ಮಂತ್ರ ಎನ್ನುವ ಪದದಲ್ಲಿ ಎರಡು ಭಾಗಗಳಿವೆ. ‘ಮನನ’ ಮತ್ತು ‘ತ್ರಾಣ’ . ಯಾವುದನ್ನು ಮನನ ಮಾಡುವುದರಿಂದ ಅದು ನಮ್ಮನ್ನು ಕಾಪಾಡುತ್ತದೆಯೋ ಅದೇ ಮಂತ್ರ. ಅಂಥದ್ದು ಅಪರೂಪ. ಈಗ ಊಟವಿದೆ…. ಊಟ ಮಾಡಿದರಷ್ಟೇ ಹೊಟ್ಟೆ ತುಂಬುತ್ತದೆ. ಊಟವನ್ನು ನೆನಪು ಮಾಡಿಕೊಳ್ಳುವುದರಿಂದ ಅಲ್ಲ. ಬಟ್ಟೆ ಇದೆ… ಬಟ್ಟೆ ಧರಿಸಿದರಷ್ಟೇ ಮೈಯನ್ನು ಮುಚ್ಚುತ್ತದೆ. ಧರಿಸದಿದ್ದರೆ ಯಾವ ಫಲವೂ ಇಲ್ಲ. ಅಪರೂಪದ ಕೆಲವು ಸಂಗತಿಗಳು ಹೇಗಿರುತ್ತವೆ ಎಂದರೆ ನೆನೆಸಿಕೊಂಡರೆ ಸಾಕು ಫಲ ಕೊಡುತ್ತವೆ…..! ಅಂತಹ ವಸ್ತು ಒಂದೇ ಒಂದು ಅದು ‘ಪರಮಾತ್ಮ’ನೆಂದು. “ಯಸ್ಯ ಸ್ಮರಣ ಮಾತ್ರೇಣ” ಸ್ಮರಣೆಯೊಂದೇ ಸಾಕು ಅವನನ್ನು ಒಲಿಸಿಕೊಳ್ಳಲು. ಭಗವಂತನಿಗೆ ಅನೇಕ ರೂಪ ಜ್ಯೋತಿ ರೂಪ ಅದು ನಾವು ಕಂಡ ಎಲ್ಲ ಬೆಳಕಿಗಿಂತ ದೊಡ್ಡದು ಇನ್ನು ಅನುಭೂತಿ ರೂಪ, ಶಬ್ದ ರೂಪ ಹೀಗೆ ಅವನು ಹಲವು ರೂಪದಲ್ಲಿ ನಮಗೆ ಗೋಚರಿಸುತ್ತಾನೆ. ಜ್ಯೋತಿಯಾಗಿ ನಮ್ಮನ್ನು ಬೆಳಗುತ್ತಾನೆ….. ಅನುಭವವಾಗಿ ನಮ್ಮನ್ನು ಮುದಗೊಳಿಸುತ್ತಾನೆ…. ಶಬ್ದಗಳ ರೂಪದಲ್ಲಿ ನಮ್ಮ ಅಂತಃಶ್ರವಣಕ್ಕೆ ವೇದ್ಯವಾಗುತ್ತಾನೆ. ಅವನ ಆ ರೂಪಕ್ಕೆ ಮಂತ್ರವೆಂದು ಹೆಸರು. ಅದನ್ನು ಮನನ ಮಾಡಿದರೆ ಸಾಕು ಅವನ ಲಕ್ಷ್ಯ ನಮ್ಮೆಡೆಗೆ ಬರುತ್ತದೆ. ಇನ್ನು ‘ಮಂತ್ರ ದೃಷ್ಟ’ ದೃಷ್ಟ ಎಂದರೆ ಕಾಣುವವನು ಎಂದರ್ಥ. ಯಾರಿಗೆ ದರ್ಶನ ವಿದೆಯೋ ಅವನು…. ಯಾರು ಮಂತ್ರಗಳನ್ನು ಕಾಣುತ್ತಾರೋ ಅವರು ಮಂತ್ರ ದೃಷ್ಟ. ಮಂತ್ರವನ್ನು ಕೇಳುವುದು ಎನ್ನಬಹುದಿತ್ತು ಆದರೆ ಮಂತ್ರವನ್ನು ಕಾಣುವುದು ಎಂದರೆ …? ಅಂತರಂಗದಲ್ಲಿ ಅದರ ಅನುಭೂತಿಯಾಗುವುದು. ವೇದವು ಶ್ರೇಷ್ಠವಾದುದು ಯಾಕೆಂದರೆ ಅದು ತಪಸ್ಸಿನ ಫಲವಾಗಿ ಹುಟ್ಟಿದೆ. ಎಲ್ಲಿ ಹುಟ್ಟಿದೆ ಎಂದರೆ ಬ್ರಹ್ಮಜ್ಞರ ಹೃದಯದಲ್ಲಿ ವೇದದ ಆವಿರ್ಭಾವ. ವೇದ ಅಥವಾ ಮಂತ್ರ ಎಲ್ಲಿ ಸಿಕ್ಕುತ್ತದೆ ಎಂದರೆ ಹೃದಯದಲ್ಲಿ ಸಿಗುತ್ತದೆ.

