ಒಬ್ಬ ಅಪ್ರಾಪ್ತ ವಯಸ್ಕನಿದ್ದ . ಒಬ್ಬಳು ಕನ್ಯೆಯ ಮೇಲೆ ಅವನಿಗೆ ಮನಸ್ಸಾಯ್ತು. ದಿನದಿಂದ ದಿನಕ್ಕೆ ಆ ಪ್ರೀತಿ ಜಾಸ್ತಿಯಾಯ್ತು. ಆತನ ಸರ್ವಸ್ವ ಕೂಡ ಅವಳೇ ಎಂಬಷ್ಟು ಆ ಪ್ರೀತಿ ಬೆಳೆಯಿತು. ಆಕೆಯೇನು ಪರಮ ಸುಂದರಿಯಲ್ಲ. ಹೆಚ್ಚಿನ ವಿದ್ಯಾವಂತೆ ಅಲ್ಲ. ಆದರೆ ಅವನಿಗೇನೋ ವಿಶೇಷ ಅವಳಲ್ಲಿ ಕಂಡಿದೆ. ಇದು ಆತನ ಸ್ನೇಹಿತರಿಗೆ ಗೊತ್ತಿತ್ತು. ಅವರು ಅವನಲ್ಲಿ ಕೇಳಿದರು…. ನಿನ್ನಷ್ಟಕ್ಕೆ ನೀನು ಪ್ರೀತಿಸಿದರೆ ಏನು ಪ್ರಯೋಜನ? ನೀನು ಅವಳಲ್ಲಿ ಕೇಳಬಹುದಲ್ಲ. ಅವಳ ಅಭಿಪ್ರಾಯವೇನೆಂದು. ಒಮ್ಮೆ ಅವಳಲ್ಲಿ ಪ್ರಸ್ತಾಪ ಮಾಡು ಎಂದರು. ಒಂದು ದಿನ ಅವಳಲ್ಲಿ ಆತ ಕೇಳಿಯೇ ಬಿಟ್ಟ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ತುಂಬಾ ಇಷ್ಟಪಟ್ಟಿದ್ದೇನೆ. ನಿನ್ನ ಅಭಿಪ್ರಾಯವೇನು ? ಎಂದು. “ನನಗೆ ಹಾಗೇನಿಲ್ಲ… ನಿನಗೆ ಒಪ್ಪಿಗೆ ಯಾಗಿರಬಹುದು ಆದರೆ ನನಗೇನಿಲ್ಲ “ಎಂದಳು ಅವಳು. ಇದನ್ನು ಆತನ ಸ್ನೇಹಿತರು ಗಮನಿಸುತ್ತಿದ್ದರು. ಅವರಿಗೆಲ್ಲ ಬೇಸರವಾಯ್ತು. ಯಾಕೆಂದರೆ ಆತ ತುಂಬಾ ಒಳ್ಳೆಯ ಹುಡುಗ. ಮುಂದೇನಾಗಬಹುದು ಎಂದು ಅವರು ಆಲೋಚಿಸಿದರು. ಇವತ್ತಂತೂ ಆತ ಮನೆಯ ಮೂಲೆ ಹಿಡಿಯುತ್ತಾನೆ. ಮುಂದೆ ವ್ಯಸನಕ್ಕೆ ಬೀಳಬಹುದು. ಚಿಂತೆಗೂ ಬುದ್ಧಿಭ್ರಮಣೆಗೂ ಒಳಗಾಗಬಹುದು. ಇದು ಅವರ ನಿರೀಕ್ಷೆ ಆದರೆ ಸಹಜವಾಗಿ ಆತ ಬಂದ. ಸ್ನೇಹಿತರಿಗೆ ಆಶ್ಚರ್ಯ. ಕೇಳಿದರು “ನೀನ್ಯಾಕೆ ಕೊರಗುತ್ತಿಲ್ಲ? ಯಾಕೆ ಬೇಸರ ವಾಗುತ್ತಿಲ್ಲ ? ಅಷ್ಟೊಂದು ಹಚ್ಚಿಕೊಂಡಿದ್ದೆಯಲ್ಲ ಏನೂ ಅನ್ನಿಸುತ್ತಿಲ್ಲವೇ? ಎಂದು. ಆತ ಹೇಳಿದ ” ಬೇಸರವಾದರೆ ಅವಳಿಗೆ ಆಗಬೇಕು . ನಾನೇನು ಕಳಕೊಂಡೆ? ಯೋಚಿಸಿ…. ನನ್ನನ್ನು ಪ್ರೀತಿಸದ ಒಬ್ಬಳನ್ನು ಕಳೆದುಕೊಂಡೆ ಆದರೆ ಅವಳು ತನ್ನನ್ನು ತುಂಬಾ ಪ್ರೀತಿಸುತ್ತಿದ್ದ ತನಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧನಿದ್ದವನನ್ನು ಕಳೆದುಕೊಂಡಳು. ನಷ್ಟವಾದವರು ಬೇಸರ ಮಾಡಿಕೊಳ್ಳಬೇಕು. ನಾನ್ಯಾಕೆ ಬೇಸರಿಸಲಿ? ಎಂದು. ಇಂತಹ ಲೆಕ್ಕಾಚಾರಗಳಿದ್ದರೆ ಬದುಕಿನಲ್ಲಿ ವ್ಯಥೆ ಪಡುವ ಪ್ರಮೇಯ ಬರುವುದಿಲ್ಲ. ನನ್ನನ್ನು ಪ್ರೀತಿಸದ ಜೀವಗಳು ಈ ಪ್ರಪಂಚದಲ್ಲಿ ಸಾಕಷ್ಟಿವೆ. ಅವುಗಳಲ್ಲಿ ಕೆಲವನ್ನು ಕಳಕೊಂಡರೆ ಏನೂ ನಷ್ಟವಿಲ್ಲ. ಅದರಲ್ಲಿ ನಾವೇನೂ ಕೊಂಡಂತಲ್ಲ. ಹಾಗಾಗಿ ನಮಗೆ ವ್ಯಥೆಯಾಗುವುದಿಲ್ಲ.
ಕಗ್ಗದ ಕವಿ ಹೇಳಿದ್ದು ಇದನ್ನೇ… ಹೃದಯ ಜೀವನಕೆ ಇನಿತು ಬೆಲೆ ಇರದೆ ಫಲವಿರದೆ
ಮಧುರ ಭಾವ ಪ್ರೇಮ ದಯೆಯೆಲ್ಲ ಬರಿದೆ
ವಿಧಿಯಂಗಡಿಯೊಳದನು ಕಸವೆಂದು ತಳ್ಳುವೆಡೆ
ಬದುಕಿನಲಿ ತಿರುಳೇನು – ಮಂಕುತಿಮ್ಮ. ಎಂದು.
ಆತನಿಗೆ ಹಾಗೆ ಅನ್ನಿಸಬೇಕಿತ್ತು. ಬದುಕಿನಲ್ಲಿ ತಿರುಳೇನು? ಎಂದು. ಆದರೆ ಆತನಿಗೆ ಸರಿಯಾದ ಆಲೋಚನೆ ಇತ್ತು. ಸರಿಯಾದ ಲೆಕ್ಕಾಚಾರವಿತ್ತು. ಹಾಗಾಗಿ ಅವನಿಗೆ ವ್ಯಥೆಯಾಗಲಿಲ್ಲ. ನಮಗೆ ಈ ಪ್ರಪಂಚದಲ್ಲಿ ಯಾಕೆ ದುಃಖ ವಾಗಬೇಕು? ಅಂದರೆ ಅದು ನಮಗೆ ಏನೋ ಕಳೆದುಕೊಂಡಾಗ ಆಗಬೇಕು. ಆದರೆ ಏನನ್ನು ಕಳೆದುಕೊಂಡರೆ ಆಗಬೇಕು? ಕೆಲವೊಮ್ಮೆ ನಾವು ಭೂಮಿಯನ್ನು ಕಳೆದುಕೊಳ್ಳಬಹುದು….. ಹಣ ಕಳೆದುಕೊಳ್ಳಬಹುದು….. ಜನ ಕಳೆದು ಕೊಳ್ಳಬಹುದು ಆದರೆ ಇದು ದುಃಖ ಪಡುವ ವಿಷಯವಲ್ಲ. ಯಾಕೆಂದರೆ ಅವು ಯಾವುವೂ ನಮ್ಮನ್ನು ಇಷ್ಟಪಡುತ್ತಿರಲಿಲ್ಲ. ಆದರೆ ಯಾವಾಗ ನಮಗೆ ದುಃಖವಾಗಬೇಕು ಅಂದರೆ ದೇವನನ್ನು ಕಳಕೊಂಡಾಗ. ಯಾಕೆಂದರೆ ಅದು ಬಿಟ್ಟು ಹೋಗುವ ಪ್ರೀತಿಯಲ್ಲ. ದೇವ ನಮ್ಮನ್ನು ಪ್ರೀತಿಸುತ್ತಾನೆ. ಹಾಗಾಗಿ ಅದನ್ನು ಕಳಕೊಂಡರೆ ದೊಡ್ಡ ನಷ್ಟ. ನಮ್ಮ ಬದುಕು ಹೇಗೆಂದರೆ ಸಮುದ್ರದ ಅಲೆಗಳ ಮೇಲೆ ತೇಲುತ್ತಿರುವ ಎರಡು ಮರದ ತುಂಡುಗಳಂತೆ… ಅವು ಕೆಲವೊಮ್ಮೆ ಪರಸ್ಪರ ಹತ್ತಿರ ಬರುತ್ತವೆ…. ಮತ್ತೆ ಅಲೆಯ ಹೊಡೆತಕ್ಕೆ ಸಿಕ್ಕು ದೂರವಾಗುತ್ತವೆ. ದೇವನ ಸಂಬಂಧ ಹೊರತುಪಡಿಸಿ ಉಳಿದಿದ್ದೆಲ್ಲ ಇದೇ ರೀತಿಯ ಸಂಬಂಧಗಳು. ಹಾಗಾಗಿ ಅವುಗಳನ್ನು ಕಳಕೊಂಡಾಗ ದುಃಖಿಸಬಾರದು. ಆದರೆ ದೇವನನ್ನು ಕಳೆದುಕೊಳ್ಳಬಾರದು.
ಒಬ್ಬ ರಾಜನಿಗೆ ನಾಲ್ವರು ಹೆಂಡತಿಯರು. ಅವರಲ್ಲಿ ರಾಜನಿಗೆ ನಾಲ್ಕನೆಯವಳ ಮೇಲೆ ಹೆಚ್ಚು ಪ್ರೀತಿ…. ಮೂರನೆಯವಳ ಮೇಲೆ ಸ್ವಲ್ಪ ಕಡಿಮೆ… ಎರಡನೆಯವಳ ಮೇಲೆ ಮತ್ತೂ ಸ್ವಲ್ಪ ಕಡಿಮೆ… ಮೊದಲನೆಯವಳ ಮೇಲೆ ಪ್ರೀತಿಯೇ ಇರಲಿಲ್ಲ. ಒಮ್ಮೆ ಅವನು ಸಾಯುವ ಸ್ಥಿತಿ ಬಂದಾಗ ನಾಲ್ಕನೇಯವಳನ್ನು ಕರೆದ… “ನಾನು ನಿನಗಾಗಿ ಇಷ್ಟೆಲ್ಲಾ ಪ್ರೀತಿ ಕೊಟ್ಟೆ …ಸರ್ವಸ್ವ ಕೊಟ್ಟೆ. ನನ್ನ ಜೊತೆ ಬರ್ತೀಯಾ?” ಎಂದ. ಆಕೆ ಇಲ್ಲ ಎಂದಳು. ಮೂರನೆಯವಳು ನಾನು ಬೇರೆಯವರನ್ನು ಮದುವೆಯಾಗುತ್ತೇನೆ ಎಂದಳಂತೆ….! ಎರಡನೆಯವಳು ಸ್ವಲ್ಪ ಒಳ್ಳೆಯವಳು ಅವಳು ಹೇಳಿದಳು ನನಗೆ ಪಾಪ ಎನ್ನಿಸುತ್ತದೆ ಆದರೆ ನಾನು ಸ್ಮಶಾನದವರೆಗೆ ಬರಬಲ್ಲೆ ಅಷ್ಟೇ ಎಂದು. ಸರಿ ರಾಜನಿಗೆ ವಜ್ರಾಘಾತವಾದಂತಾಯಿತು. ಅಷ್ಟರಲ್ಲಿ ಕ್ಷೀಣ ಧ್ವನಿಯೊಂದು ಕೇಳಿತು….” ನಾನು ನಿಮ್ಮೊಂದಿಗೆ ಬರುತ್ತೇನೆ” ಎಂದು. ಅದು ಮೊದಲನೇ ಹೆಂಡತಿ ಯದಾಗಿತ್ತು. ಆಗ ರಾಜ ಹೇಳಿದ “ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ನಿನಗೆ ಪ್ರೀತಿ ಕೊಡಬೇಕಿತ್ತು ಎಂದು. ನಮಗೆಲ್ಲರಿಗೂ ಈ ನಾಲ್ಕು ಹೆಂಡತಿಯರು ಇದ್ದಾರೆ…! ಅದು ಯಾರಿಗೂ ತಪ್ಪಿದ್ದಲ್ಲ. ಆ ಕೊನೆಯದು ದೇಹ ಅದು ನಾಲ್ಕನೇ ಹೆಂಡತಿ. ಅದು ನಾವು ಸಾಯುವ ಹೊತ್ತಿಗೆ ನಮ್ಮ ಜೊತೆ ಬರುವುದಿಲ್ಲ. ಇನ್ನು ಮೂರನೇಯದು ಆಸ್ತಿ- ಪಾಸ್ತಿ- ಹಣ ಅದು ನಾವು ಹೋದ ಕೂಡಲೇ ಬೇರೆಯವರನ್ನು ಮದುವೆಯಾಗುತ್ತದೆ. ಇನ್ನು ಮೂರನೆಯ ಹೆಂಡತಿ ನಮ್ಮ ಬಂಧು -ಮಿತ್ರರು, ಹಿತೈಷಿಗಳು. ಅವರು ಸ್ಮಶಾನದವರೆಗೆ ಬರುತ್ತಾರೆ. ಮೊದಲನೇ ಹೆಂಡತಿ ಆತ್ಮ …ಧರ್ಮ. ನಾವು ಸಂಪಾದನೆ ಮಾಡಿದ ಧರ್ಮ. ಅದು ಸದಾ ನಮ್ಮೊಡನೆ ಇರುತ್ತದೆ…..ಬರುತ್ತದೆ. ದೇಹ ನಮ್ಮನ್ನು ಪ್ರೀತಿಸುತ್ತಿಲ್ಲ ನಾವದನ್ನು ಪ್ರೀತಿಸುತ್ತಿದ್ದೇವೆ…. ನಮ್ಮ ಆಸ್ತಿ ದುಡ್ಡು ಸಂಪತ್ತು ನಮ್ಮನ್ನು ಪ್ರೀತಿಸುತ್ತಿಲ್ಲ ನಾವದನ್ನು ಪ್ರೀತಿಸುತ್ತಿದ್ದೇವೆ…. ನಮ್ಮ ಬಂಧು ಮಿತ್ರರು ಒಂದು ಮಟ್ಟದಲ್ಲಿ ನಮ್ಮನ್ನ ಪ್ರೀತಿಸುತ್ತಿದ್ದಾರೆ. ಅದು ಸ್ಮಶಾನದವರೆಗೆ ಬರುವ ಮಟ್ಟದಲ್ಲಿ ಅಷ್ಟೇ. ಆದರೆ ಧರ್ಮ ಅದು ನಮ್ಮನ್ನು ಪ್ರೀತಿಸುತ್ತದೆ.ಸದಾ ನಮ್ಮೊಡನಿರುತ್ತದೆ.
ನಾವು ದೇವನನ್ನು ದೂರ ಮಾಡಿದರೆ ಅವನಿಗೇನೂ ನಷ್ಟವಿಲ್ಲ. ಅದು ನಮಗೇ ನಷ್ಟ.
