ಗುರುಗಳ ಮುಂದೆ ಒಂದಷ್ಟು ಜನ ಕುಳಿತಿದ್ದರು. ಗುರುಗಳು ಸಭೆಯನ್ನು ನೋಡಿದರು. ಅಲ್ಲಿ ನಿರಾಸೆಯ ಮುಖಗಳೇ ಹೆಚ್ಚು ಕಂಡು ಬಂದವು. ಗುರುಗಳು ಒಂದು ಬಿಳಿ ಹಾಳೆ ತೆಗೆದುಕೊಂಡು ಮಧ್ಯದಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆ ಇಟ್ಟರು. ಆ ಬಿಳಿ ಹಾಳೆಯನ್ನು ಸಭೆಗೆ ತೋರಿಸಿ ಒಬ್ಬನಲ್ಲಿ ಕೇಳಿದರು. ” ಇಲ್ಲಿ ಏನು ಕಾಣುತ್ತಿದೆ?” ಎಂದು. ಆತ ಹೇಳಿದ “ಕಪ್ಪು ಚುಕ್ಕೆ ಕಾಣುತ್ತಿದೆ” ಎಂದು. ಹಾಗೆ ಇನ್ನೊಬ್ಬನಲ್ಲಿ ಕೇಳಿದರು ಅವನು ಹಾಗೇ ಹೇಳಿದ. ಇಡೀ ಸಭೆ ಕಪ್ಪು ಚುಕ್ಕೆ ಕಾಣುತ್ತಿದೆ ಎಂದಿತು. ಅದು ನಿರಾಶವಾದಿಗಳ ಸಭೆ ಎಂಬುದನ್ನು ಗುರುಗಳು ಅರ್ಥೈಸಿಕೊಂಡರು. ಅವರು ತೋರಿಸಿದ ಬಿಳಿಹಾಳೆಯಲ್ಲಿ ಇರುವುದು ಒಂದು ಕಪ್ಪು ಚುಕ್ಕೆ. ಅದೊಂದು ಮಾತ್ರ ಕಪ್ಪು ಸುತ್ತಲಿರುವ ಪೂರ್ಣ ಭಾಗ ಬಿಳಿ. ಆದರೆ ಸಭೆಯಲ್ಲಿದ್ದವರು ಆ ಸಣ್ಣ ಕಪ್ಪು ಭಾಗವನ್ನು ಗುರುತಿಸಿದ್ದರು. ಆದರೆ ಅದಕ್ಕಿಂತ ಎಷ್ಟೋ ಪಟ್ಟು ದೊಡ್ಡದಾದ ಬಿಳಿ ಭಾಗವನ್ನು ಗುರುತಿಸಲು ಅಸಮರ್ಥರಾದರು. ಕೆಲವೊಮ್ಮೆ ಹೀಗೇ ಆಗುತ್ತದೆ. ಇಲ್ಲಿ ಕಪ್ಪು ಬಿಳಿಯ ಯುದ್ಧದಲ್ಲಿ ಬಿಳಿಯೇ ಗೆಲ್ಲಬೇಕು ಆದರೆ ನೋಡುವ ದೃಷ್ಟಿ ಸೋತಾಗ ಬಿಳಿ ಸೋಲುತ್ತದೆ. ನಾವೆಲ್ಲಾ ಕಣ್ತೆರೆಯಬೇಕು. ನೋಡುವ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕು.
ನಮ್ಮ ಬದುಕಿನಲ್ಲಿ ಬಿಳಿ ಬೇಕಾದಷ್ಟಿದೆ. ಸಕಾರಾತ್ಮಕ ದೃಷ್ಟಿಯಿಂದ ನೋಡಬೇಕಷ್ಟೇ. ದೇವರು ನಮಗೆ ಬೇಕಾದಷ್ಟು ಒಳಿತನ್ನು ಕೊಟ್ಟಿದ್ದಾನೆ. ಆದರೆ ನಾವು ಒಳಿತನ್ನು ಬಿಟ್ಟು ಕೆಡುಕನ್ನೇ ನೋಡಿ ದೇವರನ್ನು ನಿಂದಿಸುತ್ತೇವೆ. ಆದರೆ ಕಪ್ಪು ಬರೆದವ ದೇವನಲ್ಲ. ನಮ್ಮ ಬದುಕಿನಲ್ಲಿ ಕಪ್ಪು ಬರೆದವರು ನಾವು….! ನಮ್ಮೊಳಗಿನ ಕಪ್ಪನ್ನು ತೊಳೆಯುವ ಪ್ರಯತ್ನ ದೇವನದ್ದು. ಅವನು ಅದನ್ನು ದುಃಖದ ರೂಪದಲ್ಲಿ ನಮಗೆ ನೀಡುತ್ತಾನೆ. ಆದರೆ ಅದನ್ನು ನಾವು ಅರ್ಥೈಸಿಕೊಳ್ಳದೇ ತಪ್ಪು ತಿಳಿದುಕೊಳ್ಳುತ್ತೇವೆ.
ಅವನೊಬ್ಬ ನೂರು ಕುರಿಗಳ ಮಾಲೀಕ. ಒಂದು ದಿನ ಆಕಸ್ಮಿಕವಾಗಿ ಒಂದು ಕುರಿ ಕಳೆದು ಹೋಯ್ತು. ಅವನು ಅದನ್ನು ಹುಡುಕುತ್ತ ಹೊರಟ. ತೊಂಬತ್ತೊಂಬತ್ತು ಕುರಿಗಳನ್ನು ಬಿಟ್ಟು ಆ ಒಂದು ಕುರಿಯ ಹಿಂದೆ ಹೋದ. ಕೊನೆಯಲ್ಲಿ ಹುಡುಕುತ್ತಿದ್ದ ಕುರಿಯೂ ಸಿಗಲಿಲ್ಲ… ಬಿಟ್ಟು ಹೋದ ತೊಂಬತ್ತೊಂಬತ್ತೂ ಸಿಗಲಿಲ್ಲ. ಅವನು ಎಲ್ಲವನ್ನೂ ಕಳೆದುಕೊಂಡು ದಾರಿ ಮಧ್ಯದಲ್ಲಿ ನಿಂತಿದ್ದ .
