ಕೊಳದಲ್ಲಿ ಕಮಲ….ಕಮಲದ ಎಲೆಯಲ್ಲಿರತಕ್ಕಂತ ಜಲಬಿಂದು. ಆ ಜಲ ಬಿಂದುವಿನಂತೆ ನಮ್ಮ ಬದುಕು. ನೀರೊಳಗೆ ಕಮಲ… ಕಮಲದ ಎಲೆಯ ಮೇಲೆ ಒಂದು ಬಿಂದು…. ಅದು ಸೂರ್ಯನ ಬೆಳಕಿಗೆ ಹೊಳೆಯುತ್ತದೆ. ಎಷ್ಟು ಚೆಂದ. ಅಷ್ಟು ಚೆಂದ ನಮ್ಮ ಬದುಕು ಅಂತ ಹೆಮ್ಮೆ ಪಡುವ, ಖುಷಿ ಪಡುವ ಸಂಗತಿಯಲ್ಲ. ಇದು ಅದೆಷ್ಟು ಶಾಶ್ವತವೋ… ಕಮಲದ ಎಲೆಯ ಮೇಲಿರುವ ಜಲಬಿಂದು ಎಷ್ಟು ಶಾಶ್ವತವೋ ಅಷ್ಟೇ ಶಾಶ್ವತ ನಮ್ಮ ಬದುಕು…! ಇದು ಸತ್ಯ. ನಮ್ಮ ಬದುಕು ಚಂಚಲವಾದದ್ದು, ಸ್ಥಿರವಲ್ಲದ್ದು, ಶಾಶ್ವತವಲ್ಲದ್ದು.

ಮನೆ ಕಟ್ಟಿದರೆ ಮೊದಲು ಅಡಿಪಾಯ ಹಾಕುತ್ತವೆ. ಅದು ಮನೆಯನ್ನು ಹಿಡಿದುಕೊಳ್ಳುತ್ತದೆ. ಆದರೆ ಕಮಲದ ಎಲೆಯ ಮೇಲಿರುವ ಜಲಬಿಂದು ಎಲೆಗೆ ಅಂಟಿಕೊಂಡಿಲ್ಲ . ಕಮಲದ ಎಲೆಗೂ ಜಲ ಬಿಂದುವಿಗೂ ಬಂಧವಿಲ್ಲ. ಒಂದು ಗಾಳಿ ಬಂದರೆ ಅದು ಉದುರಿ ಹೋಗುತ್ತದೆ. ಒಂದು ಹಕ್ಕಿ ಬಂದು ಕೂತರೆ ಅದಿಲ್ಲ. ಅಥವಾ ಬಿಸಿಲು ಏರುತ್ತಾ ಏರುತ್ತಾ ಹೋದ ಹಾಗೆ ಅದು ಆವಿಯಾಗಿ ಹೋಗುತ್ತದೆ. ಹಾಗೆಯೇ ಒಂದು ಸಣ್ಣ ಅವಘಡ ನಮ್ಮ ಬದುಕನ್ನು ಇಲ್ಲವಾಗಿಸುತ್ತದೆ. ಒಂದು ವೇಳೆ ಯಾವುದೇ ಅವಘಡಗಳು ನಡೆಯದಿದ್ದರೂ ಕಮಲದ ಎಲೆಯ ಮೇಲಿನ ಬಿಂದು ಕ್ರಮೇಣ ಆರಿಹೋಗುವಂತೆ ನಮ್ಮ ಬದುಕು ಒಂದು ದಿನ ಕೊನೆಗೊಳ್ಳುತ್ತದೆ.

ಬದುಕು ಚೆಂದ…. ಏನು ಸೊಗಸು… ಬದುಕು ಏನು ತಳುಕು ಬಳುಕು. ಆ ಸುಖ- ಈ ಸುಖ- ಇನ್ನೊಂದು ಸುಖ -ಎಷ್ಟೊಂದು ಖುಷಿ ಅಂತ ಅನ್ನಿಸುತ್ತದೆ. ಅದು ಕೆಲವು ಕಾಲ ಮಾತ್ರ. ಅದಕ್ಕೆ ಸ್ಥಿರತೆ ಇಲ್ಲ. ಅದು ಯಾವಾಗ ಬೇಕಾದರೂ ಕೊನೆಗೊಳ್ಳಬಹುದು. ನಮ್ಮ ಬದುಕು ಮಿಂಚಿನಂತೆ. ಅದು ಮಿಂಚಿ ಮರೆಯಾಗುತ್ತದೆ.

RELATED ARTICLES  2023ರಲ್ಲಿ ಯಾವೆಲ್ಲ ದಿನ ಬ್ಯಾಂಕ್ ಬಂದ್‌ ಆಗಿರಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಇರಲಿ ಬದುಕು ಸ್ಥಿರವಲ್ಲ ಚಂಚಲ ಎಂದಾದರೆ ಅದು ಇದ್ದಷ್ಟು ದಿನ ಹಾಯಾಗಿರೋಣ….. ಖುಷಿಯಾಗಿರೋಣ… ಮೋಜು ಮಸ್ತಿ ಮಾಡೋಣ ಎಂದರೆ ಬದುಕು ಇದ್ದಷ್ಟು ದಿನ ಕೂಡ ಸುಖವಲ್ಲ..‌! ಈ ‘ಲೋಕ’ ವನ್ನು ‘ಶೋಕ’ ಮುರಿದು ಮುಕ್ಕುತ್ತಿದೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಶೋಕವಿದ್ದೇ ಇದೆ. ಇದಕ್ಕೆ ಯಾರೂ ಅಪವಾದವಲ್ಲ. ಪ್ರತಿಯೊಬ್ಬರಿಗೂ ಎರಡು ರೀತಿಯಲ್ಲಿ ಶೋಕವಿದೆ. ಅದು ಆದಿ ಮತ್ತು ವ್ಯಾದಿ. ನಮ್ಮೊಳಗೆ ಹಾಗೂ ಹೊರಗೆ ಶೋಕವಿದೆ. ಈ ಪ್ರಪಂಚವೇ ಶೋಕಸಾಗರದಲ್ಲಿ ಮುಳುಗಿದೆ. ಹಾಗಾಗಿ ಈ ಬದುಕು ಶಾಶ್ವತವೂ ಅಲ್ಲ…. ಸುಖವೂ ಅಲ್ಲ .

