ನನ್ನ ಪ್ರೀತಿಯ ಭಾವ  ನೀನು ನಮ್ಮನ್ನು ಅಗಲಿ ಇಂದಿಗೆ ಹದಿನಾಲ್ಕು  ದಿನ ಕಳೆಯಿತು.ನಿನ್ನ ಅಪರ ಕರ್ಮ ನಡೆಯುವಾಗ ಮಗ ನಿನಾದನ ಬಳಿ ಅಪ್ಪನಿಗಾಗಿ  ಏನಾದರೂ ಪ್ರಾರ್ಥಿಸು ಎಂದಾಗ ಆತ ವಿನಮ್ರವಾಗಿ ಅಪ್ಪ ನಿನಗೆ ಒಳಿತಾಗಲಿ ಸದ್ಗತಿ ದೊರೆಯಲಿ ಎಂದು ಕೈಮುಗಿದು ಪ್ರಾರ್ಥಿಸಿದ ಎಂಬ ಮಾತು ಕೇಳಿದಾಗ ಅಪ್ಪನಿಗೆ ತಕ್ಕ ಮಗ ನನ್ನ ಅಳಿಯ ಎಂದು ಹೆಮ್ಮೆ ಆಯಿತು.

ಜೂನ್ ಹದಿನಾಲ್ಕರ ರವಿವಾರ ಅಪ್ಪ ಅಮ್ಮ ಮಗ ಮಗಳು ಹೀಗೆ ನಾಲ್ಕು ಮಂದಿ ಸದಸ್ಯರಿಂದ ತುಂಬಿದ ಯಾವುದೂ ಕೊರೆತೆ ಇಲ್ಲದ ಸಂಸಾರದ ಮೇಲೆ ವಿಧಿಯ ಕ್ರೂರ ದೃಷ್ಟಿ ಬಿದ್ದ ದಿನ.ಆದಿನ ಮಧ್ಯಾಹ್ನ ನನ್ನ ಮೂಲ ಮನೆ ಕಾಗಾಲದಲ್ಲಿ ಊಟಕ್ಕೆ ಕುಳಿತು ಎರಡು ತುತ್ತು ಅನ್ನವನ್ನು ಬಾಯಿಗೆ ಹಾಕಿದಾಗ ನನ್ನ ಮೊಬೈಲ್ ರಿಂಗಣಿಸಿತು.ಅಕ್ಕನ ಕರೆಯನ್ನು ಸ್ವೀಕರಿಸಿದಾಗ ಸೊಸೆ ನಿಧಿ ಒಂದೇ ಸಮನೆ ಅಳುತ್ತಾ ಚಿದ್ದು ಮಾಮ ಬೇಗ ಬಾ ಡ್ಯಾಡಿಗೆ ಏನೋ ಆಗಿದೆ ಎಂದಳು.ಊಟದ ಬಟ್ಟಲನ್ನು‌ಬಿಟ್ಟು ಕೈತೊಳೆದು ತೊಟ್ಟ ಬಟ್ಟೆಯಲ್ಲೇ ಓಡಿದ ನನ್ನ ಹಿಂದೆಯೇ ಅಣ್ಣನ ಮಗ ಹರೀಶನೂ ಧಾವಿಸಿದ ಅವಸರದಲ್ಲೇ ಇಬ್ಬರೂ ಬೈಕ ಹೊಡೆದುಕೊಂಡು ಅಕ್ಕನ ಮನೆ ತಲುಪಿದಾಗ ಭಾವ ಒಳಗಡೆ ಮಂಚದ ಮೇಲೆ ಮಲಗಿದ್ದರು.ಹೋಗಿ ಒಮ್ಮೇ ಭಾವನನ್ನು ಎಬ್ಬಿಸುವ ಹಾಗೇ ಕರೆದೆ ಎದೆಗೆ ಕಿವಿಹಿಡಿದೆ ಏನೋ ಆಶಾ ಭಾವ ಹೆದರ ಬೇಡಿ ಏನೂ ಆಗೋದಿಲ್ಲ ಎಂದವನೆ ಹೊರಗೋಡಿ ಬಂದೆ.ಭಾನುವಾರ ಮಧ್ಯಾಹ್ನ ಯಾರನ್ನು ಸಹಾಯಕ್ಕೆ ಕರೆಯಲಿ ತೋಚಲಿಲ್ಲ ತಕ್ಷಣ ಆತ್ಮೀಯರಾದ ರವಿ ಪಂಡಿತರ ನೆನಪಾಗಿ ಪೋನಾಯಿಸಿದೆ .ಕೂಡಲೇ ಓಡಿ ಬಂದರು ತಕ್ಷಣವೇ ಭಾವನ ಕಾರಿನಲ್ಲಿ ಅವರನ್ನು ತುಂಬಿಸಿಕೊಂಡು ಕುಮಟಾದ ಕಡೆಗೆ ಧಾವಿಸಿದೆವು ಆಗಲೇ ಶಾಸಕ ದಿನಕರ ಶೆಟ್ಟಿಯವರು ಹಾಗೂ ವಿನೋದ ಪ್ರಭು ಅವರು ಸರಕಾರಿ ಅಸ್ಪತ್ರೆಗೆ ಕರೆ ಮಾಡಿದ್ದರು. ವೈದ್ಯಾಧಿಕಾರಿಗಳಾದ ಡಾಕ್ಟರ್ ಗಣೇಶ ನಾಯ್ಕ ರವರು ನುರಿತ ವೈದ್ಯರಾದ ಡಾಕ್ಟರ್ ಶ್ರೀನಿವಾಸ ನಾಯಕರು ಡಾಕ್ಟರ್ ಸುಮಲತಾ ಮಣಕೀಕರ್ ಅವರುಗಳೆಲ್ಲ ಆಸ್ಪತ್ರೆಯಲ್ಲಿ ಸಿದ್ಧರಿದ್ದರು ಭಾವನನ್ನ ಸೂಕ್ಷ್ಮವಾಗಿ ಪರೀಕ್ಷಿಸಿದ ಅವರು ನನ್ನನ್ನು ಕರೆದು ಭಾವನ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ಬಹಳ ವಿಷಾದ ದಿಂದ ಹೇಳಿದರು .