ಋಣವ ತೀರಿಸಬೇಕು ಋುಣವ ತೀರಿಸಬೇಕು
ಋಣವತೀರಿಸುತ ಜಗದಾದಿ ಸತ್ವವನು ಜನದಿ ಕಾಣುತ್ತ
ಅದರಲೊಂದು ಗೂಡಲು ಬೇಕು……. ಕಗ್ಗದ ಈ ಸಾಲುಗಳು ಹೇಳುವಂತೆ ನಮ್ಮ ಮೇಲೆ ಋಣವಿದೆ. ಜಗತ್ತಿನ ಋಣ, ಜನರ ಋಣ, ಪ್ರಕೃತಿಯ ಋಣ, ದೇವರ ಋಣ, ಪೂರ್ವಜರ ಋಣ, ಹೀಗೆ ಋಣದ ಭಾರ ನಮ್ಮ ಮೇಲಿದೆ. ಋಣ ತೀರಿಸಿದರೆ ಭಾರ ಇಳಿಯುತ್ತದೆ.
ಹಾಗಾದರೆ ಋಣವೆಂದರೇನು? ಈ ಪ್ರಪಂಚದ ಸಾರ್ವತ್ರಿಕ ಕಾನೂನು ಹೇಳುವುದು… “ನೀನು ಪಡೆದುಕೊಂಡಷ್ಟು ಮರಳಿ ಕೊಡು” ನಮ್ಮ ಸುಖದ ಸೂತ್ರವೂ ಇದೆ. ಈ ರೀತಿ ವಾಪಸು ಕೊಡದಿದ್ದಾಗ ಅದು ಭಾರವಾಗಿ ನಮ್ಮ ತಲೆಯ ಮೇಲೆ ಬರುತ್ತದೆ. ನಮ್ಮ ಬದುಕು ಬ್ಯಾಲೆನ್ಸ್ ಶೀಟ್ ತರಹ ಇರಬೇಕು. ಅದು ತಾಳೆಯಾಗಬೇಕು. ಬದುಕಿನ ತಿರುಳು ಇದು. ಪಡೆ -ಕೊಡು ಪಡೆದದ್ದನ್ನು ಕೊಡದಿದ್ರೆ ಕೊಡಿಸುತ್ತೇನೆ ಎನ್ನುತ್ತದೆ ಪ್ರಕೃತಿ. ಹಾಗೆ ಕೊಡಿಸುವಾಗ ಅದು ದಂಡ ಸಹಿತ ಬರುತ್ತದೆ. ಲೆಕ್ಕ ನಮಗೆ ಮರೆತಿದ್ದರೂ ಚಿತ್ರಗುಪ್ತ ಮರೆಯುವುದಿಲ್ಲ.
ನಮ್ಮೆಲ್ಲ ದುಃಖ- ಕಷ್ಟ- ನೋವುಗಳ ಮೂಲ ಅದು. ಜನ್ಮ ಬದಲಾಗಿದೆ. ನಾನು ಹಿಂದಿನ ಜನ್ಮದಲ್ಲಿ ಯಾರ ಋಣದಲ್ಲಿದ್ದೆ ಎಂಬುದು ನೆನಪಿಲ್ಲ ಅನ್ನುವ ಹಾಗಿಲ್ಲ. ನೆನಪಿಲ್ಲದಿದ್ದರೆ ದೇವರಿಗೆ ಅರ್ಪಿಸಬೇಕು. ಅದನ್ನು ಅವನು ತಲುಪಿಸಬೇಕಾದವರಿಗೆ ತಲುಪಿಸುತ್ತಾನೆ. ಇಲ್ಲಿ ತಲುಪಿಸುವ ಮಾಧ್ಯಮ ಭಗವಂತ.
