ಬದುಕಿನಲ್ಲಿ ನೆಮ್ಮದಿಯಷ್ಟು ಸುಖದಷ್ಟು ಬೆಲೆಬಾಳುವ ಸಂಪತ್ತು ಇನ್ನೊಂದಿಲ್ಲ. ಭರ್ತೃಹರಿ ಹೇಳಿದ್ದು ಅದನ್ನೇ ಬದುಕಿನಲ್ಲಿ ನೆಮ್ಮದಿಯ ಕೊರತೆಯಿದ್ದವ ಬಡವ. ನೆಮ್ಮದಿಯ ಒರತೆ ಇದ್ದವ ಶ್ರೀಮಂತ ಅಂತ. ಆಸೆಯೇ ದುಃಖಕ್ಕೆ ಮೂಲ. ತೃಪ್ತಿ ಇದ್ದವ ನಿತ್ಯ ಶ್ರೀಮಂತ, ಸತ್ಯ ಶ್ರೀಮಂತ.
ದೇವರು ಸುಖ ಕೊಟ್ಟಿದ್ದಾನಾ? ಎನ್ನುವ ಪ್ರಶ್ನೆಗೆ ಬಹುತೇಕರ ಉತ್ತರ ಇಲ್ಲ ಎಂದೇ ಬರುತ್ತದೆ. ನನಗೆ ಎಷ್ಟೆಲ್ಲ ದುಃಖ ನೋವು… ಅದನ್ನು ಕೊಟ್ಟಿದ್ದು ಆ ದೇವರೇ ಅಲ್ವಾ? ದೇವರು ಕಷ್ಟ ಯಾಕೆ ಕೊಡಬೇಕು? ಎನ್ನುವವರೂ ಇದ್ದಾರೆ. ನಮ್ಮ ಬದುಕಿನಲ್ಲಿ ತಾಪ ಏಕಿದೆ ? ನೋವು ಏಕಿದೆ ?ಎಂಬುದನ್ನು ಧನಾತ್ಮಕವಾಗಿ ಚಿಂತಿಸಿದರೆ ಆಗ ನಾವು ದೇವರನ್ನು ಬೈಯುವುದಿಲ್ಲ .
ಉರಿಯಾರಿ ಮಳೆಗರೆಯೆ ಮರಳಿ ಸಸಿ ಏಳುವುದು ಎನ್ನುವ ಕಗ್ಗದ ಸಾಲು ಬಹುಶಃ ಇದಕ್ಕೆ ಉತ್ತರವಾಗಬಹುದು. ಮಳೆಗಾಲಕ್ಕಿಂತ ಸ್ವಲ್ಪ ಮುಂಚೆ ಹಳ್ಳಿಗಳಲ್ಲಿ ಹುಲ್ಲಿನ ಬೆಟ್ಟಕ್ಕೆ ಬೆಂಕಿ ಹಾಕಲಾಗುತ್ತದೆ. ಹಾಗೆ ಮಾಡುವುದರಿಂದ ಉರಿ ಆರಿದ ಮೇಲೆ ಮಳೆ ಬಿದ್ದು ಹುಲ್ಲು ಚೆನ್ನಾಗಿ ಹುಟ್ಟುತ್ತದೆ. ಹೊನ್ನನ್ನು ಬೆಂಕಿಯಲ್ಲಿಟ್ಟಾಗ ಅದಕ್ಕೆ ಹೊಳಪು ಬರುತ್ತದೆ. ಹಾಗೆಯೇ ನರ ಜೀವದ ಕಾಂತಿ ಹೆಚ್ಚುವುದು ದುಃಖದಿಂದ. ಅದಕ್ಕೇ ದುಃಖ ಒಳ್ಳೆಯದು ಎಂದಿದ್ದು.
