ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀ ಚಿನ್ಮಯ ಭಟ್ಟ ಗುಡ್ಡೇಬಾಳು

ಪ್ರತಿದಿನವೂ ಒಂದೇ ತೆರನಾಗಿ ಯಾರಿಗೂ ಇರುವುದಿಲ್ಲ. All day is not a Sunday. ಒಂದು ದಿನ ಅತಿಯಾದ ಸಂತೋಷ, ಒಂದು ದಿನ ತಡೆಯಲೇ ಆಗದ ದುಃಖ, ಮತ್ತೊಮ್ಮೆ ಸುಮ್ಮನೆ ಕಾಡುವ ಬೇಸರ, ಹೀಗೆ ಸಾಗುತ್ತಲೇ ಇರುತ್ತದೆ ದಿನಗಳ ಹಾದಿ. ಸಂತೋಷವಾದಾಗ ಹಾಡಲೂ ಬಹುದು. ಕುಣಿಯಲೂ ಬಹುದು. ಆದರೆ ದುಃಖವಾದಾಗ ಬರೀ ಹಾಡು ಕೇಳಬಹುದು, ಹಾಡಬಹುದು ಆದರೆ ಕುಣಿಯುವುದಕ್ಕಾಗುವುದಿಲ್ಲ. ? ಹೀಗಾಗಿ ಸಂತೋಷವನ್ನು ಇಮ್ಮಡಿಸುವ ಹಾಗೂ ದುಃಖವನ್ನು ಶಮನಗೊಳಿಸುವ ಒಂದೇ ಒಂದು ಸಂಗತಿಯೆಂದರೆ ಅದು ಸಂಗೀತ. ನಮ್ಮೂರಿನ ಉದಯೋನ್ಮುಖ ಸಂಗೀತಗಾರನೋರ್ವನೊಂದಿಗೆ ನಾನಿಂದು ಹಾಜರಾಗುತ್ತಿದ್ದೇನೆ. ಚಿನ್ಮಯ ಭಟ್ಟ ಗುಡ್ಡೇಬಾಳು ನನ್ನ ಇಂದಿನ ಅಕ್ಷರ ಅತಿಥಿ.
ನಮ್ಮ ಊರು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹೊಸಾಕುಳಿ. ಇಲ್ಲಿ ಗುಂಟೆಗಳ ಸರದಾರರೇ ಹೆಚ್ಚು. ಒಂದು ಎಕರೆಯಲ್ಲಿ ಸರಾಸರಿ 10-15 ಮನೆಯವರು ಇಲ್ಲಿ ಬದುಕುತ್ತಾರೆ. ಬದುಕಿಗೆ ನೌಕರಿ ಇಲ್ಲಿ ಅನಿವಾರ್ಯ. ಮಕ್ಕಳು ಎಸ್ ಎಸ್ ಎಲ್ ಸಿ ಮುಗಿಸುವ ಹೊತ್ತಿಗೆ ನೀನು ಮುಂದೆ ಏನು ಮಾಡುವವನೋ?! ಎಂದು ಜನ ಕೇಳುತ್ತಿರುತ್ತಾರೆ. ಹೀಗಾಗಿ ಮಕ್ಕಳು ಜೀವನದ ಗುರಿ ಎಂಬ ಭಾಷಣ ಮಾಡುವ ಪರಿಸ್ಥಿತಿಯಲ್ಲಿ ಇರುವುದಿಲ್ಲ. ಅದಾಗಲೇ ಜೀವನಕ್ಕೊಂದು ಉಪಜೀವನ ಹಿಡಿದಾಗಿರುತ್ತದೆ. ನಮ್ಮ ಭಾಗದಲ್ಲಿ ಶ್ರೇಷ್ಠ ಸಂಗೀತ ವಿದ್ವಾಂಸರಾಗಿ ಬಾಳಿ ಬದುಕಿ ಹೋದ ಪಂಡಿತ್ ಜಿ.ಆರ್. ಭಟ್ಟ ಬಾಳೆಗದ್ದೆ ಇವರು ಅನೇಕ ಶಿಷ್ಯರನ್ನು ತಯಾರು ಮಾಡಿ ಸಮಾಜಕ್ಕೆ ಬಳುವಳಿಯಾಗಿ ನೀಡಿ ಹೋಗಿದ್ದಾರೆ ಮತ್ತು ಅವರಿಗೂ ಒಂದು ಬದುಕು ಕೊಟ್ಟಿದ್ದಾರೆ. ಆ ಶಿಷ್ಯ ಪರಂಪರೆಯ ಒಂದು ಕೊಂಡಿ ನಮ್ಮ ಚಿನ್ಮಯ. ವಿದುಷಿ ಲಕ್ಷ್ಮಿ ಹೆಗಡೆ ಹೊಸಾಕುಳಿ ಇವರ ಬಳಿ ಅಭ್ಯಾಸ ಪ್ರಾರಂಭಿಸಿದ ಚಿನ್ಮಯ ಪ್ರಸ್ತುತ ಶ್ರೀ ರಘುಪತಿ ಹೆಗಡೆ ಶೀಗೆಹಳ್ಳಿ ಇವರಲ್ಲಿ ಅಭ್ಯಾಸ ಮುಂದುವರಿಸಿದ್ದಾರೆ.
