ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀಮತಿ ಗಿರಿಜಾ ನಾಯಕ

ಎಲ್ಲರನ್ನೂ ಅಳತೆ ಮಾಡುವುದಕ್ಕಾಗಿಯೇ ನಮ್ಮ ಜನ್ಮ ಇದ್ದದ್ದಲ್ಲ. ಅವ ಹಾಗೆ ಸರಿಯಿಲ್ಲ… ಇವ ಹೀಗೆ ಸರಿಯಿಲ್ಲ‌…ಎಂದು ಆ ಸಮಯಕ್ಕೆ ಅಂದುಕೊಂಡರೂ ಬಂಡಿ ಓಡುತ್ತಲೇ ಇರಬೇಕು. ರಸ್ತೆ ಸ್ವಲ್ಪ ಏರು ತಗ್ಗು ಇದ್ದೇ ಇರುತ್ತದೆ. ಅದನ್ನು water level ಇಟ್ಟು ಮಾಡಿರುವುದಿಲ್ಲ.? ಕೆಲವೊಮ್ಮೆ ಅವರು ನಮ್ಮನ್ನು ಮಾತನಾಡಿಸುತ್ತಾರೆಂದು ಕಾಯುತ್ತಾ ಕುಳಿತುಕೊಳ್ಳುವುದಲ್ಲ.‌ ಒಮ್ಮೊಮ್ಮೆ ನಾವೇ ಹೋಗಿ ಮಾತನಾಡಿಸಿಬಿಡಬೇಕು. ಗಂಟೇನು ಹೋಗುತ್ತದೆ ಹೇಳಿ. ? ಕೆಲವೊಬ್ಬರು ಮಾತನಾಡಿದರೂ ಧಿಮಾಕು ತೋರಿಸುವವರಿರುತ್ತಾರೆ. ಅಸಡ್ಡೆ ಮಾಡುವವರೂ ಇರಬಹುದು ಆ ಲಕ್ಷಣ ಕಂಡರೆ ದೂರವೇ ಉಳಿದು ಅವಶ್ಯಕತೆ ಬಿದ್ದರೆ ಮಾತ್ರ ಚಿಕ್ಕದಾಗಿ ಮುಗುಳುನಗೆ ಬೀರಬೇಕು. ? ಸಾಮಾಜಿಕ ಅಂತರ ಕಾದುಕೊಳ್ಳಬೇಕು. ? ಒಂದೇ ದಿನದ ಆತ್ಮೀಯ ಮಾತು ಬದುಕಿನ ಜೊತೆ ಬಹಳಷ್ಟು ಕಾಲ ಮುಂದುವರಿಯುತ್ತದೆಂದು ಅಂದುಕೊಂಡವನಲ್ಲ ನಾನು. ಶ್ರೀಮತಿ ಗಿರಿಜಾ ನಾಯಕ ನನ್ನ ಬದುಕಿನ ಮಾರ್ಗ ಮಧ್ಯೆ ಸಿಕ್ಕ ಅಪರೂಪದ ರತ್ನ.
