ಆಕೆ ಬಡವೆ, ವೃದ್ಧೆ ಕೂಡ. ಆದರೆ ಶ್ರದ್ಧೆಗೆ ಕಡಿಮೆಯಿಲ್ಲ. ದೇಹ ಶಿಥಿಲವಾಗುತ್ತಿದ್ದರೂ ಮನಸ್ಸು ಮಾಗಿತ್ತು, ಪಕ್ವವಾಗಿತ್ತು. ಅವಳು ಕೇವಲ ಬಹಿರಂಗದಲ್ಲಿ ಮಾತ್ರ ಬೆಳೆದವಳಲ್ಲ ಅಂತರಂಗದಲ್ಲೂ ಬೆಳೆದವಳು. ವೃದ್ಧರು ಅಂದರೆ ಹಾಗೆ …ಕೂದಲು ಬಿಳಿಯಾಗುವಾಗ ಮನಸ್ಸು ಬಿಳಿಯಾಗಬೇಕು. ದೇಹ ಬಾಗುವಾಗ ಮನಸ್ಸು ಮಾಗಬೇಕು. ಅವಳು ಬದುಕಿನಲ್ಲಿ ಮಾಗಿದ್ದಳು. ಸದ್ಭಕ್ತೆ. ಶಬರಿ ಅಂಥವಳು. ನಿತ್ಯ ಭಗವದ್ಭಾವ, ಭಕ್ತಿ, ಪ್ರಾರ್ಥನೆ. ಅದು ಅವಳ ದಿನಚರಿಯಾಗಿತ್ತು. ಆದರೆ ಅವಳ ಮನಸ್ಸಿನಲ್ಲಿ ಆಗಾಗ ಸಣ್ಣ ಆಸೆಯೊಂದು ಸುಳಿದು ಹೋಗುತ್ತಿತ್ತು . ಅದನ್ನು ದೇವರಲ್ಲಿ ಕೇಳಲು ಸಂಕೋಚ. ಎಷ್ಟೋ ವರ್ಷ ಕಳೆಯಿತು. ಒಂದು ದಿನ ಕನಸಿನಲ್ಲಿ ಭಗವಂತ ಕಾಣಿಸಿಕೊಂಡ. ಪ್ರೀತಿಯಿಂದ ಮಾತನಾಡಿಸಿದ. ಆಗ ಅವಳು ತನ್ನ ಬೇಡಿಕೆಯನ್ನು ದೇವರ ಮುಂದಿಟ್ಟಳು. ” ನೀನೊಮ್ಮೆ ನಮ್ಮ ಮನೆಗೆ ಊಟಕ್ಕೆ ಬರಬೇಕು” ಎಂದು. ಅದು ಅವಳ ಆಸೆಯಾಗಿತ್ತು. ದೇವರು ಕೂಡಲೇ ಒಪ್ಪಿದ. ಕನಸಿನಲ್ಲಿ ಬಂದ ದೇವರು ನಾಳೆಯೇ ಊಟಕ್ಕೆ ಬರುತ್ತೇನೆಂದ. ಅವಳ ಆನಂದಕ್ಕೆ ಪಾರವೇ ಇರಲಿಲ್ಲ. ಬೆಳಿಗ್ಗೆ ಎದ್ದವಳೇ ತನ್ನ ಹಣದ ಸಂಚಿಯಿಂದ ಹಣ ತೆಗೆದು ಎಣಿಸಿದಳು. ಇದ್ದಬಿದ್ದ ಹಣವನ್ನೆಲ್ಲ ಸೇರಿಸಿ ಪೇಟೆಗೆ ಹೋದಳು. ಉತ್ತಮ ಆಹಾರ ಪದಾರ್ಥಗಳನ್ನು ತಂದು ಚೆನ್ನಾಗಿ ಅಡುಗೆ ಮಾಡಿದಳು. ದೇವನಿಗಾಗಿ ಕಾಯುತ್ತಿದ್ದಳು. ಸಮಯ ಸರಿಯುತ್ತ ಇತ್ತು. ಅಷ್ಟರಲ್ಲಿ ಬಾಗಿಲು ತಟ್ಟಿದ ಶಬ್ದ. ಓಡೋಡಿ ಹೋಗಿ ಬಾಗಿಲು ತೆರೆದು ನೋಡಿದರೆ ಒಬ್ಬ ಭಿಕ್ಷುಕ. ಆತ ಇವಳಲ್ಲಿ ಊಟ ಕೇಳಿದ. ಅವಳಿಗೆ ಬಡತನದ, ಹಸಿವಿನ ಅನುಭವ ಇದ್ದುದರಿಂದ ಮರು ಮಾತನಾಡದೆ ಅವನನ್ನು ಮನೆಯೊಳಗೆ ಕರೆದು ಊಟ ಹಾಕಿದಳು. ಆ ಭಿಕ್ಷುಕ ಭಾರಿ ಖುಷಿಯಿಂದ ಊಟ ಮಾಡಿದ. ಸಂತೃಪ್ತಿಯಿಂದ ಅಲ್ಲಿಂದ ತೆರಳಿದ. ಅವಳಿಗಾದರೋ ದೇವರ ಪ್ರತೀಕ್ಷೆ . ಆದರೆ ಈಗ ಅಡುಗೆ ಮಾಡಿದ್ದೆಲ್ಲ ಖಾಲಿಯಾಗಿತ್ತು. ದೇವರು ಬಂದರೆ ಏನು ಮಾಡಲಿ? ಎಂದು ವಿಚಾರ ಮಾಡಿ ಮತ್ತೆ ಮನೆಯನ್ನೆಲ್ಲ ಹುಡುಕಿ ಇದ್ದ ಬಿದ್ದ ಹಣವನ್ನು ಕೂಡಿಸಿಕೊಂಡು ತನ್ನಲ್ಲಿದ್ದ ಬಟ್ಟೆಯನ್ನು ಮಾರಿ ಬಂದ ಹಣವನ್ನು ತೆಗೆದುಕೊಂಡು ಮತ್ತೆ ಪೇಟೆಗೆ ಹೋದಳು. ಮತ್ತೆ ಸಾಮಾನನ್ನು ಖರೀದಿಸಿ ತಂದು ಅಡುಗೆ ಮಾಡಿದಳು. ದೇವರಿಗಾಗಿ ಕಾಯುತ್ತಾ ಕುಳಿತಳು. ಅಷ್ಟರಲ್ಲಿ ದೊಡ್ಡ ಶಬ್ದವಾಯಿತು. ತಕ್ಷಣ ಹೋಗಿ ಬಾಗಿಲು ತೆಗೆದಳು. ಬಾಗಿ ನಲ್ಲೊಬ್ಬಳು ಮುದುಕಿ ನಿಂತಿದ್ದಳು. ಅವಳು ನನಗೆ ಊಟ ಕೊಡು…. ದೇವರಲ್ಲಿ ಭಕ್ತಿ ಇದ್ದರೆ ನನಗೆ ಊಟ ಕೊಡು ಎಂದಳು. ಅವಳಿಗೂ ಊಟ ಕೊಟ್ಟಳು. ಊಟ ಮಾಡಿ ಮುದುಕಿ ತೆರಳಿದಳು. ಈಗ ಮತ್ತೆ ಇವಳನ್ನು ಚಿಂತೆ ಆವರಿಸಿತು… “ದೇವರಿಗೆ ಏನು ಕೊಡಲಿ?” ಎಂಬ ಪ್ರಶ್ನೆ ಅವಳಿಗೆದುರಾಯಿತು. ಅಷ್ಟರಲ್ಲಿ ಅವಳಿಗೆ ತಲೆತಲಾಂತರದಿಂದ ಮನೆಯಲ್ಲಿದ್ದ ಹಿರಿಯರ ಬಳುವಳಿ ಯಾಗಿದ್ದ ಬೆಳ್ಳಿ ತಟ್ಟೆಯ ನೆನಪಾಯಿತು. ಅದನ್ನು ಮಾರಿ ಮತ್ತೆ ಸಾಮಾನು ಖರೀದಿ ಮಾಡಿದಳು. ಅಡುಗೆ ಮಾಡಿದಳು. ದೇವರಿಗಾಗಿ ಕಾಯುತ್ತಾ ಕುಳಿತಳು. ಮತ್ತೆ ಬಾಗಿಲ ಶಬ್ದ. ತೆರೆದರೆ ಹೊರಗೆ ಬೈರಾಗಿ. ಏನು ಮಾಡಲಿ ಈತನಿಗೆ ಊಟ ಕೊಟ್ಟರೆ ದೇವರಿಗೆ ಏನೂ ಇಲ್ಲ ಎಂದು ಯೋಚಿಸಿದಳು. ಆದರೆ ಇಲ್ಲವೆನ್ನುವುದು ಅವಳ ಜಾಯಮಾನದಲ್ಲೇ ಇರಲಿಲ್ಲ. ಆಯಿತು ಎಂದು ಒಳ ನಡೆಯುವಾಗ ಕಣ್ಣಿನಲ್ಲಿ ನೀರು.. ದೇವನಿಗೆ ಏನಿಲ್ಲವಲ್ಲ ಎಂದು. ತಕ್ಷಣ ದೇವರು ಪ್ರತ್ಯಕ್ಷನಾದ. ಆಕೆಯನ್ನು ಎತ್ತಿ ಪ್ರೀತಿ ಮಾಡಿದ. ಹೇಳಿದ ನಿನ್ನ ಊಟ ಎಷ್ಟು ರುಚಿಯಾಗಿತ್ತು ಅದಕ್ಕೆ ಮೂರು ಸಾರಿ ಊಟ ಮಾಡಿದೆ ಎಂದು ಇನ್ನು ಮುಂದೆ ನೀನು ನನ್ನ ಜೊತೆಗೇ ಊಟ ಮಾಡುತ್ತಿರಬೇಕು ಎಂದು ತನ್ನೊಂದಿಗೆ ಕರೆದುಕೊಂಡು ಹೋದ. “ಭಾವದ ಊಟಕ್ಕೆ ದೇವ ನೊಲಿದಿದ್ದ” ಅವಳ ಮನದ ಭಾವಕ್ಕೆ ಭಗವಂತ ಸೋತಿದ್ದ.