ಆಕೆ ಪುಟ್ಟ ಹುಡುಗಿ. ಅಂಗಡಿಯಲ್ಲಿ ಮುತ್ತಿನ ಮಾಲೆ ಯನ್ನ ನೋಡಿದಳು. ಬೇಕೆಂದಳು. ಅಮ್ಮ ಹೇಳಿದಳು ನೀನೇ ಸಂಪಾದನೆ ಮಾಡಿ ಖರೀದಿಸು. ಇಂದಿನಿಂದ ಮನೆ ಕೆಲಸ ಜಾಸ್ತಿ ಮಾಡು ನಾನು ದುಡ್ಡು ಕೊಡುತ್ತೇನೆ ಎಂದಳು. ಸ್ವಲ್ಪ ದಿನ ಕಳೆಯಿತು ಹುಡುಗಿಯಲ್ಲಿ ಇಪ್ಪತ್ತು ರೂಪಾಯಿ ಆಯ್ತು. ಅಂಗಡಿಗೆ ಹೋಗಿ ಆಟಿಗೆಯ ಮುತ್ತಿನ ಮಾಲೆ ತಂದಳು. ಹಾಕಿಕೊಂಡು ಖುಷಿ ಪಟ್ಟಳು. ತಾನೇ ಸಂಪಾದನೆ ಮಾಡಿ ಖರೀದಿಸಿದ ಸುಖವೇ ಬೇರೆ. ಯಾವಾಗಲೂ ಹಾಕಿ ಕೊಂಡಿರುತ್ತಿದ್ದಳು. ಆಕೆಯ ತಂದೆ ತುಂಬಾ ಪ್ರೀತಿಸುತ್ತಿದ್ದ. ಪ್ರತಿ ರಾತ್ರಿ ಕಥೆ ಹೇಳಿ ಮಲಗಿಸುತ್ತಿದ್ದ. ಒಂದು ದಿನ ಅಪ್ಪ ಕೇಳಿದ “ಮಗಳೇ ನೀನು ನನ್ನನ್ನು ಪ್ರೀತಿಸುತ್ತೀಯಾ? ಎಂದು. ಹೌದು ಎಂದಳು. ಹಾಗಾದರೆ ಆ ಮುತ್ತಿನ ಮಾಲೆ ಕೊಡು ಎಂದ. ಅಪ್ಪ….. ಎಂದಳು. ಬೇರೆಯದನ್ನು ಕೊಡುತ್ತೇನೆ ಆಗಬಹುದಾ? ಎಂದಳು. ಹೀಗೆ ಸ್ವಲ್ಪ ದಿನ ಕಳೆಯಿತು. ತಂದೆ ಮಗಳ ಮಧ್ಯೆ ಇದು ಪ್ರತಿದಿನ ನಡೆಯುತ್ತಿತ್ತು. ಒಂದು ದಿನ ತಂದೆ ಬರುವಾಗ ಮಗಳು ಅಳುತ್ತಿದ್ದಳು. ಮಗಳ ಬಳಿ ಇದ್ದ ಆಟಿಕೆಯ ಮುತ್ತಿನ ಸರ ಬಣ್ಣ ಕಳೆದುಕೊಂಡಿತ್ತು. ಅಪ್ಪಾ ನೀನು ತುಂಬಾ ಕೇಳುತ್ತಿದೆಯಲ್ಲಾ ಈಗ ತಗೋ ಎಂದಳು. ಅಪ್ಪ ತೆಗೆದುಕೊಂಡ ಮಗಳಿಗೆ ನಿಜವಾದ ಮುತ್ತಿನ ಮಾಲೆಯನ್ನು ಕೊಟ್ಟ. ಇಲ್ಲಿ ತಂದೆ ದೇವ ಎಂದು ಭಾವಿಸಿದರೆ ಪುಟ್ಟ ಹುಡುಗಿ ನಾವು ಎಂದುಕೊಂಡರೆ ಸತ್ಯದರ್ಶನವಾಗುತ್ತದೆ. ನಮಗೆ ಬೇಡವೆಂದಾದಾಗ ಕೊಟ್ಟರೂ ಆತ ತೆಗೆದುಕೊಂಡು ಹೆಚ್ಚು ಉತ್ಕೃಷ್ಟ ವಾದುದನ್ನು ಕೊಡುತ್ತಾನೆ. ಈ ಕಥೆಗಳು ಕಥೆಗಳಲ್ಲಿ ಬರುವ ಪಾತ್ರಗಳು ನಮ್ಮ ಚಿತ್ತ ಭಿತ್ತಿಯಲ್ಲಿ ಕೆತ್ತಬೇಕು. ಈ ಕಥೆಗಳನ್ನು ಓದಿದ ಮೇಲೆ ಇನ್ನು ಏನು ಕಳೆದುಕೊಂಡರೂ ದುಃಖ ವಾಗಬಾರದು. ದೇವನನ್ನು ಕಳಕೊಂಡರೆ ಮಾತ್ರ ದುಃಖ ವಾಗಬೇಕು. ಎಲ್ಲವೂ ಅವನದೇ ಅವನೇ ಕೊಟ್ಟಿದ್ದು ಕಳೆದುಕೊಳ್ಳಲು ನಮ್ಮದೇನಿದೆ?……. ಅಲ್ವಾ!?
✍️ ಡಾ.ರವೀಂದ್ರ ಭಟ್ಟ ಸೂರಿ.