ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀಮತಿ ಅಂಬಿಕಾ ಚಂದ್ರಶೇಖರ (ಮುಕಾಂಬಾ ಭಟ್ಟ)
ಪ್ರತಿಯೊಬ್ಬರ ಜೀವನದಲ್ಲೂ ಸ್ವಾರಸ್ಯಕರ ಘಟನೆಗಳು ಇರುತ್ತವೆ. ಅವರಿಗೆ ಅವರದೇ ಆದ ಸ್ನೇಹಿತರ ಬಳಗ, ಬಂಧು ಬಾಂಧವರು ಎಲ್ಲರೂ ಇರುತ್ತಾರೆ. ಕೆಲವೊಮ್ಮೆ ನಾವಷ್ಟೇ ಚೆನ್ನಾಗಿ ಬದುಕುತ್ತಿದ್ದೇವೆ ಅಂದುಕೊಂಡು ಭ್ರಮೆಯಲ್ಲಿಯೇ ಇದ್ದು ಕಣ್ಣು ಮುಚ್ಚಿಕೊಂಡು ಬಿಡುತ್ತೇವೆ. ಆದರೆ ಹಾಗಂದುಕೊಂಡಿದ್ದಷ್ಟೇ….ಕಣ್ಣು ಬಿಡುವ ಹೊತ್ತಿಗೆ ಉಳಿದವರು ನಮಗಿಂತ ಎಷ್ಟೋ ಮುಂದಿರುತ್ತಾರೆ. ? ನಾವು ಕಣ್ತೆರೆದು ಬದುಕಬೇಕು. ಬರೀ ಕಣ್ತೆರೆದರಷ್ಟೇ ಸಾಲದು. ಹೃದಯದ ಬಾಗಿಲುಗಳನ್ನೂ ತೆರೆಯಬೇಕು. ಹಾಗಾದಾಗ ನಾವು ವಾಸ್ತವದ ನೆಲೆಯಲ್ಲಿ ದಿನದಿಂದ ದಿನಕ್ಕೆ ಉನ್ನತಿಯತ್ತ ಹೆಜ್ಜೆ ಇಡುವುದಕ್ಕೆ ಸಹಾಯವಾಗುತ್ತದೆ. ನಾವಷ್ಟೇ ಬದುಕಿದರೆ ಸಾಲದು. ಬದುಕಿ ಮತ್ತೊಬ್ಬರಿಗೂ ಬದುಕಾಗಬೇಕು. ಹಾಗಾದಗಷ್ಟೇ ಬದುಕಿದ ಬದುಕಿಗೊಂದು ಸಾರ್ಥಕತೆ. ಯಶಸ್ವಿ ಪುರುಷನ ಹಿಂದೆ ಒಂದು ಮಹಿಳೆಯಿರುತ್ತಾಳೆ…ಎಂದು ಕೇಳಿದ್ದೆ. ಯಶಸ್ವಿಯಲ್ಲದ ಪುರುಷನ ಹಿಂದೆಯೂ ಒಬ್ಬ ಮಹಿಳೆಯಿದ್ದಾಳೆ. ? ಶ್ರೀಮತಿ ಅಂಬಿಕಾ ಚಂದ್ರಶೇಖರ ನನ್ನ ಇಂದಿನ ಅಕ್ಷರ ಅತಿಥಿ.
ಊಹೆಗೂ ನಿಲುಕದ ಅಪಾರ ವಾತ್ಸಲ್ಯ ತೋರಿದ, ಹೆತ್ತ ತಾಯಿಯಷ್ಟೇ ಕಾಳಜಿಯಿಂದ ಸುಮಾರು 12-13 ವರ್ಷಗಳ ಬಾಲ್ಯವನ್ನು ತಿದ್ದಿ ತೀಡಿದ, ಹಾಡು, ನೃತ್ಯ, ಭಾಷಣ ಹೀಗೆ ಪ್ರತಿಯೊಂದರಲ್ಲೂ ನನ್ನನ್ನು ಸ್ಟೇಜಿನ ಮೇಲೆ ತೆಗೆದುಕೊಂಡು ಹೋಗಿ ನಿಲ್ಲಿಸಿ ತಾನೇ ಬಹುಮಾನ ಗೆದ್ದವನಂತೆ ಖುಷಿಪಟ್ಟ, ಬಡತನಕ್ಕಾಗಿ ಬೆಂಗಳೂರು ಸೇರಿದರೂ ಮರೆಯದ ಮಮತೆಯಿಂದ ನನಗಾಗಿ ಬಟ್ಟೆಗಳ ಮೂಟೆಯನ್ನೇ ಹೊತ್ತು ತಂದ ಮುಕಾಂಬಕ್ಕನ (ಅಪ್ಪಕ್ಕನ) ಬಗ್ಗೆ ಬರೆಯುವುದೆಂದರೆ ಅದು ನಿಜವಾಗಿಯೂ ಅಮೃತ ಘಳಿಗೆಯೇ.
