ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀ ವಿನಾಯಕ ಭಟ್ಟ

ಜಗತ್ತಿನಲ್ಲಿ 780,00,00,000 ಜನರಿದ್ದಾರೆ. ಆದರೆ ಪ್ರತಿಯೊಬ್ಬರ ರೂಪವೂ ಸ್ವಭಾವವೂ ಬೇರೆಬೇರೆಯೇ ಎಂದು ಕೇಳಪಟ್ಟಿದ್ದೇನೆ. ? ಯಾಕೆಂದರೆ ಎಲ್ಲರನ್ನೂ ನಾನು ನೋಡಿಲ್ಲ. ? ಹತ್ತಿರವಿರುವವರನ್ನೆಲ್ಲಾ ಸೂಕ್ಷ್ಮವಾಗಿ ಅವಲೋಕಿಸಿದಾಗ ಇದು ಸತ್ಯವಿರಬಹುದೆಂದು ಮನದಟ್ಟಾಗಿದೆ. ಅವಷ್ಟೂ ಜನ ನಮಗೆ ಸಂಖ್ಯೆಯಲ್ಲಷ್ಟೇ ಕಾಣ ಸಿಗುತ್ತಾರೆ. ಆದರೆ ಕೆಲವೇ ಕೆಲವು ಜನ ನಮ್ಮ ಜೊತೆ ಬಹಳ ಕಾಲ ಜೊತೆಗೆ ಬಾಳುತ್ತಾರೆ. ಈ ಜೊತೆಗೆ ಬಾಳುವವರು ಭಗವಂತನ ದಯೆಯಿಂದ ನಮಗೆ ಅನುಕೂಲ ಮನಸ್ಥಿತಿಯವರೇ ಸಿಕ್ಕರೆ ಜೀವನ ಆನಂದಮಯ. ಹಾಗಲ್ಲದೇ ಹೋದರೆ ಅವನಿಗೆಷ್ಟಿದ್ದರೂ ಅಷ್ಟಕ್ಕಷ್ಟೆ. ಇಂದು ನನ್ನ ಜೊತೆಗೆ ಸುಮಾರು 9 ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದ ಗೋವಿನಂಥ ಮನುಷ್ಯರೊಬ್ಬರನ್ನು ನಿಮಗೆ ಪರಿಚಯಿಸಬೇಕಾಗಿದೆ. ಶ್ರೀ ವಿನಾಯಕ ಭಟ್ಟ ವಂದೂರು ಇಂದಿನ ನನ್ನ ಅಕ್ಷರ ಅತಿಥಿ.
ನಾವು ಹೇಗಿರುತ್ತೇವೋ ನಮಗೆ ಸಿಕ್ಕುವ ಜನರೂ ಅಂಥವರೇ ಎಂಬ ಮಾತನ್ನು ನಾನು ಪೂರ್ಣ ಒಪ್ಪುವುದಿಲ್ಲ. ಕೆಲವೊಮ್ಮೆ ಕನ್ನಡಿಯೂ ನಾವಿರುವಂತೆಯೇ ನಮ್ಮನ್ನು ಪ್ರತಿಫಲಿಸುವುದಿಲ್ಲ. ನನಗೇ ನನ್ನ ಕೆಲವೊಂದು ಸ್ವಭಾವ ಹಿಡಿಸದಿರುವಾಗ ಬೇರೆಯವರಿಂದ ನಾನಾದರೂ ಏಕೆ ನಿರೀಕ್ಷಿಸಬೇಕು. ಮಾರುತಗಳು ಬದಲಾದಂತೆ ಮನಸ್ಸೂ ಬದಲಾಗುತ್ತಿರುತ್ತದೆ. ಆದರೂ ನನ್ನ ಮನಸ್ಸಿಗೆ ತುಂಬಾ ಹತ್ತಿರವಾದ ಸಹೋದರ ಭಾವದಿಂದ ನನ್ನನ್ನು ನೋಡಿಕೊಂಡ ವಿನಾಯಕ ಭಟ್ಟರು ಆರಕ್ಕೇರದ ಮೂರಕ್ಕಿಳಿಯದ ಸರಳ ಸಭ್ಯ ಸಹೋದ್ಯೋಗಿ.
ಕುಮಟಾ ತಾಲೂಕಿನ ಚಿತ್ರಗಿ ಮೂಲದವರಾದ ವಿನಾಯಕ ಸರ್….ಕಡುಬಡತನದಿಂದ ಮೇಲೆದ್ದು ಬಂದ ವ್ಯಕ್ತಿ. ತಾನಾಯ್ತು ತನ್ನ ಕೆಲಸವಾಯ್ತು. ಒಬ್ಬರ ತಂಟೆ ತಕರಾರಿಗೂ ಹೋಗದ ವಿನಾಯಕ ಸರ್ ಅತ್ಯಂತ ನಾಜೂಕಿನಿಂದ ಕಾರ್ಯ ನಿರ್ವಹಿಸುವವರು. ಮಕ್ಕಳಿಗೋ ಅವರೊಬ್ಬ ಪ್ರೀತಿಯ ಶಿಕ್ಷಕರು. ಶಾಲೆಯ ಯಾವುದೇ ಕೆಲಸವಿರಲಿ ತನ್ನಿಂದಾಗುವುದಾದರೆ ಅದನ್ನು ಬೇರೆಯವರ ಬಳಿ ಅವರು ಹೇಳುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಯಾರ ಬಿರುದು, ಬಂಗಾರದ ಕಿರೀಟಗಳೂ ಬೇಡ. ಓಲೈಸಿ ಬದುಕಬೇಕಾದ ಅನಿವಾರ್ಯತೆಗೆ ಅವರು ತನ್ನನ್ನು ಒಗ್ಗಿಸಿಕೊಂಡಿಲ್ಲ. ವಿನಾಯಕ ಸರ್ ಭಾವನೆಗಳನ್ನು ಸಾಧ್ಯವಾದಷ್ಟೂ ಎದೆಯೊಳಗೆ ಹುದುಗಿಸಿಟ್ಟುಕೊಳ್ಳಬಹುದಾದ ಸಭ್ಯ ವ್ಯಕ್ತಿ.
ಮೂರ್ತಿ ಚಿಕ್ಕದಾದ ಅವರಿಗೆ ದೊಡ್ಡ ಕೀರ್ತಿ ಮಾಡಬೇಕೆಂಬ ಮಹತ್ವಾಕಾಂಕ್ಷೆ ಇಲ್ಲ. ಏನೋ ಒಂದು ಮಾಡಬೇಕೆಂಬ ಬಯಕೆಯಲ್ಲಿ ಇನ್ನೊಬ್ಬರಿಂದ ನಾಲ್ಕು ಮಾತು ಹೇಳಿಸಿಕೊಳ್ಳುವದಕ್ಕೆ ಅವರ ಮನಸ್ಸು ಒಪ್ಪುವುದಿಲ್ಲ. ಹಾಗಂತ ಸೋಲು ಗೆಲುವುಗಳೆರಡರ ಪರಿಚಯವಿರುವ ನನ್ನನ್ನು ಮಾತ್ರ ಅವರು ಬಿಟ್ಟುಕೊಟ್ಟಿದ್ದೇ ಇಲ್ಲ.
ವಿನಾಯಕ ಸರ್ ಮತ್ತು ನಾನು ಬಹುತೇಕ 2128 ಊಟಗಳನ್ನು ಒಟ್ಟಿಗೆ ಮಾಡಿದ್ದೇವೆ. ? ಮನೆಯಲ್ಲಿ ಊಟಕ್ಕೆ ಕುಳಿತಾಗ ಕಳೆದ 28 ವರ್ಷಗಳಿಂದ ಮಾತನಾಡದ ನಾನು ಹೊರಗಡೆ ಅನಿವಾರ್ಯ ಮಾತನಾಡುತ್ತೇನೆ. ಕೆಲವೊಮ್ಮೆ ಊಟಕ್ಕೆ ಕುಳಿತಾಗಲೇ ವಿಶೇಷ ಸುದ್ದಿಗಳು ಜ್ಞಾಪಕಕ್ಕೆ ಬರುತ್ತವೆ. ? ಆಗಲೇ ಹೇಳದಿದ್ದರೆ ಊಟವಾದ ಮೇಲೆ ಮರೆತು ಹೋಗುತ್ತದೆ. ಹೀಗಾಗಿ ಶಾಲೆಯಲ್ಲಿ ಮಕ್ಕಳಿಗೆ ಊಟವಾದ ಮೇಲೆ ನಾವು ಊಟಕ್ಕೆ ಕುಳಿತರೆ ಕನಿಷ್ಠ 25 ನಿಮಿಷ ಆತ್ಮೀಯವಾಗಿ ಹರಟುತ್ತೇವೆ. ಮನಸ್ಸು ಹಗುರವಾದರೆ ಮಧ್ಯಾಹ್ನದ ಅವಧಿಗಳಿಗೂ ಅದು energy. ಊಟ ರುಚಿಸುವುದೇ ನಾವಿಬ್ಬರೂ ಎದುರು ಬದುರು ಕುಳಿತಾಗ. ವಿನಾಯಕ ಸರ್ ಮತ್ತು ನಾನು ಈ ಒಂಭತ್ತೂ ವರ್ಷಗಳಲ್ಲಿ ಹೇಳಿದ ಸುದ್ದಿಗಳನ್ನೇ ಪುನಃ ಪುನಃ repeat ಮಾಡಿಲ್ಲ. ಮತ್ತು ಅದು ಬೇರೆಯವರಲ್ಲೆಲ್ಲ ಹೇಳುವುದೂ ಅಲ್ಲ. ?
