ವೈದ್ಯರೊಬ್ಬರ ಅನುಭವ ಕಥನವಿದು…. ಒಂದು ಕುಟುಂಬ . ಅದರಲ್ಲಿ ಗಂಡ, ಹೆಂಡತಿ ,ಮಗಳು, ಮಗ ಇದ್ದರು. ಆ ಮಗಳಿಗೆ ಶಸ್ತ್ರಚಿಕಿತ್ಸೆಯ ಅನಿವಾರ್ಯತೆ ಎದುರಾಯ್ತು. ಅದಕ್ಕೆ ರಕ್ತ ಬೇಕು. ಅವಳದ್ದು ಅಪರೂಪದ ರಕ್ತದ ಗುಂಪು ‘ಓ ನೆಗೆಟಿವ್’ ಸಿಗುವುದು ಬಹಳ ಕಷ್ಟ. ಪರಿಶೀಲಿಸಿದಾಗ ಪುಟ್ಟ ಹುಡುಗನ ರಕ್ತದ ಗುಂಪು ಅದೇ ಆಗಿತ್ತು. ವೈದ್ಯರು ಅವನಿಂದಲೇ ರಕ್ತ ಪಡೆದು ಅವಳ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದರು. ಆ ಪುಟ್ಟ ಬಾಲಕನಲ್ಲಿ ವೈದ್ಯರು “ಇದು ಜೀವನ್ಮರಣದ ಪ್ರಸಂಗ ಹಾಗಾಗಿ ನಿನ್ನ ರಕ್ತ ಕೊಟ್ಟು ಅಕ್ಕನನ್ನು ಉಳಿಸುವುದು ಅನಿವಾರ್ಯ” ಎಂದರು . ಆ ಬಾಲಕ ಸ್ವಲ್ಪ ಹೊತ್ತು ಆಲೋಚನೆ ಮಾಡಿ ಆಯ್ತು ಎಂದು ಅಪ್ಪ ಅಮ್ಮನಿಗೆ ನಮಸ್ಕರಿಸಿ ಆ ಕೋಣೆಯಿಂದ ಹೊರಗೆ ಹೋಗಿ ಸ್ವಲ್ಪ ಹೊತ್ತಿನ ನಂತರ ಬಂದು ಅಲ್ಲಿದ್ದ ಹಾಸಿಗೆಯ ಮೇಲೆ ಮಲಗಿದ. ವೈದ್ಯರು ಅವನ ರಕ್ತವನ್ನು ಅಕ್ಕನಿಗೆ ಕೊಟ್ಟು ಎಲ್ಲ ಪ್ರಕ್ರಿಯೆ ಮುಗಿಸಿದರು. ಮುಗಿದ ಮೇಲೆ ಮಗು ವೈದ್ಯರನ್ನು ಕೇಳಿತು…. ನಾನು ಸಾಯಲು ಇನ್ನು ಎಷ್ಟು ಸಮಯವಿದೆ ?. ನಿಜಕ್ಕೂ ಹೃದಯ ತಟ್ಟುವ ಅನುಭವ ಕಥನವಿದು. ಆ ಮಗು ಭಾವಿಸಿದ್ದು “ಅಕ್ಕನಿಗೆ ರಕ್ತ ಕೊಟ್ಟ ಮೇಲೆ ಅಕ್ಕ ಬದುಕುತ್ತಾಳೆ ನಾನು ಸಾಯುತ್ತೇನೆ” ಎಂದು. ಆದರೂ ಅದಕ್ಕೆ ಒಪ್ಪಿಗೆ ಕೊಟ್ಟ ಆ ಮಗುವಿನ ನಿರ್ಧಾರ ನಮ್ಮೆಲ್ಲರ ಕಣ್ಣು ತೆರೆಸುವಂಥದ್ದು.
