ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಕು || ಪುಷ್ಪಾ ಎಸ್ ಶೆಟ್ಟಿ

ಒಬ್ಬ ಗುರುವಾದವನಿಗೆ ತನ್ನ ಶಿಷ್ಯರು ಒಂದು ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಬಯಕೆ ಸಹಜವಾಗಿಯೇ ಇರುತ್ತದೆ. ಸಾವಿರ ಪಾಠಗಳನ್ನೂ, ಸಾವಿರ ಲೆಕ್ಕಗಳನ್ನೂ, ಲೋಪ ಸಂಧಿ, ಆಗಮ ಸಂಧಿ, ಆದೇಶ ಸಂಧಿಗಳನ್ನೂ, ಮಗ್ಗಿ, ಪ್ರಮೇಯ, ಭಿನ್ನರಾಶಿ, ಶೇಕಡಾ, ಸರಳಬಡ್ಡಿ ಇತ್ಯಾದಿ ಇತ್ಯಾದಿ ಎಲ್ಲವನ್ನೂ ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಕಲಿಸುವ ಉದ್ದೇಶವೊಂದೇ ಮುಂದೆ ಸುಖವಾಗಿ ಬಾಳಲಿ ಎಂದು. ಕಷ್ಟವೋ ಸುಖವೋ ಅದು ಕೊನೆಗೆ ಭಿನ್ನರಾಶಿಯ ಮೇಲೆ ನಿಂತಿರುವುದಿಲ್ಲ ಎಂಬುದು ಗೊತ್ತು ನನಗೆ. ??ಉತ್ತರ ಬರೆದು ಅಂಕ ಗಿಟ್ಟಿಸಿಕೊಂಡ ಮಾತ್ರಕ್ಕೆ ವ್ಯಕ್ತಿ ಪ್ರತಿಭಾ ಸಂಪನ್ನ ಎಂದು ಹೇಳುವುದಕ್ಕೆ ಸಾಧ್ಯವಾಗದು. ಕೆಲವು ಪ್ರಶ್ನೆಗಳಿಗೆ ನನಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ?? Rank ಪಡೆದ ಅನೇಕರು ಜೀವನದಲ್ಲಿ‌ ಸಂಪೂರ್ಣ ಫೇಲಾದವರು ಎಷ್ಟಿಲ್ಲ ಹೇಳಿ… ಏನೂ ಬರದೇ ಹೋದವರೂ ಇಂದು ಏನಿಲ್ಲ?! ಎಂದು ಕೇಳುವ ತರಹ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ನಾನು ಜೀವನ certificate ಮೇಲೆ ಅವಲಂಬಿತವಾಗಿದೆ ಎಂಬ ಮಾತನ್ನು ಯಾವತ್ತೂ ನಂಬುವುದಿಲ್ಲ. ಇಂದು ನನ್ನ ನಲ್ಮೆಯ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಡಬೇಕು ನಿಮಗೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ನಿವಾಸಿ ಪುಷ್ಪಾ ಇಂದಿನ ನನ್ನ ಅಕ್ಷರ ಅತಿಥಿ.

‌‌‌‌‌‌‌ ಸುಬ್ರಾಯ ಶೆಟ್ಟಿ ಹಾಗೂ ಯಶೋದಾ ದಂಪತಿಗೆ ಮೂವರು ಪುತ್ರಿಯರು. ಪವಿತ್ರಾ, ಪೂಜಾ, ಮತ್ತು ಪುಷ್ಪಾ. ಹೆಣ್ಣು ಮಕ್ಕಳೆಂಬ ತಾತ್ಸಾರ ಭಾವದಿಂದ ಎಂದೂ ಕಂಡವರಲ್ಲ ಆ ದಂಪತಿ. ಗುರು ಹಿರಿಯರ ಮೇಲೆ ಶೃದ್ಧೆ, ವಿನಯವಂತಿಕೆಯಿಂದ ತಮ್ಮ ಮಕ್ಕಳನ್ನು ಬೆಳೆಸಿದ ಸುಬ್ರಾಯ ಶೆಟ್ಟರಿಗೂ ಅವರ ಕುಟುಂಬದವರಿಗೂ ನಾನೆಂದರೆ ಅಪಾರ ಅಭಿಮಾನ.‌ ಮಕ್ಕಳಿಗೆ ನಾಲ್ಕಕ್ಷರ ಕಲಿಸಿದ್ದು ಬಿಟ್ಟರೆ ನಾನು ಮಾಡಿದ್ದು ಅಂತಹ ಘನಂದಾರಿ ಕೆಲಸವೇನಲ್ಲ. ಆದರೂ ಅದ್ಯಾಕೋ ಅವರ ಪ್ರೀತಿ ವಿಶ್ವಾಸ ಅದು ನಿಜಕ್ಕೂ ನನ್ನ ಸೌಭಾಗ್ಯ.