ಆಕಾಶವೇ ಕಳಚಿಬಿದ್ದ ಅನುಭವ ಅಳಿಯ ನಿನಾದನಿಗೆ ಈ ಕಟುಸತ್ಯ ತಿಳಿಸಲು ಬಹಳ ಯಾತನೆ ಪಟ್ಟೆ ದೂರದಲ್ಲಿ ಇದ್ದ ಅಣ್ಣನಿಗೂ ತಿಳಿಸಿದೆ ಅಲ್ಲಿಗೆ ಇಪ್ಪತ್ತೈದು ವರ್ಷಗಳ ಬಾಂದವ್ಯದ ಕೊಂಡಿ ಕಳಚಿತು. ಅನವರತ ನಮ್ಮನ್ನು ನೋಡಿಕೊಂಡ ಪ್ರೀತಿಯ ಭಾವನವರು ನನ್ನನ್ನು ಅಗಲಿದರು.
ಇಪ್ಪತ್ತೇಳು ವರುಷಗಳ ಹಿಂದೆ ಆಗಿನ್ನೂ ನಾನು ನನ್ನ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಪಾಸುಮಾಡಿ ಬಾಡದ ಪಿಯು ಕಾಲೇಜಿಗೆ ಸೇರಿದ್ದೆ.ಆಗಷ್ಟೇ ನನ್ನ ಅಪ್ಪ  ಹರಿ ಭಂಡಾರಿಯವರು ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿ  ಇಹಲೋಕ ತ್ಯಜಿಸಿದ್ದರು.
ಅಕ್ಕ ಮದುವೆಯ ವಯಸ್ಸಿಗೆ ಬಂದವರರಿದ್ದರು ಅವರಿಗೆ ನೆಂಟಸ್ತಿಕೆ ನೋಡುವ ಹೊಣಗಾರಿಕೆ ನಮ್ಮ ಸಹೋದರರೊಳಗೆ ಬಿತ್ತು .ಹಿರಿಯಣ್ಣ ಇಂಥ ವಿಷಯಗಳಿಂದ ದೂರ ಇದ್ದು ಜಮೀನಿನ ಕೆಲಸದಲ್ಲಿ ತೊಡಗಿಸಿಕೊಂಡವರು.ಇನ್ನೊಬ್ಬ ಅಣ್ಣ ದೂರದ ಕೋಲಾರದ ಕೆ ಜಿ ಎಫ್ ನಲ್ಲೂ ಮತ್ತೊಬ್ಬರು  ಪೂನಾದಲ್ಲೂ ಬಹಳಕಾಲದಿಂದ ನೆಲೆಯಾಗಿದ್ದರಿಂದ ಈ ಜವಾಬ್ದಾರಿಯನ್ನು ಚಿಕ್ಕ ವಯಸ್ಸಿನಲ್ಲಿ ನಾನೇ ಹೊತ್ತುಕೊಳ್ಳಬೇಕಾಗಿಬಂತು.ಆಗ ನನ್ನ ದೊಡ್ಡಮ್ಮನ ಅಳಿಯ ಮಂಜುನಾಥಣ್ಣನ ಸಹಾಯದಿಂದ ಈ ಕಾರ್ಯಕ್ಕೆ ಮುಂದಾದೆ.ನಮ್ಮ ಸಮಾಜದಲ್ಲಿ ಉತ್ತಮ ನೌಕರಿಯನ್ನು ಹೊಂದಿದವರು ಅಥವಾ ಶ್ರೀಮಂತಿಕೆಯನ್ನು ಹೊಂದಿದವರು ಬಹಳ ವಿರಳವಾಗಿದ್ದರು.ಇದ್ದರೂ ಅವರನ್ನು ತಲುಪುವುದೂ ಕಷ್ಟಕರವಾದ ಕೆಲಸವಾಗಿತ್ತು.