ಕೆಲವೊಮ್ಮೆ ನಮ್ಮ ಋಣದ ಅರಿವು ನಮಗಾಗುವುದಿಲ್ಲ. ಉದಾಹರಣೆಗೆ ನಮ್ಮ ಮನೆಯ ಬಾವಿಯ ನೀರನ್ನು ನಾನು ಒಂದು ಲೋಟ ಪಡೆದುಕೊಂಡಿದ್ದೇನೆ. ನಾನು ಯಾರಿಗೆ ಯಾಕೆ ಋಣಿ? ಎಂಬ ಪ್ರಶ್ನೆ ಕೇಳಬಹುದು. ನಾನು ಲೋಟ ಅಂಗಡಿಯಿಂದ ಖರೀದಿಸಿದ್ದು ಬಾವಿ ನನ್ನದು ಇಲ್ಲಿ ಋಣ ಹೇಗಾಗುತ್ತದೆ? ಎಂದು. ಸ್ವಲ್ಪ ಗಮನಿಸಿ ಇಲ್ಲಿ ಎಷ್ಟು ಜನರ ಋಣವಿದೆ ಎಂದು. ಮೊದಲು ನೀರನ್ನು ನೋಡೋಣ . ನೀರು ಪ್ರಕೃತಿಯ ಋಣ. ಕೊಡದಿಂದ- ತಟ್ಟೆಗೆ. ಕೊಡಕ್ಕೆ ನೀರು ಬಂದಿದ್ದು ಬಾವಿಯಿಂದ. ಬಾವಿಗೆ ಭೂಮಿಯಿಂದ. ಭೂಮಿಗೆ ಮೋಡದಿಂದ. ಮೋಡವನ್ನು ತಂದವರಾರು? ಅದು ಗಾಳಿ. ಮೋಡವನ್ನು ತಡೆದವರು? ಅದು ಪರ್ವತ. ತಂಪು ಮಾಡಿದ್ದು ಕಾಡು. ಮೋಡಕ್ಕೆ ನೀರು ಬಂತೆಲ್ಲಿಂದ? ಸಮುದ್ರ, ಸರೋವರ, ನದಿಯಲ್ಲಿದ್ದ ನೀರು ಸೂರ್ಯ ತಾನುರಿದುರಿದು ನೀರನ್ನು ಆವಿ ಮಾಡಿದ. ಅದು ಮೋಡವಾಯಿತು. ಸೂರ್ಯ ನೀರನ್ನು ಆವಿ ಮಾಡುವಾಗ ಉಪ್ಪು ನೀರು , ಕಪ್ಪು ನೀರು ಎಲ್ಲವನ್ನೂ ಶುದ್ಧ ಮಾಡಿದ. ಒಂದು ಲೋಟ ನೀರಿನ ಹಿಂದೆ ಇಷ್ಟು ಕೊಡುಗೆ ಇದೆ ಅಂದರೆ ಅಷ್ಟು ಪ್ರಕೃತಿಯ ಋಣದಲ್ಲಿ ನಾವಿದ್ದೇವೆ. ಹಾಗೆಯೇ ಆ ಲೋಟದ ಹಿಂದಿನ ಕಥೆ… ಲೋಟ ಅಂಗಡಿಗೆ ಬಂದಿದ್ದು ದೊಡ್ಡ ಅಂಗಡಿಯಿಂದ… ದೊಡ್ಡ ಅಂಗಡಿಗೆ ಫ್ಯಾಕ್ಟರಿಯಿಂದ… ಫ್ಯಾಕ್ಟರಿಗೆ ಕಚ್ಚಾ ವಸ್ತುಗಳು ಎಲ್ಲಿಂದಲೂ ಪೂರೈಕೆ ಅದು. ಹೀಗೆ ಎಷ್ಟು ಜನರ ಶ್ರಮ ಇದೆ ಅಲ್ಲಿ. ಹೀಗೆ ಪ್ರಕೃತಿ ,ಸಮಾಜದ ಋಣದಲ್ಲಿ ನಾವಿದ್ದೇವೆ. ಹಾಗಾಗಿ ಪ್ರಕೃತಿಗೆ ಕೊಡುವಲ್ಲಿ… ಸಮಾಜಕ್ಕೆ ಕೊಡುವಲ್ಲಿ ಯಾರು ಹಿಂದೆ ಬೀಳುತ್ತಾನೋ…… ಹಿಂಜರಿಯುತ್ತಾನೋ ಅವನು ದೊಡ್ಡ ಋಣಿ. ಇದರಲ್ಲಿ ಸಂಶಯವೇ ಇಲ್ಲ.
