ಚಂದ್ರನನ್ನು ತೋರಿಸುತ್ತಾ ತಾಯಿ ಮಗುವನ್ನು ಕೇಳುತ್ತಾಳೆ……. ಚಂದಮಾಮ ಚೆಂದವೋ?…. ನಾನು ಚೆಂದವೋ? ಎಂದು. ಆಗ ಮಗು ಹೇಳಿತು “ಚಂದಮಾಮನನ್ನು ನೋಡಿದಾಗ ನಿನ್ನ ನೆನಪಾಗುತ್ತದೆ ಆದರೆ ನಿನ್ನನ್ನು ನೋಡಿದಾಗ ಚಂದ್ರಮನ ನೆನಪಾಗುವುದಿಲ್ಲ” ಅಮ್ಮನ ಮಹತ್ವವೇ ಅಂಥದ್ದು ಅಮ್ಮನನ್ನು ನೋಡಿದಾಗ ಚಂದ್ರಮನೇಕೆ ಯಾರೂ ನೆನಪಾಗಬಾರದು. ಎಲ್ಲವನ್ನೂ ಮರೆಯಬೇಕು. ಮಾತೃತ್ವಕ್ಕೆ ಅಷ್ಟು ಮಹತ್ವವಿದೆ.
ಮನುಷ್ಯ ವರ್ಗವನ್ನು ಎರಡಾಗಿ ವಿಭಾಗಿಸಬಹುದು. ಒಂದು ಗಂಡು, ಎರಡನೆಯದು ಹೆಣ್ಣು. ಹಾಗೆಯೇ ಅಸ್ತಿತ್ವವನ್ನು ಎರಡಾಗಿ ವಿಭಾಗಿಸಬಹುದು… ಅದು ಜೀವನ – ಜೀವಿಕೆ. ಜೀವನವೆಂದರೆ ಬದುಕು. ಆ ಬದುಕಿಗಾಗಿ ನಾವು ಏನೆಲ್ಲಾ ಮಾಡುತ್ತೇವೆಯೋ ಅದು ಜೀವಿಕೆ. ಅದನ್ನು ಜೀವನೋಪಾಯ ಎಂದು ಕೂಡ ಹೇಳಬಹುದು.
ಜೀವನವೆಂದರೆ ಜೀವಿಕೆಯ ಫಲ…. ದುಡಿಮೆಯ ಫಲ ಅನುಭವಿಸುವುದು. ಗೃಹಿಣಿ ಅಥವಾ ಮಹಿಳೆ ಎಂದರೆ ಜೀವನ. ಪುರುಷರೆಂದರೆ ಜೀವಿಕೆ. ಮಹಿಳೆಯೆಂದರೆ ಮನೆ ಆದರೆ ಇಂದು ಮಹಿಳೆ ಮನೆಯಿಂದ ಹೊರ ನಡೆದಿದ್ದಾಳೆ. ಇದಕ್ಕೆ ಕಾರಣರಾರು? ಮಹಿಳೆಯಂತೂ ಖಂಡಿತ ಅಲ್ಲ. ಅದಕ್ಕೆ ಕಾರಣ…. ಇಂದಿನ ಕಾಲದಲ್ಲಿ ಮನೆ ಕೆಲಸವೆಂದರೆ ಕಡಿಮೆ ದರ್ಜೆಯ ಕೆಲಸವೆಂಬ ಭಾವನೆ ಬಂದದ್ದು ಹಾಗೂ ಮನೆಗೆಲಸ ನಿರ್ವಹಿಸುತ್ತಿದ್ದ ಮಹಿಳೆಯನ್ನು ಅಗೌರವದಿಂದ ಕಂಡಿದ್ದು . ಇದರಿಂದಾಗಿ ಮನೆಯ ಪರಿಕಲ್ಪನೆ ನಿಕೃಷ್ಟವಾಯಿತು.