ಬಡವನಿಗೆ ಶಿವನೊಲಿದಾಗ ಆತ ‘ಆನೆ’ ಯನ್ನು ವರವಾಗಿ ಕೇಳಿದ… ಶಿವ ಹೇಳಿದ “ನಿನಗೇ ಹೊಟ್ಟೆಗಿಲ್ಲ ಇನ್ನು ಆನೆ ತೆಗೆದುಕೊಂಡು ಏನು ಮಾಡುತ್ತಿ? ಎಂದು . ಆಗ ಬಡವ ಹೇಳಿದ ನಾನು ಕೇಳಿದ್ದು ಆನೆ ಎನ್ನುವ ಪ್ರಾಣಿಯನ್ನಲ್ಲ ಬದಲಾಗಿ ಆ ಎಂದರೆ ಆರೋಗ್ಯ ನೆ ಎಂದರೆ ನೆಮ್ಮದಿ ಎಂದು. ಅದರ ಸಂಕ್ಷಿಪ್ತ ರೂಪ ಆನೆ ಎಂದ.

RELATED ARTICLES  ಆನ್‌ಲೈನ್ ಗೇಮಿಂಗ್‌ಗಾಗಿ ಹೊಸ ನಿಯಮ : ಕೆಲವು ಗೇಂಮ್ ಗಳು ಬಂದ್..!

ಅಷ್ಟೇ ಬೇಕಾದದ್ದು ಬದುಕಿಗೆ. ಶರೀರಕ್ಕೆ ಆರೋಗ್ಯ…. ಮನಸ್ಸಿಗೆ ನೆಮ್ಮದಿ. ಇಷ್ಟು ಬಿಟ್ಟರೆ ನಮಗೆ ಇನ್ನೇನು ಬೇಕು? ಇದಿದ್ದರೆ ನಮ್ಮ ಬದುಕಿನಲ್ಲಿ ಎಲ್ಲವೂ ಇದ್ದ ಹಾಗೆ. ಮತ್ತೇನು ಬೇಕಾದರೂ ಅದು ಇಷ್ಟಕ್ಕಾಗಿಯೇ ಬೇಕಾದದ್ದು. ಆದರೆ ಆ ಆರೋಗ್ಯ ಹಾಗೂ ನೆಮ್ಮದಿಯೇ ಇಂದು ಪ್ರಪಂಚದಲ್ಲಿಲ್ಲ. ಎಲ್ಲಿ ನೋಡಿದರೂ ಮಾನಸಿಕವಾದ ವ್ಯಥೆ ಅಥವಾ ವ್ಯಾಧಿಯೇ ಎಲ್ಲೆಲ್ಲೂ ಇದೆ.

ಬದುಕಿನಲ್ಲಿ ಸುಖವಿಲ್ಲ… ಒಂದು ವೇಳೆ ಸುಖವಿದೆ ಎಂದು ಭಾವಿಸಿದರೂ ಅದು ಕ್ಷಣಿಕ. ಅದು ಸ್ಥಿರವಲ್ಲ. ಹಾಗಾಗಿ ಇದನ್ನು ಬಿಡು ಅದನ್ನು ಹಿಡಿದುಕೋ…! ಲೌಕಿಕ ಬಿಡು ಅಲೌಕಿಕವನ್ನು ಆಶ್ರಯಿಸು. ದೇವನನ್ನು ಮೊರೆ ಹೋಗು. ಅಲ್ಲಿ ಪೂರ್ಣ ಸುಖವಿದೆ. ಅದು ನಷ್ಟವಾಗುವುದಿಲ್ಲ. ಆ ಸುಖದಲ್ಲಿ ದುಃಖದ ಮಿಶ್ರ ಣವಿಲ್ಲ. ಇದೆಲ್ಲ ಭ್ರಮೆ. ಅಲ್ಲಿದೆ ಸತ್ಯವಾದ ಸುಖ. ಯಾವುದಕ್ಕೆ ಮೂರು ಕಾಲದಲ್ಲಿಯೂ ಬಾಧೆ ಇಲ್ಲವೋ ಅದು ಸತ್ಯ. ಇತ್ತು, ಇದೆ, ಇರುತ್ತದೆ ಎಂಬ ಭೂತ, ವರ್ತಮಾನ ಹಾಗೂ ಭವಿಷ್ಯತ್ ಕಾಲಗಳಲ್ಲಿ ಎಲ್ಲಿಯೂ ನಶಿಸದೆ ಶಾಶ್ವತವಾಗಿರುವ ಸತ್ಯ ಸುಖ ಭಗವಂತನ ಅನುಗ್ರಹ ದಲ್ಲಿದೆ. ಹಾಗಾಗಿ ನಶ್ವರ ಬದುಕನ್ನು ಈಶ್ವರ ನೆಡೆ ತಿರುಗಿಸಿದರೆ ಶಾಶ್ವತ ಸುಖ ನಮ್ಮದಾಗುತ್ತದೆ. ಸತ್ಯ ಸುಖ ನಮ್ಮದಾಗುತ್ತದೆ.

✍️ ಡಾ.ರವೀಂದ್ರ ಭಟ್ಟ ಸೂರಿ.