ಅಂತಹ ಪರಿಸ್ಥಿತಿಯಲ್ಲಿ ದೀವಗಿಯ ನಾಗಪ್ಪ ದೇಶ ಭಂಡಾರಿ ಎಂಬ ಅತ್ಯಂತ  ಸಂಭಾವಿತ ವ್ಯಕ್ತಿಯ ಮಗ ಉಮೇಶ ದೇಶಭಂಡಾರಿ ಅನ್ನುವವರು ಕೆ ಎಸ್ ಆರ್ ಟಿ ಸಿ ಕಂಡಕ್ಟರ್ ಆಗಿದ್ದು ಯುವಕಸಂಘದ ಮೂಲಕ ಮನೆಮಾತಾದ ಉತ್ತಮು ವ್ಯಕ್ತಿತ್ವ  ಹೊಂದಿದವರೆಂದು ಹೆಸರಾದವರು ಇದ್ದಾರೆ ಎಂಬ ವಿಷಯ ಅಂದು ದಿವಗಿಯ ಗ್ರಾಮಲೆಕ್ಕಾಧಿಕಾರಿ ಆಗಿದ್ದ ನವಿಲಗೋಣ ನಾಯ್ಕರ ಮೂಲಕ ಮಂಜುನಾಥಣ್ಣ ಅವರಿಗೆ ಗೊತ್ತಾಗಿ ಅವರು ನನ್ನನ್ನು ಕರೆದುಕೊಂಡು ದಿವಗಿಗೆ ಬಂದರು.ಹೈವೆಗೆ ಸಮೀಪದಲ್ಲಿ ಭಾವನ ಭಾವ ನಾಗೇಂದ್ರ ಭಂಡಾರಿ ಅವರ ಚಹದ ಅಂಗಡಿಯಲ್ಲಿ ಮೊದಲು ಮದುವೆಯ ಮಾತುಕತೆ ಆಯಿತು .ಆಗ ಭಾವ ಇರಲಿಲ್ಲ ಅವರು ಹೇಗಿದ್ದಾರೆ ಅನ್ನುವುದೂ ಗೊತ್ತಿರಲಿಲ್ಲ.ನಾಗೇಂದ್ರ ಭಂಡಾರಿ ಯವರನ್ನು ಮಾತನಾಡಿಸಿದಾಗ .ಮದುವೆ ಮಾಡುತ್ತೇವೆ ಆದರೆ ಅವರ ಮನೆಹೊಸದಾಗಿ ನಿರ್ಮಾಣ ಆಗುತ್ತಾ ಇದೆ  ಏಳೆಂಟು ತಿಂಗಳು ತಡವಾಗ ಬಹುದು ಎಂದು ಹೇಳಿದರು.ಮೊದಲು ಹುಡುಗಿಯನ್ನು ನೋಡುವ ಶಾಸ್ತ್ರ ಮಾಡಿ ಪಾಸಾದರೆ ಮುಂದೆ ಮಾತಾಡುವ ಎಂದು ಕಳಿಸಿದರು.ಆಗ ನನಗೆ ಇವೆಲ್ಲ ಹೊಸ ಅನುಭವ . ಎಂಟು ತಿಂಗಳು ತಡ ಆಗುವ ಮದುವೆ ಈಗಲೇ ಹೇಗೆ ಫಿಕ್ಸ ಮಾಡೋದು? ಅದರ ಮಧ್ಯೆ ಸಂಬಂಧ ಮುರಿದರೆ ಏನು ಕಥೆ ಇವೆಲ್ಲ ಗೊಂದಲಗಳು.ನಾಗೇಂದ್ರ ಭಂಡಾರಿ ಅವರಂಥ ಹಿರಿಯರ ಮುಂದೆ ನಾನು ಅತ್ಯಂತ ಸಣ್ಣವ ಆಗ ಈಗಿನ ಹಾಗೆ ಮೊಬೈಲ್ ಇರಲಿಲ್ಲ.ಸಂಪರ್ಕಕ್ಕೆ ತುಂಬಾ ಕಷ್ಟವಾಗುತಿತ್ತು.ನಾನು ಅಡ್ಡಿ ಇಲ್ಲ ಎಂದು ತಲೆ ಆಡಿಸಿ ಬಂದೆ. ಆದಷ್ಟು ಬೇಗ ಹೆಣ್ಣುನೋಡುವ ಶಾಸ್ತ್ರ ಮುಗಿಸಿದರೆ ಒಳ್ಳೆಯದು ಎಂದೆ.ಕೊನೆಗೂ ಉಮೇಶ ದೇಶಭಂಡಾರಿ ಅವರ ಭಾವ ನಾಗೇಂದ್ರ ಭಂಡಾರಿ ಗೆಳೆಯ ಆರ್ ಕೆ ಅಂಬಿಗ ಇವರೆಲ್ಲ ನಮ್ಮ ಮನೆಗೆ ಬಂದರು.ಹುಡುಗಿ ನೋಡುವ ಶಾಸ್ತ್ರ ಮುಗಿಸಿದರು.ಒಪ್ಪಿಗೆಯನ್ನು ಕೊಡುವ ಸಮಯ, ಆಗೆಲ್ಲ ಈ ಸನ್ನಿವೇಶ ಹೇಗಿರುತಿತ್ತು ಎಂದರೆ ಬಂದವರು ಹೊರಗಡೆ ಹೋಗಿ ಗುಂಪಾಗಿ ಗುಸುಗುಸು ಚರ್ಚಿಸಿ ಅವರಲ್ಲಿ ಒಬ್ಬವ ಬಂದು ಫಲಿತಾಂಶ ತಿಳಿಸುತ್ತಿದ್ದರು.ಈಗಿನ ಪಿಯು‌ ಫಲಿತಾಂಶದ ಘೋಷಣೆಯ ವೇಳೆಯ ಕುತೂಹಲಕ್ಕಿಂತ ಅದು ಇನ್ನೂ ಮಹತ್ವದಿರುತ್ತಿತ್ತು.

