ಯೋಗ ಭಾರತೀಯ ಋಷಿಮುನಿಗಳ ಶ್ರೇಷ್ಠ ಕೊಡುಗೆ
ಈ ಜಗತ್ತಿಗೆ ಭಾರತದ ಶ್ರೇಷ್ಠ ಕೊಡುಗೆಗಳಲ್ಲಿ ‘ಯೋಗ’ವೂ ಕೂಡ ಒಂದು. ಇಂದು ಜಗತ್ತಿನ ಹೆಚ್ಚಿನ ಪ್ರದೇಶಗಳಿಗೆ ಹಬ್ಬಿದ ಕೊರೋನಾದಿಂದ ರಕ್ಷಣೆ ಪಡೆಯಲು, ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳಲು ‘ಯೋಗ’ ಮಹತ್ವಪೂರ್ಣ ಔಷಧಿಯಾಗಿದೆ, ಎಂದರೆ ಅತಿಶಕ್ತಿಯಾಗಲಾರದು. ನಮ್ಮ ಶರೀರ ಮತ್ತು ಮಾನಸಿಕ ಆರೋಗ್ಯದ ಸದೃಢತೆಗೆ ‘ಯೋಗ’ ಅತ್ಯಂತ ಸಹಾಯಕಾರಿ. ಸರಳ-ಸಾತ್ವಿಕ ಯೋಗ ಪದ್ಧತಿಯ ಜೀವನ ಶೈಲಿಯು ನಮಗೆ ಯಾವುದೇ ಪ್ರಕಾರದ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿ, ಆರೋಗ್ಯಪೂರ್ಣ ಜೀವನಕ್ಕೆ ಕಾರಣವಾಗುವುದು.
ಯುಜಿರ್ (ಯೋಗೆ) ಧಾತುವಿನಿಂದ ‘ಯೋಗ’ ಶಬ್ದ ಹುಟ್ಟಿದೆ. ಒಟ್ಟಿಗೆ ಸೇರು, ಐಕ್ಯವಾಗು, ಒಟ್ಟಾಗು, ಪರಸ್ಪರ ಸಮಾಗಮ, ನಿಯಂತ್ರಣ ಮುಂತಾದ ಅರ್ಥಗಳನ್ನು ಹೊಂದಿದೆ. ‘ಯೋಗಃ ಚಿತ್ತವೃತ್ತಿ ನಿರೋಧಃ’ ಯೋಗವೆಂದರೆ ಚಂಚಲವಾದ ಮನಸ್ಸಿನ ನಿಯಂತ್ರಣ. ‘ಯೋಗ: ಸಂಯೋಗ: ಇತ್ಯುಕ್ತಃ ಜೀವಾತ್ಮ ಪರಮಾತ್ಮನೇ’ ನಮ್ಮಲ್ಲಿರುವ ಜೀವಾತ್ಮವು ಪರಮಾತ್ಮನೊಂದಿಗೆ ಪೂರ್ಣವಾಗಿ ಸೇರುವುದೇ ಯೋಗವಾಗಿದೆ. ಇನ್ನು ಹೆಚ್ಚಿನವರು ಅಂದುಕೊಂಡಂತೆ ಯೋಗವೆಂದರೆ ‘ಆಸನ-ಪ್ರಾಣಾಯಾಮ’ಗಳು ಮಾತ್ರವಲ್ಲ. ಯೋಗವು ಯಮ (ಅಹಿಂಸೆ, ಸತ್ಯ, ಕದಿಯದಿರುವುದು, ಸಂಗ್ರಹ ಮಾಡದಿರುವುದು, ಇಂದ್ರಿಯ ನಿಗ್ರಹ) ನಿಯಮ (ಶುಚಿತ್ವ, ಸಂತೋಷ, ತಪಸ್ಸು, ಈಶ್ವರಾರ್ಪಣ) ಆಸನ, ಪ್ರಾಣಾಯಾಮ ಪ್ರತ್ಯಾಹಾರ (ಕಾಮನೆ & ಭಯದ ನಾಶ) ಧಾರಣ (ಪೂರ್ಣತಲ್ಲೀನತೆ ಪಡೆಯಲು ಮನಸ್ಸನ್ನು ಸ್ಥಿರಗೊಳಿಸುವುದು) ಧ್ಯಾನ (ಪರಮಾನಂದದ ಸ್ಥಿತಿ) ಸಮಾಧಿ (ಧ್ಯಾನಾವಸ್ಥೆಯ ತುತ್ತ ತುದಿಯ ಸ್ಥಿತಿ) ಎಂದು ಎಂಟು ಅಂಗಗಳನ್ನು ಹೊಂದಿದೆ. ಇದನ್ನೇ ‘ಅಷ್ಟಾಂಗ ಯೋಗ’ ಎಂದು ಕರೆದಿದ್ದಾರೆ. ಇವು ‘ಬಹಿರಂಗ-ಅಂತರಂಗ’ ಎಂದು ಪುನಃ ಎರಡು ವಿಧ. ಯಮ-ನಿಯಮ-ಆಸನ-ಪ್ರಾಣಾಯಮ-ಪ್ರತ್ಯಾಹಾರ ಎಂಬ ಪಂಚಾಂಗಗಳು ಬಹಿರಂಗಗಳು. ಧಾರಣ-ಧ್ಯಾನ-ಸಮಾಧಿ ಇವು ಮೂರು ಅಂತರಂಗಗಳು. ಇವು ನಮ್ಮ ಅಂತರಂಗಕ್ಕೆ ಸಂಬಂಧಿಸಿವೆ. ಪತಂಜಲಿ ಮಹರ್ಷಿಗಳು ಇದನ್ನೇ ‘ಸಂಯಮ’ ಎಂದು ಕರೆದಿದ್ದಾರೆ. ಚಿತ್ರವೃತ್ತಿ ನಿರೋಧ ರೂಪವಾದ ‘ಯೋಗ’ವು ಮುಖ್ಯವಾಗಿ ರಾಜಯೋಗ ಮತ್ತು ಹಠಯೋಗ ಎಂದು ಎರಡು ವಿಧ. ಇವುಗಳಲ್ಲಿ ರಾಜಯೋಗವು ಪತಂಜಲಿ ಮಹಾರ್ಷಿಗಳಿಂದ ಉತ್ತಮವಾಗಿದೆ. ಹಠಯೋಗವು ತಂತ್ರಶಾಸ್ತ್ರೋಕ್ತವಾದುದು. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ ಪರಮಾತ್ಮನ ಪ್ರಾಪ್ತಿಗಾಗಿ ಕರ್ಮಯೋಗ-ಜ್ಞಾನಯೋಗ-ಭಕ್ತಿಯೋಗ ಎಂದು ಯೋಗ (ಉಪಾಯ)ವು ಮತ್ತೆ ಮೂರು ವಿಧವಾಗಿದೆ. ಹೀಗೆ ಯೋಗ ವಿಸ್ತಾರವಾದ ಶಾಸ್ತ್ರವಾಗಿದ್ದು, ನಾವಂದುಕೊಂಡಂತೆ ಯೋಗವೆಂದರೆ ಸೂರ್ಯನಮಸ್ಕಾರ-ಆಸನ-ಪ್ರಾಣಾಯಾಮ ಮಾತ್ರವಲ್ಲ. ನಮ್ಮ ದೈನಂದಿನ ಆಹಾರ-ವಿಹಾರ-ವ್ಯವಹಾರ-ಆಚಾರ-ವಿಚಾರ- ಮಾತುಗಳಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸುವುದೇ ‘ಯೋಗ’ದ ನಿಜವಾದ ಉದ್ದೇಶವಾಗಿದೆ.