ರಕ್ತ ಕೊಡುವುದು ದೊಡ್ಡ ಮಾತಲ್ಲ . ಆ ಪ್ರಕ್ರಿಯೆಯಲ್ಲಿ ಕಳೆದುಕೊಳ್ಳುವಂತಹದ್ದೇನಿಲ್ಲ. ಆ ಮಗು ಏನು ಕೊಟ್ಟಿತು ? ಎನ್ನುವುದಕ್ಕಿಂತ ಅದರ ಹಿಂದಿನ ಭಾವವೇನು? ಎನ್ನುವುದು ಮುಖ್ಯ. ಮಗು ರಕ್ತದ ಮೂಲಕವಾಗಿ ತನ್ನ ಭಾವವನ್ನು ಕೊಟ್ಟಿತ್ತು. ಅದರ ರಕ್ತದ ಗುಂಪು ‘ನೆಗೆಟಿವ್’ ಆದರೂ ಅದರ ಜೀವ ‘ಪಾಸಿಟಿವ್’ ಆಗಿತ್ತು. ದೇವರು ಹೇಳುವುದು ಹಾಗೆ ….”ಏನು ಕೊಟ್ಟೆ ಕೇಳುವುದಿಲ್ಲ. ಕೊಡುವುದನ್ನು ಯಾವ ಭಾವದಲ್ಲಿ ಕೊಟ್ಟೆ ಎಂಬುದು ಮುಖ್ಯ” ಎಂದು. “ಪತ್ರೆಗಳಿರಬಹುದು, ಹಣ್ಣುಗಳಿರಬಹುದು, ನೀರಿರಬಹುದು ಇದರಲ್ಲಿ ಯಾವುದಾದರೂ ಆಗಬಹುದು. ಅದನ್ನು ನೀನು ಭಕ್ತಿಯಿಂದ ಭಾವದಿಂದ ಕೊಟ್ಟರೆ ನಾನು ಸ್ವೀಕರಿಸುತ್ತೇನೆ” ಶ್ರೀಕೃಷ್ಣನ ಮಾತು ಇದು.
ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯಜ್ಞ- ಯಾಗ ಹೋಮ- ಹವನ ಪೂಜೆ- ಪುನಸ್ಕಾರಗಳನ್ನು ಸಾಕಷ್ಟು ಮಾಡಿದರೂ ದೇವನು ಒಲಿಯಲಿಲ್ಲ ಎನ್ನುತ್ತೇವೆ. ಆದರೆ ಅವೆಲ್ಲವನ್ನೂ ನಾವು ಯಾವ ಭಾವದಿಂದ ಮಾಡಿದ್ದೇವೆ ಅದು ಮುಖ್ಯ. ಮನುಷ್ಯರನ್ನು ಮೋಸ ಮಾಡಬಹುದು ಆದರೆ ದೇವ ನನ್ನು ಮೋಸ ಮಾಡುವುದು ಸಾಧ್ಯವಿಲ್ಲ ದೇವ ನೋಡುವುದು ನಮ್ಮ ಭಾವವನ್ನು.
ಕೊಡಬೇಕು….. ಕೊಡುವುದನ್ನು ಭಾವದಿಂದ ಕೊಡಬೇಕು. ಕೊಟ್ಟಿದ್ದನ್ನು ಸ್ವೀಕರಿಸಲು ದೇವ ಕಾಣುವುದಿಲ್ಲ. ಆದರೆ ಕೊಡುವುದರ ಹಿಂದೆ ಭಾವವಿದ್ದಾಗ ಆತ ಖಂಡಿತಾ ಸ್ವೀಕರಿಸುತ್ತಾನೆ.