ನಮ್ಮ ಬದುಕೂ ಹಾಗೆಯೇ… ಇದ್ದುದರಲ್ಲಿ ತೃಪ್ತಿ ಪಡದೆ ಮತ್ತೇನನ್ನೋ ಹುಡುಕುತ್ತಾ ಹೋಗುತ್ತೇವೆ. ಕೊನೆಗೆ ಎಲ್ಲವನ್ನೂ ಕಳೆದು ಕಳೆದುಕೊಳ್ಳುತ್ತೇವೆ. ಬದುಕಿನ ನೆಮ್ಮದಿಯನ್ನು ಕೂಡ.
ನಿರಾಸೆ ಅದು ನಮ್ಮ ದೊಡ್ಡ ಶತ್ರು. ನಾವು ಯಾವಾಗಲೂ ತಲೆಯ ಮೇಲೆ ನಿರಾಸೆಯ ಮೊಟ್ಟೆಯನ್ನು ಹೊತ್ತೇ ತಿರುಗುತ್ತೇವೆ. ಒಳ್ಳೆಯದಾಗುವುದು ನನ್ನ ಹಣೆಯಲ್ಲಿ ಬರೆದಿಲ್ಲ…. ನಾನು ಉದ್ದಾರವಾಗುವುದಿಲ್ಲ. ಎನ್ನುವ ನಿರಾಶಾವಾದದಲ್ಲೇ ಕಾಲ ಕಳೆಯುತ್ತೇವೆ. ಆದರೆ ಅಲ್ಲೇ ಸ್ವಲ್ಪ ಮುಂದೆ ಇರುವ ಭರವಸೆಯ ಬೆಳಕನ್ನು ನೋಡುವುದೇ ಇಲ್ಲ. ಅದಕ್ಕೆ ಕಗ್ಗದ ಕವಿ ಹೇಳಿದ್ದು ಕೊರತೆಯೊಂದರ ನೀನು ನೆನೆನೆನೆದು ಕೊರಗಿ, ಧರೆಯೆಲ್ಲವನು ಶಪಿಸಿ, ಮನದಿ ನರಕವ ನಿಲಿಸಿ, ನರಳುವುದು ಬದುಕೇನೋ? ಎಂದು. ಒಳ್ಳೆಯ ವಿಷಯಗಳನ್ನು ಬಿಟ್ಟು ಕೊರತೆಯನ್ನೇ ಎಣಿಸಿ ಕೊಳ್ಳುತ್ತಾ ಕುಳಿತರೆ, ಆ ಕೊರತೆಗಾಗಿ ಜಗತ್ತನ್ನೆಲ್ಲ ಶಪಿಸಿದರೆ , ಮನಸ್ಸಿನಲ್ಲಿ ನರಕವನ್ನು ಸೃಷ್ಟಿ ಮಾಡಿಕೊಂಡರೆ, ನರಳುತ್ತಾ ನರಳುತ್ತಾ ಜೀವನ ಸಾಗಿಸಿದರೆ, ಅದು ಒಂದು ಬದುಕು ಎನ್ನಿಸಿಕೊಳ್ಳಲು ಸಾಧ್ಯವೇ? ಎಂಬ ಪ್ರಶ್ನೆ ಕವಿಯದ್ದು.
ನಾವು ಇರುವುದರಲ್ಲೇ ತೃಪ್ತಿ ಪಡೆದಿರುವುದರಿಂದ ಬದುಕಿನ ನೆಮ್ಮದಿಯನ್ನು ಹಾಳು ಮಾಡಿಕೊಂಡಿದ್ದೇವೆ. ಗೋಪಾಲಕೃಷ್ಣ ಅಡಿಗರ ಕವನದ ಸಾಲು ಹೇಳುವುದು ಇದನ್ನೇ.. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂದು. ಈ ಸಾಲು ನೆಮ್ಮದಿ ಹಾಗೂ ಅತೃಪ್ತಿ ಎರಡನ್ನೂ ಪ್ರತಿನಿಧಿಸುತ್ತದೆ. ಸಾಂಸಾರಿಕ ಜೀವನದಲ್ಲಿ ಇದು ಅತೃಪ್ತಿಯನ್ನು ಸೂಚಿಸಿದರೆ… ಒಬ್ಬ ಆಧ್ಯಾತ್ಮಿಕ ಸಾಧಕನ ಜೀವನದಲ್ಲಿ ನೆಮ್ಮದಿಯನ್ನು ಸೂಚಿಸುತ್ತದೆ.
ನಾವು ಬಿಳಿಯನ್ನು ನೋಡೋಣ. ಬದುಕಿನ ಒಳಿತನ್ನು…. ಶುಭವನ್ನು ಗಮನಿಸೋಣ. ಇಲ್ಲದಿರುವುದನ್ನು ನೆನೆಯುತ್ತಾ ಕೊರಗುವ ಬದಲು ಇದ್ದುದರಲ್ಲಿಯೇ ನೆಮ್ಮದಿಯನ್ನು ಪಡೆಯೋಣ. ಎಲ್ಲವೂ…. ಎಲ್ಲರಿಗೂ… ಯಾವಾಗಲೂ ಇರಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಮರೆಯದಿರೋಣ.
✍️ ಡಾ.ರವೀಂದ್ರ ಭಟ್ಟ ಸೂರಿ.