‌‌‌ಚಿನ್ಮಯನ ತಂದೆ ಶ್ರೀಯುತ ಕೆ.ಆರ್.ಭಟ್ಟರು ಹೊಸಾಡ ಹೈಸ್ಕೂಲ್ ನಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿದವರು. ಯಕ್ಷಗಾನದಲ್ಲಿ ಅಪಾರ ಆಸಕ್ತಿ ಹೊಂದಿದ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗಿಯೂ ಬಣ್ಣ ಹಚ್ಚಿದವರು. ಅಮ್ಮ ಸದ್ಗೃಹಿಣಿ. ಚಿನ್ಮಯನಂತಹ ಮಗನನ್ನು ಪಡೆಯುವುದು ಸೌಭಾಗ್ಯ. ಸಂಗೀತಾರಾಧನೆಯನ್ನೇ ತನ್ನ ಉಸಿರಾಗಿಸಿಕೊಂಡ ಸಹೋದರ ಚಿನ್ಮಯ ಆಳ್ವಾಸ್ ನಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಾನೆ.
‌ ಪಂಡಿತ ಜಿ.ಆರ್. ಭಟ್ಟ ಬಾಳೆಗದ್ದೆ ನಾಡಿನ ಅನನ್ಯ ಸಂಗೀತ ಕಲಾವಿದರು. ತಾವೇ ಸ್ವತಃ ಕವಿಗಳಾಗಿ ಸಾಹಿತ್ಯ ರಚಿಸಿ,‌ ಸಂಗೀತ ಸಂಯೋಜಿಸಿ, ಅದನ್ನು ಪ್ರಸ್ತುತ ಪಡಿಸುವ ಅವರ ಕಲಾ ಕೌಶಲ್ಯಕ್ಕೆ ಎಂಥವರೂ ಬೆರಗಾಗಬೇಕು. ಆದರೆ ಅವರು ತಮ್ಮನ್ನು ತಾವು ಲೋಕಮುಖಕ್ಕೆ ತೆರೆದುಕೊಂಡವರಲ್ಲ. ಪ್ರಚಾರ ಬಯಸದೇ, ಪ್ರಶಸ್ತಿಗಳಿಗೆ ಆಸೆ ಪಡದೇ ಸರಳ ಸುಂದರ ಜೀವನ ನಡೆಸಿ ನೂರಾರು ಶಿಷ್ಯರನ್ನು ಸಮಾಜಕ್ಕೆ ಕೊಟ್ಟು ನಡೆದುಬಿಟ್ಟರು. ಅವರದೇ ಆ ಸಜ್ಜನಿಕೆ ಅವರ ಶಿಷ್ಯಂದಿರಲ್ಲೂ ಮುಂದುವರೆದುಕೊಂಡು ಬಂದುಬಿಟ್ಟಿದೆ. ವಿನಯವಂತಿಕೆ, ವಿಧೇಯತೆಯೇ ಮೂರ್ತಿವೆತ್ತಂತೆ ಬಾಳುವ ಅವರ ಶಿಷ್ಯರನೇಕರು ಇಂದು ನಾಡಿನ ಅನೇಕ ಭಾಗಗಳಲ್ಲಿ ಸಂಗೀತ ತರಗತಿ ನಡೆಸುತ್ತಾ ಶಿಷ್ಯಂದಿರಿಗೆ ವಿದ್ಯಾದಾನ ಮಾಡುತ್ತಾರೆ.
