ತಾಳಿಮೆಲಮೆಲನೊಮ್ಮೆದಾಳಿರಭಸದಿನೊಮ್ಮೆ
ಹೇಳದೆಯೆಕೇಳದೆಯೆಬಹನುವಿಧಿರಾಯ
ಕೀಳಮೇಲಾಗಿಪನು ಮೇಲ ಕೀಳಾಗಿಪನು
ತಾಳುಮೆಯಲಿರು ನೀನು- ಮಂಕುತಿಮ್ಮ.

ಕೆಲವೊಮ್ಮೆ ವಿಧಿ ಮೆಲ್ಲ ಮೆಲ್ಲನೆ ಆಕ್ರಮಣ ಮಾಡಿದರೆ ಇನ್ನೂ ಕೆಲ ಸಮಯ ಇದ್ದಕ್ಕಿದ್ದಂತೆ ದಾಳಿ ಮಾಡಬಹುದು. ವಿಧಿರಾಯ ಹೇಳದೆ ಕೇಳದೆ ಬರುತ್ತಾನೆ. ಬಂದವನು ಕೀಳನ್ನು ಮೇಲಾಗಿಸಬಹುದು… ಮೇಲನ್ನು ಕೀಳಾಗಿಸಬಹುದು. ಇಂತಹ ಸಮಯದಲ್ಲಿ ಸಂಯಮವಿರಬೇಕು, ತಾಳ್ಮೆ ಇರಬೇಕು. ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲ ಬದಲಾಗುತ್ತಿರುತ್ತದೆ ಎಂಬುದು ಕಗ್ಗ ಹೇಳುವ ನೀತಿ.

