ಇಬ್ಬರು ಸ್ನೇಹಿತರಿದ್ದರು. ದೇವದತ್ತ ಮತ್ತು ಧನದತ್ತ. ಅವರು ಹಲವಾರು ಪ್ರಯಾಣಿಕರೊಂದಿಗೆ ಹಡಗೊಂದರಲ್ಲಿ ಪ್ರಯಾಣ ಮಾಡುತ್ತಿದ್ದರು. ಚಂಡಮಾರುತವೊಂದು ಬೀಸಿತು. ಅವರು ಪ್ರಯಾಣಿಸುತ್ತಿದ್ದ ಹಡಗು ಅಪಘಾತಕ್ಕೀಡಾಯಿತು. ಈ ಸ್ನೇಹಿತರನ್ನು ಹೊರತುಪಡಿಸಿ ಉಳಿದವರೆಲ್ಲ ಮರಣ ಹೊಂದಿದರು. ಇವರು ಹೇಗೋ ಕಷ್ಟಪಟ್ಟು ಈಜಿ ಬಂದು ದಡ ಸೇರಿದರು. ಅದೊಂದು ನಿರ್ಜನ ದ್ವೀಪವಾಗಿತ್ತು. ಅಲ್ಲಿ ವಾಸಿಸುವುದು ಹೇಗೆ? ಅಲ್ಲಿಂದ ಹೊರ ಹೋಗುವ ಬಗೆ ಹೇಗೆ? ಚಿಂತಿಸತೊಡಗಿದರು. ಕೊನೆಗೆ ದೇವರನ್ನು ಕುರಿತು ಪ್ರಾರ್ಥಿಸುವುದೊಂದೇ ಇದಕ್ಕಿರುವ ಪರಿಹಾರ ಎಂಬ ನಿರ್ಧಾರಕ್ಕೆ ಬಂದರು. ಆದರೆ ಪ್ರಾರ್ಥನೆ ಮಾಡುವ ಬಗ್ಗೆ ಇಬ್ಬರಲ್ಲೂ ಒಂದು ಒಪ್ಪಂದವಾಯಿತು. ಯಾರ ಪ್ರಾರ್ಥನೆಗೆ ದೇವನೊಲಿಯುತ್ತಾನೆ ? ನೋಡಬೇಕು. ಅದಕ್ಕೆ ನಾವು ಬೇರೆ ಬೇರೆಯಾಗಿ ಪ್ರಾರ್ಥನೆ ಕೈಗೊಳ್ಳಬೇಕು ಎಂದು. ಸರಿ ಒಬ್ಬೊಬ್ಬರು ದ್ವೀಪದ ಒಂದೊಂದು ಪಾರ್ಶ್ವದಲ್ಲಿ ಕುಳಿತರು. ದೇವರನ್ನು ಕುರಿತು ಪ್ರಾರ್ಥಿಸಲು ಪ್ರಾರಂಭಿಸಿದರು. ದನದತ್ತ ಮೊದಲು ಹೊಟ್ಟೆಗಾಗಿ ಪ್ರಾರ್ಥಿಸಿದ ಅವನ ಸಮೀಪದಲ್ಲಿದ್ದ ಮರದಲ್ಲಿ ಹಣ್ಣುಗಳು ಕಂಡುಬಂದವು. ಸಾಕಷ್ಟು ಹಣ್ಣು ಸೇವನೆ ಮಾಡಿ ಹಸಿವು ನೀಗಿಸಿಕೊಂಡ ನಂತರ ಅವನಿಗೆ ತನಗೊಂದು ಒಳ್ಳೆಯ ಹೆಂಡತಿ ದೊರಕಿದ್ದರೆ ಅಂತ ಅನ್ನಿಸ್ತು. ತಕ್ಷಣ ನನಗೊಂದು ಹೆಂಡತಿ ಕೊಡು ಅಂತ ಪ್ರಾರ್ಥಿಸಿದ. ಮಾರನೇ ದಿನ ಸಮುದ್ರದಲ್ಲಿ ಇನ್ನೊಂದು ಹಡಗು ಒಡೆಯಿತು ಅದರಲ್ಲಿದ್ದ ಒಬ್ಬಳು ಬದುಕಿ ಇದೇ ದ್ವೀಪ ಸೇರಿದಳು. ಧನದತ್ತನೊಂದಿಗೆ ಬದುಕಲು ಪ್ರಾರಂಭಿಸಿದಳು. ಹೀಗೆ ಧನದತ್ತನ ಹಲವು ಬೇಡಿಕೆಗಳು ಈಡೇರಿದವು. ಆದರೆ ಆಚೆ ಪಾರ್ಶ್ವದಲ್ಲಿದ್ದ ದೇವದತ್ತನ ಬಳಿ ಏನೂ ಘಟಿಸಲಿಲ್ಲ. ಇತ್ತ ಧನದತ್ತನಿಗೆ ದ್ವೀಪದಲ್ಲಿ ಬೇಸರವೆನಿಸಿತು ದೇವರಲ್ಲಿ ಒಂದು ಹಡಗು ಕಳಿಸಿಕೊಡು ಎಂದು ಪ್ರಾರ್ಥಿಸಿದ. ಮಾರನೇ ದಿನ ನೋಡಿದರೆ ಹಡಗೊಂದು ಬಂದು ನಿಂತಿತ್ತು . ಧನದತ್ತ ಹಾಗೂ ಆ ಮಹಿಳೆ ಹಡಗೇರಿದರು. ಇನ್ನೇನು ಹೊರಡಬೇಕು ಎನ್ನುವಾಗ ಅಶರೀರವಾಣಿಯೊಂದು ಕೇಳಿಸಿತು “ಯಾಕೆ ಅವನನ್ನು ಬಿಟ್ಟು ಹೊರಡುತ್ತಿದ್ದೀಯಾ? ” ಎಂದು . ಧನದತ್ತ ಉತ್ತರಿಸಿದ “ಅವನು ನನ್ನ ಜೊತೆ ಬರಲು ಅರ್ಹನಲ್ಲ ಅವನ ಯಾವ ಬೇಡಿಕೆಯೂ ಈಡೇರಿಲ್ಲ ಅವನು ಇನ್ನು ಇಲ್ಲೇ ಇರಲಿ” ಎಂದು. ಆಗ ಆ ಅಶರೀರವಾಣಿ “ನೀನು ತಪ್ಪು ತಿಳಿದುಕೊಂಡಿದ್ದೀಯಾ… ದೇವದತ್ತನೂ ಪ್ರಾರ್ಥಿಸಿದ್ದಾನೆ. ಅವನ ಪ್ರಾರ್ಥನೆಯೂ ಈಡೇರಿದೆ. ಅವನದು ಒಂದೇ ಪ್ರಾರ್ಥನೆಯಾಗಿತ್ತು….”ನನ್ನ ಸ್ನೇಹಿತನ ಎಲ್ಲ ಬೇಡಿಕೆ ಈಡೇರಿಸು” ಎಂದು. ನೀನು ಪಡೆದಿದ್ದೆಲ್ಲ ಅವನ ಪ್ರಾರ್ಥನೆಯ ಫಲ. ಇದರಲ್ಲಿ ನಿನ್ನದೇನೂ ಇಲ್ಲ” ಎಂದಿತು. ನಿಸ್ವಾರ್ಥಿಗಳ ಪರವಾಗಿ ದೇವನೇ ಬರುತ್ತಾನೆ. ನಿಸ್ವಾರ್ಥ ಪ್ರಾರ್ಥನೆ ಯಾವಾಗಲೂ ಫಲಿಸುತ್ತದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಸಂಘ- ಸಂಸ್ಥೆಗಳಲ್ಲಿ ಮಠ- ಮಂದಿರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ಇರಬೇಕಾದುದು ಇಂತಹ ಮನೋಭಾವ. ದೇವರ ರಾಜ್ಯಕ್ಕೆ ಸೇರಬೇಕಾದರೆ ನಮ್ಮಲ್ಲಿ ಈ ಭಾವ ಬರಬೇಕು. “ಸರ್ವೇ ಜನಃ ಸುಖಿನೋ ಭವಂತು” ಎನ್ನುವ ಭಾವವದು. ಯಾರು ತನಗಾಗಿ ಬದುಕಿದ್ದಾರೋ ಅವರ ಬದುಕು ಬದುಕೇ ಅಲ್ಲ. ಯಾರು ಪರರಿಗಾಗಿ ಬದುಕಿರುತ್ತಾರೋ ಅವರ ಬದುಕು ನಿಜವಾದ ಬದುಕು.

