ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀ ಶಂಕರ ಹೆಗಡೆ ನೀಲಕೋಡ

ಕಲೆ ಎಲ್ಲರಿಗೂ ಒಲಿಯುವುದಲ್ಲ. ಒಲಿದ ಕಲೆ ಎಲ್ಲರಿಗೂ ಸಿದ್ಧಿಸುವುದೂ ಇಲ್ಲ. ಕಲಿಯುವ ಮನಸ್ಸು ಬೇಕು. ಕಲಿತು ಕಲೆತು ಕಲೆಯನ್ನೇ ಆರಾಧಿಸುವ ಅಭಿನೇತ್ರಿಯೊಂದನ್ನು ನಾನಿವತ್ತು ನಿಮ್ಮೆದುರು ಅಕ್ಷರಗಳಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಬೇಕು. ಗಂಡೇ ಹೆಣ್ಣಾಗಿ ಹೆಣ್ಣನ್ನೂ ನಾಚಿಸುವ ಒನಪು, ವಯ್ಯಾರ ತೋರುವ ಅನನ್ಯ ಕಲಾವಿದ ಶ್ರೀಯುತ ಶಂಕರ ಹೆಗಡೆ ನೀಲಕೋಡ ನನ್ನ ಇಂದಿನ ಅಕ್ಷರ ಅತಿಥಿ.
ನಾಡಿನ ಶ್ರೇಷ್ಠ ಸ್ತ್ರೀ ವೇಷಧಾರಿ, ನಾಗವಲ್ಲಿ ಖ್ಯಾತಿಯ ಯಕ್ಷಗಾನ ಕಲಾವಿದ, ಅಭಿನೇತ್ರಿ ಟ್ರಸ್ಟಿನ ಸಂಸ್ಥಾಪಕ, ಕಿರುತೆರೆ ನಟ, ಯಕ್ಷಗಾನದಲ್ಲಿ ಪುರುಷ ಮತ್ತು ಸ್ತ್ರೀ ವೇಷಗಳನ್ನು ಸಮತೂಕದಲ್ಲಿ ನಿಭಾಯಿಸುವ ಅನನ್ಯ ಕಲೆಗಾರ, ನಾಟ್ಯ ಮಾತುಗಳೆರಡನ್ನೂ ತೂಗಿಸಿಕೊಂಡು ಹೋಗುವ ಶಂಕರ ಹೆಗಡೆಯವರು ಪ್ರಸ್ತುತ ಮುಂಚೂಣಿ ಸ್ತ್ರೀಪಾತ್ರಧಾರಿಗಳು. ಅವರ ಮನೆ ಇರುವುದು ನಮ್ಮ ಮನೆಯಿಂದ ಗಟ್ಟಿ ಕೂಗಳತೆಯ ದೂರದಲ್ಲಿ. ವರಸೆಯಲ್ಲಿ ನಮ್ಮತ್ತಿಗೆಯ ಸಹೋದರ ಅವರು. ಅವರೊಬ್ಬ ನಟರಾಗಿ ನಾನೊಬ್ಬ ಅವರ ಪಾತ್ರದ ಅಭಿಮಾನಿಯಾಗಿ ಇರುವ ಸಂಬಂಧವೇ ನನಗೆ ಹೆಚ್ಚು ಖುಷಿ ಕೊಡುತ್ತದೆ.
ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ನೀಲಕೋಡ, ಶ್ರೀ ವಿಶ್ವನಾಥ ಹೆಗಡೆ ದಂಪತಿಗಳು ಸರಳ ಸಂಪ್ರದಾಯಸ್ಥ ಸಾತ್ವಿಕ ಕುಟುಂಬದವರು. ಆಸ್ತಿಕರಾಗಿ ಬದುಕುವ ಅವರಿಗೆ ಗಣಪತಿ, ಶಂಕರ, ಮಾಲಿನಿ ಮೂವರೂ ಅತ್ಯಂತ ಸಭ್ಯ ಸಂಸ್ಕಾರ ಪೂರ್ಣವಾಗಿ ಬೆಳೆದ ಮಕ್ಕಳು. ಅಣ್ಣ ಗಣಪತಿ ನಾನು ಕಲಿತ ಎಸ್.ಕೆ.ಪಿ. ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅಕ್ಕ ಮಾಲಿನಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಾರೆ, ಶಂಕರ ಹೆಗಡೆಯವರ ಆಸಕ್ತಿ ಮಾತ್ರ ಯಕ್ಷಗಾನದತ್ತ ವಾಲಿದ್ದು ವಿಶೇಷ. ಕಲಾ ಸರಸ್ವತಿಯೇ ಅವರನ್ನು ಬಳಿ ಸೆಳೆದುಕೊಂಡಿತು ಎಂದೆನಿಸುವುದು ನನಗೆ. ಕೆರೆಮನೆ ಶಂಭು ಹೆಗಡೆಯವರ ಮಾರ್ಗದರ್ಶನದಲ್ಲಿ ಪ್ರಾರಂಭಗೊಂಡ ಶಂಕರ ಹೆಗಡೆಯವರ ಯಕ್ಷಾಭಿನಯಕ್ಕೆ ಮತ್ತಷ್ಟು ಹೊಳಪು ನೀಡಿದ ಹೆರಂಜಾಲು ಗೋಪಾಲ ಗಾಣಿಗರನ್ನು, ವಿದ್ವಾನ್ ಗಣಪತಿ ಭಟ್ಟರನ್ನು, ಎ.ಬಿ ಪಾಠಕರನ್ನೂ ಶಂಕರ ಹೆಗಡೆಯವರು ಮನಸಾ ಸ್ಮರಿಸುತ್ತಾರೆ. ತಾನು ಕೆಲಸ ಮಾಡಿದ ಮೇಳದ ಹಿಮ್ಮೇಳ ಹಾಗೂ ಮುಮ್ಮೇಳದ ಪ್ರತಿಯೊಬ್ಬ ಕಲಾವಿದರನ್ನೂ ನೆನಪಿಸಿಕೊಳ್ಳುವ ಅವರ ತಲೆಯಲ್ಲಿ ನೂರಾರು ಯೋಚನೆಗಳಿವೆ. ನೂರಾರು ಯೋಜನೆಗಳಿವೆ. ಅದನ್ನು ಸಾಕಾರಗೊಳಿಸಲು ಅವರು ಹಗಲು ರಾತ್ರಿ ಶ್ರಮಿಸುತ್ತಾರೆ.
ಸ್ತ್ರೀಯಾಗಿ ಬದುಕುವುದೇ ಒಂದು ಸವಾಲಿನ ಕೆಲಸ. ಸ್ತ್ರೀ ವೇಷ ಮಾಡಿ ಬದುಕುವುದು ಅದು ಮತ್ತೂ ಸವಾಲು. ? ಶಂಕರ ಹೆಗಡೆಯವರನ್ನು ನೋಡಿದಾಗ ನನಗನ್ನಿಸುವುದು ಅವರು ಶರ್ಟ ಪ್ಯಾಂಟಗಳಿಗಿಂತ ಸೀರೆಯನ್ನೇ ಉತ್ತಮವಾಗಿ ಆಯ್ಕೆ ಮಾಡುತ್ತಾರೆ ಎಂದು. ಯಾಕೆಂದರೆ ಇತ್ತೀಚಿನ ಬೆಳವಣಿಯಲ್ಲಿ ಅವರು ಯಕ್ಷಗಾನ ಪ್ರಸಂಗವೊಂದರಲ್ಲಿ ನಾಲ್ಕೈದು ಬಾರಿ ಸೀರೆ ಬದಲಾಯಿಸುತ್ತಾರೆ. ಮತ್ತು ಯಕ್ಷಗಾನ ನೋಡುವ ಹೆಂಗಸರು ಅವರು ಯಾವ ಸೀರೆ ಉಡುತ್ತಾರೆ?! ಅದರ design ಹೇಗೆ ಎಂಬುದನ್ನೇ ಕಾದು ಕುಳಿತವರಂತೆ ವೀಕ್ಷಿಸುತ್ತಾರೆ. ? ಯಕ್ಷಗಾನ ನೋಡಿ ಬಂದ ಗಂಡಸರು ನಿದ್ರೆಗೆಡುವುದು ಗ್ಯಾರಂಟಿ. ? ಮಿಂಚಿನ ಪ್ರವೇಶ, ಜಾತಕ ಕೊಟ್ಟರೆ ನಾನೇ ಮದುವೆಯಾಗಿ ಬಿಡೋಣ ಎನ್ನಿಸುವಷ್ಟು ರೂಪ, ? ತಡವರಿಸದ ಮಾತು, ಪೌರಾಣಿಕ ಪಾತ್ರಗಳ ಸಮರ್ಥ ನಿರ್ವಹಣೆ, ನವೀನ ಪ್ರಸಂಗಳಲ್ಲೂ ನಾಯಕಿಯಾಗಿ, ಖಳನಾಯಕಿಯಾಗಿ ಬಾಕ್ಸ ಆಫೀಸ್ ಕೊಳ್ಳೆ ಹೊಡೆವ ಅಪೂರ್ವ ಅಭಿನಯ. ಹೆಂಗಸರ ಹಾವ, ಭಾವ, ಬಿಂಕ, ಬಿನ್ನಾಣ, ನಡೆ, ನಾಜೂಕು ಇವೆಲ್ಲವುಗಳನ್ನೂ ತನ್ನಲ್ಲಿ ಮೈಗೂಡಿಸಿಕೊಂಡು ಕಲಾರಸಿಕರ ಮನಸೂರೆಗೊಳ್ಳುವ ರಂಗನಾಯಕ/ಕಿ ಶ್ರೀ ಶಂಕರ ಹೆಗಡೆ ನೀಲಕೋಡ.