RELATED ARTICLES  'ಶ್ರುತ್ಯಾನುಸಾರ ಸೃಷ್ಟಿಯುತ್ಪತ್ತಿಕ್ರಮ" (‘ಶ್ರೀಧರಾಮೃತ ವಚನಮಾಲೆ’).

ಅಂತೂ ನಾಗೇಂದ್ರ ಭಂಡಾರಿ ತಮಗೆ ಹುಡುಗಿ ಪಾಸಾಗಿದ್ದಾಳೆ ಅವಳ ಅಭಿಪ್ರಾಯ ತಿಳಿಸಲು ಹೇಳಿ ಅಂದಾಗ ಅಕ್ಕ ಮನೆಯವರ ನಿರ್ಧಾರವೇ ನನ್ನ ನಿರ್ಧಾರ ಎಂದು ಹೇಳಿದಳು.ಅಲ್ಲಿಗೆ ಒಂದು ಹಂತದ ತೀರ್ಮಾನ ಆಯಿತು.ಸುದ್ದಿ ಊರ ತಂಬಹರಡಿತು.ಆಗೆಲ್ಲ ಒಬ್ಬರ ಮನೆಯಲ್ಲಿ  ಒಂದು ಮದುವೆ ನಿಕ್ಕಿ ಆದರೆ ಅದು ವಿಶೇಷ ವಾರ್ತೆ ಆಗಿರುತಿತ್ತು.
ಈ ವಿಷಯ ತಿಳಿದು ಬಹಳಷ್ಟು ಮಂದಿ ಕುಶಿಪಟ್ಟರೆ ಕೆಲವು ವಿಕ್ಷಿಪ್ತಮನಸುಗಳು ಚಡಪಡಿಸಿದವು.ಸುಂದರ ಸಂಸಾರದಲ್ಲಿ ಹುಳಿಹಿಂಡುವಲ್ಲಿ ಸಿದ್ಧ ಹಸ್ತರಾಗಿ ಶತಾಯಗತಾಯ ಅದನ್ನು ಸಾಧಿಸುವಲ್ಲಿ ಸಫಲರಾಗುವ ವಿಕೃತ ಮನಸುಗಳು ಆಗಲೇ ಜಾಗೃತ ವಾಗಿ ಕುಳಿತವು.ಮದುವೆಯ ಸಂಬಂಧ ಮುರಿಯಲು ಅನುಕೂಲವಾಗುವ ಸನ್ನಿವೇಶ ಅದಕ್ಕೆ ಪೂರಕವಾಗುವ ಹುನ್ನಾರಗಳು ರಚನೆ ಆದವು ದುಶ್ಮನ್ ಕಂಹಾ ಹೈ ಅಂದರೆ ಬಗಲ್ ಮೇ ಅನ್ನುವ ಗಾದೆಯಂತೆ ಹತ್ತಿರ ಇದ್ದವರೇ ಮದುವೆಯನ್ನು ಮುರಿಯುವ  ಪ್ರಯತ್ನ ಮಾಡಿದರು.
ಸಂಬಂಧ ನಿಶ್ಚಯವಾಗಿ ಮದುವೆ ಏಳೆಂಟು ತಿಂಗಳು ತಡ ಆಗುತ್ತದೆ ಎಂದು ವರನ ಕಡೆಯವರೇನೋ ಹೇಳಿಹೋದರು.