ಪುಷ್ಪಾ ಇದೀಗ ಪಿ.ಯು.ಸಿ ಅಭ್ಯಾಸ ಮಾಡುತ್ತಿದ್ದಾಳೆ. ಒಳ್ಳೆಯ ನಿರೂಪಕಿ, ಮಾತುಗಾರ್ತಿ, ಓದಿನಲ್ಲೂ ಉತ್ತಮ,‌ ಎಲ್ಲಕ್ಕಿಂತ ಹೆಚ್ಚಾಗಿ ವಿಧೇಯ ವಿದ್ಯಾರ್ಥಿನಿ. ಶಾಲೆಯ ವಾರ್ಷಿಕೋತ್ಸವ ಬಂದಾಗಲಂತೂ ಪುಷ್ಪಾಳ ವಿಭಿನ್ನ ಶೈಲಿಯ ನೃತ್ಯ ನೆನಪಾಗದಿರದು. ತಾನು ಕಲಿತಿದ್ದನ್ನು ನಮ್ಮ ಸನ್ನಿಧಿಗೂ ಹೇಳಿಕೊಟ್ಟು ಅವಳನ್ನೂ ಸ್ಟೇಜಿಗೆ ಕರೆದುಕೊಂಡು ಬಂದ ಗುರು ಅವಳು. ನಾನೊಂದು ಮಾತು ಹೇಳಿದರೆ ಸಾಕು ಪವಿತ್ರಾ, ಪೂಜಾ, ಪುಷ್ಪಾ ಮೂವರೂ ಅಲ್ಲ ಎಂದವರೇ ಅಲ್ಲ. ನೀವು ನಂಬಲಿಕ್ಕಿಲ್ಲ. ನಾನೊಮ್ಮೆ ಪ್ರಥಮ ಬಾರಿ ಗಣತಿಗೆ ಅವರ ಮನೆಗೆ ಹೋದಾಗ ಅವರ ಮನೆಯ ಗೋಡೆಯ ಮೇಲೆ ನನ್ನ ಯಕ್ಷಗಾನದ photo ಇತ್ತು. ಅಷ್ಟು ಅಭಿಮಾನ ಅವರಿಗೆ.
‌ ಬಡತನದಲ್ಲೂ ಸುಬ್ರಾಯ ಶೆಟ್ಟರು ಮಕ್ಕಳಿಗೆಂದೂ ಕೊರತೆ ಮಾಡಿದ್ದಿಲ್ಲ. ಸರ್……ನಮ್ಮ ಮಕ್ಕಳಿಗೆ ಯಾವ ಕೋರ್ಸ ಮಾಡಿಸಲಿ?! ಹೇಗೆ ಮಾಡಲಿ ಎಂದು ನನ್ನೊಂದು ಮಾತು ಕೇಳದೇ ಹೋಗುವವರಲ್ಲ ಪಾಪ. ಅವರು ಕೈ ಜೋಡಿಸಿ ನಮಸ್ಕರಿಸಿದರೆ ನನ್ನ ಕಣ್ಣಲ್ಲಿ ನೀರು ತುಂಬುತ್ತದೆ.