ಒಂದು ಹಳ್ಳಿ. ಅಲ್ಲೊಬ್ಬ ರೈತ. ಆತನಲ್ಲಿತ್ತು ಒಂದು ಕುದುರೆ. ಸುಲಕ್ಷಣವಾದ, ದಷ್ಟಪುಷ್ಟವಾದ, ಉಪಯುಕ್ತವಾದ ಕುದುರೆಯದು. ಒಂದು ದಿನ ಅದು ತಪ್ಪಿಸಿಕೊಂಡಿತು. ಅಲ್ಲಿಂದ ಓಡಿ ಹೋಯ್ತು. ಇದನ್ನು ತಿಳಿದ ಆಚೀಚೆ ಮನೆಯವರು ಬಂದರು. ರೈತನಲ್ಲಿ “ನಿನ್ನ ದುರದೃಷ್ಟ” ಎಂದರು. ಆತನ ಉತ್ತರ ಇರಬಹುದು ಎಂಬುದಾಗಿತ್ತು. ಮಾರನೇ ದಿನ ಓಡಿ ಹೋಗಿದ್ದ ರೈತನ ಕುದುರೆ ಮರಳಿ ಬಂತು. ಬರುವಾಗ ಮೂರು ಕಾಡುಕುದುರೆಗಳನ್ನು ಕರೆತಂತು. ಇದನ್ನು ನೋಡಿದ ಅಕ್ಕಪಕ್ಕದ ಮನೆಯವರು ಬಂದರು” ಎಂತಹ ಅದೃಷ್ಟ” ಎಂದರು. ರೈತನ ಉತ್ತರ ಒಂದೇ ಆಗಿತ್ತು ಇರಬಹುದು ರೈತನ ಮಗನಿಗೆ ಕುದುರೆ ಸವಾರಿಯ ಆಸೆ. ಆತ ಬಂದಿದ್ದ ಮೂರು ಕಾಡು ಕುದುರೆಗಳಲ್ಲಿ ಒಂದನ್ನು ಏರಿದ. ಅದು ಮೈಕೊಡವಿ ಆತನನ್ನು ಬೀಳಿಸಿತು. ಕಾಲು ಮುರಿಯಿತು. ಮತ್ತೆ ಅಕ್ಕಪಕ್ಕದ ಮನೆಯವರು ಬಂದರು. ” ಏನು ದುರ್ಯೋಗ” ಎಂದರು. ಇದಕ್ಕೂ ರೈತನ ಉತ್ತರ ಅದೇ ಆಗಿತ್ತು ಇರಬಹುದು ಎಂದು. ಮಾರನೇ ದಿನ ಮಿಲಿಟರಿ ಅಧಿಕಾರಿಗಳು ಆ ಹಳ್ಳಿಯ ಯುವಕರನ್ನು ಕಡ್ಡಾಯವಾಗಿ ಮಿಲಿಟರಿಗೆ ಸೇರಿಸಲು ಬಂದರು. ಇಡೀ ಊರಿನ ಎಲ್ಲ ಯುವಕರನ್ನು ಕಡ್ಡಾಯವಾಗಿ ಸೈನ್ಯಕ್ಕೆ ಸೇರಿಸಿದರು. ಆದರೆ ಕಾಲು ಮುರಿದುಕೊಂಡಿದ್ದ ರೈತನ ಮಗನನ್ನು ಬಿಟ್ಟರು. ಈ ಬಾರಿಯೂ ಅಕ್ಕ ಪಕ್ಕದವರು ಬಂದರು. ನಿಮ್ಮ ಮಗ ಬಚಾವಾದ. “ಅವನ ಅದೃಷ್ಟ” ಎಂದರು. ರೈತ ಇರಬಹುದು ಎಂದ. ಇರಬಹುದು ಎಂದರೆ ಇರಲಿ ಬಿಡು ಎಂದಂತೆ. ದುರದೃಷ್ಟದಲ್ಲಿ ಅದೃಷ್ಟ….. ಅದೃಷ್ಟದಲ್ಲಿ ದುರದೃಷ್ಟ ಇರಬಹುದು ಅದಕ್ಕಾಗಿ ತಾಳಿಕೊಳ್ಳಬೇಕು. ಮುಂದೊಂದು ದಿನ ಬದಲಾವಣೆಯಾಗಬಹುದೆಂದು ಒಳ್ಳೆಯ ದಿನ ಬರಬಹುದೆಂದು. “ಆತ್ಮಹತ್ಯೆಯೊಂದನ್ನು ಮಾಡಿಕೊಳ್ಳದಿದ್ದರೆ ನೂರು ವರ್ಷ ಕಳೆದ ಮೇಲಾದರೂ ಒಳ್ಳೆಯ ಸಮಯ ಬರಬಹುದು” ಇದು ಸೀತೆಯ ಮಾತು. ವಿಧಿಯಾಟ ಬಲ್ಲವರಾರು? ಸೀತೆಗೆಲ್ಲಿ ಗೊತ್ತಿತ್ತು ಮಾಯಾ ಜಿಂಕೆಯದೆಂದು? ಅವಳಿಗೆಲ್ಲಿ ಗೊತ್ತಿತ್ತು ಇದೆಲ್ಲದರ ಹಿಂದೆ ರಾವಣನು ಇದ್ದಾನೆಂದು? ರಾಮ ಕಾಡಲ್ಲಿ ಗಡ್ಡೆಗೆಣಸು ತಿಂದು ಬದುಕುವ ಪರಿಸ್ಥಿತಿ ಬರುತ್ತದೆಂದು ಯಾರು ಊಹಿಸಿದ್ದರು? ಸತ್ಯ ಹರಿಶ್ಚಂದ್ರನಿಗೆ ಸ್ಮಶಾನ ಕಾಯುವ ಅವಸ್ಥೆ ಬರುತ್ತದೆಂದು ಯಾರಿಂದ ಊಹಿಸಲು ಸಾಧ್ಯವಿತ್ತು? ಇದೆಲ್ಲ ವಿಧಿಯಾಟ . ವಿಧಿಯ ದಾಳಿ . ನಮ್ಮ ಜೀವನದಲ್ಲೂ ಇಂತಹ ಕಷ್ಟ ನಷ್ಟಗಳು ಆಗಾಗ ಬರಬಹುದು. ಇಂತಹ ಸಂದರ್ಭಗಳಲ್ಲಿ ತಾಳ್ಮೆ ಇರಬೇಕು. ಎಂತಹ ಪರಿಸ್ಥಿತಿಯಲ್ಲೂ ಜೀವನೋತ್ಸಾಹ ಕಳೆದುಕೊಳ್ಳಬಾರದು. ರಾಮ, ಸೀತೆ ,ಸತ್ಯ ಹರಿಶ್ಚಂದ್ರರ ಬಾಳಿನ ಘಟನೆಗಳನ್ನು ಒಮ್ಮೆ ನೆನಪು ಮಾಡಿಕೊಳ್ಳಬೇಕು. ಅವರು ತಾವು ನಂಬಿದ ತತ್ವಕ್ಕಾಗಿ, ಧ್ಯೇಯಕ್ಕಾಗಿ, ಧರ್ಮಕ್ಕಾಗಿ, ಸತ್ಯಕ್ಕಾಗಿ ಬದುಕಿದರು. ಬದುಕಿನುದ್ದಕ್ಕೂ ಅದನ್ನು ಪಾಲಿಸಿದರು. ಅವರಲ್ಲಿ ಬದುಕುವ ಛಲವಿತ್ತು ಆತ್ಮ ಬಲವಿತ್ತು ಹಾಗಾಗಿಯೇ ಮುಂದೆ ಆ ದಿನ ಬಂತು. ಅವರ ಬಾಳಿನಲ್ಲಿ ಬೆಳಕು ಮೂಡಿತು. ಕಷ್ಟ ಬಂದಾಗ ಸ್ವಲ್ಪ ತಾಳಿಕೊಳ್ಳಬೇಕು. ಅದು ಮುಗಿಯುವವರೆಗೆ. ಒಳ್ಳೆಯ ಕಾಲಕ್ಕಾಗಿ ಕಾಯಬೇಕು. ಕಷ್ಟವೂ ಸುಖವು ಹಾಗೆಯೇ ಇರಲು ಸಾಧ್ಯವಿಲ್ಲ. ಇದು ಹೀಗೇ ಇರದು ಎಂಬ ವಾಕ್ಯವನ್ನು ನೆನಪಿಸಿಕೊಂಡರೆ ಎಂತಹ ಕಠಿಣ ಪರಿಸ್ಥಿತಿ ಇರಲಿ ಅಥವಾ ಉನ್ನತ ಸ್ಥಿತಿ ಇರಲಿ ನಾವು ಸಮಚಿತ್ತ ಕಾಯ್ದುಕೊಳ್ಳಲು ಸಾಧ್ಯ.