ಸೂರ್ಯನಮಸ್ಕಾರ ಆಸನ ಪ್ರಾಣಾಯಾಮ : ಸೂರ್ಯನಮಸ್ಕಾರ ಅಥವಾ ಯೋಗಾಸನ ಕೇವಲ ದೈಹಿಕ ವ್ಯಾಯಾಮಗಳಲ್ಲ. ಸೂರ್ಯನಮಸ್ಕಾರ, ಯೋಗಾಸನ ಪ್ರಾಣಾಯಾಮಗಳನ್ನು ಉಸಿರಾಟದೊಂದಿಗೆ ಅಂದರೆ ಪೂರಕ (ಉಸಿರನ್ನು ಒಳಗೆ ತೆಗೆದುಕೊಳ್ಳುವುದು) ರೇಚಕ (ಉಸಿರನ್ನು ಹೊರಕ್ಕೆ ಬಿಡುವುದು) ಕುಂಭಕ (ಉಸರಿನ್ನು ನಿಲ್ಲಿಸುವುದು) ದೊಂದಿಗೆ ಮಾಡಿದಾಗ ಮಾತ್ರ ನಿಜವಾದ ಲಾಭ ದೇಹಕ್ಕೆ ಪ್ರಾಪ್ತಿಯಾಗುವುದು. ಇವು ನಮ್ಮ ಶರೀರದ ಅಂಗಗಳಿಗೆ ಉತ್ತಮ ನಿಲುವು. ಆರೋಗ್ಯ ಮತ್ತು ಲಘುತ್ವವನ್ನು ನೀಡುತ್ತವೆ. ಸೂರ್ಯ ನಮಸ್ಕಾರವನ್ನು ಪ್ರತಿನಿತ್ಯ ಮಾಡುವುದರಿಂದ
ಆದಿತ್ಯಸ್ಯ ನಮಸ್ಕಾರಾನ್ ಯೇ ಕುರ್ವಂತಿ ದಿನೇ ದಿನೇ|
ಆಯುಃಪ್ರಜ್ಞಾ ಬಲಂ ವೀರ್ಯಂ ತೇಜಸ್ತೇಷಾಂಚ ಜಾಯತೇ||
ಆರೋಗ್ಯಪೂರ್ಣವಾದ ಆಯುಷ್ಯ, ಪ್ರಜ್ಞೆ, ದೈಹಿಕ ಮಾನಸಿಕ ಬಲ ದೊರಕುವುದಲ್ಲದೇ ದೇಹಕ್ಕೆ ತೇಜಸ್ಸು ಲಭಿಸುವುದು. ಅದಕ್ಕಾಗಿ ದಿನನಿತ್ಯ ಸೂರ್ಯನ ನಾಮಮಂತ್ರ ಸಹಿತವಾಗಿ ಕನಿಷ್ಠ ಹದಿಮೂರು ಸೂರ್ಯ ನಮಸ್ಕಾರ ಮಾಡಿದರೆ ದೇಹದ ಸರ್ವಾಂಗಗಳಿಗೂ ವ್ಯಾಯಾಮವಾಗಿ ಆರೋಗ್ಯ ಲಭಿಸುವುದು. ಅಲ್ಲದೇ ವೃಕ್ಷಾಸನ, ಪರಿವೃತ್ತತ್ರಿಕೋಣಾಸನ, ಸರ್ವಾಂಗಾಸನ, ಹಲಾಸನ ಮುಂತಾದ ಆಸನಗಳನ್ನು, ಮುಖ್ಯವಾಗಿ ಭಸ್ತ್ರಿಕಾ, ಕಪಾಲಭಾತಿ ಅನುಲೋಮ-ವಿಲೋಮ, ಭ್ರಾಮರಿ ಹಾಗೂ ಉಜ್ಜಾಯಿ ಮುಂತಾದ ಉಸಿರಾಟದ ವಿಜ್ಞಾನವೇ ಆದ ಪ್ರಾಣಾಯಾಮವನ್ನು ನಿತ್ಯಮಾಡುವುದರಿಂದ ದೇಹಕ್ಕೆ ಆರೋಗ್ಯ, ಮನಸ್ಸಿಗೆ ಶಾಂತಿ ದೊರಕುವುದು.
