ಮಹಾಸಾಗರದಲ್ಲಿ ಸಾಗುತ್ತಿದ್ದ ಹಡಗೊಂದು ಅಪಘಾತಕ್ಕೀಡಾಯಿತು. ಒಬ್ಬನನ್ನು ಹೊರತುಪಡಿಸಿ ಉಳಿದ ಯಾತ್ರಿಗಳೆಲ್ಲ ಮಡಿದರು. ಅವನು ಅದು ಹೇಗೋ ಈಜಿ ದಡ ಸೇರಿದ. ಅದೊಂದು ನಿರ್ಜನ ದ್ವೀಪವಾಗಿದ್ದು ಅಲ್ಲಿ ಯಾರೂ ಬದುಕುವ ಪರಿಸ್ಥಿತಿ ಇರಲಿಲ್ಲ. ಕಂಗಾಲಾದ ಆತ ದೇವರಿಗೆ ಮೊರೆಯಿಟ್ಟ. ದೇವರೇ……… ಹೇಗಾದ್ರೂ ನನ್ನನ್ನ ಮರಳಿ ಊರಿಗೆ ಸೇರಿಸು. ಅಂತ. ಆದರೆ ಯಾವ ಸಹಾಯವೂ ಒದಗಿ ಬರಲಿಲ್ಲ. ಅನಿವಾರ್ಯ ಪರಿಸ್ಥಿತಿಯಲ್ಲಿ ಅಲ್ಲಿ ದೊರಕಿದ ಒಣ ಕಟ್ಟಿಗೆಗಳಿಂದ ಸೊಪ್ಪುಗಳಿಂದ ಸಣ್ಣ ಗುಡಿಸಲೊಂದನ್ನು ಕಟ್ಟಿಕೊಂಡು ವಾಸ ಮಾಡತೊಡಗಿದ. ಒಂದು ದಿನ ಆತ ಆಹಾರ ಹುಡುಕಲೋಸುಗವಾಗಿ ಕಾಡಿನೊಳಗೆ ಹೋದ. ಕಾಡಿನಲ್ಲೆಲ್ಲ ಓಡಾಡಿ ಮರಳಿ ಗುಡಿಸಲಿಗೆ ಬಂದರೆ ಅವನಿಗೆ ಆಘಾತ ಕಾದಿತ್ತು. ಒಂದೇ ಒಂದು ಆಸರೆಯಾಗಿದ್ದ ,ಅವನೇ ಕಟ್ಟಿಕೊಂಡಿದ್ದ ಗುಡಿಸಲು ಧಗಧಗನೆ ಉರಿಯುತ್ತಿತ್ತು. ಅದನ್ನು ಕಂಡ ಆತನಿಗೆ ದೇವರ ಮೇಲೆ ತುಂಬಾ ಸಿಟ್ಟು ಬಂತು. “ನೀನೆಂತ ನಿಷ್ಕರುಣಿ… ನನ್ನ ಮೊರೆಯನ್ನು ಕೇಳಲಿಲ್ಲ… ನನಗೆ ಸಹಾಯವನ್ನೂ ಮಾಡಲಿಲ್ಲ…. ಈಗ ನಾನೇ ನಿರ್ಮಿಸಿಕೊಂಡ ಗುಡಿಸಲಿಗೆ ಬೆಂಕಿ ಹಾಕಿದೆ. ನಿನಗೆ ಒಂದಿಷ್ಟೂ ಕನಿಕರವಿಲ್ಲವೇ ? ಎಂದು ಬಾಯಿಗೆ ಬಂದಂತೆ ಕೂಗಿದ. ಘೋರ ಚಳಿ, ರಾತ್ರಿ ಬೇರೆ . ಆಕಾಶವೇ ಹೊದಿಕೆ…. ಭೂಮಿಯೇ ಹಾಸಿಗೆ. ದೇವರನ್ನು ನಿಂದಿಸುತ್ತಾ ಮಲಗಿದ. ಬೆಳಿಗ್ಗೆ ಏಳುತ್ತಿರುವಾಗಲೇ ಸಾಗರದಲ್ಲಿ ಅದೇನೋ ಶಬ್ದ ಕೇಳಿಸಿತು. ಹೋಗಿ ನೋಡಿದರೆ ಇವನಿರುವೆ ಡೆಗೆ ಹಡಗೊಂದು ಬರ್ತಾ ಇದೆ. ಸಮೀಪ ಬಂದ ಅವರು ಇವನಲ್ಲಿ “ನಿನ್ನನ್ನು