ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀ ಎಂ.ಜಿ.ನಾಯ್ಕ

ಹೇಳುವವರು…. ಎಲ್ಲಿಲ್ಲ ಹೇಳಿ. ಹೇಳುವುದಕ್ಕಾಗಿಯೇ ಬಾಯಿ ಹಾಗೂ ಕೇಳುವುದಕ್ಕಾಗಿಯೇ ಕಿವಿಯನ್ನು ಸೃಷ್ಟಿಸಿದ್ದಲ್ಲವೇ ಭಗವಂತ. ಪಂಚೇಂದ್ರಿಯಗಳಲ್ಲಿ ಚರ್ಮ ಸ್ಪರ್ಷ ಜ್ಞಾನ ತಿಳಿಸುತ್ತದೆ ಎಂದು ನಮ್ಮ ಗುರುಗಳು ಹೇಳಿಕೊಟ್ಟಿದ್ದರು. ಮೊನ್ನೆ ಅಂಬುಳ ಕಚ್ಚಿದ್ದು ಗೊತ್ತೇ ಆಗಲಿಲ್ಲ. ? ಕೆಲವರು ಹೃದಯದಿಂದ ಹೃದಯವನ್ನೇ ಸ್ಪರ್ಷ ಮಾಡುತ್ತಾರೆ. ಚರ್ಮದಿಂದಲ್ಲ. ಅಂಥವರು ಮಾತ್ರ ಜೀವನದ ಕೊನೆಯವರೆಗೂ ನಮಗೆ ಆನಂದವನ್ನೇ ನೀಡುತ್ತಾರೆ. ಸಂಬಳ ಅವರಿಗೂ ಬರುತ್ತದೆ. ನನಗೂ ಬರುತ್ತದೆ. ಅವರು ಅವರ ಮನೆಯಲ್ಲಿ ಊಟ ಮಾಡುತ್ತಾರೆ. ನಾನು ನನ್ನ ಮನೆಯಲ್ಲಿ ಊಟ ಮಾಡುತ್ತೇನೆ. ನಾನು ಅವರ ಬಳಿ ಸಾಲ ಕೇಳಲಿಲ್ಲ. ಅವರು ನನ್ನ ಬಳಿಯೂ ಕೇಳಲಿಲ್ಲ. ಆತ್ಮೀಯತೆಯ ಋಣ ಮಾತ್ರ ತೀರಿಸಲಾಗದೇ ಹಾಗೆಯೇ ಉಳಿದಿತ್ತು. ಅವರ ಉದ್ರೆಯನ್ನಿಟ್ಟುಕೊಂಡು ನಾನು ಸುಮ್ಮನೆ ಇರಬಾರದೆಂದು ಸ್ವಲ್ಪ ತೀರಿಸುವ ಪ್ರಯತ್ನ ಅಷ್ಟೇ. ? ಪೂರ್ಣ ಚುಕ್ತಾ ಮಾಡುವುದಿಲ್ಲ ನಾನು. ? ನಮ್ಮ ಆತ್ಮೀಯ ಶಿಕ್ಷಕ ಮಿತ್ರರಲ್ಲೊಬ್ಬರಾದ ಎಂ.ಜಿ.ನಾಯ್ಕರು ನನ್ನ ಇಂದಿನ ಅಕ್ಷರ ಅತಿಥಿ.
