ಒಂದು ಗುಡ್ಡ. ಆ ಗುಡ್ಡದ ತುದಿಯಲ್ಲೊಂದು ದೇವಸ್ಥಾನ. ನಮ್ಮ ಪೂರ್ವಜರು ಹಾಗೆ ನದಿಯ ಆಚೆಗೆ ಗುಡ್ಡದ ತುದಿಗೆ ದೇವಸ್ಥಾನವನ್ನು ಕಟ್ಟಿಸುತ್ತಿದ್ದರು. ಅದರಲ್ಲೂ ಒಂದು ಸಂದೇಶವಿತ್ತು. ಜೀವನವೆಂಬ ನದಿ ದಾಟಿ ಕಷ್ಟವೆಂಬ ಬೆಟ್ಟವೇರಿ ದೇವನನ್ನು ಕಾಣು ಎಂದು….! ಆ ಗುಡ್ಡದ ದೇವಸ್ಥಾನದಲ್ಲೊಬ್ಬ ಸಂತನಿದ್ದ. ಆತ ಭಗವಂತನಿಗೆ ನಿತ್ಯಾರ್ಚನೆ ಮಾಡುತ್ತಿದ್ದ. ಆದರೆ ಅರ್ಚನೆಗೆ ಗುಡ್ಡದ ಕೆಳಗಿನಿಂದ ನೀರು ತರಬೇಕಾಗಿತ್ತು . ದೇವರು ಮೇಲಿದ್ದ ನೀರು ಕೆಳಗಿತ್ತು. ಬಾವಿಯ ಒಳಗಿನಿಂದ…. ಗುಡ್ಡದ ಕೆಳಗಿನಿಂದ ನೀರು ಮೇಲೆ ಹತ್ತಿ ಹೋಗಬೇಕು. ಪ್ರತಿನಿತ್ಯ ಸಂತ ಒಂದು ಬಿದಿರು ಕೋಲಿಗೆ ಎರಡು ಬಿಂದಿಗೆ ಕಟ್ಟಿ ಅದರಲ್ಲಿ ನೀರು ತುಂಬಿ ಮೇಲಕ್ಕೆ ಹೊತ್ತೊಯ್ಯುತ್ತಿದ್ದ. ಎರಡು ಬಿಂದಿಗೆಯ ಬಣ್ಣ, ಆಕಾರ ,ಗಾತ್ರ ಎಲ್ಲದರಲ್ಲೂ ಒಂದೇ ರೀತಿ ಇತ್ತು. ಆದರೆ ಒಂದೇ ಒಂದು ವ್ಯತ್ಯಾಸವೆಂದರೆ ಒಂದು ಬಿಂದಿಗೆಗೆ ಸಣ್ಣ ತೂತಿತ್ತು. ಆದ್ದರಿಂದ ಸಂತ ಗುಡ್ಡದ ಮೇಲೆ ಹೋಗುವವರೆಗೆ ಒಂದೂವರೆ ಬಿಂದಿಗೆ ನೀರು ಮಾತ್ರ ಇರುತ್ತಿತ್ತು. ತೂತು ಬಿಂದಿಗೆಗೆ ಬೇಜಾರು. ನನ್ನಿಂದಾಗಿ ಸಂತನಿಗೆ ಅರ್ಧ ಫಲ ಅಂತ. ಅದೇ ಮತ್ತೊಂದು ಬಿಂದಿಗೆಗೆ ಗರ್ವ. ತಾನು ಪೂರ್ಣವೆಂದು. ಹೀಗೆಯೇ ಎರಡು ವರ್ಷ ಕಳೆಯಿತು. ಒಂದು ದಿನ ತೂತುಬಿಂದಿಗೆ ಸಂತನಿಗೆ ಹೇಳಿತು…. “ನನಗೆ ನಾಚಿಕೆಯಾಗುತ್ತಿದೆ…. ನನ್ನಿಂದಾಗಿ ನಿಮಗೆ ಪೂರ್ಣ ಫಲ ದೊರಕುತ್ತಿಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ” ಎಂದು