ಒಬ್ಬ ದೈವಭಕ್ತ ಕ್ಷೌರಕ್ಕಾಗಿ ಅಂಗಡಿಗೆ ತೆರಳುತ್ತಾನೆ. ಅಲ್ಲಿ ಸಮಯ ಕಳೆಯಲು ಅದು ಇದು ಮಾತನಾಡಿದ. ಕ್ಷೌರ ಪ್ರಾರಂಭವಾಯಿತು. ಎಲ್ಲರ ಕುರಿತು ಮಾತನಾಡಿ ಮುಗಿದಿದ್ದರಿಂದ ಈಗ ದೇವರ ಕುರಿತು ಮಾತು ಪ್ರಾರಂಭವಾಯಿತು. ಕ್ಷೌರಿಕ ದೇವರಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ. ಈ ದೈವಭಕ್ತನಿಗೆ ಇರಿಸುಮುರಿಸಾಯಿತು. ಆತ ಕ್ಷೌರಿಕನಲ್ಲಿ ಅದು ಹೇಗೆ ನೀನು ದೇವನಿಲ್ಲ ಎಂಬ ನಿರ್ಣಯಕ್ಕೆ ಬಂದೆ ಎಂದು ಕೇಳಿದ. ಆಗ ಕ್ಷೌರಿಕ ನೀನು ಒಮ್ಮೆ ಬೀದಿಯಲ್ಲಿ ಸ್ವಲ್ಪ ಹೊತ್ತು ನಿಂತು ನೋಡು…. ಭಿಕ್ಷುಕರು ದೀನರು ,ದುಃಖಿತರು ಎಷ್ಟೊಂದು ಸಂಖ್ಯೆಯಲ್ಲಿ ಕಂಡುಬರುತ್ತಾರೆ ಎಂದು. ಮಮತೆಯುಳ್ಳವನಾತನಾದೊಡೆ ಈ ಜೀವಗಳು ಶ್ರಮ ಪಡುವುದೇಕಿಂತು?. ಎಂಬ ಕಗ್ಗದ ಸಾಲು ನೆನಪಿಸಿಕೊ ಎಂದ. ದೈವಭಕ್ತನಿಗೆ ಏನು ಹೇಳಲು ತೋಚಲಿಲ್ಲ. ಉತ್ತರ ಹೊಳೆಯಲಿಲ್ಲ. ಅಲ್ಲಿಂದ ಹೊರಟು ಎರಡು ಹೆಜ್ಜೆ ಹೋದಾಗ ಒಬ್ಬ ಎದುರಾದ. ಆತ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದ. ಹರುಕು ಬಟ್ಟೆ…. ಕೆದರಿದ ಉದ್ದವಾದ ಕೂದಲು ಅತ್ಯಂತ ಅಸಹ್ಯವಾಗಿದ್ದ. ಆತನನ್ನು ನೋಡಿದ ಕೂಡಲೇ ಈ ದೈವಭಕ್ತನಿಗೆ ಏನೋ ಹೊಳೆಯಿತು. ಮರಳಿ ಕ್ಷೌರಿಕನ ಅಂಗಡಿಗೆ ಬಂದ. ಬಂದವನೇ ಕ್ಷೌರಿಕನಲ್ಲಿ ಈ ಜಗತ್ತಿನಲ್ಲಿ ಕ್ಷೌರಿಕರು ಇಲ್ಲ ಎಂದ. ಕ್ಷೌರಿಕನಿಗೆ ಆಶ್ಚರ್ಯ… ಅರೆ… ಇದೇನು? ನಾನು ಈಗ ಮಾತ್ರ ನಿನ್ನ ಕ್ಷೌರ ಮಾಡಿದ್ದೇನೆ. ನೀನ್ಯಾಕೆ ಈ ನಿರ್ಣಯಕ್ಕೆ ಬಂದೆ? ಎಂದು ಕೇಳಿದ ಆಗ ದೈವಭಕ್ತ ನೋಡು ಅವನನ್ನು… ಅವನ ತಲೆಗೂದಲನ್ನು . ಆ ಭಿಕ್ಷುಕನ ತಲೆ ಕೂದಲು ಹಾಗಿದೆ ಅಂದ್ರೆ ಈ ಜಗತ್ತಿನಲ್ಲಿ ಕ್ಷೌರಿಕರು ಇಲ್ಲ ಎಂದೇ ಅರ್ಥ ಎಂದ. ಅದಕ್ಕುತ್ತರಿಸಿದ ಕ್ಷೌರಿಕ ” ಭಿಕ್ಷುಕ ಕ್ಷೌರಿಕರಲ್ಲಿ ಬಂದಿಲ್ಲ ಅಷ್ಟೆ….. ಇದರರ್ಥ ಕ್ಷೌರಿಕರಿಲ್ಲ ಅಂತಲ್ಲ ಎಂದ. ಆಗ ದೈವಭಕ್ತ ಜಗತ್ತಿನಲ್ಲಿ ದೀನರು… ದುರ್ಬಲರು….ದುಃಖಿತರು… ಭಿಕ್ಷುಕರು ಇದ್ದಾರೆಂದರೆ ದೇವರಿಲ್ಲ ಎಂದರ್ಥವಲ್ಲ. ಅವರು ದೇವರ ಹತ್ತಿರ ಹೋಗಿಲ್ಲ ಅಂತ ಅರ್ಥ ಎಂದ. ಆಗ ಆ ಕ್ಷೌರಿಕನಿಗೆ ತನ್ನ ತಪ್ಪಿನ ಅರಿವಾಯ್ತು.
ಬೇಡಿಕೆ ಸಲ್ಲಿಸುವುದು ನಮ್ಮ ಕೆಲಸ . ಕೊಡುವುದು ಬಿಡುವುದು ಅವನಿಗೇ ಸೇರಿದ್ದು. ದೇವರು ಒಳಿತು- ಕೆಡುಕು, ಯೋಗ್ಯತೆ- ಅವಶ್ಯಕತೆಯನ್ನು ನೋಡಿ ನಮ್ಮ ಬೇಡಿಕೆಯನ್ನು ಈಡೇರಿಸುತ್ತಾನೆ. ನಮಗೆ ಹುಟ್ಟಿನ ಗುಟ್ಟು ಗೊತ್ತಿಲ್ಲ. ಬದುಕಿನ ಮರ್ಮ ಅರ್ಥವಾಗಿಲ್ಲ. ಸಾವಿನಾಚೆಗೂ ಗೊತ್ತಿಲ್ಲ. ಕೇವಲ ಕಣ್ಣಿಗೆ ಕಾಣುವುದರ ಮೇಲೆ ನಾವು ತೀರ್ಮಾನ ಕೊಡುವುದು ಸರಿಯಲ್ಲ. ನಮ್ಮ ಮೂಗಿನ ನೇರಕ್ಕೆ ನಾವು ಪ್ರಪಂಚವನ್ನು ಅಳೆಯಬಾರದು. ನಮಗೆ ಸುಖವಿಲ್ಲ ಎಂದರೆ ಯಾಕಿಲ್ಲ? ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆಗ ಅದಕ್ಕೆ ನಾವು ಕಾರಣರೇ ಹೊರತು ದೇವನಲ್ಲ ಎಂಬ ಅರಿವು ನಮಗೆ ಬರುತ್ತದೆ .ನಾವು ಜೀವನದಲ್ಲಿ ಬೇಡದ ಕಾರ್ಯ ಮಾಡಿ ಉತ್ತಮ ಫಲ ನಿರೀಕ್ಷಿಸುವುದು ಸರಿಯಲ್ಲ. ನಾವು ತಪ್ಪು ಮಾಡಿ ನಂತರ ದೇವರನ್ನು ಹಳಿಯುವುದು ಎಂದರೆ ತನ್ನ ತಪ್ಪಿನಿಂದ ಔಟಾದ ಆಟಗಾರ ಅಂಪೈರ್ ನನ್ನು ಬೈದಂತೆ . ದೇವ ನಮ್ಮ ಪೂರ್ವ ಜನ್ಮದ ಹಾಗೂ ಈ ಜನ್ಮದ ಕರ್ಮಗಳ ಆಧಾರದ ಮೇಲೆ ಫಲ ಕೊಡುತ್ತಿರುತ್ತಾನೆ.