RELATED ARTICLES  ನೆರಳಿನಂತೆ ಸಹಾಯ

ಮಂತ್ರಗಳ ಸ್ಥಾನ ಎಲ್ಲಿ? ಎಂದರೆ ಹೃದಯದಲ್ಲಿ. ಅದನ್ನು ಅಲ್ಲೇ ಕಾಣಬೇಕು. ಮೊದಲು ವೇದವನ್ನು ಯಾರು ಕಂಡರು ಎಂದರೆ ಋಷಿಮುನಿಗಳು ಕಂಡರು. ಅವರು ತಮ್ಮ ಅಂತರಂಗದಲ್ಲಿ ಕಂಡರು… ಅವರಿಗದು ಅನುಭೂತಿ ಯಾಯಿತು . ಅಂತಹ ಅನುಭೂತಿಯಾದವರನ್ನು ಖುಷಿ ಎಂದು ಕರೆದರು. ಹಾಗೆಯೇ “ನಾವು ಸೊನ್ನೆ ಯಾದರೆ ಅದು ಸನ್ನೆ ಯಾಗುತ್ತದೆ” ಅಂತರಂಗದಲ್ಲಿ ದೇವರ ದರ್ಶನವಾಗುತ್ತದೆ. ಮಂತ್ರಗಳು ಬಂದಿದ್ದು ಹೀಗೆ. ಮಂತ್ರವೆಂದರೆ ಪರಮಾತ್ಮನ ಶಬ್ದರೂಪ. ಅದನ್ನು ಕಂಡುಕೊಳ್ಳುವವರು ಅಪರೂಪ.

RELATED ARTICLES  ಅಂಕೋಲಾ ಸೀಮೆಯ ಯಕ್ಷಗಾನದ ದೈತ್ಯ ಪ್ರತಿಭೆ ವಂದಿಗೆ ವಿಠೋಬ ನಾಯಕ!

ಮಂತ್ರಗಳು ಅನಂತ ಯಾಕೆಂದರೆ ಸೃಷ್ಟಿಯೂ ಅನಂತ. ಅದನ್ನು ಕಂಡುಕೊಂಡವರು ಕೆಲವರು ಮಾತ್ರ. ಮಂತ್ರಗಳು ಹಿಂದೆ ಇದ್ದವು, ಇಂದೂ ಇವೆ, ಮುಂದೆಯೂ ಇರುತ್ತವೆ. ಅದನ್ನು ಕಂಡುಕೊಳ್ಳಲು ನಮ್ಮ ಶರೀರವನ್ನು ಹೇಗೆ ನಡೆಸಬೇಕೆಂದು ನಮಗೆ ಗೊತ್ತಿರಬೇಕು. ನಾವು ಹೋಗುವ ಪಥ ಸರಿಯಾಗಿರಬೇಕು.

ಅಂತರಂಗ ಬಹಿರಂಗದ ಸೇತುವೆ ಅದು ಮಂತ್ರ. ಪುನಃ ಅಂತರಂಗಕ್ಕೆ ಹೋಗಲು ಇರುವ ಮಾಧ್ಯಮವದು. ಮಂತ್ರ ಅದು ದಿವಿ-ಭುವಿ, ಜೀವ-ದೇವರ ನಡುವಿನ ಸೇತುವೆ.ಮಂತ್ರಗಳನ್ನು ಹೇಳುವ ರೀತಿಯಲ್ಲಿ ಹೇಳಿದರೆ ಅಲ್ಲಿಗೆ ಬರುವುದು ದೇವರಿಗೂ ಅನಿವಾರ್ಯವಾಗುತ್ತದೆ. ಯಾಕೆಂದರೆ ದೇವತೆಗಳು ಮಂತ್ರಕ್ಕೆ ಅಧೀನ.

ಜಗತ್ತೆಲ್ಲಾ ದೇವತೆಗಳ ಅಧೀನ, ದೇವತೆಗಳು ಮಂತ್ರದ ಅಧೀನ, ಮಂತ್ರಗಳು ಯಾರ ಅಧೀನವೋ ಅವರು ” ಮಂತ್ರ ದೃಷ್ಟ” ರೆನ್ನಿಸಿಕೊಳ್ಳುತ್ತಾರೆ. ಅಂತಹ ಮಂತ್ರಗಳು ನಮಗೆ ಸಾಧಕವಾಗಲಿ. ಸಾಧನೆ ಮಾಡಿದವರು ನಮಗೆ ಆದರ್ಶವಾಗಲಿ.

✍️ ಡಾ.ರವೀಂದ್ರ ಭಟ್ಟ ಸೂರಿ.