ಮುಳುಗದಿರು ಜೀವನದ ತೆರೆಯ ಮೇಲೆ ಈಜುತಿರು.. ಒಳಿತನಾಗಿಸು ಸಂತಸವ ಕೊಡುತ ಕೊಳುತ. ಕಗ್ಗದ ಈ ಸಾಲುಗಳು ಬದುಕಿಗೂ ನೀರಿಗೂ ಸಂಬಂಧವನ್ನು ಕಲ್ಪಿಸಿವೆ. ಜೀವನ ಶಬ್ದಕ್ಕೆ ಸಂಸ್ಕೃತದಲ್ಲಿ ನೀರು ಎಂಬರ್ಥವಿದೆ. ನೀರಿಗೆ ಹೇಗೆ ಸಹಜವಾದ ಗತಿ ಇದೆಯೋ ಜೀವನಕ್ಕೂ ಕೂಡ ಹಾಗೇ. ಜೀವನದಲ್ಲಿ ಚಲನೆ ಇಲ್ಲದ ಒಂದು ಕ್ಷ ಣವಿಲ್ಲ. ನಮ್ಮ ದೇಹದಲ್ಲಿ ಜೀವಕೋಶಗಳು ಕ್ಷಣ ಕ್ಷಣಕ್ಕೆ ಹುಟ್ಟುತ್ತಾ ಸಾಯುತ್ತಾ ಇರುತ್ತವೆ ಅದಕ್ಕೆ ನಮ್ಮ ದೇಹ ಚಲನಶೀಲವಾಗಿದೆ.

ಹಿಂದೆ ಋಷಿಮುನಿಗಳು ಬಹಳ ಕಾಲ ಬದುಕುತ್ತಿದ್ದರು. ಅದು ಹೇಗೆ ಎಂದರೆ ಅವರು ಬದುಕನ್ನು ಮೀರಿ ನಿಂತಿದ್ದರು. ಅಧ್ಯಾತ್ಮ ಸಾಧನೆಯಲ್ಲಿ ಅವರು ಜೀವನವನ್ನು ಮೀರಿ ಬೆಳೆದಿದ್ದರು. ಕಾಲವನ್ನು ಮೀರಿದರೆ, ಬದುಕನ್ನು ಮೀರಿದರೆ ಅಂತಹ ಸ್ಥಿತಿ ತಲುಪಲು ಸಾಧ್ಯ. ಜೀವನವೆಂದರೆ ಬದಲಾವಣೆ ಅದು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಮನಸ್ಸು ಕ್ಷಣ ಕ್ಷಣಕ್ಕೆ ಬದಲಾಗುತ್ತಿರುತ್ತದೆ. ಶರೀರ ಕ್ಷಣ ಕ್ಷಣಕ್ಕೆ ಬದಲಾಗುತ್ತಿರುತ್ತದೆ. ಸುತ್ತಮುತ್ತಲ ವಾತಾವರಣ ಕ್ಷಣ ಕ್ಷಣಕ್ಕೆ ಬದಲಾಗುತ್ತಿರುತ್ತವೆ. ನಮ್ಮ ಜೀವನವೆಂದರೆ ಅದು ನೀರಿನಂತೆ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ನೀರಿಗೆ ಹೇಗೆ ಗತಿ ಇದೆಯೋ ಹಾಗೆಯೇ ಜೀವನಕ್ಕೂ ಇದೆ. ನೀರಿಗೆ ಸಾಗರ ಗುರಿ ಆದರೆ ಜೀವನಕ್ಕೆ….‌? ನಾವು ಗುರಿಯನ್ನು ಮರೆತಿದ್ದೇವೆ. ಜೀವನ ದಯಾಸಾಗರನನ್ನು ತಲುಪಬೇಕು. ಆದರೆ ಅದು ನಮಗೆ ಮರೆತುಹೋಗಿದೆ. ಪ್ರಪಂಚವೆಂಬ ಅಂಗಡಿಗೆ ಬಂದಿದ್ದೇವೆ ಆದರೆ ಏನು ತರಲು ಬಂದಿದ್ದೇವೆ ಎಂಬುದನ್ನೇ ಮರೆತಿದ್ದೇವೆ.

ನೀರು ಯಾವ ಪಾತ್ರದಲ್ಲಿ ರುತ್ತದೆಯೋ ಅದೇ ಆಕಾರವನ್ನು ಪಡೆಯುತ್ತದೆ. ಪಾತ್ರಕ್ಕೆ ಅನುಗುಣವಾದ ಆಕಾರ ಅದರದ್ದು. ನಮ್ಮ ಬದುಕೂ ಹಾಗೆ. ಒಂದಿದ್ದ ಹಾಗೆ ಇನ್ನೊಂದಿಲ್ಲ…. ಅದು ರೂಪ ವಿರಬಹುದು…. ದೃಷ್ಟಿ ಇರಬಹುದು ವ್ಯತ್ಯಾಸವಿದೆ. ನಮ್ಮನ್ನು ಅನನ್ಯವಾಗಿ ಸೃಷ್ಟಿ ಮಾಡಿದ್ದಾನೆ ಭಗವಂತ. ಆದರೆ ನಮಗೆ ಸಮಾಧಾನವಿಲ್ಲ. ಹಾಗಿರಬೇಕಿತ್ತು ಹೀಗಿರಬೇಕಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸುತ್ತಲೇ ಇರುತ್ತೇವೆ. ಪಾತ್ರೆ ಬೇರೆ ಇದ್ದರೂ ಅದರಲ್ಲಿರುವುದು ನೀರು….. ಪಾತ್ರ ಬೇರೆ ಇದ್ದರೂ ಅದರೊಳಗಿರುವುದು, ಅಂತರಾಳದಲ್ಲಿರುವುದು ಒಂದೇ ಆತ್ಮ ಪಾತ್ರೆಯಲ್ಲಿ ಹಾಕಿದಾಗ ನೀರಿನ ಆಕಾರ ಗುಣ ಬದಲಾದಂತೆ ….ಪಾತ್ರಗಳಲ್ಲಿ ಹೋದಾಗ ಆತ್ಮದ ಗುಣ ಬದಲಾಗಿದೆಯಷ್ಟೇ.

RELATED ARTICLES  ವರ್ಗಾವಣೆಗೊಂಡ ಶಿಕ್ಷಕಿಯ ಕೈ ಹಿಡಿದು ಗೋಳಾಡಿ ಕಣ್ಣೀರಿಟ್ಟ ಮಕ್ಕಳು : ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದ ಗ್ರಾಮಸ್ಥರು.

ಜೀವನಕ್ಕೂ ನೀರಿಗೂ ಹಲವು ರೀತಿಯಲ್ಲಿ ಸಂಬಂಧ ಕಲ್ಪಿಸಬಹುದು. ನೀರು ನದಿಯ ರೂಪ ಪಡೆದಾಗ ಅದಕ್ಕೆ ವಿವಿಧ ಹೆಸರುಗಳು. ಗಂಗಾ ,ತುಂಗಾ, ನರ್ಮದಾ, ಕಾವೇರಿ ಹೀಗೆ ಸಮುದ್ರ ಸೇರಿದಾಗ ಮತ್ತೆ ಬೇರೆ ಹೆಸರು. ಹಾಗೆಯೇ ಜೀವನದಲ್ಲಿ ವಿವಿಧ ಪಾತ್ರಗಳು…. ಎಷ್ಟೋ ಹೆಸರುಗಳು…. ಎಷ್ಟೋ ರೂಪಗಳು ಆದರೆ ಇವೆಲ್ಲ ಒಂದೇ.. ಅದೇ ಜೀವನ. ಅದೇ ಬದುಕು. ನೀರಿನ ಹಾಗೆ ಒಂದರಲ್ಲಿ ಹಲವಿದೆ….. ಹಲವದರಲ್ಲಿ ಒಂದಿದೆ. ಅದೇ ಜೀವನ‌. ನೀರು ಸಮುದ್ರ ಸೇರಿದಾಗ ಎಲ್ಲಾ ಹೆಸರು ರೂಪ ಕಳೆದುಕೊಂಡು ಸಾಗರವಾಗು ವಂತೆ ನಾವು ಮುಕ್ತರಾದಾಗ ಎಲ್ಲವನ್ನೂ ಕಳೆದುಕೊಂಡು ದಯಾಸಾಗರನನ್ನು ಸೇರಿಕೊಳ್ಳುತ್ತೇವೆ.

ನಮ್ಮಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೂಪ ಅದರಲ್ಲೂ ಬೆಳಿಗ್ಗೆ ಒಂದು ರೂಪ ಸಂಜೆ ಒಂದು ರೂಪ. ಆದರೆ ನೀರು ಸಾಗರವನ್ನು ಸೇರಿದಂತೆ ನಾವು ಪರಮ ಸಾಗರವನ್ನು ಸೇರಿದ ಮೇಲೆ ನಾವೆಲ್ಲ ಒಂದೇ. ಹೀಗೆ ನೀರು ಮತ್ತು ಬದುಕು…. ಜೀವ ಮತ್ತು ಜಲವನ್ನು ಒಂದೇ ರೀತಿಯಲ್ಲಿ ನೋಡಲು ಸಾಧ್ಯ. ಈ ಬದುಕೆಂಬ ನೀರಿನಲ್ಲಿ ನಾವು ಮುಳುಗದೆ ತೆರೆಯ ಮೇಲೆ ಈಜುತ್ತಿರಬೇಕು ಹಾಗೆ ಈಜು ತ್ತಿರಬೇಕೆಂದರೆ ಒಳಿತನ್ನು ಕೊಡುತ್ತಾ ಒಳಿತನ್ನು ಕೊಳ್ಳುತ್ತಾ ಇರಬೇಕು. ನಾವು ಸಂತಸದಿಂದಿದ್ದು ಇತರರಿಗೂ ಸಂತಸವನ್ನು ಹಂಚುತ್ತಿರಬೇಕು. ಒಳಿತನ್ನು ಕೊಡು-ಕೊಳ್ಳುವುದೇ ಜೀವನ.