ಆರೋಗ್ಯಕರ ಮನಸ್ಸಿಗೆ ಆರೋಗ್ಯಕರ ಶರೀರಬೇಕು. ಪ್ರತಿನಿತ್ಯ ಯೋಗ ಮಾಡುವುದರಿಂದ ನಾಲ್ಕು ಪ್ರಕಾರದ ಬಲ ಅಂದರೆ ಶಾರೀರಿಕ ಬಲ, ಮನೋಬಲ, ಪ್ರಾಣಬಲ ಹಾಗೂ ಆತ್ಮಬಲ ಲಭಿಸುವುದು. ನಮ್ಮಲ್ಲಿ ಉಂಟಾಗುವ ಈ ನಾಲ್ಕು ರೀತಿಯ ಬಲವನ್ನೇ ನಾವು ಈ ಸಮಯದಲ್ಲಿ ಹೆಚ್ಚಾಗಿ ಕೇಳುತ್ತಿರುವ ‘ಇಮ್ಯುನಿಟಿ ಪವರ್’ ಎಂದರೆ ತಪ್ಪಾಗಲಾರದು. ಈ ಸಂಕಷ್ಟದ ಸಮಯದಲ್ಲಿ ಮಾತ್ರವಲ್ಲ, ಎಲ್ಲಾ ಕಾಲಘಟ್ಟಗಳಲ್ಲೂ ಬಾಲಕರು, ಯುವಕರು, ವೃದ್ಧರು, ಮಹಿಳೆಯರು ಹೀಗೆ ಎಲ್ಲಾ ವಯೋಮಾನದವರೂ, ತಮ್ಮ ದೇಹದ ಕಾರ್ಯ ಕ್ಷಮತೆಗೆ ಅನುಗುಣವಾಗಿ ದಿನನಿತ್ಯ ನಿರ್ದಿಷ್ಟ ಸಮಯವನ್ನು ನಮ್ಮ ದೇಹಕ್ಕೆ ಆರೋಗ್ಯ ಹಾಗೂ ಮನಸ್ಸಿಗೆ ಪ್ರಸನ್ನತೆಯನ್ನು ಉಂಟು ಮಾಡುವ ಯೋಗಕ್ಕೆ ಮೀಸಲಿಟ್ಟರೆ, ನಮಗೆ ಸಂಪೂರ್ಣ ಶಾಂತಿ ಲಭಿಸುವುದು. ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಶಾಂತಿ ಇದೇ ನಮ್ಮೆಲ್ಲರ ಬಯಕೆ ತಾನೆ? ‘ಯೋಗೊ ಭವತಿ ದುಃಖಹಾ’ ಯೋಗ ಮಾತ್ರ ಎಲ್ಲಾ ರೀತಿಯ ದುಃಖ-ಸಮಸ್ಯೆಗಳನ್ನು ದೂರಗೊಳಿಸುವುದು. ಜೀವನದಲ್ಲಿ ಶಿಸ್ತನ್ನು ಕಲಿಸುವ ಆಚರಣೆಯಲ್ಲಿ ನಿಯಂತ್ರಣ ಹೇರುವ ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಂಡರೆ, ಜೀವನದಲ್ಲಿ ಸಮಸ್ಯೆ ಕಡಿಮೆಯಾಗುವುದು. ಅಥವಾ ಸಮಸ್ಯೆ ಎದುರಿಸುವ ಶಕ್ತಿ ದೊರಕುವುದು. ನಮ್ಮ ಪ್ರಾಚೀನ ಮುನಿ ಪ್ರಣೀತವಾದ ‘ಯೋಗ’ವನ್ನು ಇನ್ನಷ್ಟು ಅರಿತು ಅಳವಡಿಸಿಕೊಂಡು ಯೋಗಿಗಳಾಗುವತ್ತ ಒಂದೊಂದೆ ಹೆಜ್ಜೆಗಳಿಡೋಣ. ಈ ಸಂಕಷ್ಟದ ಸಂದರ್ಭದಲ್ಲಿ ಎಲ್ಲರ ಸಹಯೋಗಿಗಳಾಗೋಣ, ಉಪಯೋಗಿಗಳಾಗೋಣ.
ಶ್ರೀ ಗಣೇಶ ಭಟ್ಟ
ಸಂಸ್ಕøತ ಉಪನ್ಯಾಸಕರು
ನೆಲ್ಲಿಕೇರಿ, ಕುಮಟಾ
gಟಿeshbhಚಿಣ@gmಚಿiಟ.ಛಿom