ಪೂಜಾ ಡಿಪ್ಲೊಮಾ ಮುಗಿಸಿ ಸದ್ಯ ತಾತ್ಕಾಲಿಕ ಕೆಲಸವನ್ನರಸಿ ಬೆಂಗಳೂರು ಸೇರಿದ್ದಾಳೆ. ಪುಷ್ಪಾ ಶೃದ್ಧೆಯಿಂದ ಅಭ್ಯಾಸ ಮಾಡುತ್ತಿದ್ದಾಳೆ. ನನ್ನ ಮಾರ್ಗದರ್ಶನದಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಿರೂಪಿಸಬಲ್ಲ ಪುಷ್ಪಾ ಸತತ ಪರಿಶ್ರಮಿ.
‌‌‌‌‌ ಗುರುವಿನ ಮೇಲಿಟ್ಟ ಶೃದ್ಧೆ ಎಂದೂ ಫಲಿಸದಿರುವುದಿಲ್ಲ. ಗಿಡವೊಂದು ಚೆನ್ನಾಗಿ ಬೆಳೆಯಬೇಕೆಂದರೆ ಕೇವಲ ನೀರು ಗೊಬ್ಬರ ಹಾಕಿದರಷ್ಟೇ ಸಾಲದು. ಸಸಿಯೂ ಚೆನ್ನಾಗಿ ಇರಬೇಕು. ಒಮ್ಮೊಮ್ಮೆ ನೆರಳಾದರೆ ಬೆಳಕನ್ನು ತಾನೇ ಅರಸಿಕೊಳ್ಳಬೇಕು. ಪ್ರತಿಯೊಂದು ವಿದ್ಯಾರ್ಥಿಯೂ ಪಾಠ ಆಲಿಸುತ್ತಾನೆ…. ಗುರುಗಳು ಒಬ್ಬರಿಗೊಂದು ಒಬ್ಬರಿಗೊಂದು ಹೇಳಿಕೊಡುವುದಿಲ್ಲ. ಆದರೆ ಮಕ್ಕಳ ಮೇಲೆ ಬೀರಿದ ಪ್ರಭಾವ ಮಾತ್ರ ವಿಭಿನ್ನವಾಗಿರುತ್ತದೆ. ಪುಷ್ಪಾ ಅತ್ಯಂತ ಆಸಕ್ತಿಯಿಂದ ಪಾಠಗಳನ್ನು ಕೇಳುವ ವಿದ್ಯಾರ್ಥಿನಿ. ಡಿಂಗ್ ಡಾಂಗ್ ಮಾಡಿ ಅಲ್ಲಿಲ್ಲಿ ಅಡ್ಡಾಡುವವಳಲ್ಲ ಆಕೆ.
ನನ್ನ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರೂಪಿಸಿ ಪದ್ಮಶ್ರೀ ಚಿಟ್ಟಾಣಿಯವರಿಂದಲೂ ಶಹಭಾಸ್ ಗಿಟ್ಟಿಸಿಕೊಂಡ ಪುಷ್ಪಾ ನಿರರ್ಗಳವಾಗಿ ಮತ್ತು ಸ್ಪಷ್ಟವಾಗಿ ಭಾಷಣ ಮಾಡಿ ಬೆರಗುಗೊಳಿಸುತ್ತಿದ್ದಳು.
ಹಳ್ಳಿಯ ಮೂಲೆಯೊಂದರಲ್ಲಿ ಹುಟ್ಟಿ‌ ಬೆಳೆದವರೇ ಮುಂದೊಮ್ಮೆ ಅತ್ಯಂತ ಪ್ರತಿಭಾಶಾಲಿಗಳಾಗಿ ನಾಡು ಮೆಚ್ಚುವ ವ್ಯಕ್ತಿಗಳಾಗುವುದನ್ನು ನೋಡಿದ್ದೇವೆ. ಈಕೆ ಕೂಡ ಮುಂದೊಂದು ದಿನ ಸ್ವಂತ ಕಾಲಿನ ಮೇಲೆ ನಿಂತು ಸಮಾಜಕ್ಕೆ ಒಬ್ಬ ಉತ್ತಮ ವ್ಯಕ್ತಿಯಾಗಿ ಹೊರ ಹೊಮ್ಮಲಿ ಎಂಬ ಅಪೇಕ್ಷೆ ನನ್ನದು.