ದಾಕ್ಷಾಯಿಣಿ, ಪ್ರಭಾವತಿ, ಲಕ್ಷ್ಮಿ, ಮುಂತಾದ ಎಲ್ಲಾ‌ ಪೌರಾಣಿಕ ಪಾತ್ರಗಳನ್ನು ಔಚಿತ್ಯ ಮೀರದಂತೆ ಪ್ರಭಾವಯುತವಾಗಿ ಅಭಿನಯಿಸುವ ಶಂಕರ ಹೆಗಡೆಯವರು ಕೃಷ್ಣ, ಕೀಚಕ, ಸುಧನ್ವ, ಸುಗ್ರೀವ, ಕಲಾಧರ ಮುಂತಾದ ಪುರುಷ ಪಾತ್ರಗಳನ್ನೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ನಾಗವಲ್ಲಿಯ ಪಾತ್ರವಂತೂ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತು. ಪ್ರಸ್ತುತ ಸಾಲಿಗ್ರಾಮ ಮೇಳದ ಕಲಾವಿದರಾಗಿರುವ ಅವರು ಸೂರ್ಯಸಖಿ ಪಾತ್ರವನ್ನು ಅಭಿನಯಿಸುವ ಪರಿ ಅಮೋಘ, ಅದ್ಭುತ.
‌ ಶಂಕರ ಹೆಗಡೆಯವರು ವೈಯಕ್ತಿಕವಾಗಿ ಹೃದಯಾಂತಃಕರಣ ಇರುವ ಮನುಷ್ಯ. ಹೀಗಾಗಿ ಕಣ್ಣೀಮನೆಯವರು ತೀರಿಕೊಂಡಾಗ ರಮೇಶ ಭಂಡಾರಿಯವರ ಜೊತೆಗೂಡಿ ಅವರು ಕಣ್ಣಿ ಕುಟುಂಬದ ನೆರವಿಗೆ ಧಾವಿಸಿದರು. ಅಶಕ್ತ ಬಡ ಪ್ರತಿಭಾನ್ವಿತ ಕಲಾವಿದರ ನೆರವಿಗೆಂದೇ ಅಭಿನೇತ್ರಿ ಟ್ರಸ್ಟ್ ಸ್ಥಾಪಿಸಿ ಪ್ರತಿವರ್ಷ ಕಲಾವಿದರನ್ನು ಗೌರವಿಸುವ ದೊಡ್ಡ ಮೊತ್ತದಲ್ಲಿ ನೆರವಾಗುವ ಕೆಲಸ ಮಾಡುತ್ತಿದ್ದಾರೆ.
ನಮ್ಮೂರಿನ ಕಲಾವಿದರೋರ್ವರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಾರೆಂದರೆ ನಾವು ಪ್ರತಿಯೊಬ್ಬರೂ ಅದಕ್ಕೆ ಹೆಮ್ಮೆ ಪಡುತ್ತೇವೆ. ಹಿರಿ ಕಿರಿಯ ಕಲಾವಿದರುಗಳೇನಕರೊಂದಿಗೆ ಪಾತ್ರಗಳನ್ನು ಮಾಡಿ ಅವರ ಪಾತ್ರಗಳನ್ನು ಗೌರವಿಸುವ ಶಂಕರಹೆಗಡೆಯವರು ಅಪ್ಪಟ ಹಳ್ಳಿ ಪ್ರತಿಭೆ.
ಎತ್ತರದ ನಿಲುವಿನ ಶಂಕರ ಹೆಗಡೆಯವರ ಮುಂದೆ ಬಹಳಷ್ಟು ನಾಯಕ ಪಾತ್ರಗಳು ಸಣ್ಣವಾಗಿ ಕಾಣುತ್ತವೆ. ? ಅವರು ಮಾಡಿದ ಪಾತ್ರಗಳಲ್ಲೆಲ್ಲ ಜೀವಕಳೆ ತುಂಬುತ್ತಾರೆ. ಅಸಡ್ಡೆಯಿಂದ ಹೂಂ ಹೂಂ ಹೂಂ ಹಾಕುತ್ತಾ ಎದುರು ಪಾತ್ರಧಾರಿಯನ್ನು ಅಲಕ್ಷಿಸುವ ಜಾಯಮಾನವೇ ಅವರದಲ್ಲ. ತಾನೂ ಬೆಳೆಯಬೇಕು….ತನ್ನವರನ್ನೂ ಬೆಳೆಸಬೇಕೆನ್ನುವ ಮನಸ್ಸುಳ್ಳವರು ಅವರು. ಮಡದಿ ಬ್ಯಾಂಕ್ ಉದ್ಯೋಗಿಯಾಗಿದ್ದು ಪತಿ ಶಂಕರ ಹೆಗಡೆಯವರಿಗೆ ಸಾಥ್ ನೀಡುತ್ತಾರೆ. ಪ್ರತಿಭಾ ಸಂಪನ್ನ ಪುತ್ರಿ.
ಶಂಕರ ಹೆಗಡೆಯವರು ಕಿರುಚಿತ್ರಗಳಲ್ಲೂ ಅಭಿನಯಿಸಿ ಅಭಿಮಾನಿಗಳ ಮನ ಸೂರೆಗೊಂಡರು. ಅನೇಕ ಸಾರ್ವಜನಿಕ ಸನ್ಮಾನಗಳಿಗೆ ಅವರು ಈಗಾಗಲೇ ಅರ್ಹವಾಗಿಯೇ ಭಾಜನರಾಗಿದ್ದಾರೆ. ಅಭಿಮಾನಿಗಳ ಸಂಖ್ಯೆ ಕಲಾವಿದನಾದವನಿಗೆ ಬೆಳೆಯುತ್ತಲೇ ಇರುತ್ತದೆ. ಅಭಿಮಾನಿಗಳ ಪಾಲಿಗೆ ನಿಜವಾದ ದೇವರೇ ಎನಿಸುವ ಕಲಾವಿದರು ಅಭಿಮಾನಿಗಳನ್ನು ಕೂಡಾ ದೇವರಂತೆ ನಡೆಸಿಕೊಳ್ಳಬೇಕು. ಒಂದು ಕಾಲಕ್ಕೆ ಕಲಾವಿದನ star value ಕಡಿಮೆಯಾದರೂ ಆಗಬಹುದು. ಆದರೆ ಆ ಕಾಲಕ್ಕೂ ನಿಜವಾದ ಅಭಿಮಾನಿಗಳು ಅವರನ್ನು ಕೈಬಿಡುವುದಿಲ್ಲ. ಸೆಹ್ವಾಗ್ ಭಾರತ ತಂಡದಲ್ಲಿದ್ದು ತ್ರಿಶತಕ ಬಾರಿಸಿ ಎಷ್ಟೋ ಗೆಲುವುಗಳನ್ನು ತಂದುಕೊಟ್ಟು ಕೊನೆಗೆ ಕಳಪೆ ಫಾರ್ಮನಿಂದ ನಿವೃತ್ತಿ ಹೊಂದಿದರು. ಆದರೆ ಅವರ ಅಭಿಮಾನಿಗಳಾಗಿ ಭಾರತ ಯಾವಾಗಲೂ ಸೆಹ್ವಾಗರನ್ನು ಮರೆಯಲಾರದು. ಹಾಗೆಯೇ ವಯಸ್ಸು ಸಹಕರಿಸದ ಕಾಲಕ್ಕೂ ಅಭಿಮಾನಿಗಳ ಹೃದಯ ಕಲಾವಿದರ ಬಗೆಗಾಗಿ ಮಿಡಿಯುತ್ತದೆ. ಶಂಕರ ಹೆಗಡೆಯವರು ಅಭಿಮಾನಿಗಳ ನಿರೀಕ್ಷೆಯನ್ನು ಸುಳ್ಳು ಮಾಡಿದ್ದಿಲ್ಲ. ಮಾಡಲಾರರು.
ಯಕ್ಷಸೇವೆ ಮಾಡುತ್ತಿರುವ ನೀಲಕೋಡ ಶಂಕರ ಹೆಗಡೆಯವರಿಗೆ ಅರ್ಹವಾಗಿಯೇ ಮತ್ತಷ್ಟು ಪ್ರಶಸ್ತಿ ಪುರಸ್ಕಾರಗಳು ದೊರೆಯುವಂತಾಗಬೇಕು. ಅವರ ತೇಜಃಪುಂಜವಾದ ಕಣ್ಣುಗಳು… ಹೀಗೆ ಇರಲಿ….. ಎಪ್ಪತ್ತರ ಕಾಲಕ್ಕೂ ಅವರ ಮುಖದ ಮೇಲೊಂದು ನೆರಿಗೆ ಬೀಳದಿರಲಿ. ಶುಭವಾಗಲಿ.
ಸದ್ಗುರು ಶ್ರೀಧರರ ಆಶೀರ್ವಾದ ಶಂಕರ ಹೆಗಡೆಯವರು ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಶಂಕರ ಹೆಗಡೆಯವರಿಗೆ ನನ್ನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 94496 15716

??????⚫⚪???????⚫⚪?????

RELATED ARTICLES  ಹೊಟ್ಟೆರಾಯರ ಅಟ್ಟಹಾಸ…..!