ತಂದೆ ತನ್ನ ಕೆಲಸದಲ್ಲಿ ಮಗ್ನನಾಗಿದ್ದ. ಅಷ್ಟರಲ್ಲಿ ಮಗ ಬಂದ. ” ಅಪ್ಪ…. ನಾನು ನಿನಗೊಂದು ಪ್ರಶ್ನೆ ಕೇಳಲೇ? ಎಂದ. ಅಪ್ಪನಿಗೆ ಕಿರಿಕಿರಿಯಾಯಿತು. ಆದರೂ ಕೇಳು ಎಂದ. ಮಗ ಕೇಳಿದ…. ಅಪ್ಪಾ ನೀನು ಒಂದು ಗಂಟೆಯಲ್ಲಿ ಎಷ್ಟು ದುಡಿಯುತ್ತೀ? ಎಂದು. ಇದನ್ನು ಕೇಳಿ ಅಪ್ಪನಿಗೆ ಸಿಟ್ಟು ಬಂತು. ” ನಿನ್ನ ಕೆಲಸವಲ್ಲ ಇದು. ಇದೆಲ್ಲ ನಿನಗೆ ಯಾಕೆ ಬೇಕು?” ಎಂದ. ಮಗ ಕೇಳಲಿಲ್ಲ ಪೀಡಿಸಿದ . “ಅಪ್ಪ ಅದು ನನಗೆ ಬೇಕು ಹೇಳು “ಎಂದು. ಮಗನ ಕಾಟ ತಡೆಯಲಾರದೆ ಅಪ್ಪ ಹೇಳಿದ ” ನನ್ನ ಒಂದು ಗಂಟೆಯ ದುಡಿತ ಐದು ನೂರು ರೂಪಾಯಿ” ಎಂದು. ತಕ್ಷಣ ಮಗ ಕೇಳಿದ “ಅಪ್ಪ ಮೂರು ನೂರು ರೂಪಾಯಿ ಕೊಡುತ್ತೀಯಾ ಸಾಲವೆಂದು” ಎಂದು . ಅಪ್ಪನಿಗೆ ಮತ್ತಷ್ಟು ಸಿಟ್ಟು ಬಂತು ” ನಿನಗ್ಯಾಕೆ ಸಾಲ ಇದಕ್ಕಾ ಕೇಳಿದ್ದು ನೀನು… ಸುಮ್ಮನೆ ಹೋಗಿ ಮಲಗು” ಎಂದು ಗದರಿಸಿದ. ಮಗ ಅಲ್ಲಿಂದ ಮನೆಯೊಳಗೆ ಹೋದ. ಸ್ವಲ್ಪ ಸಮಯ ಕಳೆಯಿತು. ಅಪ್ಪ ಸಮಾಧಾನದಿಂದ ವಿಚಾರ ಮಾಡಿದ. ಯಾವಾಗಲೂ ಕೇಳದಿದ್ದ ಮಗ ಇಂದು ಕೇಳಿದ್ದಾನೆ. ಏನಾದರೂ ಅನಿವಾರ್ಯ ಪರಿಸ್ಥಿತಿ ಇತ್ತೋ ಏನೋ? ನಿಜಕ್ಕೂ ಬೇಕಾಗಿತ್ತೋ ಏನೋ? ಎಂದೆನ್ನಿಸಿತು. ತಕ್ಷಣ ಮಗನ ಬಳಿ ಹೋದ. ಪ್ರೀತಿಯಿಂದ ಮಾತನಾಡಿಸಿದ. ” ಹೇಳು ನಿನಗೆ ಮೂರು ನೂರು ಬೇಕು ತಾನೆ ತೆಗೆದುಕೋ” ಎಂದ. ಅದನ್ನು ತೆಗೆದುಕೊಂಡ ಮಗ ತನ್ನ ತಲೆದಿಂಬಿನ ಅಡಿಯಿಂದ ಮತ್ತೆ ಎರಡು ನೂರು ರೂಪಾಯಿ ತೆಗೆದ ಲೆಕ್ಕ ಮಾಡಿ ಅಪ್ಪನಿಗೆ ಕೊಟ್ಟು ಹೇಳಿದ…. “ನನಗೆ ನಿನ್ನ ಒಂದು ಗಂಟೆ ಬೇಕಾಗಿತ್ತು . ಅದು ಪ್ರತಿನಿತ್ಯ ಸಿಗುತ್ತಿರಲಿಲ್ಲ. ಅದಕ್ಕೆ ನಿನ್ನ ಒಂದು ಗಂಟೆಯ ದುಡಿತವೆಷ್ಟು ? ಎಂದು ಕೇಳಿದ್ದು. ಈ ಐದು ನೂರು ಇಟ್ಟುಕೊಂಡು ದಿನಾಲು ಒಂದು ಗಂಟೆ ಬೇಗ ಮನೆಗೆ ಬಾ” ಎಂದ. ಅಪ್ಪನಿಗೆ ತನ್ನ ತಪ್ಪಿನ ಅರಿವಾಗಿ ಜ್ಞಾನೋದಯವಾಯಿತು. ಇದು ರೂಪಾಯಿ ಮತ್ತು ಭಾವನೆಗಳ ಮಧ್ಯದ ತಾಕಲಾಟ. ಇಲ್ಲಿ ಭಾವ ಮುಖ್ಯ ಹಣವಲ್ಲ ಎಂಬ ಅರಿವು ಅಪ್ಪನಿಗಾಯ್ತು.
ಸಮಯ ಎಂದರೇನು? ಅದು ನಮ್ಮ ಆಯಸ್ಸಿನ ಒಂದು ಖಂಡ. ಹಣ ಸಂಪತ್ತು ಬದುಕಿನಲ್ಲಿ ಬಂದು ಹೋಗುತ್ತಿರುತ್ತದೆ ಆದರೆ ಸಮಯ ಹಾಗಲ್ಲ ಅದು ಮರಳಿ ಬರುವುದಿಲ್ಲ. ಈ ಭೂಮಂಡಲದ ಯಾವ ವಸ್ತುವೂ ಸಮಯದಷ್ಟು ಅಮೂಲ್ಯವಲ್ಲ. ಆ ಭಗವಂತ ನಮಗೆ ಆಯಸ್ಸು ಕೊಟ್ಟ… ಬದುಕಲು ಬೇಕಾದ ಭೂಮಿ ಕೊಟ್ಟ…. ಗಾಳಿ, ನೀರು, ಬಂಧು ಮಿತ್ರರು, ಒಡನಾಡಿಗಳು ಹೀಗೆ ಬದುಕಲು ಬೇಕಾದ ಎಲ್ಲ ಸೌಕರ್ಯಗಳನ್ನು ಕೊಟ್ಟ. ಕೊನೆಗೆ ನೋವಿನ ಮೂಲಕ ಪಕ್ವತೆಯನ್ನು ಕೊಟ್ಟ. ನಾವು ಮಾಡಿದ ಪಾಪ ತೀರಿಸಿಕೊಟ್ಟ. ಹೀಗೆ ಬದುಕಿನಲ್ಲಿ ಎಲ್ಲವನ್ನೂ ಕೊಟ್ಟ ಭಗವಂತನಿಗೆ ನಾವೇನು ಕೊಡುತ್ತೇವೆ ? ದೇವ ನಮ್ಮಿಂದ ಹಣ ,ಸಂಪತ್ತು ,ಆಸ್ತಿ ಪಾಸ್ತಿ ಏನನ್ನೂ ಕೇಳುವುದಿಲ್ಲ. ಆದರೆ ಸ್ವಲ್ಪ ಸಮಯವನ್ನಾದರೂ ನಮ್ಮಿಂದ ಕೊಡಲು ಸಾಧ್ಯವಿಲ್ಲವೆ. ನಾವು ನಮ್ಮ ಹೆಂಡತಿ -ಮಕ್ಕಳು, ಬಂಧು- ಬಾಂಧವರು, ಗೆಳೆಯರು, ಕಚೇರಿ ಹೀಗೆ ಎಲ್ಲರಿಗೂ ಸಮಯ ಕೊಡುತ್ತೇವೆ. ಆದರೆ ದೇವರಿಗೆ ಸಮಯ ಕೊಡುವ ಸಂದರ್ಭದಲ್ಲಿ ನಮಗೆ ಸಮಯವಿಲ್ಲ ಎನ್ನುತ್ತೇವೆ. ಎಲ್ಲವನ್ನೂ ಕೊಟ್ಟ ಅಂತಹ ಪ್ರಭುವಿಗೆ ಕೊಡಲು ಸಮಯವಿಲ್ಲವೆಂದರೆ ನಮ್ಮಷ್ಟು ಕೃತಘ್ನರು ಯಾರೂ ಇಲ್ಲ.