ಅಕ್ಕಿ ಮತ್ತು ಅನ್ನದಲ್ಲಿ ವ್ಯತ್ಯಾಸವೇನು? ಅಕ್ಕಿ ಗಟ್ಟಿ ಅನ್ನ ಮೃದು. ಅಕ್ಕಿಗಿಂತ ಅನ್ನ ಸಿಹಿ . ಅಕ್ಕಿಗಿಂತ ಅನ್ನ ತಿನ್ನಲು ಹೆಚ್ಚು ಹಿತ . ಹಾಗಾದ್ರೆ ಅಕ್ಕಿಗಿಲ್ಲದ ಆ ಮಾಧುರ್ಯ ಅನ್ನಕ್ಕೆ ಹೇಗೆ ಬಂತು? ಎಲ್ಲಿಂದ ಬಂತು ? ಅನ್ನದ ಹತ್ತಿರ ಕೇಳಿದರೆ ಅದು ಹೇಳುವುದು ಅದೊಂದು ದೊಡ್ಡ ಕತೆ….. ಉರಿಯುತ್ತಿರುವ ಬೆಂಕಿ, ಅದರ ಮೇಲೊಂದು ಪಾತ್ರೆ ,ಆ ಪಾತ್ರೆಯಲ್ಲಿ ನೀರು, ಕುದಿಯುವ ನೀರಿನಲ್ಲಿ ಜೀವಂತ ಬೇಯಿಸಿದ್ದಾರೆ ಆ ತಾಪ ನೋವು ಅನುಭವಿಸಿದ ಮೇಲೆ ಈ ಪಕ್ವತೆ ಬಂದಿದೆ ಎಂದು. ಅಕ್ಕಿ ಅನ್ನವಾಗುವುದನ್ನು ನೆನಪು ಮಾಡಿಕೊಂಡರೆ ನಾವು ದೇವರನ್ನು ಬೈಯುವುದಿಲ್ಲ. ಯಾಕೆಂದರೆ ಆ ನೆನಪು ದುಃಖ ನೋವು ಸಂಕಟ ಎಲ್ಲವೂ ಒಳ್ಳೆಯದೇ ಎಂಬ ಅರಿವನ್ನು ಮೂಡಿಸುತ್ತದೆ.
ನಮ್ಮ ಅಡುಗೆ ಮನೆಯಲ್ಲಿ ವಧಾ ಸ್ಥಾನಗಳಿವೆಯಂತೆ. ಅವು ಯಾವುದೆಂದರೆ ಬೀಸುವ ಕಲ್ಲು ,ಒಲೆ, ಈಳಿಗೆ ಮಣೆ, ಪೊರಕೆ……. ತರಕಾರಿ, ಬೇಳೆಕಾಳುಗಳು ಗ್ರಾಹ್ಯವೆಂದಾಗಲು ಇವೆಲ್ಲವನ್ನೂ ದಾಟಿ ಬಂದಿವೆ. ನಾವೂ ಹಾಗೆ ಕಷ್ಟ ಕೋಟಲೆಗಳನ್ನು ದಾಟಿ ಬಂದಾಗ ಪಕ್ವವಾಗುತ್ತೇವೆ. ನೊಂದಾಗ ಪಾಪ ಅಳಿಸಿ ಹೋಗುತ್ತದೆ. ಆದ್ದರಿಂದ ದುಃಖ ನಿಜಕ್ಕೂ ಒಳ್ಳೆಯದೇ.
ಎಲ್ಲ ಮಹಾಪುರುಷರ ಬದುಕಿನಲ್ಲಿ ನಾವು ಕಷ್ಟಗಳ ಸರಮಾಲೆಯನ್ನೇ ಕಾಣುತ್ತೇವೆ. ಮೀರಾಬಾಯಿ ಲಕ್ಷ ದುಃಖ ಸಹಿಸಿ ಬಾಯಿಂದ ಗೋವಿಂದನ ನಾಮ ಮಾತ್ರ ಹೇಳುತ್ತಿದ್ದಳಂತೆ. ಆ ಸಹನಾ ಶಕ್ತಿ …..ಅಪಾರ ಭಕ್ತಿಯಿಂದಲೇ ಅವಳಿಗೆ ರಾಣಾ ಕೊಟ್ಟ ವಿಷವೂ ಅಮೃತ ವಾಯಿತು. ಅಂದರೆ ಕಷ್ಟದ ನಂತರ ಸುಖವಿದೆ…. ದುಃಖದ ನಂತರ ಸಂತೋಷವಿದೆ… ನೋವಿನ ನಂತರ ನಲಿವಿದೆ…. ತಾಪದ ನಂತರ ತಂಪಿದೆ. ಅದಕ್ಕೇ ದುಃಖ ಒಳ್ಳೆಯದು ಎಂದಿದ್ದು.