ಕೆಲವರು ಇಲ್ಲಿ ಕೇಳುವುದು ಅಲ್ಲಿ ಹೋಗಿ ಹೇಳುವುದು. ಆದರೆ ನಮ್ಮ ವಿನಾಯಕ ಸರ್ ಕಿವಿಯಲ್ಲಿ ದಾರ ಸೇರಿಸಿದರೆ ಅದು ಬಾಯಿಯಿಂದ ತಾನಾಗಿಯೇ ಹೊರಬರುವುದಿಲ್ಲ. ? ನಮ್ಮ ನಗುವನ್ನು ಅರ್ಥಮಾಡಿಕೊಳ್ಳದ, ಸಹಿಸದ ಜನ ಜೊತೆ ಸಿಕ್ಕರೆ ಅದು ನಮ್ಮ ದೌರ್ಭಾಗ್ಯವೆಂದೇ ತಿಳಿಯಬೇಕು. ಆದರೆ ದೇವರು ನನಗೆ ವಿನಾಯಕ ಸರ್ ಅಂಥವರನ್ನು ಜೊತೆಗೂಡಿಸಿದ್ದಕ್ಕೆ ನಾನು ಭಗವಂತನಿಗೆ ಋಣಿ.
ಐದಾರು ತಿಂಗಳ ಹಿಂದೆ ನಮ್ಮ ವಿನಾಯಕ ಸರ್ ಪಕ್ಕದ ಮತ್ತೊಂದು ಶಾಲೆಗೆ ವರ್ಗಾವಣೆಗೊಂಡರು. ಸತ್ಯ ಹೇಳುವುದಾದರೆ ಅಂದಿನ ಊಟದ ರುಚಿ ಇವತ್ತಿಲ್ಲ ನನಗೆ. ಹೋಗುವ ಮುಂಚೆ ತನ್ನ ಕಣ್ಣೀರು ನನಗೆ ಕಾಣಬಾರದೆಂದು ಹೆಲ್ಮೆಟ್ ಹಾಕಿಕೊಂಡು ಕಣ್ಣೀರು ಸುರಿಸಿದ್ದನ್ನು ನಾನು ಜೀವನಪೂರ್ತಿ ಮರೆಯಲಾರೆ. ನನಗೆ ಪ್ರೀತಿಯೆಂದು ಗೋಧಿಕಡಿಯನ್ನು ಕಳುಹಿಸಿ ಅಡಿಗೆಯವರಿಂದ ಪಾಯಸ ಮಾಡಿಸಿ ಬಡಿಸಲು ಹೇಳಿದರು. ಇದು ನಾನು ಜೀವನದಲ್ಲಿ ಅತ್ಯಂತ ಪ್ರೀತಿಯಿಂದ ಉಂಡ ಪಾಯಸ. ಅದರಲ್ಲಿ ವಿನಾಯಕ ಸರ್ ಪ್ರೀತಿಯಿತ್ತು. ಕಾಳಜಿಯಿತ್ತು. ಎಷ್ಟು ಕಾಲ ಜೊತೆಯಿದ್ದೆವು ಎನ್ನುವುದು ಮುಖ್ಯವಲ್ಲ. ಹೇಗೆ ಇದ್ದೆವು ಎನ್ನುವುದು ಮುಖ್ಯ. ನನ್ನಂತವನನ್ನು ಸಹಿಸಿಕೊಂಡು ಇರುವುದೂ ಸುಲಭದ ಮಾತಲ್ಲ ಬಿಡಿ. ?