‌ ಚಿನ್ಮಯನ ಕಂಠವೇ ವೈಶಿಷ್ಟ್ಯ ಪೂರ್ಣವಾದದ್ದು. ಸ್ಪಷ್ಟತೆ, ಅಭಿವ್ಯಕ್ತಿ, ರಾಗ, ತಾಳ, ಭಾವ, ಲಯಗಳ ಪರಿಕಲ್ಪನೆ ಚಿನ್ಮಯನಿಗೆ ದೇವರು ಕೊಟ್ಟ ವರ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿ ಇಂದು ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುವ ಚಿನ್ಮಯ ನಮ್ಮೂರಿನ ಹೆಮ್ಮೆಯ ಯುವಕ.
ಪ್ರಚಾರಗಳ ಸೋಗಿಗೆ ತನ್ನನ್ನು ತಾನು ಒಗ್ಗಿಸಿಕೊಳ್ಳದ ಚಿನ್ಮಯನ ಹತ್ತಿರ ನಾನೇ ಸಾಕಷ್ಟು ಹಾಡನ್ನು ಹಾಡಿಸಿಕೊಳ್ಳುತ್ತೇನೆ. ಇಂದಿನ ಜಮಾನಾದಲ್ಲಿ ಹಿನ್ನೆಲೆಯಲ್ಲಿ ಇದ್ದವರು ಸೋತು ಹೋಗುತ್ತಾರೆ. ಎಂಥೆಂಥವರೋ ಎಂತೆಂತಹುದೋ ರಾಗದಲ್ಲಿ ಬಾಯಿ ಓರೆ ಮಾಡಿ ಹಾಡಿ famous ಆಗಿ ಬಿಡುವಾಗ ? ನಮ್ಮ ಚಿನ್ಮಯನಂತವರು ಶಾಸ್ತ್ರೀಯವಾಗಿ ಕಲಿತೂ ನಮಗೆ ಅದೆಲ್ಲ ಬೇಡ ಎಂದು ಸುಮ್ಮನಿದ್ದು ಬಿಡುತ್ತಾರೆ. ಆದರೆ ನನಗೆ ಆತ ತುಂಬಾ ಇಷ್ಟದ ವ್ಯಕ್ತಿ. ನಮ್ಮ ಊರಿನಲ್ಲಿ ಯಕ್ಷಗಾನ, ಸಂಗೀತ, ಸುಗ್ಗಿ, ಇವಿಷ್ಟು ಬಹಳ ಜನಪ್ರಿಯತೆ ಪಡೆದ ಜನಪದ ಕಲೆಗಳು. ನಮ್ಮ ಸಹೋದರ ಸಂಗೀತದಲ್ಲಿ ನಮ್ಮ ಊರಿಗೊಂದು ಹೆಸರು ತರುತ್ತಿದ್ದಾನೆಂದರೆ ನಾನು ಅತ್ಯಂತ ಸಂತೋಷದಿಂದ ಅವನನ್ನು ಪ್ರೋತ್ಸಾಹಿಸಬೇಕು…ಮತ್ತು ನನ್ನಿಂದಾದುದನ್ನು ಅವನಿಗೆ ಮಾಡಬೇಕು.
‌ ಚಿನ್ಮಯ ಅತ್ಯಂತ ಸ್ನೇಹ ಸ್ವಭಾವದ ವ್ಯಕ್ತಿ. ಅಂಗಡಿ ಬಾಗಿಲಲ್ಲಿ ವಿನಾಕಾರಣ ಹರಟೆ ಹೊಡೆಯುವುದು, ಅಲ್ಲಿಲ್ಲಿ ಬೇಕಾಬಿಟ್ಟಿ ತಿರುಗಾಡುವುದು…. ಇದೆಲ್ಲ ಸಲ್ಲವೇ ಸಲ್ಲ ಅವನಿಗೆ. ಹೊಸ ಯೋಚನೆ, ಹೊಸ ರಾಗ ಸಂಯೋಜನೆ ಇವುಗಳಲ್ಲೇ ಆತ ಮಗ್ನ.