ಅಂಗಲಾಚಿತು. ಆಗ ಸಂತ ಒಂದು ಬಾರಿ ಗುಡ್ಡದ ಕೆಳ ಭಾಗವನ್ನು ಬಗ್ಗಿ ನೋಡು ಎಂದ. ತೂತುಬಿಂದಿಗೆ ಬಗ್ಗಿ ನೋಡಿದರೆ ಅದು ಮೇಲೆ ಹತ್ತಿ ಬರುವ ದಾರಿಯಲ್ಲೆಲ್ಲಾ ಹೂವು ಅರಳಿತ್ತು . ಸಂತ ಹೇಳಿದ “ನಿನ್ನಲ್ಲಿ ದೋಷವಿದ್ದರೂ ನಾನು ನಿನ್ನನ್ನು ಬಿಡಲಿಲ್ಲ. ಎಲ್ಲ ದೋಷಗಳು ದೋಷಗಳಲ್ಲ . ಆ ದೋಷಗಳಿಗೆ ಪರಿಹಾರ ಕಂಡುಕೊಂಡಾಗ ಅಲ್ಲಿ ಒಳಿತಾಗುತ್ತದೆ. ನಿನ್ನ ತೂತಿನಿಂದ ನೀರು ಸೋರುತ್ತಿರುವುದನ್ನು ಗಮನಿಸಿದ ನಾನು ನಿತ್ಯ ಬರುವ ದಾರಿಯಲ್ಲಿ ಹೂವಿನ ಗಿಡಗಳನ್ನು ನೆಟ್ಟೆ. ಸೋರಿದ ನೀರು ಗಿಡಗಳ ಮೇಲೆ ಬಿದ್ದು ಅವು ಚಿಗುರಿ ಹೂವು ಬಿಟ್ಟವು. ದೇವರಿಗೆ ತನ್ನನ್ನು ತಾನು ಸಮರ್ಪಣೆ ಮಾಡಿಕೊಳ್ಳುವ ಹೂವುಗಳನ್ನು ಬೆಳೆಸಿದ್ದು ನೀನು. ಮತ್ತೊಂದು ಬಿಂದಿಗೆ ನೀರು ಪೂರ್ಣ ಪ್ರಮಾಣದಲ್ಲಿದ್ದರೂ ಅದು ದೇವನ ತಲೆಯ ಮೇಲೆ ಬಿದ್ದು ಹರಿದು ಹೋಗುತ್ತದೆ. ಆದರೆ ನಿನ್ನಿಂದಾಗಿ ಬೆಳೆದ ಹೂವುಗಳು ಆ ದೇವನ ತಲೆಯ ಮೇಲೆ ದಿನಪೂರ್ತಿ ಸ್ಥಾನ ಪಡೆಯುತ್ತವೆ. ಹಾಗಾಗಿ ನೀನು ನಿರಂತರವಾಗಿ ದೇವನ ಸಂಪರ್ಕದಲ್ಲಿರುವೆ. ನಿಜವಾಗಿ ನಿನ್ನ ಬದುಕು ಸಾರ್ಥಕ… ಎಂದು. ಇದು ಗುರುಮಹಿಮೆಯ ದ್ಯೋತಕ ಗುರುವಿನ ಕೈಗೆ ಸಿಕ್ಕಿದರೆ ತೂತು ಬಿಂದಿಗೆಯು ಹರಿಚರಣ ಸೇರಲು ಸಾಧ್ಯ. ಕಗ್ಗದ ಕವಿ ಹೇಳಿದ್ದು ಅದನ್ನೇ………
ತರಣಿ ದರುಶನಕಿಂತ ಕಿರಣಾ ನುಭವ ಸುಲಭ.
ಪರಮ ಶಾಸ್ತ್ರಕ್ಕಿಂತ ಸರಿ ಉದಾಹರಣೆ.
ಪರಮತತ್ವವ ಕಂಡ ಗುರುವ ನರಸುವುದೆಲ್ಲಿ?
ದೊರೆತಂದು ನೀ ಧನ್ಯ- ಮಂಕುತಿಮ್ಮ.