ಅಂತರಂಗ ದೊಡ್ಡದೋ?….. ಬಹಿರಂಗ ದೊಡ್ಡದೋ? ಎಂಬ ಪ್ರಶ್ನೆ ತುಂಬಾ ಜಟಿಲವಾದದ್ದು. ಮನೆಯಲ್ಲಿ ಸ್ತ್ರೀ ಎಂದರೆ ಅಂತರಂಗ. ಪುರುಷ ಬಹಿರಂಗ. ಮಹಿಳೆ- ಜೀವನ, ಪುರುಷ -ಜೀವಿಕೆ. ಜೀವಿಕೆ ಜೀವನಕ್ಕಾಗಿಯೇ ಹೊರತು ಜೀವನ ಜೀವಿಕೆಗಾಗಿ ಅಲ್ಲ. ನಮ್ಮ ದುಡಿತ ಮನೆಗಾಗಿ. ಜೀವನವೆಂಬುದು ಫಲ…. ಜೀವಿಕೆ ಎಂಬುದು ಸಾಧನ. ಹಿಂದಿನ ವ್ಯವಸ್ಥೆ ಹೀಗಿತ್ತು. ಆದರೆ ಇಂದು ಅಂತರಂಗವಿಲ್ಲ…. ಇಬ್ಬರೂ ಬಹಿರಂಗವಾಗಿದ್ದಾರೆ. ಹಾಗಾಗಿ ಮನೆ ಎನ್ನುವುದು ಅನಾಥವಾಗಿದೆ. ಮನೆಗೆ ಸೀಮಿತವಾಗಿದ್ದ ಚಟುವಟಿಕೆಗಳೆಲ್ಲ ಎಂದು ಬಹಿರಂಗಕ್ಕೆ ಬಂದಿದೆ. ಅದಕ್ಕೆ ಒಂದು ಉದಾಹರಣೆ ಎಂದರೆ ಮನೆಯಲ್ಲಿ ವಿಶೇಷವಾದರೆ ಇಂದು ಊಟ ಹೋಟೆಲಿನಿಂದ ಬರುತ್ತದೆ. ಆದರೆ ಆ ಊಟದಲ್ಲಿ ವ್ಯಾಪಾರವಿದೆ ಪ್ರೀತಿಯಿಲ್ಲ. ಅದೇ ಮನೆಯ ಊಟವಾದರೆ ಅದರಲ್ಲಿ ಪ್ರೀತಿ ಇದೆ. ಇಂದು ಮನೆಯಲ್ಲಿ ಬೆಳೆಯಬೇಕಾದ ಮಕ್ಕಳು ಅನಾಥರಂತೆ ಬೆಳೆಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಜೀವನ- ಜೀವಿಕೆ ಇದ್ದದ್ದು ಕೇವಲ ಜೀವಿಕೆಯಾಗಿದ್ದು. ಅಂತರಂಗ- ಬಹಿರಂಗ ಇದ್ದದ್ದು ಕೇವಲ ಬಹಿರಂಗವಾದದ್ದು. ಗೃಹಿಣಿಗೆ ಗೌರವ ಹೆಚ್ಚು ದೊರಕಿದ್ದರೆ ಮನೆ ಮನೆಯಾಗಿ ಇರುತ್ತಿತ್ತು. ಆದರೆ ಗೌರವ ಕಡಿಮೆಯಾದ್ದರಿಂದ ಇಂದಿನ ಪರಿಸ್ಥಿತಿ ಎದುರಾಗಿದೆ.
ಇಂದು ಹೊರಗಿನ ದುಡಿತಕ್ಕೆ ಗೌರವ ಹೆಚ್ಚು ….ಮನೆಯ ದುಡಿತವನ್ನು ನಿಕೃಷ್ಟವಾಗಿ ಕಾಣಲಾಗುತ್ತಿದೆ. ಹಣ ಗಳಿಸುವುದೊಂದೇ ನಿಜವಾದ ದುಡಿತ ಎಂಬ ದೃಷ್ಟಿಕೋನದಿಂದಾಗಿ ತಲೆತಲಾಂತರದಿಂದ ನಡೆದು ಬಂದ ವ್ಯವಸ್ಥೆ ಕುಸಿದಿದೆ. ಮೌಲ್ಯಗಳು ಕಾಣೆಯಾಗಿದೆ. ಮನೆಯ ಜೀವಾಳವಾಗಿದ್ದ ಮಹಿಳೆ ಮನೆಯಿಂದ ಹೊರ ನಡೆದಿದ್ದರಿಂದ ಮನೆಯ ಪ್ರೀತಿ, ವಾತ್ಸಲ್ಯ ,ಮಮತೆ ಎಲ್ಲವೂ ಮಾಯವಾಗಿದೆ. ಮನೆ ಗೌಣವಾಗಿ ನೌಕರಿ ಮಾಡುವ ಜಾಗ ಪ್ರಾಮುಖ್ಯತೆ ಪಡೆದಿದ್ದು ಇಂದಿನ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣ. ಮತ್ತೆ ಮನೆಗೆ ಜೀವಕಳೆ ತುಂಬಬೇಕೆಂದರೆ ಅದು ಮಹಿಳೆಯಿಂದ ಮಾತ್ರ ಸಾಧ್ಯ . ಮಹಿಳೆಗೆ ಗೌರವದ ಬದುಕು ನೀಡುವ ಮನೆಯ ವಾತಾವರಣದಿಂದ ಮಾತ್ರ ಸಾಧ್ಯ . ದುಡಿಯುತ್ತಾ ದುಡಿಯುತ್ತಾ ಒಂದು ದಿನ ಮಡಿಯುವ ಆ ಬದುಕಿಗಿಂತ ದುಡಿಯುತ್ತಾ ದುಡಿಯುತ್ತಾ ಪ್ರೀತಿ ವಾತ್ಸಲ್ಯ ಹಂಚುತ್ತಾ ಬದುಕುವ ಬದುಕು ಸಾರ್ಥಕ ವಲ್ಲವೇ….? ಇಂದಿನ ಆಧುನಿಕ ಸಮಾಜ ಯೋಚಿಸಬೇಕಾದ ವಿಷಯವಿದು.