ಕಗ್ಗದ ಕವಿ ಹೇಳಿದ್ದು ಅದನ್ನೇ… ಸಾಮಾನ್ಯ ರೂಪದಲಿ, ಸಂಸಾರಿ ವೇಷದಲಿ ಸ್ವಾಮಿ ನಿನ್ನೆಡೆಗೆ ಬರಬಹುದು ವರ ನೀಡೆ, ಮಹಿಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು. ಎಂದು. ದೇವರು ದೇವರಾಗಿ ನಮಗೆ ಕಾಣಬೇಕಾದರೆ ನಮ್ಮಲ್ಲಿ ಸಂಸ್ಕಾರವಿರಬೇಕು. ಅದಕ್ಕೆ ಪ್ರಾಜ್ಞರು ಹೇಳಿದ್ದು ತಾಮಸಿಗೆ ವರವೆಲ್ಲಿ?ಎಂದು.
ಭಗವಂತ ನಮ್ಮಿಂದ ತನಗೆ ಯಾವ ವೈಭವವನ್ನೂ ಬಯಸುವುದಿಲ್ಲ. ನಮ್ಮಲ್ಲಿರುವುದನ್ನು ದೇವರೊಂದಿಗೆ ಹಂಚಿಕೊಳ್ಳುವ ಮನಸ್ಸು ನಮ್ಮದಾಗಬೇಕು. ಶಬರಿ ಅಂಥವರಿಗೆ ಒಲಿದಿದ್ದಾನೆ ಭಗವಂತ. ಅಯೋಧ್ಯೆಗೆ ದೂರವಾಗಿ ಕಪಿಗಳಿಗೆ ಹತ್ತಿರವಾದವನು ಅವನು. ರಾಮ ಪ್ರಥಮವಾಗಿ ಕಪಿಗಳನ್ನು ಕಂಡಾಗ ಕಪಿಗಳು ರಾಮನಿಗೆ ಮರದ ಕೊಂಬೆಯನ್ನು ಆಸನವೆಂದು ಹಾಕಿದ್ದರಂತೆ. ಆದರೆ ದೇವರು ಅದನ್ನು ಪ್ರೀತಿಯಿಂದ ಸ್ವೀಕರಿಸಿದ. ಯಾಕೆಂದರೆ ಆ ರೀತಿಯ ಸ್ವಾಗತದ ಹಿಂದೆ ಕಪಿಗಳ ಪ್ರೀತಿ ಇತ್ತು . ಆದರೆ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ಮಾಡುವಾಗ ಎಲ್ಲಾ ವ್ಯವಸ್ಥೆಗಳಿಗೂ ಗಮನ ಕೊಡುತ್ತೇವೆ. ಆದರೆ ಬಂದವರಿಗೆ ಭಾವ ಕೊಡಲು ನಮಗೆ ಸಮಯವಿರುವುದಿಲ್ಲ.
ಇಂತಹ ಮಧುರ ಭಾವಗಳು ನಮಗೆ ಜೀವನದಲ್ಲಿ ಬರಬೇಕು. ಆ ಭಾವಗಳಿಗೆ ಅಭಾವ ಬಂದಾಗ ನಾವು ಎಷ್ಟೇ ಪೂಜೆ, ಜಪ, ತಪ ,ಹೋಮ ಮಾಡಿದರೂ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಾಗದು. ವೃದ್ಧೆ ಶಬರಿಯ ಶ್ರದ್ಧೆ ಕಂಡು ಮುಗ್ಧನಾದವನ್ನು ಒಲಿಸಿಕೊಳ್ಳಲು ಭಾವದಿಂದ ಮಾತ್ರ ಸಾಧ್ಯ . ಭಾವಪೂಜೆ ದೇವರಿಗೆ ಸಲ್ಲುವ ದೊಡ್ಡ ಪೂಜೆ
✍️ ಡಾ.ರವೀಂದ್ರ ಭಟ್ಟ ಸೂರಿ.