ಊರಲ್ಲಿ ಒಂದು ವಾರದ ನಂತರ ಬೇರೆಯೇ ಸುದ್ದಿ ಬಂತು ಮದುವೆ ಮುರಿಯುವ ಸಾಧ್ಯತೆ ಇದೆಯಂತೆ ಅಂದರು.ನನಗಂತೂ ಏನು ಮಾಡುವುದು ತೋಚುತ್ತಿರಲಿಲ್ಲ.ಮದುಮಗಳಾಗುವವಳು ರಾಣೇ ಬೆನ್ನೂರಿನಲ್ಲಿ ಸರಕಾರಿ ಶಿಕ್ಷಕಿ ಮದುಮಗ ಕುಂದಾಪುರದಲ್ಲಿ ಕೆ ಎಸ್ ಆರ್ ಟಿ ಸಿ ನೌಕರ ಅವರವರು ಅವರ ಪಾಡಿಗೆ ಕರ್ತವ್ಯದಲ್ಲಿ ಮಗ್ನರಾಗಿದ್ದರೆ ಮನೆಮುರುಕರು ಮಾತ್ರ ಸಕ್ರಿಯರಾಗೇ ಇದ್ದರು.
ಪ್ರತೀ ಗುರುವಾರ ಭಾವ ದಿವಗಿಗೆ ಬರುತಿದ್ದರು ‌ಅವರು ಮನೆಗೆ ಬರುವ ಮೊದಲೇ ನಾನು ಅವರ ಭಾವನ ಅಂಗಡಿಯಲ್ಲಿ ಹಾಜರಿರುತಿದ್ದೆ.ಪ್ರತಿ ಬಾರಿಯೂ ನೀವು ಏನೂ ಚಿಂತೆ ಮಾಡ ಬೇಡಿ ನಾನು ಮನೆ ಪೂರ್ತಿ ಆದಮೇಲೆ ನಿಶ್ಚತಾರ್ಥ ಮಾಡಿಕೊಂಡು ಮದುವೆ ಆಗುತ್ತೇನೆ ಎಂದು ಸಮಾಧಾನ ಹೇಳುತಿದ್ದರು.ನಾನು ಸಮಾಧಾನ ಪಟ್ಟು ಮನೆಗೆ ಬರುತಿದ್ದೆ.ಕೊನೆಗೊಂದು ದಿನ ನನ್ನ ಕಿರಿಕಿರಿಗೆ ಅವರೇ ಖುದ್ದು ಕುಮಟಾ ಬಸ್ ನಿಲ್ದಾದಲ್ಲಿ ಭೇಟಿ ಆದರು.ನಮ್ಮವರೇ ಬರೆದ ದೂರಿನ ಕಾಗದ ತೋರಿಸಿದರು.ನೋಡಿ ಇವೆಲ್ಲ ಇದ್ದದ್ದೇ ಇಂಥವರು ಎಲ್ಲಾ ಕಡೆಯಲ್ಲೂ ಇರುತ್ತಾರೆ.ನಿಮ್ಮ ಬಗ್ಗೆ ಏನೆಲ್ಲಾ ಹೇಳಿದ್ದಾರೆ ಇದಕ್ಕೆಲ್ಲ ನಾನು ತಲೆಕೆಡಿಸಿ ಕೊಳ್ಳುವುದಿಲ್ಲ.ಕುದ್ದಾಗಿ ಅವರ ಮುಖಕ್ಕೆ ಹೊಡೆದ ಹಾಗೆ ಬೈದು ಕಳಿಸಿದ್ದೇನೆ.ನಾನು ಒಂದು ಬಾರಿ ಮಾತುಕೊಟ್ಟರೆ ಮುಗಿಯಿತು. ಬ್ರಹ್ಮ ಬಂದರೂ ಮಾತಿಗೆ ತಪ್ಪುವವನಲ್ಲ ಮುಂದಿನ ವಾರ ನಿಶ್ಚಿತಾರ್ಥ ಮಾಡೋಣ ನನ್ನ ಭಾವನ ಬಳಿ ಮಾತಾಡಿ ಎಂದು ನನಗೆ ಧೈರ್ಯ ತುಂಬಿದರು.ಅವರ ಮಾತುಕೇಳಿ ನನಗೆ ಭರವಸೆ ಮೂಡಿತು .ಅವರೆಂದ ಹಾಗೆ ನಿಶ್ಚಿತಾರ್ಥ ಕಾರ್ಯಕ್ರಮ ನಿರ್ಧಾರ ಆಯಿತು.