ಈ ಸಮಯ ನಮಗೆ ಆ ಭಗವಂತ ಕೊಟ್ಟಿದ್ದು. ಅವನು ಕೊಟ್ಟಿದ್ದರಲ್ಲಿ ಸ್ವಲ್ಪವನ್ನಾದರೂ ಅವನಿಗಾಗಿ ಮೀಸಲಿಡ ಬೇಡವೇ? ನಾವು ದೇವರಿಗೆ ನೈವೇದ್ಯ ಮಾಡುತ್ತೇವೆ, ಪೂಜೆ ಮಾಡುತ್ತೇವೆ ನಂತರ ಪ್ರಸಾದವೆಂದು ಸ್ವೀಕರಿಸುತ್ತೇವೆ. ದೇವರಿಗೆ ಕೊಟ್ಟ ಹಣ್ಣು ಕಾಯಿಗಳು ಭಕ್ಷ್ಯ ಭೋಜ್ಯಗಳು ಪ್ರಸಾದವಾಗುವ ಹಾಗೆ ದೇವರಿಗೆ ಕೊಟ್ಟ ಸಮಯವೂ ಪ್ರಸಾದವಾಗುತ್ತದೆ. ಆಗ ದೇವರಿಗೆ ಕೊಟ್ಟು ಉಳಿದ ಸಮಯವೆಲ್ಲ ನಮ್ಮ ಪಾಲಿಗೆ ಪ್ರಸಾದ…. ಕೊಡದಿದ್ದರೆ ಬದುಕು ವಿಷಾದ.
ನಾವು ತಿನ್ನುವ ಸಂಸ್ಕೃತಿ ಯವರಲ್ಲ…. ಸೇವಿಸುವ ಸಂಸ್ಕೃತಿಯವರು. ಅಂದು ಸೇವಿಸುವ ಮುನ್ನ ದೇವರಿಗೆ ಕೊಟ್ಟು ಉಳಿದಿದ್ದನ್ನು ಪ್ರಸಾದವೆಂದು ಸ್ವೀಕರಿಸುತ್ತಿದ್ದರು. ಆದರೆ ಇಂದು ನಮ್ಮ ಧಾವಂತದ ಬದುಕಿನಲ್ಲಿ ನಾವು ಹಣ ಸಂಗ್ರಹಕ್ಕೆ ಕೊಟ್ಟಷ್ಟು ಸಮಯವನ್ನು ದೇವರಿಗೆ ಕೊಡುತ್ತಿಲ್ಲ . ನಮ್ಮ ಪೂರ್ಣ ಬದುಕನ್ನು ಶ್ರೀರಾಮನಿಗೆ ಕೊಟ್ಟ ಹನುಮಂತ, ಸೀತೆ ,ಕಪಿಸೈನ್ಯ, ಇವರೆಲ್ಲ ನಮಗೆ ಆದರ್ಶರಾಗಬೇಕು. ಅವರ ಬದುಕಲ್ಲಿ ಅದು ಪ್ರಸಾದವಾಗಿ ಹೇಗೆ ತಿರುಗಿ ಬಂತೆಂದರೆ ರಾಮ ವರ ಕೇಳುವಾಗ “ನನಗಾಗಿ ತ್ಯಾಗ ಮಾಡಿದ ಕಪಿಗಳಿಗೆ ಮತ್ತೆ ಜೀವ ಬರಲಿ” ಎಂದು ಹೇಳಿದನಂತೆ. ರಾಮನಿಗಾಗಿ ಜೀವಕೊಟ್ಟ ಜಟಾಯುವಿನ ಅಂತ್ಯ ಸಂಸ್ಕಾರವನ್ನು ರಾಮನೇ ಮಾಡಿದನಂತೆ. ಅವರಂತೆ ಪೂರ್ಣ ಬದುಕನ್ನು ಕೊಡಲಾಗದಿದ್ದರೂ ಸ್ವಲ್ಪವನ್ನಾದರೂ ಕೊಡೋಣ. ಅದರಿಂದ ನಮ್ಮ ಉಳಿದ ಬದುಕು ಬಂಗಾರವಾಗುತ್ತದೆ.
ಶ್ರೀಕೃಷ್ಣ ಧರ್ಮರಾಜ ಮತ್ತು ದುರ್ಯೋಧನನಿಗೆ ಸವಾಲು ಹಾಕಿದ. “ನಾನು ಕುಳಿತ ಕೋಣೆಯ ತುಂಬಾ ನನಗೆ ಕೊಡಿ” ಎಂದು. ತಕ್ಷಣ ದುರ್ಯೋಧನ ನಾಣ್ಯಗಳಿಂದ ಕೋಣೆಯನ್ನು ತುಂಬಿಸಿದ. ಧರ್ಮರಾಜ ತನ್ನ ಸರದಿ ಬಂದಾಗ ಕೋಣೆಯಲ್ಲಿದ್ದ ನಾಣ್ಯಗಳನ್ನೆಲ್ಲ ಖಾಲಿ ಮಾಡಿಸಿ ಕೋಣೆಯ ಮಧ್ಯದಲ್ಲಿ ಒಂದು ದೀಪ ಹಚ್ಚಿದ . ಪೂರ್ಣ ಕೋಣೆ ಬೆಳಕಾಯಿತು. ಶ್ರೀಕೃಷ್ಣ ಯಾರಿಗೆ ದುಡ್ಡಿನ ಹಮ್ಮು… ಯಾರಲ್ಲಿ ವಿನೀತ ಭಾವ ಎಂಬುದನ್ನು ಪ್ರಕಟಪಡಿಸಿದ. ಬದುಕು ಬೆಳಕು ಎರಡೂ ಒಂದೇ . ನಮ್ಮ ಬದುಕನ್ನು ಭಗವಂತನಿಗೆ ಎಷ್ಟಾದರೂ ಕೊಡೋಣ …..ಸಾಧ್ಯವಾದರೆ ಅಷ್ಟೂ ಕೊಡೋಣ….. ಅದಿಲ್ಲದಿದ್ದರೆ ಇಷ್ಟಾದರೂ ಕೊಡೋಣ. ಎಲ್ಲಕ್ಕಿಂತಲೂ ದೊಡ್ಡದಾದ, ಶ್ರೇಷ್ಠವಾದ ದಾನವದು. ” ಕೆರೆಯ ನೀರನು ಕೆರೆಗೆ ಚೆಲ್ಲುವ” ಭಾವ ನಮ್ಮೆಲ್ಲರದಾಗಲಿ.
✍️ ಡಾ.ರವೀಂದ್ರ ಭಟ್ಟ ಸೂರಿ.