*ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ ” ದಾಸ ಶ್ರೇಷ್ಠರ ಅಭಿಮತವಿದು. ನೀರ ಮೇಲಣ ಗುಳ್ಳೆ…. ಅದನ್ನು ನಿಜವೆನ್ನುತ್ತೀರೋ? ಸುಳ್ಳು ಎನ್ನುತ್ತೀರೋ? ಇದೊಂದು ಜಿಜ್ಞಾಸೆ . ಅದು ಶಾಶ್ವತವೋ? ಅಶಾಶ್ವತವೋ? ಬರೀ ಗುಳ್ಳೆಯನ್ನು ನೋಡಿದರೆ ಅದು ತುಂಬಾ ಸುಂದರ. ಅದು ಶಾಶ್ವತವೆಂದು ಅನ್ನಿಸುತ್ತದೆ. ಆದರೆ ಕೆಳಗೆ ಹರಿಯುವ ನೀರನ್ನು ನೋಡಿದಾಗ ಈ ಗುಳ್ಳೆ ಯಾವಾಗ ಬೇಕಾದರೂ ಮಾಯವಾಗಬಹುದು ಎನ್ನುವ ಸತ್ಯದ ಅರಿವಾಗುತ್ತದೆ. ಆ ಗುಳ್ಳೆ ಚೆನ್ನಾಗಿ ಉಬ್ಬಿರುತ್ತದೆ. ಅದರೊಳಗೆ ಏನೂ ಇಲ್ಲ. ಮೇಲಿನಿಂದ ನೋಡಲು ಸುಂದರ ಅಷ್ಟೇ . ಹಾಗೆಯೇ ನಾವು ನೀರ ಮೇಲಣ ಗುಳ್ಳೆಯಂತೆ…! *ಒಳಗೆ ಏನೂ ಸಾರವಿಲ್ಲ ಇದ್ದರೆ ಅದು ಸಂಸಾರವಷ್ಟೇ* ಆದರೂ ನಾವು ಹೇಗೆ ಉಬ್ಬಿ ನಾನೇ ಎಲ್ಲ ಎಂದು ಅಹಂಕಾರ ಪಡುತ್ತಾ ಶೋಭಿಸುತ್ತಾ ಇರುತ್ತೇವೋ ಹಾಗೆಯೇ ಗುಳ್ಳೆ ಕೂಡ . ಗುಳ್ಳೆಯ ಹಿಂದೆ ಮುಂದೆ ಗೊತ್ತಿರುವವರು ಗುಳ್ಳೆಯನ್ನು ನಂಬುವುದಿಲ್ಲ. ಹಾಗೆಯೇ ಈ ಸಂಸಾರದ ಹಿಂದೆ ಮುಂದೆ ಗೊತ್ತಿರುವವರು ಶಂಕರಾಚಾರ್ಯ ರಂಥವರು ಇದನ್ನು ನಂಬಲಿಲ್ಲ . ಸಂಸಾರ ಅದು ನಿಜವಲ್ಲ ಸುಳ್ಳು ಎಂದರು. ದಾಸರು ಕೂಡ ಅದನ್ನೇ ಹೇಳಿದರು.

ಯಾರಿಗೆ ಯಾರುಂಟು? ಅದು ನಮ್ಮ ನಂಟಿಗೂ ಬಂತು. ಹಿಂದೆ ಯಾರೂ ನಮ್ಮ ಜೊತೆ ಇರಲಿಲ್ಲ. ಮುಂದೆ ಯಾರೂ ನಮ್ಮ ಜೊತೆ ಇರುವುದೂ ಇಲ್ಲ. ಆದರೆ ಸದ್ಯ ಕೆಲವರು ನಮ್ಮ ಜೊತೆ ಇದ್ದಾರೆ. ಅವರು ಎಲ್ಲಿಂದಲೋ ಬಂದರು. ನಾವು ಎಲ್ಲಿಂದಲೋ ಬಂದೆವು. ವಿಧಿ ಆಕಸ್ಮಿಕವಾಗಿ ನಮ್ಮನ್ನು ಸೇರಿಸಿದೆ. ಆದರೆ ಎಷ್ಟು ಕಾಲವೋ ಗೊತ್ತಿಲ್ಲ . ಅಗಲಿಕೆ ಯಾವಾಗಲೂ ಆಗಬಹುದು. ದೂರ ದೂರ ಪ್ರಯಾಣ ಮಾಡುವಾಗ ನಮ್ಮ ಜೊತೆ ಯಾರ್ಯಾರೋ ಸೇರಿಕೊಳ್ಳುತ್ತಾರೆ. ಅವರು ತಮ್ಮ ತಮ್ಮಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಆದರೆ ಇಳಿಯುವ ಸ್ಥಳ ಬಂದಾಗ ಅವರ ಪಾಡಿಗೆ ಅವರು ಇಳಿದು ಹೋಗುತ್ತಾರೆ..ನಮ್ಮ ಪಾಡಿಗೆ ನಾವು ಇಳಿದು ಹೋಗುತ್ತೇವೆ. ನಮ್ಮ ನೆಂಟರಿಷ್ಟರು ಎನ್ನುವವರೊಂದಿಗೆ ಇರುವ ಸಂಬಂಧವೂ ಇಷ್ಟೇ. ಯಾರಿಗೆ ಯಾರಿಲ್ಲ. ಕೊನೆಗೆ ಮುಕ್ತಿ ಮಾರ್ಗದಲ್ಲಿ ಸಾಗುವಾಗ ಏಕಾಂಗಿಯಾಗಿ ಸಾಗಬೇಕಾಗುತ್ತದೆ. ಆಗ ಯಾರೂ ಜೊತೆಗಿರುವುದಿಲ್ಲ.

