ಪ್ರಕೃತಿಯೆಂದರೆ ಮಾತೇ ಇಲ್ಲದೆ ಮಾತಾಡುವ ಮಾತೆ ಅದೊಂದು ಅದ್ಭುತವಾದ ಕೃತಿ. ದೇವರ ಕೃತಿ. ಅದಕ್ಕೆ ದೇವನದೇ ವಿನ್ಯಾಸ. ದೇವನೇ ಅದರ ಶಿಲ್ಪಿ. ಪ್ರಕೃತಿ ಸದಾ ಒಂದಿಲ್ಲೊಂದು ಕೃತಿ ಮಾಡುತ್ತಿರುತ್ತದೆ. ಅದು ಜಡವಲ್ಲ…. ಚಲನಶೀಲ, ಸೃಜನಶೀಲ. ಅದು ಶುದ್ಧ, ನೈಸರ್ಗಿಕ ಅಲ್ಲಿ ಕೃತಕತೆಗೆ ಸ್ಥಾನವಿಲ್ಲ. ಅದರ ಸೊಬಗು ವರ್ಣಿಸಲಸದಳ. ಕಾಡು ಹಕ್ಕಿ ಹುಳಕ್ಕೆ ವರ್ಣಚಿತ್ರಗಳೇಕೆ? ಕಗ್ಗದ ಈ ಸಾಲು ಪ್ರಕೃತಿಯ ವಿಶೇಷತೆಯನ್ನು ಸಾರುತ್ತದೆ. ಪ್ರಕೃತಿಯ ಚಿತ್ರದಲ್ಲಿ ವಿನ್ಯಾಸವಿದೆ ,ಯೋಜನೆಯಿದೆ, ಮನ ಸೆಳೆಯುವ ಕಲೆ ಇದೆ. ಅದು ವರ್ಣನೆಗೆ ನಿಲುಕದ ವಿಶಿಷ್ಟತೆಯಿಂದ ಕೂಡಿದ ಮತ್ತೊಂದು- ಮತ್ತೆಂದೂ ಹೋಲಿಕೆ ಇಲ್ಲದ ದೇವರ ಅಪರೂಪದ ಸೃಷ್ಟಿ.

ಮನುಷ್ಯ ರಚಿಸಿದ ಕೃತಿ ಸಾರ್ಥಕವಾಗುವುದು ಬಹಳ ಜನ ವೀಕ್ಷಿಸಿದಾಗ, ಮೆಚ್ಚುಗೆ ವ್ಯಕ್ತಪಡಿಸಿದಾಗ, ಬಹುಮಾನ ಪ್ರಶಸ್ತಿ ಲಭಿಸಿದಾಗ, ಹೆಚ್ಚು ಪ್ರಸಾರವಾದಾಗ ,ಪ್ರಚಾರವಾದಾಗ. ಆದರೆ ದೇವರ ಕೃತಿಗೆ ಯಾರ ಮೆಚ್ಚುಗೆ ಬೇಕಿಲ್ಲ. ಯಾವ ಪ್ರಶಸ್ತಿ ಬೇಕಿಲ್ಲ. ಯಾವ ಪ್ರಚಾರ ಬೇಕಿಲ್ಲ . ಅದಕ್ಕೆ ಕಗ್ಗದ ಕವಿ ಹೇಳಿದ್ದು ನೋಡುಗರ ಕಣ್ಣೊಲವ ಬೇಡುವಳೆ ಪ್ರಕೃತಿ ಅಂತ.