ನಿಶ್ಚತಾರ್ಥದ ದಿನ ಬೆಳಿಗ್ಗೆ ನನ್ನ ನೆರೆಮನೆಯ ವ್ಯಕ್ತಿ ಒಬ್ಬರು ನನ್ನನ್ನು ಭೇಟಿ ಆದರು. ಅತ್ಯಂತ ಗೌಪ್ಯವಾದ ವಿಷಯ ಒಂದು ಗೊತ್ತಾಗಿದೆ ಎಂದು ನನ್ನನ್ನು ವೈಯಕ್ತಿಕವಾಗಿ ಕರೆದರು. ನಾನೂ ಕುತೂಹಲದಿಂದ ಅವರ ಬಳಿ ಹೋದೆ ಯಾವ ವಿಷಯ ಎಂದು ಕೇಳಿದೆ ಅದಕ್ಕೆ ಅವರು ಇವತ್ತು ನಿಶ್ಚಿತಾರ್ಥಕ್ಕೆ ಬರುವ ಹುಡುಗನಿಗೆ ಆರೋಗ್ಯ ಸರಿ ಇಲ್ಲವಂತೆ ಹೆವಿ ಶುಗರ್ ಅಂತೆ ಪಕ್ಕಾ ಸುದ್ದಿ.ಸಕ್ರೆಕಾಯಿಲೆ ಬಂದ್ರೆ ಮುಗೀತು‌ ನೋಡು ಇನ್ನೂ ಟೈಂ ಇದೆ ವಿಚಾರ ಮಾಡು ಎಂದು ಹೇಳಿದರು.ನನಗೆ ಆಕಾಶವೇ ಕಳಚಿ ಬಿದ್ದಹಾಗೆ ಆಯಿತು.ಏನಾದರೂ ಹೌದಾದರೆ ನಾನುನೆಯಲ್ಲಿ ಹಿರಿಯರಿಗೆ ಜವಾಬು ಕೊಡಬೇಕು ಅಧಿಕ ಪ್ರಸಂಗಿ ಅನಿಸಿಕೊಳ್ಳಬೇಕು ಈ ಎಲ್ಲ ಹೆದರಿಕೆ ಶುರು ಆಯ್ತು.ಕೂಡಲೇ ಭಾವನ ಆಪ್ತ ಗೆಳೆಯ ಒಬ್ಬರು ನಮ್ಮೂರಲ್ಲಿ ಇದ್ದರು ಅವರ ಬಳಿ ಓಡಿದೆ ವಿಷಯ ತಿಳಿಸಿ ಸತ್ಯ ತಿಳಿಸುವ ಹಾಗೆ ಬೇಡಿಕೊಂಡೆ ಅದಕ್ಕೆ ಅವರು ಈ ವಿಷಯ ಸಂಪೂರ್ಣ ಸುಳ್ಳು ನನ್ನ ತಿಳುವಳಿಕೆಯ ಮಟ್ಟಿಗೆ ಇದು ಯಾರದೋ ಕಿತಾಪತಿ ನೀನು ತಲೆ ಕೆಡಿಸಿಕೊಳ್ಳಬೇಡ ಆಗುವದ್ದು ಆಗ್ತದೆ.ಮತ್ತೆ ನಿಶ್ಚಿತಾರ್ಥ ರದ್ದು ಮಾಡಬೇಡ ಎಂದು ಸಮಾಧಾನ ಹೇಳಿಕಳಿಸಿದರೂ  ನಾನು ಸಂಪೂರ್ಣ ಕುಸಿದಿದ್ದೆ.ಅಂತೂ ವರನ ಕಡೆಯವರು ಬಂದರು ನಿಶ್ಚಿತಾರ್ಥ ಆಯಿತು ಊಟದ ಸಮಯ ಭಾವ ಊಟ ಮಾಡುವಾಗ ನಾನು ಅವರನ್ನೇ ಗಮನಿಸುತ್ತಿದ್ದೆ.ಪ್ರತಿಬಾರಿ ಏನು ತೆಗೆದುಕೊಂಡು ಹೋದರೂ ಅವರು ಬೇಡಬೇಡ ಎಂದು ಹೇಳುತಿದ್ದರು ಆಗೆಲ್ಲ ನನ್ನ ತಲೆಯಲ್ಲಿ ಶುಗರ್ ಹೆಚ್ಚುತ್ತಿತ್ತು.ಸ್ವತಃ ನಾನೇ ಸ್ವಲ್ಪ ಶಿರಾ ತೆಗೆದುಕೊಂಡು ಬಲವಂತದಲ್ಲಿ ಬಡಿಸಿದೆ ಅವರು ನಗುತ್ತಾ ಎಲ್ಲವನ್ನೂ ತಿಂದರು ನನಗೆ ಆಗ ಒಳಗೊಳಗೆ ಸಮಾಧಾನ ಆಗುತ್ತಿತ್ತು ಮನಸ್ಸು ಶುಗರ್ ಇಲ್ಲ ಇಲ್ಲ ಅನ್ನುತಿತ್ತು.