ರಕ್ಷಿಸಲೆಂದೇ ನಾವಿಲ್ಲಿಗೆ ಬಂದೆವು” ಎಂದರು ಆಗ ಇವನಿಗೆ ಕುತೂಹಲ ತಡೆಯಲಾರದೇ ಕೇಳಿದ. “ನಾನಿಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ ಎಂಬುದನ್ನು ಯಾರು ನಿಮಗೆ ಹೇಳಿದರು?” ಎಂದು. ಆಗ ಅವರು “ಈ ದ್ವೀಪದಿಂದ ಹೊಗೆ ಮೇಲಕ್ಕೆ ಬರುತ್ತಿರುವುದನ್ನು ನಾವು ದೂರದಿಂದ ನೋಡಿದೆವು. ಇಲ್ಲಿಂದ ಯಾರೋ ಧೂಮ ಸಂಕೇತ ಕಳುಹಿಸುತ್ತಿದ್ದಾರೆ ಎಂದು ಭಾವಿಸಿ ಈ ಕಡೆ ಬಂದೆವು” ಎಂದರು. ಅವರ ಮಾತು ಕೇಳಿ ಈತನಿಗೆ ಆಶ್ಚರ್ಯವೂ ಆಯಿತು ಪಶ್ಚಾತ್ತಾಪವೂ ಆಯ್ತು. “ನಾನು ದೇವರನ್ನು ಕುರಿತು ಏನೆಲ್ಲಾ ಭಾವಿಸಿದೆ ರಾತ್ರಿಯಿಡೀ ಹೀಗಳೆದೆ. ಆದರೆ ದೇವನ ಲೀಲೆಯನ್ನು ಅರಿಯದಾದೆ. ನನ್ನ ಮೊರೆ ಕೇಳಿದ ದೇವನೇ ಗುಡಿಸಲು ಉರಿಯುವಂತೆ ಮಾಡಿ ಆಕಾಶಕ್ಕೆ ಹೊಗೆ ಹೋಗಿ ಹಡಗಿನವರಿಗೆ ಕಾಣುವಂತೆ ಮಾಡಿದ. ಆದರೆ ನಾನು ದೇವರನ್ನು ತಪ್ಪಾಗಿ ತಿಳಿದುಕೊಂಡೆ. ದೇವರು ನಿಜವಾಗಿಯೂ ನಿಷ್ಕರುಣಿಯಲ್ಲ ….. ಕರುಣಾಮಯಿ.” ಎಂದು ಪರಿತಪಿಸಿದ. ಆತನಿಗೆ ಸತ್ಯ ದರ್ಶನವಾಗಿತ್ತು. ಆತನ ಅರಿವಿನ ಬಾಗಿಲು ತೆರೆದಿತ್ತು.
ನಾವು ಕೆಡುಕು ಎಂದು ಎಣಿಸಿದ್ದೆಲ್ಲ ಕೆಡುಕಲ್ಲ. ನಮಗೆ ಕೆಡುಕು ಎಂದು ಕಾಣುವುದರ ಹಿಂದೆ ಅದೇನೋ ಒಳಿತಿರಬಹುದು. ಬದುಕಿನಲ್ಲಿ ದುರಂತ ಕಂಡು ಬಂದಾಗಲೆಲ್ಲ ನಮಗೆ ಈ ಕಥೆ ನೆನಪಾಗಬೇಕು. ಅವಘಡ ಒಳ್ಳೆಯ ಭವಿಷ್ಯಕ್ಕೆ ಎಂದು ಧನಾತ್ಮಕ ಚಿಂತನೆ ಮಾಡಬೇಕು. ದುಃಖ ಬಂದಾಗ ದೇವರನ್ನು ದೂರಬಾರದು. ಆದರೆ ನಾವು ಮಾಡುತ್ತಿರುವುದೇನು? ದುಃಖ ಬಂದಾಗ ದೇವರನ್ನು ದೂರುತ್ತೇವೆ. ಸುಖ ಬಂದಾಗ ದೇವರನ್ನು ಮರೆಯುತ್ತೇವೆ.