RELATED ARTICLES  ಮನೋಗತ

ಒಂದು ಚಕ್ರಕ್ಕೆ ಅರ್ಧ ಕಪ್ಪು ಅರ್ಧ ಬಿಳಿ ಬಣ್ಣ ಬಳಿದರೆ ಅದು ತಿರುಗುವಾಗ ಒಮ್ಮೆ ಕಪ್ಪು ಮೇಲೆ ಬಂದರೆ ಇನ್ನೊಮ್ಮೆ ಬಿಳಿ ಮೇಲೆ ಬರುತ್ತದೆ. ಜೀವನದಲ್ಲಿ ಸುಖ ದುಃಖಗಳು ಹಾಗೆ. ಒಮ್ಮೆ ಸುಖ ಬಂದರೆ ಇನ್ನೊಮ್ಮೆ ದುಃಖ ಬರುತ್ತದೆ. ಅದು ಸಮುದ್ರದ ಅಲೆಗಳಂತೆ. ಒಂದರ ಹಿಂದೆ ಇನ್ನೊಂದು ಬರುತ್ತಲೇ ಇರುತ್ತದೆ. ನಾವು ತಾಳ್ಮೆ ಕಳೆದುಕೊಳ್ಳಬಾರದು. ದುಡುಕಬಾರದು. ಸಮಚಿತ್ತವನ್ನು ಕಾಯ್ದುಕೊಳ್ಳಬೇಕು. ಅದೇ ಬದುಕಿನ ಯಶಸ್ಸಿನ ಸೂತ್ರ. ಶ್ರೀಕೃಷ್ಣ ಹೇಳಿದ್ದು ಇದನ್ನೇ ಮಾನ- ಅಪಮಾನ, ಶತ್ರು -ಮಿತ್ರ ,ಕಷ್ಟ -ಸುಖದಲ್ಲೆಲ್ಲ ಸಮಚಿತ್ತತೆ ಇರಬೇಕು ಅಂತ. ಈ ಬದುಕು ನಶ್ವರ ಈ ನಶ್ವರ ಬದುಕಿಗೆ ದೇವ ಈಶ್ವರ. ದೇವರೆಂಬ ಆಶ್ರಯವನ್ನು ಭದ್ರವಾಗಿ ಆಶ್ರಯಿಸಿ. ಬದುಕಿನ ಎಲ್ಲ ಸಂಗತಿಗಳು ಪರಮ ಶುಭ ದಲ್ಲಿ ಪರ್ಯವಸಾನಗೊಳ್ಳುತ್ತದೆ.

RELATED ARTICLES  ನಾವು ಭಾರತದಲ್ಲಿ ಇದ್ದೇವೋ ಅಥವಾ ಪಾಕಿಸ್ತಾನದಲ್ಲೋ!?!?

✍️ ಡಾ.ರವೀಂದ್ರ ಭಟ್ಟ ಸೂರಿ.