ಎಲ್ಲಕ್ಕಿಂತ ದೊಡ್ಡ ಋಣ ತಂದೆ ತಾಯಿಯರ ಋಣ. ಅವರು ನಮ್ಮ ಅಸ್ತಿತ್ವಕ್ಕೆ ಕಾರಣರು. ಅದನ್ನು ತೀರಿಸಲು ಸಾಧ್ಯವಿಲ್ಲ. ಹುಡುಗನೊಬ್ಬ ಅಡುಗೆ ಮನೆಗೆ ಬಂದ. ಅಮ್ಮನಿಗೆ ಚೀಟಿಯೊಂದನ್ನು ನೀಡಿದ. ಅದರಲ್ಲಿ ಲೆಕ್ಕ ಬರೆದಿತ್ತು…! ಮನೆಯ ಮುಂದಿನ ಹುಲ್ಲನ್ನು ತೆಗೆದು ಚೆಂದ ಮಾಡಿದ್ದಕ್ಕೆ ಎರಡು ನೂರು ರೂಪಾಯಿ…. ನನ್ನ ಕೋಣೆ ಸ್ವಚ್ಛಗೊಳಿಸಿದ್ದಕ್ಕೆ ಐವತ್ತು ರೂಪಾಯಿ….. ನೀನು ಅಂಗಡಿಗೆ ಹೋದಾಗ ತಮ್ಮನನ್ನು ನೋಡಿಕೊಂಡಿದ್ದಕ್ಕೆ ಐವತ್ತು ರೂಪಾಯಿ…….. ಶಾಲೆಯಲ್ಲಿ ಒಳ್ಳೆಯ ಅಂಕಗಳಿ ಗಳಿಸಿದ್ದಕ್ಕೆ ಎರಡುನೂರು ರೂಪಾಯಿ…. ಹೀಗೆ ಒಟ್ಟು ಐದು ನೂರು ರೂಪಾಯಿ ಆಯ್ತು ಎಂದು ಬರೆದಿದ್ದ. ಅಮ್ಮ ಮಗ ನೀಡಿದ ಈ ಚೀಟಿಯನ್ನು ಓದಿದಳು. ಅದೇ ಚೀಟಿಯಲ್ಲಿ ಮುಂದೆ ಬರೆದಳು. ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಕಾಳಜಿಯಿಂದ ಇಟ್ಟುಕೊಂಡಿದ್ದಕ್ಕೆ ಶುಲ್ಕವಿಲ್ಲ. ಜನ್ಮ ಕೊಟ್ಟಿದ್ದಕ್ಕೆ ಅದು ಉಚಿತ. ಎಲ್ಲ ರೀತಿಯಲ್ಲೂ ಶುಚಿಗೊಳಿಸಿ ದ್ದಕ್ಕೆ ಯಾವುದೇ ಶುಲ್ಕವಿಲ್ಲ. ಪ್ರೀತಿಯಿಂದ ಹಾಲು ಉಣಿಸಿದ್ದು ಉಚಿತ ಬಟ್ಟೆ ಆಹಾರ ನೀಡಿದ್ದಕ್ಕೆ ಯಾವುದೇ ಶುಲ್ಕವಿಲ್ಲ. ರಾತ್ರಿಯಿಡೀ ಎಚ್ಚರವಿದ್ದು ನೋಡಿಕೊಂಡಿದ್ದಕ್ಕೆ ಯಾವುದೇ ಶುಲ್ಕವಿಲ್ಲ. ನಿನ್ನ ಸಿಟ್ಟು ಒದೆ ಸಹಿಸಿಕೊಂಡಿದ್ದಕ್ಕೆ ಶುಲ್ಕವಿಲ್ಲ. ಮೂಗಿನ ಸಿಂಬಳ ಒರೆಸಿದ್ದು ಉಚಿತವಾಗಿ. ಹೀಗೆ ಸಾಲಾಗಿ ಬರೆದಳು. ಕೊನೆಯಲ್ಲಿ ಈವರೆಗೆ ನೀಡಿದ ಎಲ್ಲಾ ಪ್ರೀತಿಯ ಒಟ್ಟು ಮೊತ್ತಕ್ಕೆ ಯಾವುದೇ ಶುಲ್ಕವಿಲ್ಲ ಎಂದು ಸೇರಿಸಿದಳು. ನಾವು ಯಾವತ್ತಾದ್ರೂ ಈ ಕುರಿತು ಯೋಚಿಸಿದ್ದೇವೆಯೇ? ತಾಯಿಯನ್ನು ಯಾವ ರೀತಿ ನೋಡಿಕೊಂಡಿದ್ದೇವೆ? ಯೋಚಿಸಿ. ಅವಳ ಋಣ ತೀರಿಸಲು ನಮ್ಮಿಂದ ಸಾಧ್ಯವೇ? ಆಲೋಚಿಸಿ. ನಾವು ಕಲ್ಲಾಗಿ ದ್ದರಿಂದ ನಮಗೆ ಈ ಯೋಚನೆ ಬರುವುದಿಲ್ಲ. ಮುದಿ ತಾಯಿಯನ್ನು ನೋಡಿಕೊಳ್ಳಲು ತುಂಬಾ ಖರ್ಚಾಗುತ್ತದೆ ಎಂದು ಚಿಂತಿಸುವವರು ಹೆಚ್ಚಿರುವ ಸಮಾಜ ನಮ್ಮದು. ತಾಯಿಯ ಪಾಡೇ ನಾಯಿಯ ಪಾಡಾದರೆ ನಮಗೆ ಉಪಕಾರ ಮಾಡಿದವರ ಪಾಡೇನು?
