ಅವನೊಬ್ಬ ವೀರ. ಮಹಾಯುದ್ಧ ಗೆದ್ದು ಬಂದಿದ್ದ. ಹಾಗೆಯೇ ಬರುತ್ತಿರುವಾಗ ದಾರಿ ಯಲ್ಲೊಂದು ಸವಾಲು ಎದುರಾಯಿತು. ಅವನ ದಾರಿಗಡ್ಡವಾಗಿ ಪೆಡಂಭೂತ ವೊಂದು ಮಲಗಿತ್ತು. ಆ ವೀರನ ವೀರತನ ಎಚ್ಚರಗೊಂಡಿತು. ಅವನಿಗೆ ಯಾವ ಭಯವೂ ಆಗಲಿಲ್ಲ. ಆದರೆ ಅವನ ಬಂದೂಕಿನಲ್ಲಿದ್ದ ಗುಂಡುಗಳು ಖಾಲಿಯಾಗಿದ್ದವು. ಅವನು ಧೃತಿಗೆಡಲಿಲ್ಲ. ಗುಂಡಿಲ್ಲದ ಬಂದೂಕನ್ನು ಲೋಹದ ದೊಣ್ಣೆಯಂತೆ ಬಳಸಲು ನಿರ್ಧರಿಸಿದ. ಆ ಪೆಡಂಭೂತಕ್ಕೆ ಹಲ್ಲುಗಳು ಮೊಂಡಾಗಿದ್ದವು, ಉಗುರು ಕಿತ್ತು ಹೋಗಿತ್ತು. ಅದು ಸ್ವಲ್ಪ ಅಸಹಾಯಕ ಸ್ಥಿತಿಯಲ್ಲಿದ್ದಂತೆ ಇತ್ತು . ಅವನು ಒಂದೇ ಹೊಡೆತಕ್ಕೆ ಅದನ್ನು ನಿವಾರಿಸಿಕೊಂಡು ಮುಂದೆ ಸಾಗಿದ. ಸ್ವಲ್ಪ ಮುಂದೆ ಹೋದಾಗ ಆ ಪೆಡಂಭೂತ ಮತ್ತೆ ಪ್ರತ್ಯಕ್ಷವಾಗಿತ್ತು. ಈ ಬಾರಿ ಅದು ಸ್ವಲ್ಪ ಮಟ್ಟಿಗೆ ತನ್ನ ಬಲವನ್ನು ಹೆಚ್ಚಿಸಿಕೊಂಡು ಬಂದಂತೆ ಕಾಣುತ್ತಿತ್ತು. ಆದರೂ ಆತ ಹೆದರಲಿಲ್ಲ. ಮೊದಲಿಗಿಂತಲೂ ಸ್ವಲ್ಪ ಹೆಚ್ಚು ಶ್ರಮ ಪಟ್ಟು ಅದನ್ನು ಸೋಲಿಸಿ ಮುನ್ನಡೆದ. ಸ್ವಲ್ಪ ಮುಂದೆ ಹೋದಾಗ ಅದು ಮತ್ತೆ ಪ್ರತ್ಯಕ್ಷ….! ಈ ಬಾರಿ ಪೂರ್ಣ ಬಲವನ್ನು ಹೊಂದಿ ಬಲಿಷ್ಠವಾಗಿ ಅದು ಬಂದಿತ್ತು. ಈಗ ಆತ ಎದೆಗುಂದಿದ. ತನ್ನಿಂದ ಎದುರಿಸಲು ಸಾಧ್ಯವಿಲ್ಲವೆಂದು ಭಾವಿಸಿ ಹಿಂದಕ್ಕೆ ಓಡಲು ಪ್ರಾರಂಭಿಸಿದ. ಅದು ಅಟ್ಟಿಸಿಕೊಂಡು ಬಂತು. ಆ ಪೆಡಂಭೂತ ಮೊದಲು ಎದುರಾದ ಸ್ಥಳಕ್ಕೆ ಬಂದಾಗ ಹಿಂತಿರುಗಿ ನೋಡಿದ. ಬಲಿಷ್ಠ ಪೆಡಂಭೂತ ಮತ್ತೆ ಮೊದಲ ಸ್ಥಿತಿಗೆ ಬಂದಿತ್ತು. ಮತ್ತೆ ಅಸಹಾಯಕ ಸ್ಥಿತಿಯಲ್ಲಿದ್ದಂತೆ ಕಂಡುಬಂತು. ಆತನಿಗೆ ಆಶ್ಚರ್ಯ….! ಅದೇ ಸಮಯದಲ್ಲಿ ಕೆಲವು ದಾರಿಹೋಕರು ಅಲ್ಲಿಗೆ ಬಂದರು. ಈತ ನಡೆದ ವಿಷಯವನ್ನೆಲ್ಲಾ ಹೇಳಿದ. ಈ ಬಾರಿ ನಾವೆಲ್ಲ ಸೇರಿ ಅದನ್ನು ಹೊಡೆದು ಹಾಕೋಣ ಎಂದ. ಸೂಕ್ಷ್ಮವಾಗಿ ಗಮನಿಸಿದ ದಾರಿಹೋಕರು ಇದನ್ನು ಇಲ್ಲೇ ಬಿಡುವ. ನಾವು ಕೆಣಕಿದರೆ ಮಾತ್ರ ಅದು ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತದೆ. ಇದನ್ನು ಉಪೇಕ್ಷೆ ಮಾಡಿ ಮುಂದೆ ಸಾಗಬೇಕು ಎಂದು ಹೇಳಿ ಎಲ್ಲರೂ ಸೇರಿ ಮುಂದಕ್ಕೆ ಸಾಗಿದರು. ಆ ಪೆಡಂಭೂತ ಮತ್ತೆ ಬರಲೇ ಇಲ್ಲ…….ಇದು ಮೊದಲ ಕಥೆ.