ಸಣ್ಣ ಶಿಶುವಿಗೆ ಸ್ನಾನ ಮಾಡಿಸುವಾಗ ಅದು ಗೋಳೆಂದು ಅಳುತ್ತದೆ. ಅದು ಸ್ವಾಭಾವಿಕ. ಆದರೆ ಅದಕ್ಕೆ ಕಷ್ಟವಾದರೂ ಸ್ನಾನದಿಂದ ಅದರ ಮೈ ಸ್ವಚ್ಛವಾಗುತ್ತದೆ. ಹಾಗೆಯೇ ನಮಗೆ ಬದುಕಿನಲ್ಲಿ ಬರುವ ದುಃಖ ನೋವೆಂದರೆ ಅದು ನಮ್ಮ ಮೈ ಮನವನ್ನು ಸ್ವಚ್ಛಗೊಳಿಸಲು ದೇವನು ಮಾಡಿಸುವ ಸ್ನಾನ. ಇದು ನಮ್ಮ ಮನಸ್ಸಿಗೆ ಬಂದರೆ ಜೀವನದಲ್ಲಿ ಬರುವ ದುಃಖ ನೋವುಗಳು ಕಷ್ಟವೆನಿಸುವುದಿಲ್ಲ.
ಭಾರವಿ ಸಂಸ್ಕೃತದ ಮಹಾಕವಿ . ಚಿಕ್ಕ ವಯಸ್ಸಿನಲ್ಲಿ ಆತನಿಗೆ ಅಪ್ಪ ದಿನಾಲೂ ಬಯ್ಯುತ್ತಿದ್ದನಂತೆ. ಇದರಿಂದ ನೊಂದ ಭಾರವಿ ಅಪ್ಪನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಸಾಯಿಸಲು ನಿರ್ಧರಿಸಿದ. ಅದೇ ವೇಳೆ ಅಪ್ಪ ಅಮ್ಮ ಮಾತನಾಡಿಕೊಳ್ಳುತ್ತಿರುವುದನ್ನು ಕೇಳಿದ. ಅಪ್ಪ ಹೇಳುತ್ತಿದ್ದ…….” ಮಗನ ಮೇಲೆ ನನಗಿರುವ ಪ್ರೀತಿ ನಿನಗಿಲ್ಲ . ನಾನು ಅವನನ್ನು ಮುಂದಿನ ಬದುಕಿಗೆ ಸಿದ್ಧಪಡಿಸುತ್ತಿದ್ದೇನೆ. ಇನ್ನು ಕೆಲ ಸಮಯದಲ್ಲೇ ಆತ ಏನಾಗುತ್ತಾನೆ ನೋಡು” ಎಂದು. ಇದನ್ನು ಕೇಳಿದ ಭಾರವಿಗೆ ತನ್ನ ತಪ್ಪು ಕಲ್ಪನೆಯ ಅರಿವಾಯಿತು. ಅಪ್ಪನಲ್ಲಿ ತನಗೆ ಸರಿಯಾದ ಶಿಕ್ಷೆ ಕೊಡು ಎಂದನಂತೆ. ಆಗ ಅಪ್ಪ ಮಾವನ ಮನೆಯಲ್ಲಿ ಆರು ತಿಂಗಳು ವಾಸ ಮಾಡುವ ಶಿಕ್ಷೆ ವಿಧಿಸಿದನಂತೆ. ಆ ಶಿಕ್ಷೆ ಮುಗಿಸಿ ಬಂದ ಭಾರವಿ ಮಾವನ ಮನೆ ವಾಸದ ಬಗ್ಗೆ ಒಂದು ಕವಿತೆ ಬರೆದ…. “ಮಾವನ ಮನೆ ವಾಸ ವೆಂದರೆ ಸ್ವರ್ಗವಿದ್ದ ಹಾಗೆ ಆದರೆ ಮೂರು ದಿನ ,ಐದು ದಿನ, ಏಳು ದಿನ ಇರುವುದಾದರೆ ಮಾತ್ರ. ಮತ್ತು ಹೆಚ್ಚು ದಿನವಿದ್ದರೆ ಪಾದರಕ್ಷೆಯ ಪ್ರಯೋಗವೂ ಆಗಬಹುದು” ಎಂದು. ಕೆಲವೊಂದು ಕಷ್ಟ ನಷ್ಟಗಳು ಬಂದಾಗ ನಾವು ಭಾರವಿಯಂತೆ ವರ್ತಿಸುತ್ತೇವೆ. ದೇವನನ್ನು ಹಳಿಯುತ್ತೇವೆ. ವಾಸ್ತವ ಅರ್ಥವಾದಾಗ ಸಮಾಧಾನಗೊಳ್ಳುತ್ತೇವೆ.
ಕುಂತಿ ದುಃಖ ಕೊಡು ನನಗೆ ಎಂದು ಕೃಷ್ಣನನ್ನು ಕೇಳಿದಳಂತೆ. ಯಾಕೆ ಎಂದರೆ ನನಗೆ ಸದಾ ನಿನ್ನ ನೆನಪಾಗಬೇಕು ಎಂದಳಂತೆ….! ದುಃಖದಲ್ಲೂ ಒಳಿತನ್ನು ಕಂಡ ಮಾತೆ ಅವಳು. ಸ್ವರ್ಗ ನರಕದಲ್ಲಿ ಯಾವುದು ಒಳ್ಳೆಯದು ಎಂದು ಕೇಳಿದರೆ ಎಲ್ಲರೂ ಸ್ವರ್ಗ ಎನ್ನುತ್ತೇವೆ. ಆದರೆ ನಿಜಕ್ಕೂ ನರಕ ಒಳ್ಳೆಯದು…! ಸ್ವರ್ಗದಲ್ಲಿ ನಮ್ಮ ಪುಣ್ಯ ಖರ್ಚಾದರೆ, ನರಕದಲ್ಲಿ ನಮ್ಮ ಪಾಪ ಖರ್ಚಾಗುತ್ತದೆ. ನರಕವೆಂದರೆ ಆಸ್ಪತ್ರೆ ಇದ್ದಂತೆ. ಅಲ್ಲಿ ನಮ್ಮೆಲ್ಲ ಪಾಪಗಳಿಗೆ ಔಷಧವಿದೆ.
ಹಲ್ಲು ಹುಟ್ಟುವಾಗ ಶಿಶುವಿಗೆ ಜ್ವರ ಬರುತ್ತದೆ. ಇದು ಸಾಮಾನ್ಯ. ಹಾಗೆಯೇ ವಿಧಿಯ ಒದೆಗೆ ಸಿಲುಕದ ನರನಿಲ್ಲ. ಆದರೆ ಇದರಿಂದ ಮುಂದೆ ಒಳಿತು ಕಾದಿದೆ. ವಿಧಿಯ ಒದೆ ಪೆಟ್ಟು ಮುಗಿದಂದು ರಾಹುವಿನ ದವಡೆಯಿಂದ ಹೊರಬಂದ ಚಂದ್ರ ಬಿಂಬದಂತಾಗುತ್ತೇವೆ ನಾವು.
✍️ ಡಾ.ರವೀಂದ್ರ ಭಟ್ಟ ಸೂರಿ.