ಸೂರ್ಯನ ದರ್ಶನಕ್ಕಿಂತ ಆತನ ಕಿರಣದ ಅನುಭವ ಹೇಗೆ ಸುಲಭವೋ ಹಾಗೇ ದೇವರ ದರ್ಶನಕ್ಕಿಂತ ಮೂರ್ತಿಯ ಮುಂದಿರುವ ಗುರು ನಮಗೆ ಸತ್ಪಥವನ್ನು ತೋರುತ್ತಾನೆ. ಗುರು ಮನುಷ್ಯರ ಹಾಗೆ ನಮ್ಮ ಹೊರಗಣ್ಣಿಗೆ ಕಂಡರೂ ಆತ ಭುವಿಗೂ…ದಿವಿಗೂ ಸಂಪರ್ಕ ಸೇತುವಾಗಿರುತ್ತಾನೆ. ಆ ದೇವನ ಪ್ರತಿನಿಧಿಯಾಗಿ ನಮ್ಮ ನಡುವೆ ಇರುತ್ತಾನೆ. ಪರಮ ತತ್ವವನ್ನು ಕಂಡ ಗುರು ನಮಗೆ ದೊರಕಿದರೆ ಕಳಪೆ ಎಂದುಕೊಂಡಿದ್ದ ಬದುಕು ಹೊಳಪು ಪಡೆದುಕೊಳ್ಳುತ್ತದೆ. ಬದುಕಿನ ದೋಷಗಳೆಲ್ಲ ಪರಿಹಾರವಾಗುತ್ತವೆ. ತೂತು ಬಿಂದಿಗೆಯಿಂದ ಬಿದ್ದ ನೀರು ಹೂವರಳಿಸಿದಂತೆ ಗುರು ನಮ್ಮೆಲ್ಲ ‘ದೋಷ’ ಕಳೆದು ‘ತೋಷ’ ದೊರಕುವಂತೆ ಮಾಡುತ್ತಾನೆ. ಅಂತಹ ಗುರುವಿಗಾಗಿ ನಾವು ಕಾಯಬೇಕು. ನಮ್ಮ ಆತ್ಮ ಅದನ್ನು ಅಪೇಕ್ಷಿಸಬೇಕು. ಅಪೇಕ್ಷಿಸದಿದ್ದರೆ ಗುರು ಸಿಕ್ಕಿದರೂ ದಕ್ಕದಿರಬಹುದು.
ಭರತ ರಾಮನಿಗೆ ನಾ ನಿನ್ನ ತಮ್ಮ ನಾ ನಿನ್ನ ದಾಸ, ನಾ ನಿನ್ನ ಶಿಷ್ಯ ಎನ್ನುತ್ತಿದ್ದನಂತೆ. ಲಕ್ಷ್ಮಣನು ನಾನು ಕೇವಲ ತಮ್ಮನಲ್ಲ ನಾನು ರಾಮನ ದಾಸ ಎನ್ನುತ್ತಿದ್ದ. ಅದು ಗುರುತ್ವವನ್ನು ಗುರುತಿಸುವ ಭಾವ. ನಮ್ಮಲ್ಲೂ ಅಂತಹ ಭಾವ ಮೂಡಬೇಕು. ನಾವೆಲ್ಲ ತೂತು ಬಿಂದಿಗೆಗಳೇ…! ನಮ್ಮಲ್ಲಿ ಒಂದೂ ದೋಷವಿಲ್ಲ ಎನ್ನುವಂತಿಲ್ಲ. ನಮ್ಮೊಳಗಿನ ಚೈತನ್ಯ ಮತ್ತೆಲ್ಲೋ ಹರಿದು ಹೋಗುತ್ತಿರುತ್ತದೆ. ಒಬ್ಬ ಸದ್ಗುರು ಮಾತ್ರ ಹರಿಯುವ ಜಾಗದಲ್ಲೆಲ್ಲಾ ಹೂ ಅರಳಿಸಬಲ್ಲ. ಹಾಗಾಗಿ ಅಂತಹ ಗುರುವನ್ನು ಆಶ್ರಯಿ ಸೋಣ. ಬದುಕನ್ನು ಸಾರ್ಥಕ ಪಡಿಸಿಕೊಳ್ಳೋಣ. ಈ ವಿಶಾಲ ಪ್ರಪಂಚದಲ್ಲಿ ತಾಯಿಯೂ ಇದೆ…. ಮಾಯೆಯೂ ಇದೆ. ತಾಯಿಯನ್ನು ಆಶ್ರಯಿಸೋಣ… ತಾಯಿ ರೂಪದ ಗುರುವನ್ನು ಆಶ್ರಯಿಸೋಣ.
✍️ ಡಾ.ರವೀಂದ್ರ ಭಟ್ಟ ಸೂರಿ.