ಹೊಲೆಯರ ನಂದನಿಗೆ ಒಂದು ದಿನ ಶಿವ ತಾಂಡವದ ಕನಸು ಬಿತ್ತಂತೆ. ಎಚ್ಚೆತ್ತು ಅವನು ಶಿವನನ್ನು ಹುಡುಕಲು ಪ್ರಾರಂಭಿಸಿದ. ಕೊನೆಗೆ ಮರಳಿನ ಲಿಂಗ ಮಾಡಿ ಅದರ ಮೇಲೊಂದು ಕಡ್ಡಿ ಇಟ್ಟು ಪೂಜಿಸಿದನಂತೆ. ಆ ದಿನ ಊರಿನಲ್ಲಿ ಮಾಡಿದ ಎಲ್ಲ ಪೂಜೆಗಳು ಇಲ್ಲಿಗೆ ಸಂದವಂತೆ….! ಭಕ್ತಿಯ ಹಿಂದಿನ ಭಾವಕ್ಕೆ ಅಂತಹ ಶಕ್ತಿ ಇದೆ
ತಾಯಿಯ ಮೂಲಕ…. ತಂದೆಯ ಮೂಲಕ …..ಗುರುವಿನ ಮೂಲಕ…. ಸಾಧಕರ ಮೂಲಕ ದೀನ- ದುರ್ಬಲ- ದುಃಖಿತರ ಮೂಲಕ ಕೊಡಬೇಕಾದ್ದನ್ನು ಭಾವ ತುಂಬಿ ಕೊಟ್ಟಾಗ ಅದು ಖಂಡಿತ ದೇವನನ್ನು ತಲುಪುತ್ತದೆ. ಮೂರ್ತಿಯ ಮೂಲಕ ತಲುಪುವುದಕ್ಕಿಂತ ವೇಗವಾಗಿ ಜೀವದ ಮೂಲಕ ಕೊಟ್ಟಾಗ ತಲುಪುತ್ತದೆ. ಮೂರ್ತಿಯ ಮೂಲಕ ತಲುಪುವುದಕ್ಕಿಂತ ಜೀವದ ಮೂಲಕ ದೇವರನ್ನು ತಲುಪುವುದು ಸುಲಭ.
ತಾಯಿಯಲ್ಲಿ ದೇವರನ್ನು ಭಾವಿಸಿದರೆ ತಂದೆಯಲ್ಲಿ, ಗುರುವಿನಲ್ಲಿ ,ಸಾಧಕನಲ್ಲಿ ,ದೀನ ದುರ್ಬಲ ದುಃಖಿತರಲ್ಲಿ ದೇವರನ್ನು ಭಾವಿಸಿದರೆ ನಾವು ಎಂದೂ ಅವರನ್ನು ನೋಯಿಸಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಭಾವಿಸದೇ ಅವರನ್ನು ನೋಯಿಸಿದರೆ ನಮ್ಮ ಬದುಕಿನಲ್ಲಿ ಕತ್ತಲೆ ಕಟ್ಟಿಟ್ಟದ್ದು.
ಭಾವಿಸದಿದ್ದರೆ ನಷ್ಟವಿದೆ….. ಭಾವಿಸಿದರೆ ಲಾಭವಿದೆ. ಹೇಗೆ ನಡೆದುಕೊಳ್ಳಬೇಕು ಹಾಗೆ ನಡೆದುಕೊಳ್ಳದಿದ್ದರೆ ನಷ್ಟವಿದೆ….. ಅದೇ ನಡೆದುಕೊಂಡರೆ ಖಂಡಿತ ಲಾಭವಿದೆ . ಅವರೆಲ್ಲರ ಮಹತ್ವ ಅರಿಯದಿದ್ದರೆ ನಷ್ಟವಿದೆ….. ಅರಿತರೆ ದೊಡ್ಡ ಲಾಭವಿದೆ. ಈ ಲಾಭ ನಷ್ಟಗಳು ನಮ್ಮ ಕೈಯಲ್ಲೇ ಇವೆ. ಹಾಗಾಗಿ ಸಲ್ಲಿಸಬೇಕಾದುದನ್ನು ಮೋಹದಿಂದ ಬಂಧನದಿಂದ ಸಲ್ಲಿಸದೇ ಜೀವಗಳ ಮೂಲಕ ದೇವರಿಗೆ ಸಲ್ಲಿಸೋಣ…. ಬದುಕು ಸಾರ್ಥಕ ಮಾಡಿಕೊಳ್ಳೋಣ.
✍️ ಡಾ.ರವೀಂದ್ರ ಭಟ್ಟ ಸೂರಿ.