ಸ್ವಾರ್ಥ ಮತ್ತು ಪ್ರೇಮದ ನಡುವೆ ಯಾವಾಗಲೂ ಸಂಘರ್ಷ ನಡೆಯುತ್ತಲೇ ಇರುತ್ತದೆ. ಪ್ರೇಮ ಮೊದಲು ಕೇಳುವುದು ತ್ಯಾಗವನ್ನು. ಆದರೆ ತ್ಯಾಗ ಮಾಡುವಾಗ ಸ್ವಾರ್ಥ ಬರುತ್ತದೆ. ಅದನ್ನೇ ಉಪನಿಷತ್ತು ಹೇಳಿದ್ದು ಹೀಗೆ…………….. ಹೆಂಡತಿಯನ್ನು ಪ್ರೀತಿಸುತ್ತಾನೆ ಹೆಂಡತಿಗಾಗಿ ಅಲ್ಲ ತನಗಾಗಿ…. ಮಕ್ಕಳನ್ನು ಪ್ರೀತಿಸುತ್ತಾನೆ ಆದರೆ ಮಕ್ಕಳಿಗಾಗಿ ಅಲ್ಲ ತನಗಾಗಿ….. ಸೇವಕರನ್ನು ಪ್ರೀತಿಸುತ್ತಾನೆ ಆದರೆ ಸೇವಕರಿಗಾಗಿ ಅಲ್ಲ ತನಗಾಗಿ ಈ ಮಾತು ಸತ್ಯ. ಇದು ಬದುಕಿನ ಕಟು ವಾಸ್ತವವನ್ನು ನಮ್ಮ ಮುಂದೆ ತೆರೆದಿಡುತ್ತದೆ.