‌ಹೀಗೊಂದು ಮಾಡಬಹುದು ಎಂದು ಹೇಳಿದರೆ ಮಾಡುವವರೇ ಕಡಿಮೆ… ಅವರ್ಯಾರು ನಮಗೆ ಹೇಳುವುದಕ್ಕೆ?! ನಮ್ಮ ಮಕ್ಕಳು ತುಂಬಾ…..ಹುಷಾರಿ…..ಎಂಬ ಕುರುಡು ನಂಬಿಕೆಯಲ್ಲೇ ಪಾಲಕರೊಮ್ಮೊಮ್ಮೆ ಮುಳುಗಿ ಹೋಗುತ್ತಾರೆ. ಆ ಹುಷಾರಿತನ ಗೊತ್ತಾಗುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಪೂಜಾಳಾಗಲೀ ಪುಷ್ಪಾ ಆಗಲಿ ಪಾಲಕರ ಕೈಮೀರ ವರ್ತಿಸುವ ಹುಡುಗಿಯರಲ್ಲ. ಸರಳ, ಸಾದಾ ಸೀದಾ ಮನುಷ್ಯರು ಅವರು.
‌‌‌‌‌‌‌ ನಮ್ಮ ಮಕ್ಕಳು ನಮ್ಮೆದುರು ಸುಂದರ ಬದುಕು ಕಟ್ಟಿಕೊಂಡಾಗ ನಮಗೆ ಹೆಮ್ಮೆಯಾಗುತ್ತದೆ. ಪೂಜಾ ಮೊನ್ನೆ ಮೊನ್ನೆ ಸರ್ ನಾನು ಬೆಂಗಳೂರಿಗೆ ಹೋಗಿ ಉದ್ಯೋಗಕ್ಕೆ ಸೇರುತ್ತೇನೆಂದು ಕೈಮುಗಿದು ಹೋದಳು. “ತಂಗಿ…… ಜಮಾನಾ ಸರಿ ಇಲ್ಲ. ವೀಕೆಂಡ್ ಮೋಜು, ಮಸ್ತಿ ಅಂತ ಎಂದೂ ದುಡಿದ ಹಣವನ್ನು ವ್ಯರ್ಥ ಮಾಡಬೇಡ. ತಂಗಿಯನ್ನು ಓದಿಸುವ ಮಹತ್ತರ ಜವಾಬ್ದಾರಿ ನಿನ್ನದು” ಎಂದು ಎಚ್ಚರಿಸಿ ಕಳುಹಿದ್ದೇನೆ. ಕುದುರೆಯನ್ನು ನೀರಿನವರೆಗೆ ಕರೆದುಕೊಂಡು ಹೋಗಬಹುದು. ನಂತರ ಕುದುರೆಯೇ ನೀರು ಕುಡಿಯಬೇಕು. ?
ಮೂವರೂ ಹೆಣ್ಣುಮಕ್ಕಳನ್ನು ಕಣ್ಣಾಗಿ ಬೆಳೆಸಿದ್ದ ಸುಬ್ರಾಯ ಶೆಟ್ಟಿ ದಂಪತಿಗೆ ಪವಿತ್ರಾಳ ಅಕಾಲಿಕ ನಿಧನ ಜೀವನದಲ್ಲಿ ಬಹು ದೊಡ್ಡ ಆಘಾತ ಕೊಟ್ಟು ಬಿಟ್ಟಿತು. ಸಂತೈಸಲೂ ಪದಗಳಿಲ್ಲ ನನ್ನ ಬಳಿ. ಯಶೋದಕ್ಕ ಇಂದೂ ಬಿಕ್ಕಳಿಸುತ್ತಾಳೆ. ಎದುರು ಸಿಕ್ಕರೂ ನಾನೇ ತಲೆ ತಗ್ಗಿಸಿ ಬಿಡುತ್ತೇನೆ. ಕೆಲವೊಂದು ಪ್ರಶ್ನೆಗಳಿಗೆ ಉತ್ತರವಿಲ್ಲ ನನ್ನಲ್ಲಿ. ??? ಪೂಜಾ, ಪುಷ್ಪಾ ಇಬ್ಬರೂ ಆ ನೋವನ್ನು ಮರೆಸಿ ಮತ್ತೆ ಸಂಭ್ರಮ ಮೂಡಿಸಬೇಕು ಅವರ ಬಾಳಲ್ಲಿ.