ನಿಶ್ಚಿತಾರ್ಥ ಮುಗಿದ ಕೆಲವು ತಿಂಗಳಲ್ಲಿ ಮದುವೆಯಾಯಿತು.ಭಾವ ಕುಂದಾಪುರದಿಂದ ಬಿಡುವಾದಾಗ ರಾಣೆಬೆನ್ನೂರಿಗೆ ದುವಗಿಗೆ ಕಾಗಾಲಕ್ಕೆ ಬಂದು ಹೋಗುತ್ತಿದ್ದರು.ಅತ್ಯಂತ  ಕಡಿಮೆ ಸಮಯದಲ್ಲೇ ಎಲ್ಲರ ಪ್ರೀತಿ ಪಾತ್ರರಾದರು.ಅವರು ಮನೆಗೆ ಬರುತ್ತಾರೆ ಎಂಬುದೇ ಸಂಭ್ರಮದ ವಿಷಯ ಆಗುತಿತ್ತು.ಅಬಾಲವೃದ್ಧರಾಗಿ ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುವ ಕಲೆ ಅವರಿಗೆ ಕರಗತವಾಗಿತ್ತು. ಒಂದು ವರುಷದ ಬಳಿಕ ಮುದ್ದು ಮಗಳು ನಿಧಿ ಜನಿಸಿದಳು ಅವಳ ಬಾಲ್ಯ ಎಲ್ಲರಿಗೂ ಆನಂದದಾಯಕ ವಾಗಿತ್ತು.ಅವಳು ದೆಸವಾನಿ ಹುಡುಗಿಎಂದೇ ಕರೆಸಿಕೊಂಡಳು ಕಾರಣ ಅಕ್ಕನಿಗೆ ರಾಣೆಬೆನ್ನೂರಿನಿಂದ ಕುಮಟಾಕೆ ವರ್ಗಾವಣೆ ಆಯಿತು .ನಂತರ ಮಗ ನಿನಾದ ಹುಟ್ಟಿದ ಭಾವನಿಗೂ ಕುಮಟಾ ವರ್ಗಾವಣೆ ಆಯಿತು.ಕಾಗಾಲದಲ್ಲಿ ಸ್ಥಳ ಖರೀದಿಸಿ ಸುಂದರವಾದ ಮನೆಯನ್ನೂ ಕಟ್ಟಿಕೊಂಡರು.ಕಾಲ ಸರಿಯಿತು ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಸಾಧಿಸಿದರು.ತಂದೆ ತಾಯಿಯರ ಆಶಯದಂತೆ ವಿಧೇಯರಾಗಿ ಮುನ್ನಡೆ ಸಾಧಿಸುತ್ತಾ ಬರುತ್ತಿದ್ದಾರೆ.ವಿವಾಹ ವಾಗಿ ಇಪ್ಪತ್ತೈದು ವರ್ಷ ಕಳೆದ ಮೇ ತಿಂಗಳಿಗೆ ಪೂರೈಸಲ್ಪಟ್ಟು ಭಾವ ಅತ್ಯಂತ ಆರೋಗ್ಯವಂತರಾಗಿ ನಿವೃತ್ತಿಯ ಬಳಿಕವೂ ಸಮಾಜ ಸೇವೆಯನ್ನು ಆಯ್ಕೆ ಮಾಡಿಕೊಂಡು ಭಾಜಪಾ ದ ಸಕ್ರೀಯ ಸದಸ್ಯರಾದರು.ಅನೇಕ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಕೇವಲ ಎರಡೇ ವರ್ಷಗಳಲ್ಲಿ ಜನಪ್ರಿಯರಾದರು.ಊರ ಜನರ ಪಾಲಿಗೆ ಭಾವ ಎಂದೇ ಕರೆಸಿಕೊಂಡು ರಾಜಕೀಯದ ವಲಯದಲ್ಲಿ ಉಮೇಶಣ್ಣ ಎಂದೇ ಹೆಸರಾದರು.ತಮ್ಮ ಬಿಚ್ಚು ಮನಸಿನ ನಗು ಎಲ್ಲವರನ್ನೂ ತನ್ನವರೇ ಎಂದು ಕಾಣುವ ಭಾವ  ವಿಧೇಯತೆಯ ಸಾಕಾರ ಮೂರ್ತಿಕಾಯಕವೇ ಕೈಲಾಸ ಎಂಬ ಮಾತಿಗೆ ಅನ್ವರ್ಥವಾಗಿದ್ದ ಭಾವ ಹೃದಯ ಸಂಭನದಿಂದ ನಿಧನರಾದರು.ಸಾಯುವ ಮೊದಲು ತೋಟದಲ್ಲಿ ಹಲವಾರು ಹೂವಿನ ಗಿಡಗಳನ್ನು ನೆಟ್ಟು ನೆರೆ ಹೊರೆಯವರೊಂದಿಗೆ ತಮಾಷೆ ಮಾಡಿಕೊಂಡು ಹೋದರು.ಅಳುತ್ತಾ ಅಳುತ್ತಾ ಭೂಮಿಗೆ ಬಂದ ಜೀವ ನಗುತ್ತಾ ನಗುತ್ತಾ ಹೊರಟು ಹೋಯಿತು.ಬದುಕಿದ್ದಾಗ ಯಾರಿಗೂ ಉಪದ್ರವ ಕೊಡದ ಜೀವ ಸತ್ತಾಗಲೂ ಯಾರಿಗೂ ತೊಂದರೆ ಕೊಡಲಿಲ್ಲ. ಸುರಿಯುತ್ತಿರುವ ವರ್ಷಧಾರೆ ತಕ್ಷಣ ನಿಂತಿತು ಕಾರ್ಮೋಡ ಚದುರಿ ಹಾರಿಹೋಯಿತು ಚಿತೆಗೆ ಹಚ್ಚಿದ ಅಗ್ನಿ ನಿರಂತರವಾಗಿ ಉರಿದು ಅವಸವರವಾಗಿ ಅವರ ಭೌತಿಕ ಶರೀರವನ್ನು ಕರಕಗಿಸಿ ಹಾಕಿತು.