RELATED ARTICLES  ನೋವಿನಿಂದ ಸಾವು - ಸಾವಿನಿಂದ ನೋವು

ಮನುಷ್ಯನಾಗಲು ಇರಬೇಕಾದ ಮೊದಲ ಅರ್ಹತೆ ಎಂದರೆ ಇನ್ನೊಂದು ಜೀವಕ್ಕಾಗಿ ಮಿಡಿಯುವುದು. ತನಗಾಗಿ ಮಾತ್ರವಲ್ಲದೆ ಇನ್ನೊಬ್ಬರಿಗಾಗಿ ಏನನ್ನೂ ಮಾಡಲು ಸಿದ್ಧನಾಗಿರುವುದು. ನಮ್ಮೊಳಗೆ ಯಾವಾಗಲೂ ಯುದ್ಧ ನಡೆಯುತ್ತಿರುತ್ತದೆ. ಅದು ಸ್ವಾರ್ಥ ಮತ್ತು ಪ್ರೀತಿಯ ನಡುವೆ. ಇದು ಪ್ರತಿಯೊಬ್ಬರ ಜೀವನದಲ್ಲೂ ನಡೆದೇ ನಡೆಯುತ್ತದೆ. ಉದಾಹರಣೆಗೆ ಬಹಳ ಪ್ರೀತಿಯಿಂದಿದ್ದ ಅಣ್ಣ ತಮ್ಮರ ನಡುವೆ ಆಸ್ತಿ ಹಂಚಿಕೆ ವಿಷಯ ಬಂದಾಗ ಜಗಳವಾಗುತ್ತದೆ. ಈ ಜಗಳವಾಗುವುದು ಪ್ರೀತಿಯ ಮಧ್ಯೆ ಸ್ವಾರ್ಥ ಬಂದಾಗ. ಸ್ವಾರ್ಥದ ಕೈ ಮೇಲಾದಾಗ. ಹಾಗಾಗಿ ಯಾರು ನಮಗೇನು ಕೊಟ್ಟರು ಎಂಬ ಭಾವನೆ ಬೇಡ. ನಾನೇನು ಅವರಿಗೆ ಕೊಟ್ಟೆ ಎಂಬ ಯೋಚನೆ ಇರಲಿ.

ಇಲ್ಲಿ ಹೇಗೋ ಸಲ್ಲಬಹುದು ಆದರೆ ಅಲ್ಲಿ ಸಲ್ಲಲು ಆ ಭಾವ ಬೇಕು. ‘ನಾನು’ ಕೇಂದ್ರವಾಗಿರುವ ಬದುಕನ್ನು ‘ನಾವು’ ಕೇಂದ್ರಿತವಾಗಿ ಮಾಡಿಕೊಂಡರೆ ಬದುಕು ಸ್ವರ್ಗವಾಗುತ್ತದೆ. ನಮ್ಮ ಜೀವನದ ಪ್ರಧಾನ ವಿಷಯ ಸಂಬಂಧ. ಆ ಸಂಬಂಧ ಮುರಿಯದೇ ಉಳಿಯುವಂತೆ ನೋಡಿಕೊಳ್ಳಿ. ಸ್ವಾರ್ಥದಿಂದ ತ್ಯಾಗದ ಕಡೆಗೆ ಪ್ರೇಮದ ಕಡೆಗೆ ನಿಮ್ಮ ನಡೆ ಇರಲಿ. ಅದು ನಿಮ್ಮ ದಿವ್ಯ ಭವ್ಯ ಬದುಕಿಗಾಗಿ.

✍️ ಡಾ.ರವೀಂದ್ರ ಭಟ್ಟ ಸೂರಿ.