ಜೀವನವೆಂದರೆ ಒಂದು ಮಹಾ ಸಾಗರವಿದ್ದಂತೆ. ಇದರಲ್ಲಿ ಮುಳುಗದೆ ಈಜುತ್ತಿರಬೇಕು. ಅದೇ ಸಾರ್ಥಕ ಬದುಕು. ಜೀವನದ ಸಾಗರದಲ್ಲಿ ಮುಳುಗದೇ ಈಜುತ್ತಿರಬೇಕೆಂದರೆ ಏನು ಉಪಾಯ?…. ಅದಕ್ಕೆ ಒಂದೇ ಉಪಾಯ ಒಳ್ಳೆಯದನ್ನು ಮಾಡುತ್ತಿರಬೇಕು ಒಳ್ಳೆಯದು ಮಾಡುವುದು ಎಂದರೆ …… ಸಂತೋಷ ಪಡು – ಸಂತೋಷ ಕೊಡು ಎಂದು. ನೀನೂ ಸುಖವಾಗಿರು ನಿನ್ನವರನ್ನೂ ಸುಖವಾಗಿಡು. ಇದೇ ಜೀವನ. ಇದರ ಫಲವೇನೆಂದರೆ ಇಂತಹ ಬದುಕು ಬದುಕಿದವರು ಸಾವಿಗೂ ಹೆದರುವುದಿಲ್ಲ. ಆ ಸಮಯದಲ್ಲೂ ಕೂಡ ನಗು ನಗುತ್ತಾ ಹೊರಟು ಹೋಗುತ್ತಾರೆ. ಹಾಗೆಯೇ ಇದರಿಂದ ಬದುಕಿರುವಾಗ ಏನು ಪ್ರಯೋಜನವೆಂದರೆ ವಿಶ್ವದ ಜೊತೆ ಒಂದಾಗಿರಬಹುದು. ಬದುಕಿರುವಾಗ ವಿಶ್ವದಲ್ಲಿ ಒಂದಾಗಿದ್ದರೆ ಮಿಳಿತವಾಗಿದ್ದರೆ ನಂತರದಲ್ಲಿ ವಿಶ್ವಾತ್ಮದಲ್ಲಿ ಮಿಳಿತವಾಗಲು ಸಾಧ್ಯ
“ಕೊಡುತ ಕೊಳುವ ಸಂತಸವ” ಇದೇ ಇದರ ಮೂಲ. ಹಾಗೆಂದರೇನು ಎನ್ನುವುದಕ್ಕೆ ಒಂದು ಘಟನೆಯ ಉದಾಹರಣೆ. ಅದೊಂದು ಆಸ್ಪತ್ರೆ. ಅಲ್ಲೊಂದು ಚಿಕ್ಕ ಕೊಠಡಿ. ಆ ಕೊಠಡಿಯಲ್ಲಿ ಇಬ್ಬರು ರೋಗಿಗಳು. ಅಲ್ಲಿರುವುದು ಒಂದೇ ಕಿಟಕಿ. ಒಂದು ಮಂಚ ಕಿಟಕಿಯ ಪಕ್ಕ. ಇನ್ನೊಂದು ಆಚೆ ಪಕ್ಕದಲ್ಲಿ. ಶ್ವಾಸಕೋಶದ ತೊಂದರೆ ಇರುವವನಿಗೆ ಕಿಟಕಿ ಪಕ್ಕದಲ್ಲಿ ಜಾಗ ಯಾಕೆಂದರೆ ಸ್ವಲ್ಪ ಶುದ್ಧ ಗಾಳಿಯನ್ನು ಉಸಿರಾಡಲಿ ಎಂದು. ಇಬ್ಬರು ರೋಗಿಗಳು ಎಲ್ಲ ಸುದ್ದಿಗಳನ್ನು ಮಾತನಾಡಿಕೊಳ್ಳುತ್ತಿದ್ದರು. ವಿಷಯ ಖಾಲಿಯಾದಾಗ ಕಿಟಕಿಯ ಪಕ್ಕದಲ್ಲಿದ್ದವ ಎದ್ದು ಕೂಡ್ರುತ್ತಿದ್ದ. ಹೊಸ ಗಾಳಿಯನ್ನು ಸೇವಿಸಲು ಕಿಟಕಿಯ ಹತ್ತಿರ ಬರುತ್ತಿದ್ದ. ಹಾಗೆಯೇ ಕಿಟಕಿಯ ಹೊರಗಿನ ಪ್ರಪಂಚದ ವರ್ಣನೆ ಮಾಡುತ್ತಿದ್ದ. ಹಾಸಿಗೆ ಆಳಾಗಿದ್ದ ರೋಗಿಗೆ ಹೊರಗಿನ ಪ್ರಪಂಚ ಕನಸಾಗಿತ್ತು. ಆತ ಇವನ ವರ್ಣನೆ ಕೇಳಿ ಸಂತೋಷ ಪಡುತ್ತಿದ್ದ . ಹೀಗೆ ದಿನ ಕಳೆಯುತ್ತಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಕಿಟಕಿಯ ಪಕ್ಕ ಇದ್ದ ರೋಗಿ ಮರಣ ಹೊಂದಿದ. ಮುಂದಿನ ವಿಧಿವಿಧಾನಗಳೆಲ್ಲ ಮುಗಿದವು. ಆಗ ಇನ್ನೊಬ್ಬ ನನಗೆ ಕಿಟಕಿಯ ಪಕ್ಕದ ಹಾಸಿಗೆ ನೀಡುವಂತೆ ಕೋರಿದ. ಒಪ್ಪಿದ ಆಸ್ಪತ್ರೆಯ ಸಿಬ್ಬಂದಿ ಆತನನ್ನು ಆ ಹಾಸಿಗೆಯ ಮೇಲೆ ಮಲಗಿಸಿದರು. ಆತ ಅಲ್ಲಿಯೇ ಕಷ್ಟಪಟ್ಟು ಎದ್ದು ಕುಳಿತ. ಅವನಿಗೆ ಕಿಟಕಿಯಿಂದ ಹೊರಗಿನ ದೃಶ್ಯ ನೋಡುವ ಕುತೂಹಲ. ಇಷ್ಟು ದಿನ ಇನ್ನೊಬ್ಬ ವರ್ಣಿಸುತ್ತಿದ್ದ ಪ್ರಕೃತಿ ಸೌಂದರ್ಯ ಸವಿಯುವ ಆಸೆ. ಆದರೆ ಆ ಕಿಟಕಿಯಿಂದ ಹೊರ ನೋಡಿದರೆ ಆತ ವರ್ಣಿಸುತ್ತಿದ್ದ ಯಾವ ದೃಶ್ಯವೂ ಅಲ್ಲಿರಲಿಲ್ಲ. ಕೇವಲ ಒಂದು ಗೋಡೆ ಮಾತ್ರ ಇತ್ತು. ನರ್ಸ್ ಬಳಿ ಆತ ಕೇಳಿದ ಅವನು ವರ್ಣಿಸುತ್ತಿದ್ದ ದೃಶ್ಯಗಳೆಲ್ಲಿ ?ಎಂದು. ಆಗ ನರ್ಸ್ ಹೇಳಿದಳು “ಆತ ಪ್ರಕೃತಿ ಯನ್ನಲ್ಲ ಗೋಡೆಯನ್ನು ನೋಡಲು ಸಾಧ್ಯವಿರಲಿಲ್ಲ. ಆತ ಹುಟ್ಟು ಕುರುಡ…! ನೀನು ಗೋಡೆಯನ್ನಾದರೂ ನೋಡುತ್ತಿದ್ದೀಯಾ . ಅವನಿಗೆ ಅದೂ ಸಾಧ್ಯವಿರಲಿಲ್ಲ. ನಿನ್ನನ್ನು ಸಂತೋಷಪಡಿಸಲು ಆತ ಕಾಣದಿದ್ದುದನ್ನು ಕಂಡಂತೆ ಕಲ್ಪನೆ ಮಾಡಿ ವರ್ಣಿಸಿದ ಅಷ್ಟೇ ಎಂದು. ಇದೇ “ಕೊಡುತ ಕೊಳುವ ಸಂತಸವ” ಬೇರೆಯವರನ್ನು ಸಂತೋಷಪಡಿಸಿ ನಾವು ಸಂತೋಷ ಪಡುವುದು.
ತಾಯಿ ಮಗುವಿಗೆ ಹಾಲನ್ನು ಕೊಡುತ್ತಾಳೆ. ಇಲ್ಲಿ ಮಗುವಿಗಿಂತ ಸಂತೋಷ ತಾಯಿಗಿದೆ. ಬಸ್ ಡ್ರೈವರ್ ಒಬ್ಬ ಯಾವಾಗಲೂ ಹಾಡುತ್ತಾ ಡ್ರೈವ್ ಮಾಡುತ್ತಿದ್ದ. ಜನರೆಲ್ಲ ಅವನ ಬಸ್ಸನ್ನೇ ಹತ್ತುತ್ತಿದ್ದರು. ಅವನ ಖುಷಿ ಪಡುವ ಜೀವ ಎಲ್ಲ ಜೀವಕ್ಕೂ ಸಂತೋಷ ಕೊಡುತ್ತಿತ್ತು. ಆತ ನನಗೆ ಬೇರೇನೂ ಬೇಡ ಹಾಡಲು ಬಿಟ್ಟರೆ ಸಾಕು ಎನ್ನುತ್ತಿದ್ದನಂತೆ. ಇವೆಲ್ಲಾ “ಕೊಡುತ ಕೊಳುವ ಸಂತಸವ “ಎನ್ನುವುದಕ್ಕೆ ಉದಾಹರಣೆ.
ಸಂತೋಷಂ ಜನಯೇತ್ ಪ್ರಾಜ್ಞಃ ತದೇವ ಈಶ್ವರ ಪೂಜನಂ ಜನರನ್ನು ಸಂತೋಷಪಡಿಸುವುದೇ ಈಶ್ವರ ಪೂಜೆ ಎಂಬ ಮಾತು ಹೇಳುವುದು ಇದನ್ನೇ. ನಮ್ಮಿಂದಾಗಿ ಬೇರೆಯವರು ಸಂತೋಷ ಪಡಬೇಕು. ನಾವು ಬೇರೆಯವರ ಸಂತೋಷಕ್ಕೆ ಕಾರಣರಾಗಬೇಕು. ಅದು ನಿಜವಾದ ಬದುಕು…. ಸಾರ್ಥಕ ಬದುಕು ಎಲ್ಲ ಯೋಗ, ಧ್ಯಾನ, ತಪಸ್ಸು ಇದರಲ್ಲಿದೆ. ಹಾಗೆ ಬದುಕಿದವರಿಗೆ ಸಾವಿನ ಭಯವಿಲ್ಲ . ಯಮನ ಭೀತಿ ಇಲ್ಲ.
ಒಂದು ವೇಳೆ ನಿಮ್ಮಿಂದ ಬೇರೆಯವರಿಗೆ ಸಂತೋಷ ಕೊಡಲು ಸಾಧ್ಯವಿಲ್ಲದಿದ್ದರೂ ಪರವಾಗಿಲ್ಲ ಆದರೆ ನಿಮ್ಮಿಂದ ಬೇರೆಯವರಿಗೆ ದುಃಖ ವಾಗದಿರಲಿ. ನಲಿವು ಕೊಡಲು ಸಾಧ್ಯವಾಗದಿದ್ದರೂ ನೋವನ್ನು ಕೊಡಬೇಡಿ. ನೆಮ್ಮದಿ ಕೊಡಲು ಸಾಧ್ಯವಾಗದಿದ್ದರೂ ನೆಮ್ಮದಿ ಕೆಡಿಸಬೇಡಿ. ದುಃಖ ಕೊಡದಿದ್ದರೆ ಸಂತೋಷ ಕೊಟ್ಟಂತೆ…. ನೋವು ಕೊಡದಿದ್ದರೆ ನಲಿವು ಕೊಟ್ಟಂತೆ…. ನೆಮ್ಮದಿ ಕೆಡಿಸದಿದ್ದರೆ ನೆಮ್ಮದಿ ನೀಡಿದಂತೆ. ರಾಗ ದ್ವೇಷದ ಕ್ರೌರ್ಯದ ಬದುಕು ಬೇಡ. ಸಂತಸವನ್ನು ಹಂಚಿ ಸಂತಸವನ್ನು ಪಡೆಯಿರಿ. ಬದುಕನ್ನು ಸಾರ್ಥಕ ಮಾಡಿಕೊಳ್ಳಿ .
ಪ್ರಪಂಚದೊಟ್ಟಿಗೆ ಬದುಕಬೇಕೆಂದರೆ…. ಒಂದಾಗ ಬೇಕೆಂದರೆ ಆನಂದದ ಮೂಲಕ ಮಾತ್ರ ಸಾಧ್ಯ. ದುಡ್ಡಿನಿಂದ, ಅಧಿಕಾರದಿಂದ ರೂಪದಿಂದ ಭೀತಿಯಿಂದ ,ಭಯದಿಂದ ಒಂದಾಗಲು ಸಾಧ್ಯವಿಲ್ಲ. ನೆಂಟರೆಷ್ಟೋ ಈ ಲೋಕದಲ್ಲಿ ಆದರೆ ಪರ್ಮನೆಂಟ್ ಆ ದೇವನೊಬ್ಬನೆ….! ಅವನು ಪರಮ ನೆಂಟ. ಅವನ ನಂಟು ಉಳಿಯಬೇಕೆಂದರೆ ಅದು ಸಾರ್ಥಕ ಬದುಕಿನಿಂದ ಮಾತ್ರ ಸಾಧ್ಯ ಅಂತಹ ಬದುಕು ನಮ್ಮೆಲ್ಲರದಾಗಲಿ.
✍️ ಡಾ.ರವೀಂದ್ರ ಭಟ್ಟ ಸೂರಿ.