ಕೆಲವರು ಹಾಗೆ. ಅತಿಯಿಲ್ಲದ ಮಿತಿಯಲ್ಲೇ ತೃಪ್ತಿ ಹೊಂದಿ ನಿರ್ವಿವಾದದ ಜೀವನ ಕಟ್ಟಿ ಕೊಳ್ಳುವವರು. ಅವರು ಬೇರೆಯವರ ಮೆಚ್ಚುಗೆಗಾಗಿ ತೋರಿಕೆಯ ಕೆಲಸ ಮಾಡುವುದಿಲ್ಲ. ತಮ್ಮ ಕೆಲಸವನ್ನು ಆತ್ಮ ತೃಪ್ತಿಯಿಂದ ಮಾಡಿ ಎದ್ದು ನಡೆದು ಬಿಡುತ್ತಾರೆ. ಒಂದೇ ಊರಿನಲ್ಲಿ ಒಂದೇ ಶಾಲೆಯಲ್ಲಿ ಬಹಳಷ್ಟು ವರ್ಷ ಇರಬಾರದೆನಿಸುತ್ತದೆ. ಬರ ಬರುತ್ತ ನಾವು ಕೆಲವರ ಅಸಡ್ಡೆಗೂ ಕಾರಣವಾಗಿ ಬಿಡಬಹುದು. ಎಲ್ಲೇ ಆಗಲಿ ಅವರು ಮತ್ತೂ ಇರಬೇಕಿತ್ತು ಎನ್ನುವಾಗಲೇ ಹೋಗಿ ಬಿಡಬೇಕು. ? ಅವಕಾಶ ಸಿಕ್ಕರೆ. ಸ್ವಾಭಿಮಾನದ ಬದುಕನ್ನು ನಮ್ಮ ವಿನಾಯಕ ಸರ್ ಅಲ್ಪ ಸ್ವಲ್ಪ ಹೇಳಿಕೊಟ್ಟಿದ್ದಾರೆ.
ತೀರಾ ಬಡತನವನ್ನು ಕಂಡ ವಿನಾಯಕರಿಗೆ ಸಿರಿತನ ಬಂದಾಗ ಅರ್ಧ ರಾತ್ರಿ ಎದ್ದು ಕೊಡೆ ಹಿಡಿಯುವ ಮನಸ್ಸಾಗಲಿಲ್ಲ. ವಿನಾಯಕ ಸರ್ ಅವರ ಧರ್ಮ ಪತ್ನಿ ಶ್ರೀಮತಿ ಮಮತಾ ಭಟ್ಟ ಕೂಡ ಆದರ್ಶ ಕ್ರಿಯಾಶೀಲ ಶಿಕ್ಷಕಿ. ಸಂಪದಾ ಪ್ರತಿಭಾ ಸಂಪನ್ನ ಮಗಳು. ಋದ್ಧಿ ನಿಲಯ. ಸುಖ ಸಂತೋಷದ ಬಾಳ್ವೆ ಅವರದ್ದು.
ವಿನಾಯಕ ಸರ್ ನನ್ನ ಜೊತೆ ಮಾತ್ರ ಉತ್ತಮ ಸ್ನೇಹ ಇಟ್ಟುಕೊಂಡವರಲ್ಲ. ಅವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಅವರನ್ನು ಇಷ್ಟಪಡುತ್ತಾರೆ. ಯಾಕೆಂದರೆ ಅವರು ನೋಯಿಸುವ ಜನ ಅಲ್ಲ. ಕಚ್ಚುವವರ ಸಾಲಿನಲ್ಲಿ ಅವರ ಹೆಸರಿಲ್ಲ. ?
ಭಾವೋದ್ರೇಕವೂ ಬದುಕಿಗೆ ಆತಂಕಕಾರಿ. ಅದನ್ನು ಹಿಡಿತದಲ್ಲಿ ಇಡುವ ಗುಣ ವಿನಾಯಕ ಸರ್ ವಿಶೇಷ. ಅವರು ವಿಪರೀತ ನಗುವುದೂ ಇಲ್ಲ. ವಿಪರೀತ ಅಳುವುದೂ ಇಲ್ಲ. ತನ್ನ ಭಾವನೆಗಳನ್ನು ಸರಕ್ಕನೇ ಮುಖದಲ್ಲಿ ತೋರಿಸುವುದೂ ಇಲ್ಲ. ನನ್ನ 27-35 ವರ್ಷಗಳ ನಡುವಿನ ಬದುಕಿನಲ್ಲಿ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಒಟ್ಟಿಗೆ ನಿಂತು partnership ಮಾಡಿದರೆ ಹೇಗೋ ಹಾಗೆ ಅವರ ಜೊತೆ ಕಳೆದಿದ್ದೇನೆ. ಗೆಲ್ಲುವುದೇ ಗುರಿ. ಸೋತರೆ ಅದು ನಮಗೆ ಹೊಸದಲ್ಲ.
ಸದ್ಗುರು ಶ್ರೀಧರರ ಆಶೀರ್ವಾದ ವಿನಾಯಕ ಭಟ್ಟರು ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ದೂರಕ್ಕೆ ಅಥವಾ ಹಿಂದಕ್ಕೆ ಸರಿದರೆ?

ವಿನಾಯಕ ಭಟ್ಟರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 94497 81497

??????⚫⚪???????⚫⚪?????

RELATED ARTICLES  ಭಾಗ್ಯಗಳ ಸುರಿಮಳೆ ಇದ್ದರೂ ಸರಕಾರಿ ಶಾಲೆ ಸೋರುತಿದೆ ಏಕೆ?