ತದೆ. ಬಟ್ಟೆಯಲ್ಲಿ ವ್ಯತ್ಯಾಸವಿರಬಹುದು ಆದರೆ ಅದರಿಂದ ದೊರಕುವ ಸಂತೋಷದಲ್ಲಿ ವ್ಯತ್ಯಾಸವಿಲ್ಲ. ಅದು ಇಬ್ಬರಿಗೂ ಒಂದೇ. ಯಾರು ಬೇಕುಗಳನ್ನು ದೂರವಿಡುತ್ತಾನೋ ಅವನು ಶ್ರೀಮಂತ . ಯಾರಿಗೆ ಬೇಕುಗಳು ಬೇಕೋ ಅವನು ಮಹಾ ದರಿದ್ರ ಎಂದು. ಹಸಿವು ಶಾಂತವಾದರೆ ಬದುಕೇ ಶಾಂತ ಅದಕ್ಕೆ ಕಗ್ಗದ ಕವಿ ಹೇಳಿದ್ದು ಉದರ ದೈವಕೆ ಜಗದೊಳು ಎದುರು ದೈವವದೆಲ್ಲಿ ? ಮೊದಲದರ ಪೂಜೆ ಎಂದು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಹುಟ್ಟಿದ ಮಗು ಅತ್ತಿತು ಎಂದರೆ ಅದು ಹಸಿವಿನ ಪ್ರತೀಕ. ಜೀವನ ಆರಂಭವಾಗುವುದೇ ಅಲ್ಲಿಂದ. ನಮ್ಮೆಲ್ಲರ ದಿನದ ಮೊದಲ ಕೆಲಸ ಬೆಡ್ ಟಿ ಬೆಡ್ ಕಾಫಿ ಯಿಂದಲೇ ಪ್ರಾರಂಭ . ಅಂದರೆ ಪರ್ಯಾಯವಾಗಿ ಹೊಟ್ಟೆಯಿಂದಲೇ ಪ್ರಾರಂಭ. ಅದಕ್ಕಾಗೇ “ನಾಲಿಗೆ ಚಪಲಕ್ಕಿಂತ ಬೇರೆ ಚಪಲವಿಲ್ಲ” ಎಂಬ ಮಾತಿದೆ. ಆದ್ದರಿಂದಲೇ ಪ್ರಾಜ್ಞರು ಹೇಳಿದ್ದು ಯಾರು ಹೊಟ್ಟೆಯನ್ನು ಅಂಕೆಯಲ್ಲಿ ಟ್ಟುಕೊಳ್ಳಬಲ್ಲರೋ ಅವರು ಪ್ರಪಂಚವನ್ನು ಗೆಲ್ಲಬಲ್ಲರು ಎಂದು.

ನಾವು ಅವಶ್ಯಕತೆಗಿಂತ ಹೆಚ್ಚು ತಿನ್ನಬಾರದು. ಮನೆಯಲ್ಲಿದೆ ಎಂದು ನಮ್ಮ ಅವಶ್ಯಕತೆಗಿಂತ ಹೆಚ್ಚು ತಿಂದರೆ ಅದು ನಮ್ಮದಲ್ಲದ್ದನ್ನು ತಿಂದಂತೆ. ಪ್ರಪಂಚದಲ್ಲಿ ಹೊಟ್ಟೆಗಿಲ್ಲದೆ ಸಾಯುವವರಿದ್ದಾರೆ. ಅವರಿಗೆ ಅನ್ಯಾಯ ಮಾಡಿದಂತೆ. ಹಾಗಾಗಿ ಎಷ್ಟು ಬೇಕೋ ಅಷ್ಟನ್ನು ಮಾತ್ರ ಸೇವಿಸಬೇಕು. ದೇಹಕ್ಕೆ ಹಿತವಾದದ್ದನ್ನು ಮಾತ್ರ ಸೇವಿಸಬೇಕು. ಹಸಿವಾದಾಗ ಮಾತ್ರ ಆಹಾರ ಸೇವಿಸಬೇಕು. ಈ ನಿಯಮವನ್ನು ಪಾಲಿಸಿದರೆ ಆರೋಗ್ಯವಂತ ಶರೀರ ನಮ್ಮದಾಗುತ್ತದೆ.

ಒಂದು ಹೊತ್ತು ಊಟ ಮಾಡುವವನು ಯೋಗಿ….ಎರಡು ಹೊತ್ತು ಊಟ ಮಾಡುವವನು ಭೋಗಿ…… ಮೂರು ಹೊತ್ತು ಊಟ ಮಾಡುವವನು ರೋಗಿ….. ನಾಲ್ಕು ಹೊತ್ತು ಊಟ ಮಾಡುವವನನ್ನು ಹೊತ್ತುಕೊಂಡು ಹೋಗಿ. ಎಂಬ ಮಾತಿದೆ ಆಹಾರ ಸ್ವೀಕರಿಸುವ ನಿಯಮವನ್ನು ನಮ್ಮ ಪೂರ್ವಜರು ಈ ರೀತಿ ನಿರ್ಧರಿಸಿದ್ದರು. ಗ್ರಹಸ್ಥರಿಗೆ ಮೂವತ್ತೆರಡು ತುತ್ತು…. ವಾನಪ್ರಸ್ಥರಿಗೆ ಹದಿನಾರು ತುತ್ತು….. ಪೂರ್ಣ ವಿರಕ್ತ ಅಥವಾ ಅವಧೂತನಿಗೆ ಎಂಟು ತುತ್ತು ಎಂದು. ಆಹಾರ ಸೇವಿಸುವಾಗ ಮೊದಲ ತೇಗು ಬಂದಾಗ ಏಳಬೇಕು. ತೇಗು ಎನ್ನುವುದು ನಮ್ಮೊಳಗಿನ ಅಲಾರಾಮ್ ಇದ್ದ ಹಾಗೆ. ಆಹಾರದ ಎಲ್ಲ ನಿಯಮಗಳನ್ನು ಪಾಲಿಸಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

