ಮಹಾಭಾರತದಲ್ಲಿ ಒಂದು ಮನೋಜ್ಞ ಘಟನೆ ….ಹದಿನೆಂಟು ದಿನದ ಮಹಾಭಾರತ ಯುದ್ಧ. ಪಾಂಡವರು ಗೆದ್ದರು, ಕೌರವರು ಸೋತಿದ್ದಾರೆ. ಇನ್ನೇನು ಯುದ್ಧದ ರಥಗಳನ್ನು ವಿಸರ್ಜನೆ ಮಾಡಬೇಕು ಎನ್ನುವಾಗ ಕೃಷ್ಣ ಅರ್ಜುನನಿಗೆ ಹೇಳಿದನಂತೆ…” ನೀನು ಮೊದಲು ರಥದಿಂದ ಇಳಿ ಆಮೇಲೆ ನಾನು ಇಳಿಯುತ್ತೇನೆ” ಎಂದು. ಅರ್ಜುನ… “ಅದೇಕೆ ಹಾಗೆ ನಾನು ರತಿಕ ನೀನು ಸಾರಥಿ ಹಾಗಾಗಿ ನೀನು ಮೊದಲು ಇಳಿ” ಎಂದು. ಕೃಷ್ಣ ಹೇಳಿದ “ನಿನ್ನ ಬುದ್ಧಿಗೆ ಕೆಲಸ ಕೊಡಬೇಡ…. ನಾನು ಹೇಳಿದಷ್ಟನ್ನು ಮಾಡು… ನೀನು ಮೊದಲು ಇಳಿ” ಎಂದು. ಅರ್ಜುನ ರಥದಿಂದ ಕೆಳಗಿಳಿದ ನಂತರ ಕೃಷ್ಣ ರಥದ ವಿಸರ್ಜನಾ ರೂಪವಾಗಿ ರಥದಿಂದ ಕೆಳಗಿಳಿದ. ಆಂಜನೇಯನು ತೊರೆದ ಮರುಕ್ಷಣದಲ್ಲಿ ರಥ ಹೊತ್ತಿ ಉರಿಯಲು ಕಾರಣವೇನು? . ಕೃಷ್ಣ ಹೇಳಿದ ” ಆ ರಥ ಯಾವಾಗಲೋ ಉರಿದು ಹೋಗಿತ್ತು…. ಭೀಷ್ಮರು ,ದ್ರೋಣರು, ಅಶ್ವತ್ಥಾಮ ,ಕೃಪಾಚಾರ್ಯ ದಿವ್ಯಾಸ್ತ್ರಗಳಿಂದ ಈ ರಥ ಯಾವಾಗಲೋ ಉರಿದಿತ್ತು. ಆದರೆ ನಾನು ಈ ರಥದಲ್ಲಿ ದ್ದುದರಿಂದ ಇಷ್ಟು ದಿನ ಹೀಗಿತ್ತು. ನಾನು ಇಳಿದೆ ಈಗ ಆ ಅಸ್ತ್ರಗಳು ತಮ್ಮ ಕೆಲಸ ತಾವು ಮಾಡಿವೆ. ನೀನೊಮ್ಮೆ ಯೋಚಿಸು ನೀನು ಮೇಲಿದ್ದು ನಾನೇ ಮೊದಲು ಕೆಳಗಿಳಿದಿದ್ದರೆ ಏನಾಗುತ್ತಿತ್ತು ? ಅರ್ಜುನನಿಗೆ ನಡುಕ ಉಂಟಾಯಿತು… ಅದು ಕಲ್ಪಿಸಲು ಸಾಧ್ಯವಿಲ್ಲದ ಪರಿಣಾಮ ಉಂಟು ಮಾಡುತ್ತಿತ್ತು ಎಂದು.