ಮುಕಾಂಬಕ್ಕ ನಮ್ಮ ನೆರೆಮನೆಯ ಅಕ್ಕ. ಮಹಾದೇವಿ, ಸವಿತಾ, ಶಾಂತಿ, ಮುಕಾಂಬಾ ಎಂಬ ನಾಲ್ಕು ಹೆಣ್ಣುಮಕ್ಕಳು ಹಾಗೂ ರಾಮಚಂದ್ರ ಎಂಬ ತಮ್ಮ ಹೀಗೆ ಐವರು ಮಕ್ಕಳು ದಿ|| ಸುಬ್ರಾಯ ಭಟ್ಟ ಹಾಗೂ ಹೊನ್ನಿ ದಂಪತಿಗೆ. ನಾನು ಮನೆಗಿಂತ ಹೆಚ್ಚು ಅವರ ಮನೆಯಲ್ಲೇ ನನ್ನ ಬಾಲ್ಯವನ್ನು ಕಳೆದಿದ್ದು. ಎಷ್ಟು ಹೊತ್ತಿಗೂ ಅವರದೇ ಮನೆಯಲ್ಲಿರುತ್ತಿದ್ದೆ. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿ ಊಟವೂ ಒಮ್ಮೊಮ್ಮೆ ಅಲ್ಲೇ ಆಗುತ್ತಿತ್ತು. ಆಟ, ಊಟ, ಪಾಠ ಎಲ್ಲವೂ ಮುಕಾಂಬಕ್ಕನ ಸಂಗಡವೇ. ಮುಕಾಂಬಕ್ಕನಿಗೆ ನಾನಂದರೆ ಆಯ್ತು ಅವರ ಮನೆಯಲ್ಲಿ ಎಲ್ಲರೂ ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದರಾದರೂ ಅಪ್ಪಕ್ಕನಿಗೆ ಹತ್ತು ಪಟ್ಟು ಹೆಚ್ಚು ಪ್ರೀತಿ ನನ್ನ ಮೇಲೆ. ನನಗೆ ಸ್ನಾನ ಮಾಡಿಸುವುದು, ಡ್ರೆಸ್ ಮಾಡುವುದು, ತಲೆಗೂದಲನ್ನು ಒಪ್ಪವಾಗಿ ಬಾಚುವುದು, ಪೌಡರ್ ಹಚ್ಚುವುದು, ಹಾಡು, ಸ್ತೋತ್ರ ಹೇಳಿಕೊಡುವುದು, ಅಕ್ಷರಾಭ್ಯಾಸ ಮಾಡಿಸುವುದು, ಭಾಷಣ ಬರೆದುಕೊಟ್ಟು ಹೇಳಿಸುವುದು, ತಾನು ಹೋದಲ್ಲೆಲ್ಲ ನನ್ನನ್ನೂ ಕರೆದುಕೊಂಡು ಹೋಗುವುದು, ಒಂದಾ ಎರಡಾ ಎಲ್ಲವೂ ಅವಳದ್ದೇ. ನಾನತ್ತರೆ ತಾನೂ ಅಳುವ, ನನ್ನನ್ನು ನಗಿಸಿ ತಾನೂ ನಗುವ ಅಪ್ಪಕ್ಕಳ ಮುಗಿಯದ ಮಮತೆ ಜೀವನ ಪೂರ್ತಿ ಮರೆಯುವುದೇ ಅಲ್ಲ.