RELATED ARTICLES  'ಸಂಸಾರದಲ್ಲಿ ಸಮಾಧಾನ ಶ್ರೇಷ್ಟ ಕೀಲಿಕೈ' ಎಂದರು ಶ್ರೀಧರರು.

ನಮ್ಮ ಉತ್ತಮ ಆರೋಗ್ಯಕ್ಕಾಗಿ ಹೊಟ್ಟೆರಾಯನನ್ನು ನಿಯಂತ್ರಣದಲ್ಲಿಟ್ಟಿರಬೇಕು. ಆಹಾರ ಶುದ್ಧವಾಗಿದ್ದರೆ ಮೈ ಮನಸ್ಸು ಶುದ್ಧವಾಗಿರುತ್ತದೆ. ನಮಗೆ ಊಟ ಗೊತ್ತಿದ್ದರೆ ಮುಕ್ತಿ ಗೊತ್ತು ಅಂತ ಅರ್ಥ. ನಮಗೆ ಊಟ ಗೊತ್ತಿದ್ದರೆ ವೈಕುಂಠ ಗೊತ್ತು ಅಂತ ಅರ್ಥ. ನಮಗೆ ಊಟ ಗೊತ್ತಿದ್ದರೆ ಯೋಗ ಗೊತ್ತು ಅಂತ ಅರ್ಥ.

ಆಹಾರ ಶುದ್ಧವಾಗಿರಬೇಕು. ಆಹಾರ ಶುದ್ಧವಾಗಿರದಿದ್ದರೆ ನಮ್ಮ ಮನಸ್ಸು ಶುದ್ಧವಾಗಿರುವುದಿಲ್ಲ. ಒಬ್ಬ ವಿರಕ್ತನಿದ್ದ ಆತ ಒಂದು ದಿನ ಶ್ರೀಮಂತನ ಮನೆಗೆ ಊಟಕ್ಕೆ ಹೋದ. ಊಟ ಮಾಡಿ ಬರುವಾಗ ಬೆಳ್ಳಿ ಲೋಟವೊಂದನ್ನು ಕದ್ದು ತಂದ. ಇದು ಗೊತ್ತಾದಾಗ ಶ್ರೀಮಂತನಿಗೆ ತುಂಬಾ ಬೇಸರವಾಯ್ತು. ಸ್ವಲ್ಪ ದಿನದ ನಂತರ ವಿರಕ್ತರಿಗೆ ಜ್ಞಾನೋದಯವಾಯಿತು. ತಾನು ಮಾಡಿದ್ದು ತಪ್ಪು ಎಂದು ಅರಿವಾಯಿತು. ಶ್ರೀಮಂತರ ಮನೆಗೆ ಓಡೋಡಿ ಬಂದರು. ಬಂದವರೇ ಶ್ರೀಮಂತರನ್ನು ಪ್ರಶ್ನಿಸಿದರಂತೆ ” ಈ ಸಂಪಾದನೆಯ ಮೂಲ ಯಾವುದು ನಿಜ ಹೇಳು” ಎಂದು ಶ್ರೀಮಂತ ಸತ್ಯವನ್ನೇ ಹೇಳಿದ. ಈ ಸಂಪತ್ತಿನ ಮೂಲ ಕಳ್ಳತನ ವೆಂದು . ಆಗ ವಿರಕ್ತರಿಗೆ ತನ್ನಲ್ಲಿ ಕಳ್ಳತನದ ಭಾವ ಬರಲು ಕಾರಣವೇನು ? ಎಂಬ ಪ್ರಶ್ನೆಗೆ ಉತ್ತರ ದೊರಕಿತ್ತು. ಶ್ರೀಮಂತನ ಮನೆಯಲ್ಲಿ ಮಾಡಿದ ಊಟದ ಮೂಲಕ ಆ ಭಾವ ವಿರಕ್ತರಲ್ಲಿ ಬಂದಿತ್ತು. ಅಂದರೆ ಹೊಟ್ಟೆಗೆ ಹೋದ ಆಹಾರ ಮಾಡುವ ಪರಿಣಾಮವದು. ಆಹಾರದ ಸ್ಥೂಲ ಭಾಗ ಶರೀರವನ್ನು ರೂಪಿಸಿದರೆ ಆಹಾರದ ಸೂಕ್ಷ್ಮ ಭಾಗ ಮನಸ್ಸನ್ನು ರೂಪಿಸುತ್ತದೆ
ಹಾಗಾಗಿ ಹೊಟ್ಟೆರಾಯರ ಕುರಿತು ಜಾಗೃತರಾಗಿರಿ.

✍️ ಡಾ.ರವೀಂದ್ರ ಭಟ್ಟ ಸೂರಿ.