ಇನ್ನು ಎರಡನೇಯದ್ದು….. ಅದೊಂದು ಶಾಲೆ…. ಅಲ್ಲೊಂದು ತರಗತಿ…. ಮೇಷ್ಟ್ರು- ಮಕ್ಕಳು. ಎಂದಿನಂತೆ ತರಗತಿ ಪ್ರಾರಂಭವಾಯಿತು. ಮೇಷ್ಟ್ರು ಬಂದು ಒಂದು ಲೋಟ ನೀರು ಹಿಡಿದುಕೊಂಡು ಮಕ್ಕಳಲ್ಲಿ ತೂಕ ಎಷ್ಟಿರಬಹುದು? ಎಂದು ಕೇಳಿದರು. ಮಕ್ಕಳು “ತೂಗಿಯೇ ನೋಡಬೇಕು” ಎಂದರು. ಆ ಲೋಟವನ್ನು ಎತ್ತಿ ಹಿಡಿದುಕೊಂಡು ಈಗ ಏನಾಗುತ್ತೆ ? ಅಂದ್ರು. ಈಗ “ಏನೂ ಆಗೋಲ್ಲ” ಅಂದರು ಮಕ್ಕಳು. ಒಂದೆರಡು ಗಂಟೆ ಕೈಯಲ್ಲಿ ನೀರನ್ನು ಹೀಗೆ ಎತ್ತಿ ಹಿಡಿದುಕೊಂಡಿದ್ದರೆ? ಅಂದ್ರು ಮೇಷ್ಟ್ರು… “ಸಾರ್ ನಿಮ್ಮ ಕೈ ನೋವಾಗುತ್ತೆ” ಎಂದರು ಮಕ್ಕಳು. ಆಗ ನಾನು ಇಡೀ ದಿನ ಹೀಗೇ ಇದ್ರೆ ಎಂದರು… ಮಕ್ಕಳು “ಸಾರ್ ನೀವು ಆಸ್ಪತ್ರೆಗೆ ಹೋಗಬೇಕಾಗುತ್ತದೆ” ಎಂದು ನಕ್ಕರು. ಆರಂಭದಲ್ಲಿ ಇರದಿದ್ದ ಕೈ ನೋವು ಬಂದಿದ್ದು ಹೇಗೆ? ಲೋಟದಲ್ಲಿರುವ ನೀರಿನ ತೂಕ ಹೆಚ್ಚಾಯಿತೇ? ಕೇಳಿದರು ಮೇಷ್ಟ್ರು. ಇಡೀ ತರಗತಿ ಸ್ತಬ್ಧವಾಯಿತು. ಹಾಗಾದರೆ ಈ ಘಟನೆಯಲ್ಲಿ ಮೇಷ್ಟ್ರು ನೋವಿನ ಪರಿಹಾರಕ್ಕೆ ಏನು ಮಾಡಬೇಕು? ಲೋಟವನ್ನು ಕೇಳಗಿಡಬೇಕು ಅಷ್ಟೇ….!
ಇವೆರಡು ಕೇವಲ ಅಜ್ಜಿ ಕತೆಯಲ್ಲ. ಜೀವನದಲ್ಲಿ ಸಮಸ್ಯೆ ಬಂದಾಗ ಹೇಗೆ ಸ್ವೀಕರಿಸಬೇಕು… ಹೇಗೆ ಬಿಡಬೇಕು . ಎಂಬುದನ್ನು ತೋರಿಸುವ ಕಥೆಯಿದು. ನಾವು ಚಿಕ್ಕವರಾದರೆ ಸಮಸ್ಯೆ ದೊಡ್ಡದಾಗುತ್ತದೆ. ನಾವು ಗಟ್ಟಿಯಾದರೆ ಸಮಸ್ಯೆ ಚಿಕ್ಕದಾಗುತ್ತದೆ. ಎದುರಾದ ಸಮಸ್ಯೆಯ ಜೊತೆ ಗುದ್ದಾಟ ಮಾಡಬಾರದು. ಬಂದಿರುವ ಸಮಸ್ಯೆ ಕುರಿತು ತಲೆಕೆಡಿಸಿಕೊಂಡರೆ ಅದು ಬಾಧಿಸುತ್ತದೆ. ಅದಕ್ಕೆ ಒಂದೇ ಒಂದು ಉಪಾಯ….. ಉಪೇಕ್ಷೆ ಮಾತ್ರ .