ಮುಕಾಂಬಕ್ಕನಿಗೆ ನನ್ನನ್ನೂ ಅಕ್ಕನನ್ನೂ ತುಂಬಾ ಚೆನ್ನಾಗಿ ಓದಿಸಿ ಸಮಾಜದಲ್ಲಿ ತಲೆ ಎತ್ತಿ ಬಾಳುವಂತೆ ಮಾಡಬೇಕೆಂಬ ಕಾಳಜಿ. ಶಾಲೆಯ ವಾರ್ಷಿಕೋತ್ಸವ ಬಂದರೆ ಸಾಕು….ಅಕ್ಕನ ನೃತ್ಯ….ನನ್ನ ಕೃಷ್ಣನ ವೇಷ…..ಇರುವ ಚಿಕ್ಕ ಪುಟ್ಟ ಕೂದಲನ್ನೇ ಎಳೆದು ಜಗ್ಗಿ ಕಟ್ಟಿ ಜುಟ್ಟ ಮಾಡಿ ಅದಕ್ಕೊಂದು ನವಿಲುಗರಿ ಸಿಕ್ಕಿಸಿ ಕೊಳಲು ಹಿಡಿದು ಆಚೀಚೆ ಅಲುಗಾಡದಂತೆ ನನ್ನನ್ನು ನಿಲ್ಲಿಸುತ್ತಿದ್ದಳು. ನಮ್ಮಕ್ಕ ನನ್ನ ಸುತ್ತಲೂ ಕುಣಿಯುತ್ತಿದ್ದಳು. ? ಮಜವೋ ಮಜಾ. ಅವಳದ್ದಾದ ಸ್ವಲ್ಪ ಹೊತ್ತಿನ ನಂತರ ನಂದೂ ಡಾನ್ಸ…..ಈಗಿನ ಹಾಗೆ c.d ಅಥವಾ mp3 ಹಾಕಿ ಕುಣಿಯುವುದಲ್ಲ ಆವಾಗ. ಮುಕಾಂಬಕ್ಕ ಮೈಕಿನಲ್ಲಿ ಹಾಡು ಹೇಳುತ್ತಿದ್ದಳು. ನಾವು ನೃತ್ಯ ಮಾಡುತ್ತಿದ್ದೆವು. ಅದರ ಸಂಪೂರ್ಣ ತಯಾರಿ ಅವಳದ್ದೇ. ಒಮ್ಮೊಮ್ಮೆ ಅದಕ್ಕೆ ಬೇಕಾದ ರಂಗಪರಿಕರಗಳಿಗೂ ಆಕೆ ನಮ್ಮಪ್ಪನಿಂದ ಹಣ ಪಡೆಯಲಿಲ್ಲ.
ಮುಕಾಂಬಕ್ಕ ಹೇಳಿದ ಗೆರೆಯನ್ನು ನಾವು ದಾಟುತ್ತಿರಲಿಲ್ಲ. ಅವರ ಮನೆಯೇ ನಮಗೆ ಮೊದಲ ಪಾಠಶಾಲೆ. ಸುಬ್ರಾಯಣ್ಣ ನನ್ನನ್ನು ಆಗಾಗ ಅರೆಅಂಗಡಿಗೆ ಕಿರಾಣಿ ಸಾಮಾನು ತರಲು ಕರೆದುಕೊಂಡು ಹೋಗುವವರು. ಅವರ ಸಂಗಡ ಹೋದರೆ ನನಗೊಂದು ಆಯ್ಸಕ್ರೀಮು ಫ್ರೀ. ಅವರ ಮನೆಯ ಚೊಕಲೇಟು ಡಬ್ಬ, ಗೋಲಿ ಇಡುವ ಗೂಡು, ಹೀಗೆ ಪ್ರತಿಯೊಂದು ನನಗೆ ಚಿರ ಪರಿಚಿತ.
ಎಲ್ಲೇ ಸ್ಪರ್ಧೆಗಳಿರಲಿ ಅಪ್ಪಕ್ಕ ನನ್ನನ್ನು ತಯಾರಿ ಮಾಡಿಸಿಕೊಂಡು ತಾನೇ ಸ್ವತಃ ಬಸ್ಸು ಹಿಡಿದುಕೊಂಡು ಕರೆದುಕೊಂಡು ಹೋಗುತ್ತಿದ್ದಳು. ಅವಳ ಪ್ರಯತ್ನ….ನನಗೆ ಬಹುಮಾನ. ಅವಳಿಗಾದಿನ ಹಬ್ಬವೋ ಹಬ್ಬ. ಬೇರೆಯವರ ಮನೆಯ ಮಕ್ಕಳನ್ನು ಈ ಪರಿ ಬೆಳೆಸುವುದೆಂದರೆ ಅದು ಬಹಳ ಅಪರೂಪ ಎಂದೆನಿಸುತ್ತದೆ ನನಗೆ.