ಮಕ್ಕಳಿಗೆ ಕಲಿಸುವುದೂ ಒಂದು ಕಲೆ. ನನಗೆ ಎಲ್ಲಾ ಗೊತ್ತಿದ್ದ ಮಾತ್ರಕ್ಕೆ ನನ್ನ ಮಕ್ಕಳಿಗೆ ಎಲ್ಲವನ್ನೂ ಗೊತ್ತುಪಡಿಸುವುದಕ್ಕಾಗುತ್ತದೆಎಂದಲ್ಲ. ಕೌಶಲ್ಯ ಸಿದ್ಧಿಸಬೇಕು ಅದಕ್ಕೆ. ಮಕ್ಕಳನ್ನು ಅಪಾರ ಕಾಳಜಿಯಿಂದ ತಿದ್ದುವ ಚಿನ್ಮಯ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಸಂಗೀತ ಗುರು. ಕೆಲವಷ್ಟನ್ನೇ ಕಲಿತು ಹಲವಷ್ಟು ಗೊತ್ತಿರುವಂತೆ ಫೋಸ್ ಕೊಡುವವರ ಸಾಲಿನಲ್ಲಿ ಚಿನ್ಮಯನ ಹೆಸರಿಲ್ಲ. ? ಈ ಕೆಲಸ ನಿನ್ನಿಂದ ಆಗಬೇಕೆಂದರೆ ಸುಖಾ ಸುಮ್ಮನೆ ಇಲ್ಲದ ಸಲ್ಲದ ಕಾರಣ ಹೇಳುವವನಲ್ಲ ನಮ್ಮ ಚಿನ್ಮಯ. ಹಾಡಿಗಿಂತಿಷ್ಟು ಹಣ ಕೊಡಿ ಎಂದು demand ಮಾಡುವವನೂ ಅಲ್ಲ.
ಚಿನ್ಮಯನಂಥವರು ಮತ್ತಷ್ಟು ಪ್ರಚಾರಕ್ಕೆ ಬರಬೇಕು. ನಮ್ಮಂತಹ ಚಿಕ್ಕ ಹಳ್ಳಿಗಳ ಹಣೆ ಬರಹವೇ ಇಷ್ಟು. ಇಲ್ಲಿ ಎಲ್ಲಾ ಇದೆ. ಏನೂ ಇಲ್ಲ. ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ ವೇದಿಕೆ ಸಿಗುತ್ತಿಲ್ಲ. ಅರಸಿಕೊಂಡು ಹೋಗುವುದಕ್ಕೆ ನಮ್ಮವರಿಗೆ ತಿಳಿಯುವುದಿಲ್ಲ. ಕೆಲವೊಮ್ಮೆ ನಮ್ಮವರೇ ನಮ್ಮವರ ಕೈಕಾಲು ಎಳೆದು ಗಪ್ಪಗೆ ಕೂಡ್ರಿಸಿ ಬಿಡುತ್ತಾರೆ ಅಲುಗಾಡದಂತೆ. ? ಅವನನ್ನು ಕರೆದರೆ ನಾನು ಬರುವುದಿಲ್ಲ. ? ಅವರ ಪಂಗಡವೇ ಬೇರೆ. ? ಅವನು ನನ್ನನ್ನು ಕರೆಯಲಿಲ್ಲ….ಹೀಗಾಗಿ ನಾನೂ ಅವನನ್ನು ಕರೆಯುವುದಿಲ್ಲ. ? ಹೀಗೆ ಸಂಗೀತದಲ್ಲೂ ಸಾವಿರ ಅಪ ಸ್ವರಗಳಿವೆ. ಹಿತ್ತಲ ಗಿಡ ಮದ್ದಲ್ಲವೆಂಬುದನ್ನು ಸುಳ್ಳು ಮಾಡಿದವರೇ ಕಡಿಮೆ.