ಜಾರ್ಜ್ ಬರ್ನಾರ್ಡ್ ಶಾ ಹೇಳಿದ್ದರಂತೆ….” ದೇವರಿದ್ದದ್ದು ಸತ್ಯ ಅಂತಾದರೆ ಆತ ನನ್ನೆದುರಿಗೆ ಹತ್ತು ನಿಮಿಷದಲ್ಲಿ ಬರಬೇಕು” ಅಂತ. ಇದು ಹುಚ್ಚುತನ. ಮೊಂಡುವಾದ. ಮನದ ಬಾಗಿಲನ್ನು ಮುಚ್ಚಿ ಮನೆಗೆ ಬಾ ಎಂದಂತೆ ಅದು. ನಾವು ನಮ್ಮ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚಿ ಸೂರ್ಯನಿಲ್ಲವೆಂದಂತೆ ಅದು. ಆಕಾಶದಲ್ಲಿ ಒಂದು ದೊಡ್ಡ ಮೋಡವಿದೆ ಎಂದರೆ ಅಲ್ಲಿ ಮಿಂಚಿದೆ ಅಂತ ಅರ್ಥ. ಅಲ್ಲಿ ಜೀವನಾಧಾರವಾದ ಮಳೆ ಇದೆ ಎಂಬುದನ್ನು ನಾವು ಮರೆಯಬಾರದು. ಧರೆಗೆ ದೊರೆ ಎಂದರೆ ಅವನೊಬ್ಬನೇ…. ಅವನಲ್ಲಿ ನಂಬಿಕೆ ಇಡಬೇಕು. ವಿಶ್ವಾಸವಿಡಬೇಕು. ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎಂಬ ಬುದ್ಧಿ ನಮ್ಮಿಂದ ತೊಲಗಬೇಕು. ನಂಬಿ ಕರೆದರೆ ಓ ಎಂಬ ಶಿವನು ಎಂಬ ಕವಿವಾಣಿ ನಮ್ಮ ಒಳಗಣ್ಣು ತೆರೆಸಬೇಕು.
ದೇವನ ಅನುಗ್ರಹಕ್ಕೆ ಪಾತ್ರರಾಗಲು ನಮಗೆ ಯೋಗ ಬೇಕು… ಆ ಯೋಗ ಬರಬೇಕಾದರೆ ನಮ್ಮಲ್ಲಿ ಆ ಯೋಗ್ಯತೆ ಇರಬೇಕು…. ಯೋಗ್ಯತೆ ಬರಬೇಕಾದರೆ ನಾವು ಆ ರೀತಿಯಲ್ಲಿ ಬದುಕಬೇಕು. ಬದುಕಿನ ಸಾಗರದಲ್ಲಿ ಮುಳುಗದೇ ಈಜುತ್ತಿರಬೇಕೆಂದರೆ ನಮ್ಮೆರಡು ಕೈಗಳೂ ಕ್ರಿಯಾಶೀಲವಾಗಿರಬೇಕು. ಅವು ಕೊಡು-ಕೊಳ್ಳುವುದರ ಸಂಕೇತ. ಒಳಿತನ್ನು ನೀಡಿ ಒಳಿತನ್ನು ಕೊಂಡರೆ ನಮಗೆ ಭವಿಷ್ಯದಲ್ಲಿ ಒಳಿತಾಗುವುದು ಖಚಿತ ದೇವನ ಒಲುಮೆಯು ದೊರೆಯುವುದು ಖಚಿತ. ಹಾಗಾಗಿ ಬದುಕಿರುವಾಗಲೇ ಜನರ ಬಾಯಲ್ಲಿ ಸಾಯದೇ… ಸತ್ತ ಮೇಲೂ ಜನರ ಬಾಯಲ್ಲಿ ಬದುಕುವಂಥ ಬದುಕು ನಮ್ಮದಾಗಲಿ.
✍️ ಡಾ. ರವೀಂದ್ರ ಭಟ್ಟ ಸೂರಿ.