ಮಾಸ್ತರರಿಗೂ ಈ ಇಲೆಕ್ಷನ್ನಿಗೂ ಅವಿನಾಭಾವ ನಂಟು. ಒಬ್ಬ ಶಿಕ್ಷಕ/ಶಿಕ್ಷಕಿ ತನ್ನ ವೃತ್ತಿ ಜೀವನದಲ್ಲಿ ಸುಮಾರು 50-60 election duty ಮಾಡಬೇಕಾಗಿ ಬರಬಹುದು. ಜನನಾಯಕನನ್ನು ಆರಿಸುವ ಜವಾಬ್ದಾರಿಯುತ ಕೆಲಸಕ್ಕೆ ಎರಡು ಮೂರು ದಿನ ಅವಿಶ್ರಾಂತವಾಗಿ ದುಡಿಯುವುದು ತುಸು ಗಂಭೀರವೇ. ಯಾವುದೋ ಊರು, ಯಾವುದೋ ಶಾಲೆ, ಯಾವ್ಯಾವುದೋ ವಿಭಿನ್ನ ಜನರ ಜೊತೆ ಬೆರೆತು ನಿರ್ವಿವಾದವಾಗಿ election duty ಮುಗಿಸಿ ಬರುವುದು ಸುಲಭದ ಮಾತಲ್ಲ. ರಾತ್ರಿಯಿಡೀ ಕಚ್ಚುವ ಸೊಳ್ಳೆಗಳು, ತಣ್ಣೀರ ಸ್ನಾನ, ನಿದ್ದೆಯಿಲ್ಲದ ರಾತ್ರಿ, ಗಬಗಬನೆ ಮಾಡುವ ಊಟ, ತಿಂಡಿಗಳು, ರಟ್ಟು, ಪಿನ್, ಇಲೆಕ್ಷನ್ ಪೆಟ್ಟಿಗೆ, ಸೀಲು..ರಬ್ಬರು…ಸ್ಕೇಲು, ಅರಗು, ಕವರು, ನೀರ ಬಾಟಲಿ, ಅಳಿಸದ ಶಾಯಿ ಲೆಕ್ಕ…..ಪಕ್ಕಾ…ಎನ್ನುವ ಪ್ರಿಸೈಡಿಂಗ್ ಆಫೀಸರ್…..ಮಜವೋ ಮಜಾ. ? ಒಂದು ದಿನದಲ್ಲಿ ಜೊತೆಗೂಡುವ ಐದಾರು ಜನ ಚುನಾವಣಾ ಅಧಿಕಾರಿಗಳು ನೆಂಟರಲ್ಲ, ಬಂಟರಲ್ಲ, ಅವರ ಕೆಲಸ‌ ಅವರವರು ಸರಿಯಾಗಿ ಮಾಡಿದರೆ ಸಾಕು. ಒಂದು ದಿನದ ಕುಟುಂಬ ಕೆಲಸ ಮುಗಿದ ತಕ್ಷಣ ದಿಕ್ಕಾಪಾಲಾಗುತ್ತದೆ. ಅವರವರ ಬಸ್ ಎಲ್ಲಿದೆ ಎಂದು ಹುಡುಕುತ್ತಾ ಟಾ ಟಾ ಬೈ ಬೈ ಹೇಳಿದರೆ ಮುಗಿಯಿತು. ಕೊನೆಗೆ ಮನೆಗೆ ಬಂದು ಕೆಟ್ಟುಹೋದ ಹೊಟ್ಟೆಯನ್ನೂ, ನೋಯುತ್ತಿರುವ ರಟ್ಟೆಯನ್ನು ಸರಿಮಾಡುವಷ್ಟರಲ್ಲಿ ಸಿಕ್ಕಿದ ಜನರೂ ಮರೆತು ಹೋಗುತ್ತಾರೆ. ಅವರ phone number ಆ ಕ್ಷಣಕ್ಕೆ delete ಆಗುತ್ತದೆ. ಅಲ್ಲಿ‌ ತೆಗೆದುಕೊಂಡ selfi ಗಳೆಲ್ಲ recycle bin ಸೇರುವುದಕ್ಕೆ ಬಹಳ ಸಮಯ ಹಿಡಿಯುವುದಿಲ್ಲ. ಆದರೆ ನನಗೆ ಈವರೆಗೆ ಸಿಕ್ಕ election duty ಗಳಲ್ಲಿ ಅತಿಯಾಗಿ ನೆನಪಿರುವ ಮತ್ತು ಈವರೆಗೂ ಬಂಧ ಬಿಡದ ಕೆಲವೇ ಕೆಲವು ಜನರಲ್ಲಿ ಗಿರಿಜಾ ಮೇಡಂ ಒಬ್ಬರು.
ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಅಂಗಡಿಬೈಲಿನ ಗಿರಿಜಾ ನಾಯಕರು ಅಮ್ಮನ ಪ್ರೀತಿ ತೋರುವ ಮಮತಾಮಯಿ. ಸಿಕ್ಕ ಒಂದೇ ಒಂದು ದಿನದಲ್ಲಿ ನಾವು ಇಷ್ಟು ಆತ್ಮೀಯವಾಗಿದ್ದಕ್ಕೆ ನಿಜವಾಗಿಯೂ ನನಗೆ ಕಾರಣ ಗೊತ್ತಿಲ್ಲ. ಒಮ್ಮೆ ನಮ್ಮ ತಂದೆ ತಾಯಿಯವರನ್ನು ಕರೆದುಕೊಂಡು ಕನಕನಹಳ್ಳಿಗೆ ಹೋದಾಗ ದಾರಿ ಮಧ್ಯ ಗಿರಿಜಾ ಮೇಡಂ ನೆನಪಾದರು. ತಕ್ಷಣ ಅವರಿಗೆ ಫೋನಾಯಿಸಿದೆ. ದಟ್ಟ ಕಾನನದ ಮಧ್ಯವಿರುವ ಅವರ ಮನೆಯನ್ನು ಹುಡುಕಿಕೊಂಡು ಹೋದೆ. ದಾರಿಯುದ್ದಕ್ಕೂ ನಮ್ಮ ತಂದೆಯವರು ತಿರುಗಿ ಹೋಗೋಣ. ತಿರುಗಿ ಹೋಗೋಣ. ಅಂಗಡಿಬೈಲ ತುಂಬಾ ದೂರವಾಗುತ್ತದೆ…..ಎಂದು ಹತ್ತಾರು ಬಾರಿ ಹೇಳಿದರೂ ನಾನು ಅವರನ್ನೊಮ್ಮೆ ಕಂಡು ಬರಲೇ ಬೇಕೆಂದು ಹೊರಟಿದ್ದೆ. ನಮ್ಮಪ್ಪ ದಾರಿ ಮಧ್ಯೆಯೇ ನೀನೇನಾದರೂ election ನಿಲ್ಲುವವನಿದ್ದೀಯಾ?! ನೀನು ಸಂಪಾದಿಸಿದ ಜನ ಸಾಕು ಎಂದು ತಮಾಷೆ ಮಾಡಿದ್ದರು. ಆದರೂ ಗಿರಿಜಾ ಬಾಯೋರ ಪ್ರೀತಿ ತುಂಬಿದ ಮಾತುಗಳು ನನ್ನನ್ನು ಅವರ ಮನೆಯವರಗೂ ಸೆಳೆದುಕೊಂಡು ಹೋಯ್ತು.
ಹೋಗಿ ತಲುಪಿದ್ದೇ ತಲುಪಿದ್ದು…ಗಿರಿಜಾ ಬಾಯೋರು ನಮ್ಮ ಸ್ವಾಗತಕ್ಕಾಗಿ ಗೇಟಿನ ಬಳಿಯೇ ಬಂದು ಕಾಯುತ್ತಿದ್ದರು. ಗೇಟಿನ ಬಳಿಯೇ ನಿಂತಿದ್ದರೂ ಪರಿಚಯದವರು ಕಂಡ ತಕ್ಷಣ ಓಡಿ ಹೋಗಿ ಬಾಗಿಲು ಹಾಕಿಕೊಳ್ಳುವ ಹತ್ತಾರು ಜನರನ್ನು ಮೊದಲೇ ನೋಡಿದ್ದ ನನಗೆ ಗಿರಿಜಾ ಮೇಡಂ ಆತಿಥ್ಯ ಕಂಡು ಹೃದಯ ತುಂಬಿ ಬಂತು. ನಮ್ಮ ತಂದೆ, ತಾಯಿಯವರಿಗೂ ಖುಷಿಯೋ ಖುಷಿ. ನಮ್ಮ ತಂದೆಯವರು ಹೋದ ಮೇಲೆ ನನಗೆ ಮಾತನಾಡುವುದಕ್ಕೇ ಬಿಡಲಿಲ್ಲ. ?? ಗಿರಿಜಾ ಬಾಯೋರಿಗೆ ಆ ದಿನ ಸ್ವಲ್ಪ ಜ್ವರ ಬಂದಿತ್ತಂತೆ. ಆದರೆ ಮೈಗೆ ಸ್ವಲ್ಪ ಹುಷಾರಿಲ್ಲ ಎಂದರೆ ಸಂದೀಪ ನಮ್ಮ ಮನೆಗೆ ಬರುವುದೇ ಇಲ್ಲ ಎಂದು ಏನೂ ಹೇಳಲೇ ಇಲ್ಲ. ಮಗಳು ವೈಶಾಲಿಯೇ ರವೆ ಕೇಸರಿ ಮಾಡಿ ಮಾವಿನ ಹಣ್ಣು ಅದೂ ಇದೂ ಅಂತ ಸಂಭ್ರಮವನ್ನೇ ಮಾಡಿದಳು. ಒಂದು ಗಂಟೆ ಅವರ ಮನೆಯಲ್ಲಿ ಕಳೆದು ಮನೆ ದಾರಿ ಹಿಡಿಯುವ ಹೊತ್ತಿಗೆ ಬಹುತೇಕ ಕತ್ತಲು ಆವರಿಸಿತ್ತು. ನನ್ನ ಕಾರಿನ ಡಿಕ್ಕಿಯ ತುಂಬ ಮಾವಿನ ಹಣ್ಣು ತಂದು ತುಂಬಿದರು. ಯಾವ ಜನ್ಮದ ಬಂಧುಗಳೋ ಏನೋ ಅವರ ಪ್ರೀತಿಗೆ ಒಮ್ಮೆ ನಾನು ಅವಾಕ್ಕಾದ್ದು ಖಂಡಿತ.
ನಾಡವರು ಖಡಕ್ ಮಾತಿನ ಖಡಕ್ ಜೀವನ ಶೈಲಿಯ ಜನ. ಮಾತು ಸ್ವಲ್ಪ ಬಿರುಸಾದರೂ ಅವರು ಬಹುತೇಕ ವಿಶಾಲ ಹೃದಯಿಗಳು. ಯಾಕೋ ಏನೋ ಗಿರಿಜಾ ಬಾಯೋರು ಎಷ್ಟೋ ಜನುಮದ ನಂಟಿದ್ದವರಂತೆ ಇಂದಿಗೂ ಆಗಾಗ ಫೋನಾಯಿಸುತ್ತಾರೆ. ಸುಖ ದುಃಖ ಹಂಚಿಕೊಳ್ಳುತ್ತಾರೆ. ನನ್ನಷ್ಟೇ ದೊಡ್ಡವರಾದ ಮಗ, ಮಗಳು ಇದ್ದರೂ ನಾನೂ ಅವರಿಗೆ ಮತ್ತೊಬ್ಬ ಮಗ ಎಂಬಂತೆಯೇ ವ್ಯವಹರಿಸುತ್ತಾರೆ. ಹೇಳಿದರೆ ನಿಮಗೆ ನಂಬುವುದಕ್ಕೂ ಅಸಾಧ್ಯವಾಗಬಹುದು. ಆದರೆ ನನ್ನ ಅಕ್ಷರಗಳಿಗೆ ನಾನೂ ಮೋಸ ಮಾಡುವುದಿಲ್ಲ ಮತ್ತು ನನ್ನ ಅಕ್ಷರಗಳೂ ನನಗೆ ಮೋಸ ಮಾಡಿದ್ದಿಲ್ಲ.
ಮಗಳು ವೈಶಾಲಿ, ಅಳಿಯ ಇಬ್ಬರೂ ಕೊಪ್ಪಳದಲ್ಲಿ ಶಿಕ್ಷಕರು. ನಮ್ಮ ಜಿಲ್ಲೆಗೆ ಹೆಸರು ತರುತ್ತಿರುವ ಕ್ರಿಯಾಶೀಲ ಪ್ರಾಮಾಣಿಕ ಶಿಕ್ಷಕರು ಅವರು. ವೈಶಾಲಿಯೂ ಅಮ್ಮನಿಗೆ ತಕ್ಕ ಮಗಳು. ಸಹೋದರಿ ವೈಶಾಲಿಗೂ ನಾನೀಗ ಅವಳದೇ ಕುಟುಂಬದವನಂತೆ. ದೇವರು ಯಾರ್ಯಾರ ಹಣೆಯ ಮೇಲೆ ಏನೇನು ಬರೆದಿದ್ದಾನೋ ದೇವರಿಗೆ ಗೊತ್ತು.