ನನ್ನೊಡನಾಡಿಯಾಗಿ ನನ್ನ ಬಳಗಕ್ಕೆ ಆಗಾಗ ಗಾನ ಸುಧೆ ಉಣಬಡಿಸುವ ಚಿನ್ಮಯನ ಸಂಗೀತಾಭಿಮಾನಿ ನಾನು. ಅವನ ಧ್ವನಿ ಕೇಳಿದರೆ ನನ್ನ ಬೇಸರ ದೂರ ಹೊರಟು ಹೋಗುತ್ತದೆ. ಮತ್ತಷ್ಟು ಇನ್ನಷ್ಟು ಬರೆಯಬೇಕೆಂಬ ಉತ್ಸಾಹ ಬರುತ್ತದೆ. ಚಿನ್ಮಯನ ಗೆಳೆತನ ನನ್ನ ಮನಸ್ಸಿಗೆ glucose ಇದ್ದಂತೆ.
ವರ್ತಮಾನಕ್ಕೆ ಚಿನ್ಮಯ ತೆರೆದುಕೊಳ್ಳಬೇಕು. ನುಗ್ಗಬೇಕು. ಕೆಲಮೊಮ್ಮೆ ಕರ್ಚೀಫು ಒಗೆಯದಿದ್ದರೆ ಬಸ್ಸಿನಲ್ಲಿ ಸೀಟು ಸಿಗುವುದಿಲ್ಲ. ಸರತಿ ಸಾಲಿನಲ್ಲಿ ನಿಂತು ಹತ್ತುವ ಮುಂಚೆ ಬಸ್ಸು ಹೊರಟು ಹೋಗುತ್ತದೆ. ಎಳೆದಾಡಿಯಾದರೂ ಕಿಟಕಿ ಬದಿಗೆ ಕುಳಿತುಕೊಳ್ಳಬೇಕು. ?ವಾಂತಿ ಬರದಿದ್ದರೂ ಬಂದ ಹಾಗೆ ನಟಿಸಬೇಕು. ಅಯ್ಯೋ! ಅಯ್ಯೋ! ಅಯ್ಯೋ! ನಮ್ಮವರು ನಮ್ಮನ್ನು ತೀರಾ ಸಭ್ಯರಾಗಿ ಬೆಳೆಸಿಬಿಟ್ಟರು.
ಚಿನ್ಮಯ ನಾಡಿನ, ರಾಷ್ಟದ ಗಮನ ಸೆಳೆಯುವಂತಾಗಲಿ. ಅವನಿಗೆ ಅವಕಾಶಗಳು ಅರಸಿ ಬರಲಿ. ಅವನ ವಿಧೇಯತೆಯೇ ಅವನನ್ನು ಕಾಪಾಡಲಿ. ಅವನ ಶ್ರೇಯಸ್ಸನ್ನು ಕಾಣುತ್ತಾ ನನ್ನ ದಾರಿಯೂ ಸಾಗಬೇಕು. ನಮ್ಮ ಅಕ್ಕ ಪಕ್ಕ ಸಂತೋಷವೇ ತುಂಬಿರಬೇಕು. ಅವನೇ ಇಷ್ಟಪಡುವ ಸಾಲಿನಂತೆ ನಾನು ಬೆಳೆಯುವ ಕನಸಿದೆ ನನಗೆ. ಅವನನ್ನು ಬೆಳೆಸುವ ಮನಸ್ಸೂ ಇದೆ. ?
ಸದ್ಗುರು ಶ್ರೀಧರರ ಆಶೀರ್ವಾದ ಚಿನ್ಮಯ ಭಟ್ಟ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಅರಿವು…..

ಚಿನ್ಮಯನಿಗೆ ನನ್ನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 77607 38378

??????⚫⚪???????⚫⚪?????

RELATED ARTICLES  ಶ್ರೀಗುರು ನಿಮ್ಮ ಹೃದಯದಲ್ಲಿ ಕೇವಲ ಆನಂದರೂಪದಲ್ಲಿ ಪ್ರಕಾಶಿಸುತ್ತಿದ್ದಾನೆ ಎಂಬುದನ್ನು ಯಾವಾಗಲೂ ಲಕ್ಷದಲ್ಲಿಟ್ಟುಕೊಂಡು, ಅವರ ದರ್ಶನ ಪಡೆಯುತ್ತಿರಬೇಕು.