ಒಬ್ಬ ಮನುಷ್ಯ . ಅವನಿಗೆ ದೇವರನ್ನು ಕೇಳಬೇಕು ಅನ್ನಿಸಿತು. ಪಿಸುಗುಟ್ಟಿದ ದೇವರೇ ಮಾತಾಡು ಎಂದನಂತೆ. ಅದೇ ಸಮಯದಲ್ಲಿ ಕೋಗಿಲೆ ಯೊಂದು ಕುಹೂ ಕುಹೂ ಅಂತು. ದೇವರಲ್ಲಿ ಮಾತಾಡು ಎಂದರೆ ಈ ಕೋಗಿಲೆ ಕೂಗುತ್ತದಲ್ಲ ಅಂತ ಸಿಟ್ಟು ಬಂತು. ತಾನು ಪಿಸು ಮಾತಿನಲ್ಲಿ ಹೇಳಿದ್ದು ದೇವರಿಗೆ ಕೇಳಲಿಲ್ಲವೆಂದು ಭಾವಿಸಿ ಆತ ದೊಡ್ಡದಾಗಿ ಕೂಗಿದ… ಕಿರುಚಿದ ಮಾತನಾಡು ಎಂದ. ಆಗ ಆಕಾಶದಲ್ಲಿ ಗುಡುಗು ಗುಡುಗಿತಂತೆ. ಆದರೂ ಆತನಿಗೆ ಅರಿವಾಗಲಿಲ್ಲ. ಸುತ್ತ ತಿರುಗಿದ… ದೇವರೇ ಹೋಗಲಿ ಕಾಣಿಸಿಕೊಂಡು ಬಿಡು ಅಂದ. ಆಗ ಪ್ರಕಾಶಮಾನವಾಗಿ ಮಿಂಚೊಂದು ಮಿಂಚಿತು. ಒಂದು ತಾರೆ ಆಕಾಶದಲ್ಲಿ ಪ್ರಕಾಶಮಾನವಾಗಿ ಬೆಳಗಿತು. ಆತ ಗಮನಿಸಲಿಲ್ಲ. ತುಂಬಾ ಬೇಸರವಾಯ್ತು . ದೇವರು ಸ್ಪಂದಿಸುತ್ತಿಲ್ಲವೆಂದು ಕೊನೆಗೆ ನನ್ನನ್ನು ಮುಟ್ಟು ಎಂದ. ಆಗ ತಂಗಾಳಿ ಬೀಸಿತು. ಚಿಟ್ಟೆಯೊಂದು ಆತನ ಮೈಮೇಲೆ ಬಂದು ಕುಳಿತಿತು. ಅದನ್ನು ಹೊಸಕಿಹಾಕಿದ. ಸಿಟ್ಟಿನಲ್ಲಿ ಹೇಳಿದ…..ಕೊನೆಯ ಪಕ್ಷ ಒಂದು ಪವಾಡವನ್ನಾದರೂ ತೋರಿಸು ಎಂದು. ಕೂಡಲೇ ಒಂದು ಜೀವಿ ಜನ್ಮ ತಾಳಿತು. ನಿಜಕ್ಕೂ ಜೀವಿಯೊಂದು ಜನ್ಮ ತಾಳುವುದು ಜಗತ್ತಿನ ಅತಿ ದೊಡ್ಡ ಪವಾಡ. ಆದರೆ ಅವನು ಅದನ್ನು ಗಮನಿಸಲಿಲ್ಲ. ಇದು ಕೇವಲ ಆ ಮನುಷ್ಯನ ಕಥೆಯಲ್ಲ… ನಮ್ಮೆಲ್ಲರ ಕಥೆ- ವ್ಯಥೆ. ಪ್ರಕೃತಿ ನಮಗೆ ಪೂರಕ ಎಂಬ ವಾಸ್ತವವನ್ನು ಅರ್ಥ ಮಾಡಿಕೊಳ್ಳದೆ ನಾವು ಪ್ರಕೃತಿಗೆ ಮಾರಕರಾಗುತ್ತಿದ್ದೇವೆ. ನಮ್ಮೆಲ್ಲರ ಅಗತ್ಯಗಳನ್ನು ಪೂರೈಸುವ ಶಕ್ತಿ ಪ್ರಕೃತಿಗಿದೆ. ಆದರೆ ನಮ್ಮ ದುರಾಸೆಗಳನ್ನಲ್ಲ. ಎಂಬ ಅರಿವು ನಮ್ಮಲ್ಲಿ ಮೂಡಿಲ್ಲ.

RELATED ARTICLES  ಮಾನವೀಯ ಮೌಲ್ಯ ಸಾರುವ ಸ್ನೇಹ ಸೋದರತೆಯ ಸಂಜೀವಿನಿ ರಕ್ಷಾ ಬಂಧನ

ಪ್ರಕೃತಿಯ ಒಂದೊಂದು ರೂಪವೂ ದೇವರೇ. ಆದರೆ ನಮ್ಮ ಗಮನಕ್ಕೆ ಇದು ಬಂದಿಲ್ಲ. ಅಥವಾ ಕಣ್ಣಿದ್ದೂ ಕುರುಡರಾಗಿದ್ದೇವೆ ನಾವು. ಪ್ರಕೃತಿಯೆಂದರೆ ರೇಡಿಯೋ ಸ್ಟೇಷನ್ ಇದ್ದ ಹಾಗೆ. ಅಲ್ಲಿ ದೇವರು ಮಾತನಾಡುತ್ತಾ ಇರುತ್ತಾನೆ. ಪ್ರತಿ ಕ್ಷಣವೂ ಈ ಕ್ರಿಯೆ ನಡೆಯುತ್ತಿರುತ್ತದೆ. ಈ ತರಂಗಾಂತರಕ್ಕೆ ನಾವು ಟ್ಯೂನ್ ಆಗಬೇಕು ಅಷ್ಟೇ….! ಆಗ ದೇವರ ಸದ್ದು ಕೇಳುತ್ತದೆ. ಏನು ಕಂಡರೂ ಅದು ದೇವರ ರೂಪ ಎಂಬ ಅರಿವು ಮೂಡುತ್ತದೆ. ಅಂತಹ ಅಪರೂಪದ ಪ್ರಕೃತಿಯನ್ನು ನಾವು ವಿಕೃತಿ ಮಾಡುತ್ತಿದ್ದೇವೆ. ಅದು ಮನುಷ್ಯ ರೂಪ.

RELATED ARTICLES  ಬಲ್ಲಿರೇನಯ್ಯಾ....... ಜಿ ಡಿ ಭಟ್ಟ ಕೆಕ್ಕಾರ ಅವರ ಒಡ್ಡೋಲಗದ ಪರಿಯ..

ಪ್ರಕೃತಿಯಲ್ಲಿ ಒಂದು ಚಿಟ್ಟೆ ನಿರ್ಮಾಣವಾಗಿದೆ ಎಂದರೆ ಅದನ್ನು ಯಾರು ನೋಡುತ್ತಾರೆ ಅಂತ ಮಾಡಿದ್ದಲ್ಲ . ಅದು ಸಹಜ ಪ್ರಕ್ರಿಯೆ.
ಯಾರು ನೋಡುತ್ತಾರೆ…. ಯಾರು ಕೇಳುತ್ತಾರೆ…. ಯಾರು ಒಪ್ಪಿಕೊಳ್ಳುತ್ತಾರೆ. ಎಂಬ ಚಿಂತೆ ಬೇಡ. ಯೋಚನೆ ಬೇಡ. ಮಾಡುವ ಕೆಲಸವನ್ನು ಸರಿಯಾಗಿ ಮಾಡು. ಸಮರ್ಪಕವಾಗಿ ಮಾಡು. ಪ್ರಾಮಾಣಿಕವಾಗಿ ಮಾಡು. ಆಗ ಅಲ್ಲಿ ದೇವರು ಕಾಣುತ್ತಾನೆ. ಇದು ಪ್ರಕೃತಿ ನಮಗೆ ನೀಡುವ ಸಂದೇಶ. ಅದನ್ನೇ ಕಾಯಕವೇ ಕೈಲಾಸ ಎಂದಿದ್ದು .

ನಾವು ಆ ರೀತಿ ಇದ್ದರೆ…. ನಮ್ಮ ಬದುಕನ್ನು ಆ ರೀತಿ ರೂಪಿಸಿಕೊಂಡಿದ್ದರೆ…. ಸರಿಯಾಗಿ ಕಾರ್ಯನಿರ್ವಹಿಸಿದರೆ… ದೇವರ ಸಾಕ್ಷಾತ್ಕಾರ ಅಂದರೆ ಒಳಿತಿನ ಸಾಕ್ಷಾತ್ಕಾರವಾಗಲು ಸಾಧ್ಯ. ಸರಿ ಎನ್ನುವುದು ದೇವರು ಅನ್ನುವ ಭಾವನೆ ನಮಗಿದ್ದರೆ ಮಾಡಿದ್ದೆಲ್ಲ ಪೂಜೆಯಾಗುತ್ತದೆ…. ಮಾತು ಸ್ತೋತ್ರವಾಗುತ್ತದೆ… ಹಾಕುವ ಹೆಜ್ಜೆ ಪ್ರದಕ್ಷಿಣೆಯಾಗುತ್ತದೆ…. ಊಟ ನೈವೇದ್ಯವಾಗುತ್ತದೆ… ನಿದ್ದೆ ಸಮಾಧಿಯಾಗುತ್ತದೆ. ನಾನು ಎಂಬುದನ್ನು ಶಿವನೆಂದು ಭಾವಿಸಿದರೆ, ಮನಸ್ಸು ಪಾರ್ವತಿ, ನೀನು ಪಟ್ಟ ಸುಖವಲ್ಲ ಪೂಜೆ. ಎಂದು ಶಂಕರಾಚಾರ್ಯರು ಹೇಳಿದ್ದರು. ಅಂದರೆ ಆತ್ಮದಲ್ಲಿ ನಾನು ಶಿವನೆಂಬ ಭಾವ ಬಂದಾಗ ಮನಸ್ಸು ಪಾರ್ವತಿ ಎಂಬ ಭಾವ ಬಂದಾಗ ನಾವು ಮಾಡಿದ್ದೆಲ್ಲ ಪೂಜೆಯಾಗುತ್ತದೆ ಎಂದರು. ಅಂತಹ ಭಾವ ನಮ್ಮದಾಗಲಿ ಆ ಭಾವಕ್ಕೆ ಅಭಾವ ಬಾರದಿರಲಿ

✍️ ಡಾ.ರವೀಂದ್ರ ಭಟ್ಟ ಸೂರಿ.