RELATED ARTICLES  ಮನುಷ್ಯ ತನ್ನ ತಪ್ಪಿಗೆ ಯಾವಾಗ ಪಶ್ಚಾತ್ತಾಪ ಪಡುತ್ತಾನೆ?...(ಭಾಗ -1).

ಒಬ್ಬಳು ತಾಯಿ ದಾದಿಗೆ ಮಗುವನ್ನು ಆಡಿಸಲು ಕೊಡುತ್ತಾಳೆ. ಆ ದಾದಿ ಬೀದಿಯಲ್ಲಿ ಮಗುವನ್ನು ಸ್ವಲ್ಪ ಹೊತ್ತು ಆಟ ಆಡಿಸಿಕೊಂಡು ತಾಯಿ ಕೇಳಿದಾಗ, ಬೇಕೆಂದಾಗ ಮರಳಿ ಕೊಡುತ್ತಾಳೆ. ನ್ಯಾಯವಾದ ಮೃತ್ಯುವೆಂದರೆ ಹಾಗೆ. *ನಮ್ಮ ಬದುಕಿನಲ್ಲಿ ದೇವನೇ ತಾಯಿ… ಮಾಯೆಯೇ ದಾದಿ….. ದೇವ ನಮ್ಮನ್ನು ಮಾಯೆಯ ಕೈಯಲ್ಲಿ ಕೊಟ್ಟಿದ್ದಾನೆ. ನಾವಿಲ್ಲಿ ಆಟವಾಡುತ್ತಿದ್ದೇವೆ. ಅದು ಬಾಳಾಟವಿರಬಹುದು ಅಥವಾ ಗೋಳಾಟವಿರಬಹುದು. ಈ ಬಾಳಾಟದಲ್ಲಿ ನಾವು ದೇವನ ಹಸಿವಿನಲ್ಲಿ ಅತ್ತರೆ ದೇವ ಬಂದು ಹಸಿವುತಣಿಸುತ್ತಾನೆ. ಮಾಯೆ ನಮ್ಮನ್ನು ಮರಳಿ ದೇವನಿಗೆ ಎಂದು ಕೊಡುತ್ತಾಳೋ ಅದೇ ಮೃತ್ಯು….! ಒಂದು ರೀತಿಯಲ್ಲಿ ಅದು ಶುಭ . ಮಗು ತಾಯಿಯ ಮಡಿಲು ಸೇರಿದಂತೆ.

ವ್ಯಾಸರ ಪುತ್ರ ಶುಕಮುನಿ. ವ್ಯಾಸರು ಬೆಳೆಯುತ್ತ ಜ್ಞಾನಿ ಯಾದರೆ ಶುಕ ಹುಟ್ಟಾ ಜ್ಞಾನಿಯಾಗಿದ್ದ. ಒಂದು ದಿನ ಶುಕ ಇದ್ದಕ್ಕಿದ್ದಂತೆ ಮನೆಯಿಂದ ಹೊರಟುಹೋದ. ವ್ಯಾಸರು ಇದರಿಂದ ಕಷ್ಟಪಟ್ಟರು… ದುಃಖಪಟ್ಟರು. ಕಾಡುಮೇಡು ಅಲೆದು “ಪುತ್ರಾ…….” ಎಂದು ಹೇಳುತ್ತ…. ಕೂಗುತ್ತಾ ಕಾಡಿನಲ್ಲಿ ಸುತ್ತಿದ್ದರು. ಆಗ ಕಾಡಿನಲ್ಲಿದ್ದ ಗಿಡ -ಮರ- ಪ್ರಾಣಿ- ಪಕ್ಷಿ -ಕಲ್ಲುಗಳೆಲ್ಲ ಓ….ಎಂದುವಂತೆ. ಆಗ ವ್ಯಾಸರಿಗೆ ಸಮಾಧಾನವಾಯಿತು. ನನ್ನ ಮಗ ವಿಶ್ವನಾಗಿದ್ದಾನೆ ಎಂದು. ಹಾಗೆಯೇ ನಾವು ವಿಶ್ವಾತ್ಮರಾ ಗಬೇಕು. ವಿಶ್ವದಲ್ಲಿ ಮಿಳಿತರಾಗಬೇಕು. ನಮ್ಮ ಪಿಂಡಾತ್ಮ…. ಬ್ರಹ್ಮಾಂಡಾತ್ಮ ವಾಗಬೇಕು. ನೀರ ಹನಿ ಸಮುದ್ರ ಸೇರಿದಂತೆ.

ಮುಳುಗದಿರಿ ಬದುಕಿನಲಿ… ಮುಳುಗಿ ತತ್ತ್ವದಲಿ… ಸತ್ಯದಲಿ.

✍️ ಡಾ.ರವೀಂದ್ರ ಭಟ್ಟ ಸೂರಿ.