ಯಾವುದೇ ಧಾರ್ಮಿಕ ಕಾರ್ಯ ನಡೆಯಲಿ ಭೋಜನಕ್ಕೆ ಗುಳಿತಾಗ ಗ್ರಂಥ ( ಶ್ಲೋಕ ) ಹೇಳಿಸುತ್ತಿದ್ದಳು. ನನಗೆ ಎದೆಯೊಳಗೆ ಪುಕು….ಪುಕು….. ಅವಳ ಕಣ್ಣಿಗೆ ಹೆದರಿ ದೊಡ್ಡದಾಗಿ ಹೇಳಿ ಮುಗಿಸುತ್ತಿದ್ದೆ ನಾನು. ಆಮೇಲೆ ಪ್ರಶಂಸೆಗಳ ಸುರಿಮಳೆ ಬಂದಾಗ ನನಗಿಂತ ಅವಳಿಗೆ ಹೆಚ್ಚು ಖುಷಿ. ಹೀಗೆ ನನ್ನ ಸಂಪೂರ್ಣ ಏಳ್ಗೆಗೆ ಕಾರಣಳಾದ ಅಪ್ಪಕ್ಕ ಒಂದಿನ ಇದ್ದಕ್ಕಿದ್ದಂತೆ ಬೆಂಗಳೂರಿಗೆ ಹೊರಟು ನಿಂತುಬಿಟ್ಟಳು.
ಬಡತನ ಹಾಗೂ ಸ್ವಾಭಿಮಾನ ಎರಡೂ ಕಾರಣಗಳಿಂದ ಗಾರ್ಮೆಂಟ್ಸ ಕೆಲಸ ಹಿಡಿದು ಮುಕಾಂಬಕ್ಕ ಬೆಂಗಳೂರಿನಲ್ಲಿ ಖಾಯಂ ನೆಲೆ ನಿಂತು ಬಿಟ್ಟಳು. ಅಲ್ಲಿದ್ದರೂ ನಮ್ಮ ಮೇಲಿನ ಪ್ರೀತಿ ಅವಳಿಗೆ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಅಲ್ಲಿದ್ದೂ ಕೆಲವೊಮ್ಮೆ ಅಂತರದೇಶೀಯ ಪತ್ರಗಳಲ್ಲಿ ನನಗೆ ಭಾಷಣ ಬರೆದು ಕಳುಹಿಸುತ್ತಿದ್ದಳು. ಮನೆಗೆ ಬರುವಾಗಂತೂ ನನಗೆ ಎರಡು ಮೂರು ಜೊತೆ ಅಂಗಿ. ಸಿಹಿ ಸಿಹಿ ತಿಂಡಿ. ಅಪ್ಪಕ್ಕಳ ಈ ಪ್ರೀತಿ ಸಾಯುವವರೆಗೂ ಮರೆಯುವಂತಹುದೇ ಅಲ್ಲ. ಎಷ್ಟೋ ಜನ ಎಷ್ಟೋ ರೀತಿಯಾಗಿ ಅವಳಿಗೆ ಲೇವಡಿ ಮಾಡಿದರೂ ಅಪ್ಪಕ್ಕ ತಾನು ದುಡಿದ ಅಲ್ಪ ಸ್ವಲ್ಪ ಹಣದಲ್ಲೂ ನಮಗಾಗಿ ಏನಾದರೂ ತಂದು ಕೊಡುತ್ತಿದ್ದಳು.
ಇದೀಗ ನಮ್ಮ ಅಪ್ಪಕ್ಕ ಬೆಂಗಳೂರಿನಲ್ಲಿ ಮನೆ ಮಾಡಿ ಸುಖವಾಗಿದ್ದಾಳೆ. ಬಾವ ಚಂದ್ರಶೇಖರ್ ಖ್ಯಾತ ಪುರೋಹಿತರು. ಪ್ರತಿಭಾವಂತ ಮಗ ಗೌತಮ್ ಪಿ.ಯು.ಸಿ ಓದುತ್ತಿದ್ದಾನೆ. ಮುಕಾಂಬಕ್ಕನಿಗೆ ನನ್ನ ಮದುವೆಯ ಆರತಕ್ಷತೆಯ ದಿನ ಸಾರ್ವಜನಿಕವಾಗಿ ಸನ್ಮಾನಿಸಿ ಸ್ವ ಹಸ್ತಾಕ್ಷರವಿರುವ ಸನ್ಮಾನ ಪತ್ರದಲ್ಲಿ ನನ್ನೆಲ್ಲಾ ನೆನಪುಗಳನ್ನು ಭಟ್ಟಿ ಇಳಿಸಿ ನೀಡಿದ್ದೇನೆ.