ಆತ್ಮೀಯತೆ ಕೊಡು ಕೊಳ್ಳುವ ವಸ್ತುಗಳಲ್ಲಿಲ್ಲ. ಎಷ್ಟೋ ಮನೆಯಲ್ಲಿ ಕೊಟ್ಟ blouse piece ಯಾರಿಗೂ ಬ್ಲೌಸ್ ಹೊಲಿದು ಕೊಳ್ಳುವುದಕ್ಕೆ ಬರುವುದಿಲ್ಲ. ? ಮತ್ತು ಅದು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಪಾಸಾಗುತ್ತಲೇ ಇರುತ್ತದೆ. ಅದು ಯಾಂತ್ರಿಕ ಔಪಚಾರಿಕತೆ. ಕೊಡಬೇಕೆಂದು ಕೊಡುವುದು. ರೂಢಿ. ಆದರೆ ಏನೂ ಕೊಡದಿದ್ದರೂ ಸರಿ ಮನೆಗೆ ಬಂದವರಿಗೆ ನಾಲ್ಕಾರು ಪ್ರೀತಿಯ ಮಾತುಗಳನ್ನಾಡುವುದಕ್ಕೆ ನಮಗ್ಯಾಕೆ ಕಂಜೂಸಿ. ಸಂಚಿಕೆಗಾಗಿ ವ್ಯಕ್ತಿಗಳನ್ನು ಹುಡುಕಬೇಕಾದ ಅನಿವಾರ್ಯತೆ ಇಲ್ಲ ನನಗೆ. ಎಷ್ಟು like ಬಂತು?! ಎಷ್ಟು comments ಬಂದವು ಅಂತ ಲೆಕ್ಕ ಹಾಕುವವನಲ್ಲ….ನಾನು. ಬಟ್ಟೆಯನ್ನೇ ಅರೆಬರೆ ಹಾಕಿಕೊಂಡ ಫೋಟೋಗಳಿಗೆ ಊಹಿಸಲಾರದಷ್ಟು like ಸಿಕ್ಕಿರುತ್ತದೆ. ? ಗಿರಿಜಾ ಮೇಡಂ ವಿಶ್ವ ಸುಂದರಿಯಲ್ಲ. ಆದರೆ ಅವರ ಕರುಣಾಪೂರ್ಣ ಹೃದಯಕ್ಕೆ ನನ್ನ ಮನ ಸದಾ ಮಿಡಿಯುತ್ತದೆ. ನಾನು ಮಾಡಿದರೆ ಏನು ಮಾಡಿಯೇನು?! ಬರೀ ಹೊಟ್ಟು ಮಾತಾಡುವುದಿಲ್ಲ. ನನ್ನ ಬಳಿ ಸಾಧ್ಯವಿರುವವರೆಗೂ ಅವರಿಗೆ ಸ್ಪಂದಿಸಬಹುದಾದ ಎಲ್ಲಾ ಸಾಧ್ಯತೆಗಳಿಗೂ ನಾನು ತಯಾರಾಗಿಯೇ ಇರುತ್ತೇನೆ. ಅವರೂ ಅದಕ್ಕೆ ಅರ್ಹರು. ಶ್ರೀಮಂತರ ಮನೆಯ ಕಾಲಿಂಗ್ ಬೆಲ್ ಒತ್ತಿದರೆ ಕದ ತೆರೆಯುವುದಕ್ಕೆ ಬಹಳ ಸಮಯ ಬೇಕು. ಹೃದಯ ಶ್ರೀಮಂತರನ್ನು ಹುಡುಕಿ. ಬಾಗಿಲು ಸದಾ ತೆರೆದೇ ಇರುತ್ತದೆ.
ಸದ್ಗುರು ಶ್ರೀಧರರ ಆಶೀರ್ವಾದ ಗಿರಿಜಾ ನಾಯಕರು ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಮಗುವಿನ ಚಿಂತನೆ..

ಗಿರಿಜಾ ನಾಯಕರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 94810 42028

??????⚫⚪???????⚫⚪?????

RELATED ARTICLES  ಮಕ್ಕಳು : ಶಾಲೆ : ಕರೋನಾ ಭಯ