ಸುದ್ದಿ ಅನೇಕರಿಗೆ ತಡವಾಗಿ ತಿಳಿಯಿತು ಕೆಲವರು ಇನ್ನೂ ಕೂಡ ಆ ವ್ಯಕ್ತಿಯು ಬದುಕಿಲ್ಲ ಎಂದರೆ ನಂಬದ ಸ್ಥಿತಿ ನಿರ್ಮಾಣ ಆಗಿದೆ.ಇಪ್ಪತ್ತೈದು ವರುಷಗಳ ಹಿಂದೆ ಯಾವ ವ್ಯಕ್ತಿಯನ್ನು ಯಾವ ಸ್ಥಳದಲ್ಲಿ ಭೇಟಿ ಮಾಡಿ ಸಂಬಂಧ ಮಾಡಿಕೊಂಡೆನೋ ಮೊನ್ನೆ ಅದೇ ಮಾರ್ಗದ ಮೂಲಕ ವೇ ಅವರ ಅಸ್ತಿಯನ್ನು ಪುಣ್ಯಕ್ಷೇತ್ರಕ್ಕೆ ಒಯ್ಯುವ ಸನ್ನಿವೇಷ ಎದುರಾಯ್ತು ದುಃಖ ಉಮ್ಮಳಿಸಿತು
ಈ ಸಾವು ನ್ಯಾಯವೇ ಎನಿಸಿತು.

RELATED ARTICLES  ಹಿಂದು ಮತ್ತು ಹಿಂದುಗಳ ಸ್ವಾಭಾವಿಕ ಗುಣ-ಧರ್ಮ (‘ಶ್ರೀಧರಾಮೃತ ವಚನಮಾಲೆ’).

ಭಾವ ನೀವು ಬಹಳ ಆರಾಮದಾಯಕವಾಗಿ ಹೊರಟು ಹೋದಿರಿ.ನಿಮ್ಮ ಗುಣಗಾನ ಸಾರ್ವಜನಿಕರ ಬಾಯಲ್ಲಿ ಕೇಳಿದಾಗ ಅದು ಹೇಗೆ ನೀವು ಇಷ್ಡೆಲ್ಲಾ ಜನರ ಒಲುಮೆಗೆ ಪಾತ್ರರಾದಿರಿ ಎಂದು ಅಚ್ಚರಿ ಆಗುತ್ತದೆ.ಭಗವಂತ ‌ನಿಮ್ಮ ಆತ್ಮಕ್ಕೆ ಶಾಂತಿಯನ್ನು ದಯಪಾಲಿಸಲಿ ಎಂದು ಬೇಡಿಕೊಳ್ಳುವ ಯೋಗ್ಯತೆ ನನಗಿಲ್ಲ ಅದು ಅಹಂಕಾರದ ಮಾತಾಗುತ್ತದೆ.ಸದ್ಗತಿ ನಿಮಗಲ್ಲದೇ ಮತ್ತೆ ಯಾರಿಗೆ ಹೇಳಿ ?
ನೀವು ನಗುತ್ತ ಸಾಗಿದಿರಿ ನಿಮ್ಮ
ನಗಲಿ ನಾವಿಲ್ಲಿ ದಂಗಾಗಿ ಹೋಗಿದ್ದೇವೆ.ಬದುಕಿರುವ ವರೆಗೆ ಎಲ್ಲ ಸಂಬಂಧ ಗಳನ್ನೂ ಸುಂದರವಾಗಿ ನಿಭಾಯಿಸಿದಿರಿ ಮಾತು ಮತ್ತು ಕೃತಿಯಲ್ಲಿ ಎಂದಿಗೂ ಬೇಧ ಮಾಡದೇ ಮಾಣಿಕ್ಯವಾದಿರಿ
ಈ ನೆಲದ ನಂಬಿಕೆಯಂತೆ ಇಂದು ನಿಮಗೆ ವೈಕುಂಠಲೋಕ ಪ್ರಾಪ್ತಿ ನಿಮ್ಮಂಥ ಭಾಗ್ಯವಂತರು ಮತ್ಯಾರು ಹೇಳಿ ಹೋಗಿಬನ್ನಿ ಭಾವ ನಮಸ್ಕಾರ.

ಚಿದಾನಂದ ಹರಿ ಭಂಡಾರಿ ಕಾಗಾಲ.