ಇದೊಂದು ಅಲೆಯ ಕಥೆ. ದೊಡ್ಡ ಸಮುದ್ರದ ಪುಟ್ಟ ಅಲೆಯ ಕಥೆ. ಅಲೆಗಳು ತುಂಬಾ ಸೊಗಸು. ಅವು ಅತ್ಯಂತ ಆಳದ ಅತ್ಯಂತ ವಿಸ್ತಾರದ ಸಾಗರದ ಮಧ್ಯದಿಂದ ಎದ್ದು ಬರುತ್ತವೆ . ದೊಡ್ಡ ಸಾಗರವೆಂಬ ರಂಗಸ್ಥಳದಲ್ಲಿ ಅಲೆಗಳೆಂಬ ನರ್ತಕಿಯರ ನರ್ತನ. ಹಾಗೊಂದು ಅಲೆ….ಅದು ಆಗ ತಾನೇ ಹುಟ್ಟಿತ್ತು. ಸಮುದ್ರದಿಂದ ಮೇಲಕ್ಕೆದ್ದಿತ್ತು. ಹಿತವಾದ ಗಾಳಿ ,ಒಳ್ಳೆಯ ಬಿಸಿಲು, ವಿಶಾಲ ದೃಶ್ಯ. ಅದು ಸಮುದ್ರವನ್ನು ನೋಡಿತು. ಹಾಗೆಯೇ ತೀರವನ್ನೂ ನೋಡಿತು. ಆ ಅಲೆಯ ಮುಂದೆ ಹಲವು ಅಲೆಗಳು ಸಾಗಿಹೋಗುತ್ತಿದ್ದವು. ಅವೆಲ್ಲಾ ನೋಡಲು ಎಷ್ಟು ಚೆಂದ… ಧನ್ಯ ನಾನು ಎಂದು ಆ ಅಲೆ ಖುಷಿಪಟ್ಟಿತು. ಅಷ್ಟರಲ್ಲಿ ಅದಕ್ಕೆ ಸತ್ಯದರ್ಶನವಾಯ್ತು. ಮುಂದೆ ಸಾಗುತ್ತಿದ್ದ ಅಲೆ ತೀರಕ್ಕೆ ಹೋಗಿ ಬಿತ್ತು. ಅರೆ ಕ್ಷಣದಲ್ಲಿ ಅದಿಲ್ಲವಾಯ್ತು. ವಿಲಾಸಕ್ಕೆ , ವೈಭವಕ್ಕೆ ಅದೆಂತಾ ಅಂತ್ಯ….!
ಮುಂದಿನ ಎರಡು ಮೂರು ಅಲೆಗಳು ಅದೇ ರೀತಿಯಾದಾಗ ಇದಕ್ಕೆ ಸಂಕಟ ಪ್ರಾರಂಭವಾಯ್ತು ಮುಂದೆ ನನ್ನ ಸರದಿ ಬರಲಿದೆ. ನಾನೂ ಹೀಗೇ ದಡಕ್ಕೆ ಅಪ್ಪಳಿಸಿ ಇಲ್ಲವಾಗುತ್ತೇನೆ. ಎಂದು ಆತಂಕಗೊಂಡಿತು. ಅದು ಹಾಗೆಯೇ ಮುಂದಿನ ಕಷ್ಟ ನೆನೆಸಿಕೊಂಡರೆ…. ಹಿಂದಿನ ಸುಖ ಮರೆತುಹೋಗುತ್ತದೆ…..ಇಂದಿನ ಸುಖ ಇಲ್ಲವಾಗುತ್ತದೆ. ಆ ಅಲೆಗೂ ಹಾಗೆಯೇ ಆಯ್ತು. ನನ್ನ ಅವಸ್ಥೆ ಇಷ್ಟೇ ಎಂದು ಬೇಸರಗೊಂಡಿತು. ಆಗ ಅದರ ಹಿಂದಿನಿಂದ ಬರುತ್ತಿದ್ದ ಅಲೆ ಸತ್ಯ ದರ್ಶನ ಮಾಡಿಸಿತು. ನೆಮ್ಮದಿ ಕೊಡುವ ಸತ್ಯವೊಂದನ್ನು ಹೇಳಿತು. ” ನೋಡು ಸರಿಯಾಗಿ ಭಾವಿಸು. ನೀನು, ನಾನು ಅಲೆಗಳಲ್ಲ…ನಾವು ಸಮುದ್ರ. ಸಮುದ್ರಕ್ಕೆ ಸಾವಿಲ್ಲ ಅದು ಅವಿನಾಶಿ. ನಾನು ಅಲೆ ಎಂದು ಭಾವಿಸುವವರೆಗೆ ಚಿಂತೆ. ಒಂದು ಕ್ಷಣ ಆಳಕ್ಕಿಳಿದು ಪ್ರಜ್ಞೆ ವಿಸ್ತರಿಸಿ ನೋಡಿದರೆ ನಾನು ಸಾಗರ ನನಗೆ ಸಾವಿಲ್ಲ ಎಂಬ ಅರಿವು ಮೂಡುತ್ತದೆ. ಎಂದು.