ನಮ್ಮ ಬದುಕಿನಲ್ಲಿ ಎದುರಾಗುವ ಎಷ್ಟೋ ಸಮಸ್ಯೆಗಳನ್ನು ಅಲ್ಲೇ ಬಿಟ್ಟು ಮುಂದೆ ಹೋಗಬೇಕು. ಸಣ್ಣ ಸಣ್ಣ ಸಮಸ್ಯೆಗಳು ವಿಷಯಗಳನ್ನು ಉಪೇಕ್ಷೆ ಮಾಡುವುದು ಉತ್ತಮ. ಅದನ್ನು ಅಲ್ಲಿಗೇ ಬಿಡದೆ ಹಿಡಿದುಕೊಂಡರೆ ಮೇಷ್ಟ್ರು ಕೈಯಲ್ಲಿ ನೀರಿನ ಲೋಟ ಹಿಡಿದಂತಾಗುತ್ತದೆ. ನಮಗೆ ಬಂದ ಸಮಸ್ಯೆಗಳನ್ನು ಸ್ವಲ್ಪ ಹೊತ್ತು ಇಟ್ಟುಕೊಳ್ಳಬಹುದು. ಬಹಳ ಹೊತ್ತು ಇಟ್ಟುಕೊಂಡರೆ ಅದು ನಮಗೆ ಭಾರವಾಗುತ್ತದೆ. ಇದಕ್ಕೆ ಪರಿಹಾರ ತಟ್ಟೆಯನ್ನು ಕೆಳಗಿಡುವುದು ಅಂದರೆ ಸಮಸ್ಯೆಗಳನ್ನು ಶಾಂತ ಮನಸ್ಸಿನಿಂದ ಬಿಡಿಸಲು ಪ್ರಯತ್ನಿಸುವುದು. ಅದನ್ನು ಅಲ್ಲಿಗೇ ಬಿಟ್ಟು ಬಿಡುವುದು ತುಂಬಾ ಒಳ್ಳೆಯದು.
ನಮ್ಮ ಬದುಕು ತುಂಬಾ ವಿಶಾಲ. ಯಾಕೆ ಚಿಕ್ಕ ಚಿಕ್ಕ ವಿಷಯಗಳಿಗೆ ತಲೆಕೆಡಿಸಿಕೊಳ್ಳಬೇಕು? ಮಾನಸಿಕ ಸಮತೋಲನವನ್ನು ಕಾಯ್ದುಕೊಂಡರೆ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತದೆ. ಇಲ್ಲದಿದ್ದರೆ ಕಗ್ಗದ ಕವಿ ಹೇಳಿದಂತೆ “ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ” ಎಂಬಂತಾಗುತ್ತದೆ . ಸಮಸ್ಯೆ ದೊಡ್ಡದಾಗುತ್ತದೆ. ದೇವರು ನಮಗೆ ಎಷ್ಟೆಲ್ಲಾ ಕೊಟ್ಟಿದ್ದಾನೆ. ಯಾಕೆ ಒಂದು ಚಿಕ್ಕ ಸಮಸ್ಯೆಯ ಬಗ್ಗೆ ಚಿಂತೆ ಮಾಡಬೇಕು? ಬದುಕಿನಲ್ಲಿ ನೆಮ್ಮದಿ ಇಲ್ಲ ಎನ್ನುವವರು ಮಾಡಿಕೊಂಡಿದ್ದು ಇದನ್ನೇ. ಅವರು ಯಾವುದೇ ಒಂದು ಸಮಸ್ಯೆಯನ್ನು ಅತಿಯಾಗಿ ಹಚ್ಚಿಕೊಂಡಿದ್ದಾರೆ ಎಂಬುದರಿಂದಲೇ ಅವರ ನೆಮ್ಮದಿ ಹೊರಟು ಹೋಗಿದೆ.
“ವಿಧಿ ಒದೆಗೆ ಸಿಲುಕದಿಹ ನರಜಂತು ಇರದು” ಎಂಬ ಕಗ್ಗದ ಸಾಲು ನಮಗೆ ಸಮಾಧಾನ ನೀಡುತ್ತದೆ. ಸಮಸ್ಯೆ ಎಲ್ಲರಿಗೂ ಇದ್ದಿದ್ದೇ… ಅದು ಬೆಳೆಯಲು ಅವಕಾಶ ಮಾಡಿಕೊಡಬಾರದು. ವಿವೇಚಿಸಿ ಅದನ್ನು ದೇವರಿಗೆ ಬಿಟ್ಟುಬಿಡಬೇಕು. ಅಂದಾಗ ಮಾತ್ರ ನಮ್ಮ ಬದುಕಿನಲ್ಲಿ ನೆಮ್ಮದಿ ಸಾಧ್ಯ.
✍️ ಡಾ.ರವೀಂದ್ರ ಭಟ್ಟ ಸೂರಿ.