ಗಿಡಕ್ಕೆ ನೀರು ಗೊಬ್ಬರ ಹಾಕುವವರು ಇದ್ದರೆ ತಾನೆ ಗಿಡ ಹುಲುಸಾಗಿ ಬೆಳೆಯುವುದಕ್ಕೆ ಸಾಧ್ಯ. ಹಾಗೆಯೇ ನನ್ನ ಈವರೆಗಿನ ಸಂಪೂರ್ಣ ಬೆಳವಣಿಗೆಯ credit ಅದು ಅಪ್ಪಕ್ಕನದೇ. ಅವಳಿಗೆ ನಾನಿಷ್ಟು ಬೆಳೆದು ದೊಡ್ಡವನಾದರೂ ಚಿಕ್ಕ ಮಗುವಿನಂತೆ. ಈಗಲೂ ಗದರುತ್ತಾಳೆ. ಮುನಿಸಿಕೊಳ್ಳುತ್ತಾಳೆ. ಮತ್ತೆ ಕರಗಿ ನೀರಾಗುತ್ತಾಳೆ.
ದೇವರಿತ್ತ ಅಕ್ಕ ಅವಳು. ಅವಳು ಹೇಳಿಕೊಟ್ಟ ಮುದಾಕರಾತ್ತ ಮೋದಕಂ, ನಮಂತ್ರಂ ನೋ ಯಂತ್ರಂ ಶ್ಲೋಕಗಳನ್ನು ಈವರೆಗೂ ನಾನು ಸಂಜೆ ಪಠಿಸುತ್ತೇನೆ. ಅವರ ಮನೆಯಲ್ಲಿ ಒಲೆಯ ಮುಂದೆ ಕುಳಿತು ಚಳಿ ಕಾಸಿದ್ದು, ಅವರ ಮನೆಯ ಅಜ್ಜಿ (ಪುಟ್ಟತ್ತೆ) ಕೊಟ್ಟ ಅವಲಕ್ಕಿ ತಿಂದಿದ್ದು, ಎಲ್ಲವೂ ನನಗೆ ಸ್ಫಟಿಕ ಸ್ಪಷ್ಟವಾಗಿ ನೆನಪಿದೆ. ಅವಳು ಹಾಕಿಕೊಟ್ಟ ಗೆರೆಯನ್ನು ನಾನಿವತ್ತಿನವರೆಗೂ ದಾಟಿದ್ದಿಲ್ಲ. ಕಾಳಜಿಯ ಕಣ್ಣುಗಳಿಂದ ನನ್ನನ್ನು ಬೆಳೆಸಿ ದೊಡ್ಡಮಾಡಿದ ಅವಳ ಮುಂದೆ ನಾನ್ಯಾವತ್ತೂ ದೊಡ್ಡಸ್ತಿಕೆ ತೋರಿಸುವುದಿಲ್ಲ. ಅವಳು ಚೆನ್ನಾಗಿರಬೇಕೆಂಬುದೇ ನನ್ನ ಮೊಟ್ಟ ಮೊದಲ ಪ್ರಾರ್ಥನೆ. ಅವಳು ನಂಬಿದ ಇಡಗುಂಜಿ ಗಣಪನೇ ನನಗೂ ಇಷ್ಟದೈವ. ಅವಳಿಗೆ ಶ್ರೇಯಸ್ಸಾಗಬೇಕು. ಮಗ ಗೌತಮ್ ಕೀರ್ತಿಶಾಲಿಯಾಗಿ ಅಪ್ಪಕ್ಕನಿಗೆ ಸಂತೋಷ ತರಬೇಕು.
ಸದ್ಗುರು ಶ್ರೀಧರರ ಆಶೀರ್ವಾದ ಮುಕಾಂಬಕ್ಕ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಮುಕಾಂಬಕ್ಕನಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
??????⚫⚪???????⚫⚪?????