ನಮ್ಮ ಬದುಕಿನಲ್ಲೂ ಇದೆಲ್ಲ ಇದೆ . ಉಪನಿಷತ್ತು ಹೇಳಿದ್ದು ಇದನ್ನೇ…. ಜೀವನ ಎಂದರೆ ಒಂದು ಯಾತ್ರೆ…. ಪ್ರಯಾಣ. ಅದು ನಿರಂತರ ಪ್ರಯಾಣ. ಮುಂದೆ ಕಾಣಿಸದ ಪ್ರಯಾಣ. ಇಲ್ಲಿ ವಾಹನ ಯಾವುದು? ಶರೀರವೇ ವಾಹನ ಈ ದೇಹವೇ ರಥ . ದೇಹದ ರಥಕ್ಕೆ ಕುದುರೆಗಳು ಇಂದ್ರಿಯಗಳು. ನಾವೇ ರಥಿಕರು. ಸಾರಥಿ ಮನಸ್ಸು. ಒಂದು ಪ್ರಯಾಣ ನಿರಂತರವಾಗಿ ನಡೆಯುತ್ತಿದೆ. ಬಹಳ ಜವಾಬ್ದಾರಿ ಬೇಕು. ಸ್ವಲ್ಪ ಏರುಪೇರಾದರೂ ಅಪಘಾತವಾಗಬಹುದು. ಅಪಘಾತ ವಾಗಬಾರದು ಎಂದರೆ ಕುದುರೆಗಳು, ಸಾರಥಿ ರಥವನ್ನು ಕೊಂಡೊಯ್ಯಬೇಕು. ಜೀವನ ಯಾತ್ರೆಯಲ್ಲಿ ಮುಂದಕ್ಕೆ ರಥ ಸರಿಯಾದ ದಾರಿಯಲ್ಲಿ ಸಾಗಬೇಕೆಂದರೆ ಯೋಗ್ಯ ಸಾರಥಿ ಬೇಕು. ಪಾರ್ಥಸಾರಥಿಯಂಥ ಯೋಗ್ಯ ಸಾರಥಿ ಯಾರು ಇಲ್ಲ…! ನಮ್ಮ ಜೀವನಕ್ಕೂ ಅಂತಹ ಸಾರಥಿ ಬೇಡವೇ ?. ನಮ್ಮ ಒಳಗಿನಿಂದ ದೇವನನ್ನು ಹೊರಗಿಟ್ಟು ಜೀವನ ನಡೆಸುತ್ತೇವೆಂದರೆ ನಮ್ಮ ಕಥೆ ಅರ್ಜುನನ ರಥದಿಂದ ಕೃಷ್ಣ ಕೆಳಗಿಳಿದ ಮೇಲೆ ಆದಂತೆ ಆಗುತ್ತದೆ. ಜೀವನದಲ್ಲಿ ದುರಂತವಾಗುತ್ತದೆ. ಸಾರಥ್ಯವನ್ನು ಅವನ ಕೈಗೆ ಕೊಡಬೇಕು ಅಂದಾಗ ಜೀವನ ರಥ ಸುಲಲಿತವಾಗಿ ಚಲಿಸುತ್ತಿರುತ್ತದೆ.
ನಾವೇ ಒಂದು ವಿಮಾನ ಖರೀದಿ ಮಾಡಿದ್ದೆವು ಎಂದುಕೊಳ್ಳಿ . ನಾವು ಇಷ್ಟಪಟ್ಟು ಖರೀದಿ ಮಾಡಿದ್ದು ಅಂತ ನಾವೇ ಅದನ್ನು ನಡೆಸಲು ಸಾಧ್ಯವಿಲ್ಲ. ಯಾರಿಗೆ ಅದರ ಮರ್ಮಗಳು ಗೊತ್ತೋ ಅವರೇ ನಡೆಸಬೇಕು. ವಿಮಾನಕ್ಕಿಂತ ಎಷ್ಟೋ ಅದ್ಭುತವಾದ ರಚನೆ ನಮ್ಮ ಶರೀರ. ಅಂತಹ ಶರೀರ ನನ್ನದು…. ನಾನೇ ನಡೆಸುತ್ತೇನೆ ಎಂದು ಹೋದರೆ ಏನಾಗಬಹುದು? ಒಳಗೇನುಂಟು ಎಂದು ನಮಗೆ ಗೊತ್ತಿಲ್ಲ. ಹಾಗಾಗಿ ಸೃಷ್ಟಿಕರ್ತನಾದ ಭಗವಂತನೇ ನಡೆಸಬೇಕು. ಒಳಗಿರುವ ಮನಸ್ಸು , ಸೂಕ್ಷ್ಮವಾದ ಇಂದ್ರಿಯಗಳು ಅವುಗಳ ಬಗ್ಗೆ ನಮಗೇನು ಗೊತ್ತು? ಈ ಶರೀರವೆಂಬ ವಿಮಾನ ನಾವೇ ಖರೀದಿ ಮಾಡಿದ್ದು…. ಆದರೆ ನಾವು ನಡೆಸುವ ಹಾಗಿಲ್ಲ…! ಕುಶಲ ಸಾರಥಿಯೇ ನಡೆಸಬೇಕಾದದ್ದು ಇದು. ಕುಶಲ ಸಾರಥಿಯನ್ನು ಹುಡುಕಬೇಕಾಗಿಲ್ಲ. ಯಾವುದೇ ಪತ್ರಿಕೆಯಲ್ಲಿ ಜಾಹೀರಾತು ಕೊಡಬೇಕಾಗಿಲ್ಲ. ಒಂದು ಪ್ರಾರ್ಥನೆ ಸಾಕು. ಪ್ರಾಂಜಲವಾದ ಒಂದು ಪ್ರಾರ್ಥನೆ…. ಇದು ನಿನ್ನದು ನೀನೇ ನಡೆಸು ನಾನು ಕುಳಿತಿರುತ್ತೇನೆ ಎಂದು. ಅವನು ಇದನ್ನು ನಡೆಸಲು ಪ್ರಾರಂಭಿಸಿದನೆಂದರೆ ಮುಂದೆ ನಮಗೆ ಯಾವ ಭಯವೂ ಇಲ್ಲ. ನಮ್ಮ ಮನಸ್ಸಿನ ಕೈಯಲ್ಲಿ ನಾವು ಜೀವನ ಕೊಟ್ಟಿದ್ದೇವೆ. ಅದು ತನಗೆಲ್ಲಿ ಸುಖವೋ ಅಲ್ಲಿಗೆ ಕರೆದುಕೊಂಡು ಹೋಗುತ್ತಿದೆ. ಅದಕ್ಕೆ ಎಷ್ಟೋ ಬಾರಿ ಸದುದ್ದೇಶವಿಲ್ಲದಂತೇ ವರ್ತಿಸುತ್ತದೆ. ಶರೀರದ ಸ್ವಾಮಿ ಆತ್ಮ . ಮನಸ್ಸು, ಇಂದ್ರಿಯಗಳು, ಶರೀರಗಳು ಆತ್ಮ ಸೇವೆಗೆ ಇದ್ದುದು. ಮನಸ್ಸು ತನಗಿಷ್ಟ ಬಂದಲ್ಲಿಗೆ ಹೋಗುತ್ತದೆ. ಕಣ್ಣು ತಮಗಿಷ್ಟವಾದದ್ದನ್ನು ನೋಡುತ್ತದೆ. ಚರ್ಮ ತಮಗಿಷ್ಟವಾದದ್ದನ್ನು ಸ್ಪರ್ಶಿಸುತ್ತದೆ. ಕಿವಿ ತನಗಿಷ್ಟವಾದದ್ದನ್ನು ಕೇಳುತ್ತದೆ. ಆದರೆ ಆತ್ಮಕ್ಕೆ ಇದರಿಂದಾಗುವ ಪರಿಣಾಮದ ಬಗ್ಗೆ ಇವುಗಳು ಯೋಚಿಸುತ್ತಿಲ್ಲ. ತಮ್ಮಿಷ್ಟದಂತೆ ಅವು ನಡೆದುಕೊಳ್ಳುತ್ತಿವೆ. ಆತ್ಮವನ್ನು ಎಲ್ಲಿಗೆ ಕೊಂಡೊಯ್ಯಬೇಕಿತ್ತೋ ಅಲ್ಲಿಗೆ ಕೊಂಡೊಯ್ಯುತ್ತಿಲ್ಲ. ಹಾಗಾಗಿ ನಮ್ಮೆಲ್ಲರ ಜೀವನ ರಥ ಪಥ ತಪ್ಪಿದೆ.
ನಮ್ಮ ಜೀವನವನ್ನು ಒಮ್ಮೆ ಅವಲೋಕನ ಮಾಡೋಣ. ನಮ್ಮ ಜೀವನದ ಲಕ್ಷ್ಯ ಯಾವುದೆಂಬುದೇ ನಮಗೆ ಗೊತ್ತಿಲ್ಲ. ಅಂದರೆ ಗುರಿ ತಲುಪುವುದು ಹೇಗೆ? “ಅಲ್ಲಿದೆ ನಮ್ಮ ಮನೆ ಇಲ್ಲಿಯದು ಸುಮ್ಮನೆ”. ಅಲ್ಲಿರುವ ಆ ಮನೆಯನ್ನು ತಲುಪಬೇಕಾದರೆ ನಮ್ಮ ಜೀವನ ರಥ ಸರಿದಾರಿಯಲ್ಲಿ ಸಾಗಬೇಕು. ಒಂದು ಪ್ರಾಂಜಲ ಮನಸ್ಸಿನಿಂದ ಆ ದೇವನಲ್ಲಿ “ನಮ್ಮ ಜೀವನ ರಥವನ್ನು ಮುನ್ನಡೆಸು” ಎಂದು ನಾವು ಪ್ರಾರ್ಥಿಸಿದರೆ…. “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು” ಎಂದು ಬೇಡಿಕೊಂಡರೆ ಖಂಡಿತವಾಗಿಯೂ ಆತ ನಮ್ಮ ಜೀವನ ರಥವನ್ನು ಗುರಿ ಮುಟ್ಟಿಸುತ್ತಾನೆ.
✍️ ಡಾ.ರವೀಂದ್ರ ಭಟ್ಟ ಸೂರಿ.