ಇದು ಕೇವಲ ಅಲೆಗಳ ಕಥೆಯಲ್ಲ…..ನಮ್ಮ ಕಥೆಯೂ ಹೌದು. ಇದರಲ್ಲಿ ಪರಮಜ್ಞಾನಿ ಹಾಗೂ ಸಂಸಾರಿಗಳ ಕಥೆಯೂ ಇದೆ. ಸಾಮಾನ್ಯ ಸಂಸಾರಿಗಳು ತಾವು ಅಲೆಗಳು ಎಂದು ಭಾವಿಸಿದ್ದಾರೆ. ಆದರೆ ಪರಮಜ್ಞಾನಿಗಳು ತಾವು ಸಾಗರವೆಂಬ ಸತ್ಯವನ್ನು ಅರಿತಿದ್ದಾರೆ. ನಮ್ಮ ಮತ್ತು ಅವರ ಭಾವದಲ್ಲಿ ,ಪ್ರಜ್ಞೆಯಲ್ಲಿ ವ್ಯತ್ಯಾಸವಿದೆ. ನಮ್ಮದು ಸೀಮಿತ ಅವರದು ವಿಶ್ವವ್ಯಾಪಿ. ಹಾಗಾಗಿ ನಾನು ಕೇವಲ ಅಲೆ ಮಾತ್ರವಲ್ಲ ಸಾಗರವಾಗಿರುವೆ ಎಂಬ ಭಾವವಿರಲಿ. ಆ ಭಾವದ ಹಿಂದೆ ಸಂತೋಷವಿದೆ…ಸಮಾಧಾನವಿದೆ…ನೆಮ್ಮದಿಯಿದೆ. ಶಂಕರಾಚಾರ್ಯರು ಹೇಳಿದ್ದು ಅದನ್ನೇ ..” ನೀನು ಇದಲ್ಲ ಅದು” ಎಂದು.
ನಮ್ಮಲ್ಲಿ ಇರುವುದು ಅಲೆದಾಟ. ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಅಲೆದಾಡುವ ಅಲೆಗಳು ನಾವು. ನಮ್ಮ ಪ್ರಜ್ಞೆಯನ್ನು ಬದಲಾಯಿಸಿಕೊಳ್ಳಬೇಕು. ನಾವು ಜೀವಾತ್ಮ ಎಂದು ಭಾವಿಸುತ್ತೇವೆ ಅದನ್ನು ಬದಲಾಯಿಸಿಕೊಂಡು ನಾವು ವಿಶ್ವಾತ್ಮ ಎಂದು ಭಾವಿಸಬೇಕು. ಸಾಗರದಲ್ಲಿ ಅದೇ ನೀರೇ ಪುನಃ ಅಲೆಯಾಗಿ ಮೇಲೇಳುವಂತೆ ಆತ್ಮಕ್ಕೆ ಆತ್ಮ ಹಾಗೇ ಇದ್ದು ಆಕಾರ ಮಾತ್ರ ಬದಲಾಗುತ್ತದೆ. ಹೊಸ ಬಟ್ಟೆ ಸಿಕ್ಕಾಗ ಹಳೆ ಬಟ್ಟೆ ಬದಲಾಯಿಸುವಂತೆ. ಎರಡಿಲ್ಲದ್ದು ಅದೇ ಅದ್ವೈತ. ಆ ಉತ್ಕೃಷ್ಟ ತತ್ವ ಎಲ್ಲರಿಗೂ ಮನನವಾಗಬೇಕು. ಶ್ರೀ ಕೃಷ್ಣ ಹೇಳಿದ್ದು ಇದನ್ನೇ….”ಬಟ್ಟೆಗಳು ಹಳತಾಗಿವೆ. ಅವುಗಳನ್ನು ಬಿಟ್ಟು ಹೇಗೆ ಹೊಸ ಬಟ್ಟೆಗಳನ್ನು ತೊಟ್ಟು ಸಂಭೃಮಿಸುತ್ತೇವೋ ಹಾಗೇ ಆತ್ಮ ಹೊಸ ಹೊಸ ಬಟ್ಟೆಗಳನ್ನು ತೊಡುತ್ತದೆ.” ಎಂದು.
ದೃಷ್ಟಿ ವಿಸ್ತರಿಸಿ ಭಾವ ಆಳಕ್ಕಿಳಿಸಿದರೆ ಬದುಕಿನ ಸತ್ಯದ ಅರಿವು ನಮಗಾಗುತ್ತದೆ. ನಮ್ಮ ಪೂರ್ವಜರು ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರವನ್ನು ಕಂಡುಹಿಡಿದಿದ್ದಾರೆ. ಅದು ಯಾವುದೆಂದರೆ.. ನಾನು ಅಲೆಯಲ್ಲ ಸಾಗರ ಎಂಬ ಪರಮಾನುಭೂತಿ ಇದು ಬಂದರೆ ಅಜ್ಞ ಸರ್ವಜ್ಞ ನಾಗುತ್ತಾನೆ. ಅಶಕ್ತ ಶಕ್ತನಾಗುತ್ತಾನೆ. ದುಃಖಿ ಆನಂದಿತನಾಗುತ್ತಾನೆ. ಸೀಮಿತನಾಗಿದ್ದವನು ವಿಶ್ವಾತ್ಮನಾಗುತ್ತಾನೆ….ಅದು ನಾವಾಗಬೇಕು.
✍️ ಡಾ.ರವೀಂದ್ರ ಭಟ್ಟ ಸೂರಿ.