ಹುಟ್ಟುವಾಗ ಬಡವರಾಗಿ ಹುಟ್ಟಿದರೆ ಅದು ನಮ್ಮ ತಪ್ಪಲ್ಲ….ಸಾಯುವಾಗಲೂ ಬಡವನಾಗಿಯೇ ಸಾಯುತ್ತೇವಾದರೆ ಅದು ನಮ್ಮದೇ ತಪ್ಪು. ಹೀಗಾಗಿ ಕಠಿಣ ಪರಿಶ್ರಮ ಹಾಗೂ ಆಸಕ್ತಿ ಬದುಕನ್ನು ಇನ್ನಷ್ಟು ಸುಂದರವಾಗಿಸುತ್ತದೆ. ಬೆಳೆಯಬೇಕು…ನಮ್ಮ ವಿದ್ಯಾರ್ಥಿಗಳು ನಮ್ಮನ್ನು ಮೀರಿಸಿ ಬೆಳೆಯಬೇಕು.
ಅಪ್ಪ ಅಮ್ಮನಿಗಿರುವ ಒಂದೇ ಒಂದು ಕನಸೆಂದರೆ ನಾವು ಪಟ್ಟ ಕಷ್ಟವನ್ನು ಮಕ್ಕಳು ಪಡಬಾರದು ಎಂದು. ಅದಕ್ಕಾಗಿಯೇ ಅವರು ದುಡಿಯುತ್ತಾರೆ. ಮಕ್ಕಳನ್ನು ರಾಜ ರಾಣಿಯರಂತೆ ಬೆಳೆಸುತ್ತಾರೆ. ರಾಜರಂತೆ ಬೆಳೆದ ಮಕ್ಕಳು ಮನೆಯಲ್ಲಿ ಕಡ್ಡಿ ಕೆಲಸ ಮಾಡದೇ ಸೋಮಾರಿಯಾಗಿ ಕೊನೆಗೆ ಎಲ್ಲೆಡೆಗೂ ಸೋಲನ್ನೇ ಅನುಭವಿಸುತ್ತಾರೆ. ನಮ್ಮ ಮಕ್ಕಳು ಪಾಲಕರಿಗೂ ನೆರವಾಗುತ್ತಾ ಸ್ವಂತ ಕಾಲಿನ ಮೇಲೆ ಯಾವಾಗ ನಿಲ್ಲುತ್ತೇನೆ ಎಂದು ಕಾಯುವಂಥವರಾಗಬೇಕು. ಸ್ವಾವಲಂಬಿ ಬದುಕಿನಷ್ಟು ಭಾಗ್ಯ ಮತ್ತೊಂದಿಲ್ಲ. ನನ್ನ ಮುಂದಿನ ರಾಯಭಾರಿಯಾಗಿ ಪುಷ್ಪಾ ಅನೇಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವಂತಾಗಲಿ. ಅವಳಿಗೆ ಶ್ರೇಯಸ್ಸಾಗಲಿ. ಯಶಸ್ಸು ಒಂದು ದಿನದ ಸಾಧನೆಯಲ್ಲ. ನಿತ್ಯ ತಪಸ್ಸಿನ ಪ್ರತಿಫಲ ಅದು.‌
ಸದ್ಗುರು ಶ್ರೀಧರರ ಆಶೀರ್ವಾದ ಪುಷ್ಪಾ, ಪೂಜಾ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಚಂಪಾಷಷ್ಠಿಯ ವಿಶೇಷತೆ ನಿಮಗೆ ಗೊತ್ತೇ? ಬನ್ನಿ ಪುರಾಣ ಉಲ್ಲೇಖದ ಬಗ್ಗೆ ಓದಿ.

ಪುಷ್ಪಾಳಿಗೆ ಪೂಜಾಳಿಗೆ ನನ್ನ ಶುಭ ಹಾರೈಕೆಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವಳಿಗೊಮ್ಮೆ ಶುಭ ಹಾರೈಸೋಣ

??????⚫⚪???????⚫⚪?????