ಎಷ್ಟು m.g. ಕೇಳಿದ್ರಾ?! ಯಾರ್ಯಾರಿಗೆ ಎಷ್ಟೆಷ್ಟು ಬೇಕೊ ಅಷ್ಟಷ್ಟು m.g. ? ಎಂ.ಜಿ. ನಾಯ್ಕರು ಸ್ನೇಹಮಯಿ ವ್ಯಕ್ತಿತ್ವದ ಸಜ್ಜನ. ಹೊನ್ನಾವರದ ಬೆಳ್ಳುಕುರ್ವಾದಲ್ಲಿ ಶಿಕ್ಷಕರಾಗಿರುವ ಎಂ.ಜಿ.ನಾಯ್ಕರು 15 ವರ್ಷಗಳ ಕಾಲ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ರಾಗಿ ಪ್ರಸ್ತುತ ರಾಜ್ಯ ಪರಿಷತ್ ಸದಸ್ಯರಾಗಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಈ ಹಿಂದೆ ಪ್ರಧಾನ ಕಾರ್ಯದರ್ಶಿಯಾಗಿ ಈಗ ಪ್ರಸ್ತುತ ಜಿಲ್ಲಾ ಸಂಘಟನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‌‌‌‌‌‌ ಹೊನ್ನಾವರಕ್ಕೆ ವರ್ಗಾವಣೆ ಹೊಂದಿ ಬಂದ ನಾಲ್ಕಾರು ದಿನಕ್ಕೆ ಶ್ರೀಯುತರ ಪರಿಚಯವಾಗಿತ್ತು ನನಗೆ. ಅಂದಿನಿಂದ ಇಂದಿನವರೆಗೂ ಅದೇ ಸ್ನೇಹ, ಅದೇ ಪ್ರೀತಿ ವಿಶ್ವಾಸ. ಎಂ.ಜಿ. ನಾಯ್ಕರಿಗೆ ಎಲ್ಲರನ್ನೂ ಮಾತನಾಡಿಸುವ ಗುಣ ಸ್ವಭಾವತಃ ಒಲಿದು ಬಿಟ್ಟಿದೆ. ಎಷ್ಟೇ ಅವಸರದಲ್ಲಿರಲಿ ಅವರು ನಮ್ಮನ್ನು ಕಂಡು ಮುಗುಳು ನಗೆಯಾಡದೇ ಹೋಗುವವರೇ ಅಲ್ಲ. ಹೊನ್ನಾವರದ ಶಿಕ್ಷಕರಿಗೆ ಅವರು ನಿಜವಾದ ಬಂಧು.
ಎಂ.ಜಿ. ನಾಯ್ಕರನ್ನು ನಾನು ಅವರು ಸಂಘದ ಸದಸ್ಯರು ಎಂದಾದರೂ ಬೇಕಾಗುತ್ತಾರೆ ಎಂಬ ಕಾರಣಕ್ಕಾಗಿ ಮೆಚ್ಚುವವನಲ್ಲ. ಅವರು ಒಬ್ಬ ಶ್ರೇಷ್ಠ ಶಿಕ್ಷಕರಾಗಿ ನನಗೆ ಬಹಳ ಮೆಚ್ಚುಗೆಯಾಗುತ್ತಾರೆ. ಬಾಯ್ಬಿಟ್ಟರೆ ಕಥೆಗಳ ಹೊಳೆಯನ್ನೇ ಹರಿಸಬಲ್ಲ ಎಂ.ಜಿ.ನಾಯ್ಕರು ಸಮಯೋಚಿತವಾಗಿ ಅದನ್ನು ಹೇಳುವಲ್ಲಿ ಎತ್ತಿದ ಕೈ. ಅವರು ತರಬೇತಿಯೊಂದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಬಂದಾಗ ನಾನೊಬ್ಬ ಶಿಬಿರಾರ್ಥಿಯಾಗಿ ಅವರ ಸಂವಹನಾ ಕೌಶಲವನ್ನು ಸೂಕ್ಷ್ಮವಾಗಿ ಗಮನಿಸಿದವನು. ಸ್ಪಷ್ಟವಾದ ಧ್ವನಿ, ಕೋಪಿಸಿಕೊಳ್ಳದ ನಡೆ ನುಡಿ, ಸಮರ್ಪಕವಾಗಿ ನೀಡುವ ಉತ್ತರ, ಎಂ.ಜಿ. ನಾಯ್ಕರು ವಿಷಯ ಪ್ರಭುತ್ವವಿರುವ ವಿಶೇಷ ಮನುಷ್ಯರು.
ಹೊರಗೊಂದು ಒಳಗೊಂದು ಇರುವ ಮನುಷ್ಯರು ದಿನಕ್ಕೆ ನೂರಾರು ಸಿಗುತ್ತಾರೆ. ನಾನು ಹೇಗೆ?! ಎಂದು ಅವರಿಗೆ ಗೊತ್ತಿಲ್ಲ….. ಎಂದು ಅವರು ಭಾವಿಸುತ್ತಾರೆ. ಆದರೆ ಅವರು ಹೇಗೆ ಎಂದು ಎದುರಿನವನಿಗೆ ಪಕ್ಕಾ ಗೊತ್ತಿರುತ್ತದೆ. ? ಎಂ.ಜಿ.ನಾಯ್ಕರು ನನ್ನ ಸಾಹಿತ್ಯಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ತುಂಬು ಹೃದಯದಿಂದ ಪ್ರೋತ್ಸಾಹಿಸುತ್ತಾರೆ. ನನ್ನಿಂದೇನಾಗಬೇಕೆಂದು ಕೇಳುತ್ತಾರೆ. ಇದು ಅವರ ದೊಡ್ಡ ಗುಣ.
ಪ್ರಾಣಿಗಳಲ್ಲಿ ಹೇಗೆ ಸಾಧು ಪ್ರಾಣಿಗಳು, ಕ್ರೂರ ಪ್ರಾಣಿಗಳು ಎಂದು ವಿಭಾಗಿಸಬಹುದೋ ಪ್ರಾಣಿಯೇ ಆದ ಮನುಷ್ಯನನ್ನೂ ಸಾಧು ಮನುಷ್ಯ ಹಾಗೂ ಕ್ರೂರ ಮನುಷ್ಯ ಎಂದು ಎರಡು ವಿಭಾಗ ಮಾಡಬಹುದು. ? ಇವರು ಸಾಧು ಮನುಷ್ಯ. ಎಂ.ಜಿ. ನಾಯ್ಕರ ಹತ್ತಿರ ಇಂಥದ್ದೊಂದು ಆಗಬೇಕೆಂದರೆ ಅದು ಸಾಧ್ಯವಾಗುತ್ತದೆ. ನಾನೇ ಮಾಡಿದ್ದು ಅದು ಎಂದು ಬಡಾಯಿಯನ್ನೂ ಅವರು ಕೊಚ್ಚಿ ಕೊಳ್ಳುವುದಿಲ್ಲ.
Friends ಎನ್ನುವ What’s app ಬಳಗ ಕಟ್ಟಿ ಗೆಳೆಯರನ್ನೆಲ್ಲ ಒಟ್ಟಿಗೆ ಸೇರಿಸುವ ಎಂ.ಜಿ.ನಾಯ್ಕರಿಗೆ ಒಬ್ಬ ಜನ ನಾಯಕನಾಗುವ ಎಲ್ಲಾ ಲಕ್ಷಣಗಳೂ ಇವೆ. ನನ್ನ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರಾಗುವ ಅವರು ಅಸಡ್ಡ ಮಾತನಾಡುವವರಿಗೆ ನನ್ನ ಪರವಾಗಿ ಅವರೇ ಉತ್ತರಿಸುತ್ತಾರೆ. ಜಾತಿ ಧರ್ಮಗಳ ಕುರುಡು ಮತಿಯವರಲ್ಲದ ಎಂ.ಜಿ.ನಾಯ್ಕರು ನಮ್ಮ ಬಂಧು ಬಾಂಧವರಿದ್ದಂತೆ. ಜೀವಕ್ಕೆ ಜೀವ ಕೊಡುವ ಜನ ಅವರು.
ಪತ್ನಿ ಕೂಡ ಆದರ್ಶ ಶಿಕ್ಷಕಿ, ಪ್ರತಿಭಾವಂತ ಮಗ, ಮಗಳು ಸ್ವರ್ಗಕ್ಕೆ ಕಿಚ್ಚು ಹಚ್ಚುವುದು ಬೇಡ. ? ಸುಖೀ ಸಂಸಾರ. ಅವರು ಚೆನ್ನಾಗಿರಬೇಕು. ಯಾರು ಬೇರೆಯವರಿಗೆ ಒಳ್ಳೆಯದನ್ನೇ ಬಯಸುತ್ತಾರೋ ಅವರಿಗೂ ಒಳ್ಳೆಯದೇ ಆಗುತ್ತದೆ.
ಎಂ.ಜಿ.ನಾಯ್ಕರು, ತಮ್ಮ ಹೆಚ್ಚಿನ ಸಮಯವನ್ನು ಶಿಕ್ಷಕರ ಸಂಪನ್ಮೂಲ ವ್ಯಕ್ತಿಯಾಗಿ ಬಳಸಿಕೊಳ್ಳಬೇಕೆಂಬುದು ನನ್ನ ಮನದಾಳದ ಬಯಕೆ. ಸುಮ್ಮನೇ ಗಾಳಿ ಹೊಡೆಯುವವನಲ್ಲ ನಾನು. ನಿಮ್ಮ ನಿಜವಾದ ಶಿಕ್ಷಕತನ ಸದ್ಬಳಕೆಯಾಗಲೆಂಬ ಆಶಾವಾದ ಅಷ್ಟೇ. ಸಂಘಟನೆಗೆ ಎತ್ತಿದ ಕೈಯಾದ ಎಂ.ಜಿ.ನಾಯ್ಕರು ತಾಲೂಕಿನ ಅನೇಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಮುಂಚೂಣಿಯಲ್ಲಿ ನಿಂತು ಯಶಸ್ವಿಗೊಳಿಸಿದ್ದಾರೆ. ಅರ್ಧಕ್ಕೆ ಕೈಕೊಟ್ಟು ಓಡಿ ಹೋಗುವ ಜಾಯಮಾನದವರೇ ಅಲ್ಲ ಅವರು.
ನಾನು ಅವರನ್ನು ಯಾವಾಗಲೂ ಗೌರವಾದರಗಳಿಂದ ನೋಡುತ್ತೇನೆ ಮತ್ತು ಅವರೂ ನನಗೆ ಅದಕ್ಕಿಂತ ಹೆಚ್ಚೇ ನೀಡಿದ್ದಾರೆ. ಸತ್ವಾತಿಶಯ ಹೊಂದಿದ ಎಂ.ಜಿ.ನಾಯ್ಕರಂತಹ ಗುರುಗಳು ಸಿಗುವುದೂ ಮಕ್ಕಳ ಸೌಭಾಗ್ಯ. ಅವರು ಮತ್ತಷ್ಟು ಇನ್ನಷ್ಟು ಎತ್ತರಕ್ಕೇರಬೇಕು. ನಮ್ಮ ಎಂ.ಜಿ.ನಾಯ್ಕರು ಎಂದೇ ನಾವು ಹೆಮ್ಮೆ ಪಡುತ್ತೇವೆ. ನನಗೆ ನಾನೇ ಚಪ್ಪಾಳೆ ತಟ್ಟುವ ಅಭ್ಯಾಸವಿಲ್ಲ ನನಗೆ. ನಿಮಗೆ ನನ್ನ ಹಸ್ತಗಳು ಜೋಡಿಸುತ್ತವೆ. ಆ ನೆಪದಲ್ಲಿ ನಾನೂ ಖುಷಿ ಪಡುವೆ. ಸಮಾಜಮುಖಿಯಾಗಿರಿ. ಪ್ರಾಮಾಣಿಕತೆ ಮತ್ತು ನಿಷ್ಠೆ ಯಾವಾಗಲೂ ನಿಮ್ಮಲ್ಲಿದ್ದರೆ ಜನ ಯಾವತ್ತೂ ನಿಮ್ಮನ್ನು ಕೈ ಬಿಡಲಾರರು.
ಸದ್ಗುರು ಶ್ರೀಧರರ ಆಶೀರ್ವಾದ ಎಂ.ಜಿ.ನಾಯ್ಕರು ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಗೋ ರಕ್ಷಕರೇ ಟಾರ್ಗೆಟ್ ಆಗ್ತಿದ್ದಾರೆ! ತಡೆಯೋಣ ಬನ್ನಿ ಒಂದಾಗಿ ಎನ್ನುತ್ತಿದೆ ಯುವ ಬ್ರಿಗೇಡ್.

ಎಂ.ಜಿ ನಾಯ್ಕರಿಗೆ ನನ್ನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 94802 11578

??????⚫⚪???????⚫⚪?????

RELATED ARTICLES  ಭಟ್ಕಳದಲ್ಲಿ ಬಾಂಬ್ ಬೆದರಿಕೆ : ಆರೋಪಿ ಅರೆಸ್ಟ್..!