ಒಂದು ಮನೆ ಅಲ್ಲಿ ಮೂರು ತಲೆಮಾರಿನವರ ವಾಸ. ಅಜ್ಜ ಅಜ್ಜಿ ಎಂದರೆ ತುಂಬಾ ಉಪೇಕ್ಷೆ. ಚಿಪ್ಪಿನಲ್ಲಿ ಊಟ ಕೊಡ್ತಾ ಇದ್ರು. ಮೊಮ್ಮಗ ಇದನ್ನೆಲ್ಲ ಗಮನಿಸುತ್ತಿದ್ದ . ಒಂದು ದಿನ ಚಿಪ್ಪನ್ನು ಕಿತ್ತುಕೊಂಡರು. ಮೊಮ್ಮಗ ಅದನ್ನು ನೋಡಿ ಆ ಚಿಪ್ಪನ್ನು ಎತ್ತಿಟ್ಟುಕೊಂಡ. ಆತನ ತಂದೆ ತಾಯಿ ಬೈದರು. “ಕೊಳಕು ಚಿಪ್ಪು ನಿನಗ್ಯಾಕೆ ಬಿಸಾಡು” ಎಂದರು. ಆಗ ಆ ಮಗು ನೀಡಿದ ಉತ್ತರ “ಮುಂದೆ ನಿಮಗೆ ಊಟ ನೀಡಲು ಬೇಕಾಗಬಹುದು” ಎಂದು. ನಾವು ಋಣ ತೀರಿಸದಿದ್ದರೆ ಅದು ತಿರುಗಿ ಬರುವ ರೀತಿ ಇದು. ಈ ಶರೀರ ಬದುಕು ನಮಗೆ ತಂದೆ ತಾಯಿ ಕೊಟ್ಟಿದ್ದು. ಅಂತಹ ತಂದೆ ತಾಯಿಗೆ ದ್ರೋಹ ಮಾಡಿದರೆ ಅಂತವರು ಸತ್ತಾಗ ಅವರ ಮಾಂಸವನ್ನು ಭಕ್ಷಿಸಲು ರಾಕ್ಷಸರೂ ಹಿಂದೇಟು ಹಾಕುತ್ತಾರೆ ಎಂಬುದು ಶ್ರೀರಾಮನ ವಾಕ್ಯ.
ಜೇಡರ ದಾಸಿಮಯ್ಯ ಋಣದ ಕುರಿತು ಹೇಳಿದ್ದು ಹೀಗೆ…… ಇಳೆ ನಿನ್ನ ದಾನ ಬೆಳೆ ನಿನ್ನ ದಾನ
ಸುಳಿದು ಸೂಸುವ ಗಾಳಿ ನಿನ್ನ ದಾನ
ಎತ್ತು ನಿನ್ನ ದಾನ ಬಿತ್ತು ನಿನ್ನ ದಾನ
ನಿನ್ನ ದಾನವನುಂಡು ಅನ್ಯರ ಪೊಗಳುವವರಿಗೆ ಎನೆನ್ನಲಿ?. ಇದನ್ನು ನಮ್ಮ ಚಿತ್ತದಲ್ಲಿ ಧಾರಣೆ ಮಾಡೋಣ. ಋಣದ ಮಣಭಾರ ಇಳಿಸಿಕೊಳ್ಳೋಣ. ಲೆಕ್ಕ ಚುಕ್ತ ಮಾಡೋಣ… ಮುಕ್ತ ರಾಗೋಣ.
✍️ ಡಾ.ರವೀಂದ್ರ ಭಟ್ಟ ಸೂರಿ.