ನಮ್ಮ ಕಣ್ಣು ಸೀಮಿತ ಸಾಮರ್ಥ್ಯ ಹೊಂದಿರುವ ಇಂದ್ರಿಯ. ಕಾಮಾಲೆ ರೋಗ ಬಂದಾಗ ಕಣ್ಣಿಗೆ ಬಿಳಿ ಹಳದಿಯಾಗಿ ಕಾಣುತ್ತದೆ. ನಮ್ಮ ಯೋಚನೆ ಬೇರೆಲ್ಲೋ ಇದ್ದಾಗ ಕಣ್ಣ ಮುಂದಿರುವುದು ಕಾಣದಿರಬಹುದು. ಕಣ್ಣಿನಿಂದ ತುಂಬಾ ದೂರ ಅಥವಾ ಹತ್ತಿರವಿರುವ ವಸ್ತುಗಳು ಕಾಣದಿರಬಹುದು. ಒಂದು ಸಣ್ಣ ಪರದೆ ಅಡ್ಡ ಬಂದರೆ ಎದುರಿಗಿರುವುದು ಕಾಣುವುದಿಲ್ಲ . ತುಂಬಾ ದೊಡ್ಡದಾಗಿರುವ ತುಂಬಾ ಚಿಕ್ಕದಿರುವ ವಸ್ತುವೂ ಕಾಣುವುದಿಲ್ಲ. ಇಂತಹ ಸೀಮಿತವಾಗಿರುವ ಇಂದ್ರಿಯ ಶಕ್ತಿಯಿಂದ ದೇವರಂತಹ ಅಗೋಚರ – ಅಗಾಧ ಶಕ್ತಿಯನ್ನು ಅಳೆಯಲು ಸಾಧ್ಯವಿಲ್ಲ…. ಅದು ಸಾಧುವೂ ಅಲ್ಲ .
ಈ ಬದುಕಿನಲ್ಲಿ ನಮಗೆ ನಮ್ಮ ಶರೀರವನ್ನೇ ನೋಡಿ ಮುಗಿದಿಲ್ಲ. ಇನ್ನು ಅನಂತ ಬ್ರಹ್ಮಾಂಡದಲ್ಲಿ ವ್ಯಾಪಿಸಿರುವ ಆ ದೇವನನ್ನು ನೋಡಲು ಹೇಗೆ ಸಾಧ್ಯ….. ? ನಿರಾಸೆ ಬೇಡ ನಿರೀಕ್ಷೆಯಿರಲಿ. ಒಂದಲ್ಲ ಒಂದು ದಿನ ಆತನನ್ನು ನೋಡುತ್ತೇವೆ ಎಂದು. ಆ ಕಾಲ ಕ್ಕಾಗಿ ಕಾಯಬೇಕು. ಅವನಲ್ಲಿ ಭರವಸೆ ಇಡಬೇಕು. ಭರವಸೆಯನ್ನು ಕರಗಿಸಿ ಕೊಳ್ಳಬಾರದು. ಭರವಸೆ ನಮಗೆ ದೇವರನ್ನು ತೋರಿಸುತ್ತದೆ. ಅಂತಹ ಭರವಸೆಯನ್ನು ನಾವೆಲ್ಲ ಅವನಲ್ಲಿಡೋಣ. ದೇವನಿಲ್ಲ ಎನ್ನುವ ಬದಲು ದೇವನೆಲ್ಲ ಎನ್ನೋಣ
✍️ ಡಾ.ರವೀಂದ್ರ ಭಟ್ಟ ಸೂರಿ.