ಇರುವೆ ಪ್ರಾಣಿಗಳ ಮಧ್ಯೆ ತುಂಬಾ ಚಿಕ್ಕದು. ಎಷ್ಟು ಚಿಕ್ಕದು ಅಂದರೆ ಅದರ ಚಟುವಟಿಕೆಗಳು ಬಹುತೇಕ ಯಾರ ಗಮನಕ್ಕೂ ಬರುವುದಿಲ್ಲ. ಆದರೆ ತನ್ನ ಮನೆಯ ಟೆರೇಸ್ ಮೇಲೆ ಕುಳಿತಿದ್ದ ಒಬ್ಬನಿಗೆ ಒಂದು ಇರುವೆಯ ಚಟುವಟಿಕೆ ಕುತೂಹಲ ಹುಟ್ಟಿಸಿತು….! ಆತ ಗಮನವಿಟ್ಟು ನೋಡತೊಡಗಿದ. ಆ ಇರುವೆ ತನ್ನ ಗಾತ್ರಕ್ಕಿಂತ ದೊಡ್ಡದಾದ ಒಂದು ಗರಿಯನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿತ್ತು . ಆ ಗರಿ ಇರುವೆಗಿಂತ ಸಾಕಷ್ಟು ದೊಡ್ಡದಿತ್ತು. ಎಷ್ಟು ದೊಡ್ಡದಿತ್ತು ಎಂದರೆ ಸಾಮಾನ್ಯ ನೋಟಕ್ಕೆ ಆ ಚಿಕ್ಕ ಇರುವೆ ಅದನ್ನು ತೆಗೆದುಕೊಂಡು ಹೋಗಲು ಸಾಧ್ಯವೇ ಇಲ್ಲ ಎಂಬಂತಿತ್ತು. ಆದರೂ ಅದು ಕಷ್ಟಪಟ್ಟು ಮೆಲ್ಲ ಮೆಲ್ಲನೆ ಆ ಗರಿಯನ್ನು ತೆಗೆದುಕೊಂಡು ಹೊರಟಿತು. ಮಧ್ಯದಲ್ಲಿ ತಡೆ ಬಂದಾಗ ನಿಲ್ಲುತ್ತಿತ್ತು. ಕಲ್ಲುಗಳು ಎದುರಾದಾಗ ಸುತ್ತಿ ಬಳಸಿ ಹೋಗುತ್ತಿತ್ತು. ಆ ಇರುವೆಯ ಟೆರೇಸ್ ಮೇಲಿನ ಪಯಣದಲ್ಲಿ ಹಲವಾರು ವಿಘ್ನಗಳು ಬಂದವು. ಅದು ಅದನ್ನೆಲ್ಲ ಬಗೆಹರಿಸಿಕೊಂಡು ನಿಧಾನವಾಗಿ ಮುನ್ನಡೆಯಿತು. ಟೆರೇಸ್ ಮೇಲೆ ಚಿಕ್ಕದಾದ ಬಿರುಕಿತ್ತು. ನಮಗೆ ಚಿಕ್ಕದು ಎಂದರೆ ಆ ಇರುವೆಗೆ ಅದು ದೊಡ್ಡ ಕಣಿವೆ…. ಕಂದಕ…! ಗರಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಇರುವೆ ಅಲ್ಲೇ ನಿಂತಿತು. ಸ್ವಲ್ಪ ಹೊತ್ತು ನಿಂತು ತನ್ನಲ್ಲಿದ್ದ ಗರಿಯನ್ನು ನಿಧಾನವಾಗಿ ಮುಂದಕ್ಕೆ ನೂಕಿತು. ಗರಿಯು ಬಿರುಕಿನ ಆಚೆ ಬದಿ ತಲುಪಿದಾಗ ಇರುವೆ ಆ ಗರಿಯನ್ನು ಹತ್ತಿ ಆಚೆಗೆ ತಲುಪಿತು. ಮತ್ತೆ ಗರಿಯನ್ನು ಕಚ್ಚಿಕೊಂಡು ನಿಧಾನವಾಗಿ ಸಾಗಿತು ಅಷ್ಟು ಚಿಕ್ಕ ಇರುವೆಯಲ್ಲಿ ಎಷ್ಟು ಬುದ್ಧಿ ಇದೆ ನೋಡಿ….! ವಿಘ್ನ ಎದುರಾದಾಗ ಅದು ತನ್ನ ಯೋಚನೆ… ಯೋಜನೆ ಜಾರಿ ಮಾಡಿ ಮುನ್ನಡೆಯಲು ದಾರಿ ಮಾಡಿಕೊಂಡಿತು. ಅದು ಮುಂದೆ ಮುಂದೆ ಸಾಗಿ ತನ್ನ ಮನೆಯಾದ ಟೆರೇಸ್ ಮೇಲಿನ ಗೋಡೆಯ ಸಂದಿಗೆ ಬಂದು ತಲುಪಿತು. ಆ ಸಂದಿಯ ದ್ವಾರ ಅತ್ಯಂತ ಚಿಕ್ಕದಾಗಿತ್ತು. ಅದು ಇರುವೆ ಹೋಗುವಷ್ಟು ಮಾತ್ರವಿತ್ತು. ಅಲ್ಲಿಂದ ಮುಂದಕ್ಕೆ ಗರಿಯನ್ನು ತೆಗೆದುಕೊಂಡು ಹೋಗುವುದು ಇರುವೆಗೆ ಸಾಧ್ಯವಾಗಲಿಲ್ಲ. ಸಾಕಷ್ಟು ಪ್ರಯತ್ನಿಸಿದ ಇರುವೆ ಕೊನೆಗೆ ಗರಿಯನ್ನು ಹೊರಗೆ ಬಿಟ್ಟು ತನ್ನ ಮನೆಯನ್ನು ಸೇರಿಕೊಂಡಿತು. ಅದು ಎಲ್ಲ ವಿಘ್ನಗಳಿಗೆ ಪರಿಹಾರ ಕಂಡುಕೊಂಡಿತ್ತು. ಆದರೆ ಮನೆಯ ಬಾಗಿಲ ಬಗ್ಗೆ ಆಲೋಚಿಸಿರಲಿಲ್ಲ. ಹಾಗಾಗಿ ಅದರ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಗುರಿ ತಲುಪಲು ಸಾಧ್ಯವಾಗಲಿಲ್ಲ.
ಈ ಕಥೆಯಿಂದ ನಾವು ಕಲಿಯುವುದು ಸಾಕಷ್ಟಿದೆ. ನಾವು ಎಂತೆಂಥ ಕಷ್ಟಗಳನ್ನು ಎದುರಿಸುತ್ತೇವೆ. ಎದುರಿಸಿ ಅದನ್ನು ಪರಿಹರಿಸಿಕೊಂಡು ಏನೇನೆಲ್ಲ ಸಂಪಾದನೆ ಮಾಡುತ್ತೇವೆ. ವಿದ್ಯೆ… ಸಂಪತ್ತು…….. ಗೌರವ…. ಅಧಿಕಾರ ಹೀಗೆ ಗಳಿಸುವ ಹೋರಾಟ ನಿರಂತರವಾಗಿ ಬದುಕಿನುದ್ದಕ್ಕೂ ಸಾಗುತ್ತದೆ. ಗಳಿಸಿದ ಮೇಲೆ ಗಳಿಸಿದ್ದನ್ನು ಉಳಿಸಿಕೊಳ್ಳುವ ಹೋರಾಟ ಪ್ರಾರಂಭವಾಗುತ್ತದೆ. ಇರುವೆ ಯದ್ದು ಗರಿಯ ಕಥೆಯಾದರೆ ನಮ್ಮದು ಗರಿಗರಿಯ ಕಥೆ ಮತ್ತು ದೊಡ್ಡ ಕಥೆ. ಎಷ್ಟೆಲ್ಲ ಕಷ್ಟಪಟ್ಟು ಸಂಪಾದಿಸಿ ಕೂಡಿಟ್ಟು ಕೊನೆಗೆ ಈ ಮನೆಯಿಂದ ಆ ಮನೆಗೆ ಹೋಗುವಾಗ ಎಲ್ಲವನ್ನೂ ಬಿಟ್ಟು ಸಾಗುತ್ತೇವೆ. ಅಲ್ಲಿಗೆ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಇರುವೆಗೆ ಅನ್ನಿಸಿದ್ದು ನಮಗೂ ಅನಿಸುತ್ತದೆ. ಎಲ್ಲವನ್ನೂ ಬಿಟ್ಟು ಆ ಮನೆಯನ್ನು ಸೇರಿಕೊಳ್ಳುತ್ತೇವೆ.
ಇರುವೆಯಲ್ಲಿ ಎದುರಾದ ಆಪತ್ತನ್ನು ,ವಿಘ್ನವನ್ನು ಎದುರಿಸುವ ಶಕ್ತಿಯಾದರೂ ಇದೆ ಆದರೆ ಮನುಷ್ಯನಲ್ಲಿ ಆ ಶಕ್ತಿ ಇಲ್ಲ. ಮನುಷ್ಯ ಬಹುತೇಕ ಆಪತ್ತುಗಳಲ್ಲಿ ಆಪತ್ತಿನಿಂದ ಮರಣ ಹೊಂದಿದ್ದಕ್ಕಿಂತ ಹೆಚ್ಚು ಹೃದಯಾಘಾತದಿಂದಲೇ ಮರಣ ಹೊಂದಿದ್ದಾನೆ. ಉದಾಹರಣೆಗೆ ನೀರಿನಲ್ಲಿ ಬಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾಯುವುದಕ್ಕಿಂತ ಹೃದಯಾಘಾತದಿಂದ ಸಾಯುವುದೇ ಹೆಚ್ಚು. ಇದರ ಅರ್ಥ ಮನುಷ್ಯನಿಗೆ ಆಪತ್ತನ್ನು ಎದುರಿಸಿ ಗೆಲ್ಲುವ…. ನಿಲ್ಲುವ ಶಕ್ತಿ ಕಡಿಮೆ. ಆತ ವಿಘ್ನಗಳು, ಆಪತ್ತುಗಳು ಎದುರಾದಾಗ ಧೃತಿಗೆಡುತ್ತಾನೆ.
ಹಾಗಾದರೆ ಕೊನೆಯಲ್ಲಿ ಏನನ್ನೂ ಕೊಂಡೊಯ್ಯಲು ಸಾಧ್ಯವಿಲ್ಲವೆಂದಾದರೆ ಯಾಕೆ ಇಷ್ಟು ಪರದಾಟ….ಒದ್ದಾಟ…. ಸಂಗ್ರಹಿಸುವ ಹೋರಾಟ . ಬದುಕಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ, ಬದುಕಿಗೆ ಏನು ಬೇಕೋ ಅದನ್ನು ಮಾತ್ರ ಸಂಪಾದಿಸುವ ಬುದ್ಧಿ ಏಕಿಲ್ಲ?ಇಹ- ಪರಗಳಲ್ಲಿ ನಮ್ಮೊಡನಿರುವ ಸಂಪತ್ತನ್ನು ಮಾತ್ರ ನಾವು ಸಂಗ್ರಹಿಸಬೇಕು. ಏನನ್ನು ನಮ್ಮ ಕೊನೆಯ ಪಯಣದಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವೋ ಅದನ್ನೇ ಸಂಪಾದನೆ ಮಾಡಬೇಕು.
ನಾವು ಜೀವನದಲ್ಲಿ ದೀನ ದುರ್ಬಲರಿಗೆ ಮಾಡಿದ ಸಹಾಯ , ಒಳಿತಾದ ಕಾರ್ಯಗಳಿಗೆ ಮಾಡಿದ ದಾನ, ಕೈಗೊಂಡ ಸೇವಾ ಕಾರ್ಯ, ಮಾಡಿದ ತ್ಯಾಗ ಇವು ಮುಂದೆ ತೆಗೆದುಕೊಂಡು ಹೋಗಲು ಸಾಧ್ಯವಿರುವ ಸಂಪಾದನೆಗಳು. ಇದು ಇಂದು- ಮುಂದು -ಎಂದೆಂದೂ ನಮ್ಮೊಡನಿರುವ ಸಂಗಾತಿಗಳು. ಗಳಿಸುವುದಿದ್ದರೆ ಇಂಥದ್ದನ್ನು ಗಳಿಸಬೇಕು. ಇದು ಇರುವೆ ನೀಡುವ ಜೀವತಾರಕವಾದ ಸಂದೇಶ.
ಹೀಗಿದ್ದರೆ ನಮ್ಮ ಇರುವಿಕೆ ಗೊಂದು ಅರ್ಥವಿದೆ. ಇಲ್ಲದಿದ್ದರೆ ಹೇಗಿರುವೆ? ಎಂದರೆ ವ್ಯರ್ಥವಾಗಿರುವೆ…. ನಿರರ್ಥಕವಾಗಿರುವೆ….. ಅನರ್ಥವಾಗಿರುವೆ ಎಂಬಂತಾಗುತ್ತದೆ. ಹಾಗಾಗಬಾರದು. ಇಲ್ಲೂ ಸಲ್ಲುವ ಅಲ್ಲೂ ಸಲ್ಲುವುದನ್ನು ಸಂಗ್ರಹಿಸೋಣ
✍️ ಡಾ.ರವೀಂದ್ರ ಭಟ್ಟ ಸೂರಿ.