ಒಬ್ಬಳು ಮಹಿಳೆ ಮನಸ್ಸು ಮಾಡಿದರೆ ಕೇವಲ ಮಕ್ಕಳನ್ನಷ್ಟೇ ಅಲ್ಲದೆ ದೊಡ್ಡವರನ್ನೂ ತಿದ್ದಲು ಸಾಧ್ಯವಿದೆ. ಮನೆ ಮನ ಜೀವನವನ್ನು ಬದಲಾಯಿಸಬಲ್ಲ ಅದ್ಭುತ ಶಕ್ತಿಯನ್ನು ಭಗವಂತ ಸ್ತ್ರೀಯಲ್ಲಿ ತುಂಬಿದ್ದಾನೆ. ಮಕ್ಕಳ ಮನಸ್ಸು ಹಸಿಯಾಗಿರುವಾಗಲೇ ಅಮ್ಮನ ಕೈಯಲ್ಲಿ ಸಿಗುವುದರಿಂದ ಅಮ್ಮ ಅದಕ್ಕೆ ಯಾವ ರೂಪವನ್ನು ಬೇಕಾದರೂ ಕೊಡಲು ಸಾಧ್ಯ. ಅದಕ್ಕಾಗಿ ಅಮ್ಮನನ್ನು ದೇವರ ಸ್ಥಾನದಲ್ಲಿ ನೋಡಿದ್ದು.ಮಾತೃ ದೇವೋಭವ: ಎಂದಿದ್ದು.
ಮಹಿಳೆಯನ್ನು ಪ್ರಕೃತಿಗೆ ಅನ್ವಯಿಸಲಾಗುತ್ತದೆ. ಪ್ರಕೃತಿಯೆಂದರೆ ಗೃಹಿಣಿ, ಪುರುಷರೆಂದರೆ ಅದರೊಳಗಿನ ಬೆಳಕು ,ಚೈತನ್ಯ ಎಂದು ಭಾವಿಸಿದರೆ ಪ್ರಕೃತಿ ಇಲ್ಲದೇ ಪುರುಷನಿಗೆ ಅಸ್ತಿತ್ವವೇ ಇಲ್ಲ. ಹುಟ್ಟಿದ ಕೂಡಲೇ ಮೊದಲು ಬಾಯಿಗೆ ಬೀಳುವುದು ಅಮ್ಮನ ಎದೆಹಾಲು. ಸಾಯುವಾಗ ಕೊನೆಯ ಕ್ಷಣದಲ್ಲಿ ಬಾಯಿಗೆ ಬೀಳುವುದು ಗಂಗಾಜಲ. ಎರಡರಲ್ಲೂ ತಾಯಿಯ ಮಹತ್ವವಿದೆ. ಹುಟ್ಟಿನಿಂದ ಸಾವಿನವರೆಗೆ ….ಅಮ್ಮನಿಂದ ಗಂಗೆಯವರೆಗೆ ಇರುವುದು ಮಾತೃತ್ವದ ಶ್ರೇಷ್ಠತೆ.
ಮತ್ತೆ ಮನೆಗೆ ಆ ವೈಭವ… ಆ ಮಹತ್ವ…. ಆ ಶ್ರೇಷ್ಠತೆ ಮರಳ ಬೇಕೆಂದರೆ ಜೀವನಕ್ಕೆ ಮಹತ್ವ ಬರಬೇಕು….ಜೀವಿಕೆಗಲ್ಲ. ಮನೆಗೆ ಮಹತ್ವ ಬರಬೇಕು….ಕಚೇರಿಗಲ್ಲ. ಅಂತರಂಗಕ್ಕೆಮಹತ್ವ ಬರಬೇಕು…. ಬಹಿರಂಗಕ್ಕಲ್ಲ. ಆಸ್ವಾದನೆಗೆ ಪ್ರಾಮುಖ್ಯತೆ ಸಿಗಬೇಕು….ದುಡಿಮೆಗಲ್ಲ ಆ ದಿನದ ನಿರೀಕ್ಷೆಯಲ್ಲಿರೋಣ… ಆ ವಾತಾವರಣ ಸೃಷ್ಟಿಸಲು ಪ್ರಯತ್ನಿಸೋಣ.
✍️ ಡಾ.ರವೀಂದ್ರ ಭಟ್ಟ ಸೂರಿ