RELATED ARTICLES  ಧಾರ್ಮಿಕ ಹಿನ್ನೆಲೆಯ ಜೊತೆಗೆ ಶೈಕ್ಷಣಿಕ ಸಾಂಸ್ಕೃತಿಕ ಮಹತ್ವ ಸಾರುವ ಗಣೇಶ ಚತುರ್ಥಿ

ದಾಸರು ಹೇಳುತ್ತಾರೆ ಬಾಯಾರಿತು ಎಂದು ಬಾವಿ ನೀರಿಗೆ ಪೊದೆ. ಬಾವಿಯಲಿ ಜಲ ಬತ್ತಿ ಬರಿದಾಯ್ತು ಹರಿಯೇ ಬಿಸಿಲು ಗಾಳಿಗಾಗಿ ಮರದ ನೆರಳಿಗೆ ಪೋದೆ ಮರ ಬಾಗಿ ಶಿರದ ಮೇಲೆರಗಿತೋ ಹರಿಯೇ ಎಂದು. ನಾವು ಒಂದೆಣಿಸಿದರೆ ವಿಧಿ ಮತ್ತೊಂದನ್ನು ಎಣಿಸುತ್ತದೆ. ಒಬ್ಬ ಬೋಳು ತಲೆಯವನಿದ್ದ. ಬಿಸಿಲಲ್ಲಿ ಹೋಗುತ್ತಿರುವಾಗ ಸೂರ್ಯನ ಬಿಸಿಲಿನಿಂದ ತಲೆ ಕಾದು ಹೋಯ್ತು. ನೆರಳನ್ನು ಅರಸಿದ. ತಾಳೆ ಮರವೊಂದು ಕಂಡಿತು. ಹೋಗಿ ನಿಂತ. ಅದೇ ಸಮಯಕ್ಕೆ ತಾಳೆ ಹಣ್ಣೊಂದು ಅವನ ತಲೆಯ ಮೇಲೆ ಬಿದ್ದು ತಲೆಯೊಡೆಯಿತು. ನೆರಳನ್ನು ಹುಡುಕಿ ಹೋದವನನ್ನು ವಿಧಿ ಕರೆದಿತ್ತು. ಅದು ವಿಧಿಲಿಖಿತ. ಅದಕ್ಕಾಗಿಯೇ ದಾಸರು ಕೊನೆಯಲ್ಲಿ ಹೇಳಿದ್ದು……. ನಾ ಸಾಯೊ ಗಳಿಗೆ ನೀ ಕಾಯೋ ಹರಿಯೇ ಎಂದು. ನಾವು ಶಾಶ್ವತ ಎನ್ನುವ ಹಾಗೆ ಬದುಕುತ್ತೇವೆ. ನಮಗೆ ಎಂದೂ ಸಾವೇ ಇಲ್ಲ ಎಂಬಂತೆ ವರ್ತಿಸುತ್ತೇವೆ. ಈ ಭೂಮಿ ಹೋದರೂ ನಾವು ಹೋಗುವುದಿಲ್ಲ ಎನ್ನುವ ಹಾಗೆ ಬದುಕುತ್ತೇವೆ.

ಕಾಡಿನಲ್ಲಿ ಹೋಗುತ್ತಿದ್ದವನೊಬ್ಬನನ್ನು ಹುಲಿ ಅಟ್ಟಿಸಿಕೊಂಡು ಬರುತ್ತಿದೆ. ಓಡಿದ…. ಓಡಿದ… ಓಡಿದ . ದೊಡ್ಡ ಹಾಳು ಬಾವಿ ಅಲ್ಲಿ ಬಿದ್ದ. ಅಲ್ಲಿ ಒಂದು ಬಳ್ಳಿ ಸಿಕ್ಕಿತು. ಅದನ್ನು ಹಿಡಿದು ನೇತಾಡುತ್ತಿದ್ದ. ಹುಲಿ ಮೇಲೆ ಕುಳಿತು ಕಾಯುತ್ತಿತ್ತು. ಮೇಲೆ ಹೋಗಲು ಸಾಧ್ಯವಿಲ್ಲ. ಕೆಳಗಾದರೂ ಹೋಗೋಣ ಎಂದರೆ ಕೆಳಗೆ ಮೊಸಳೆಯೊಂದು ಬಾಯಿ ತೆರೆದುಕೊಂಡಿತ್ತು. ಆತ ಹುಲಿ ಹೋದ ಮೇಲೆ ಮೇಲೆ ಹತ್ತಿ ಹೋಗೋಣ ಸದ್ಯ ನೇತಾಡುತ್ತಿರೋಣ ಎಂದು ನಿರ್ಧರಿಸಿದ. ಅಷ್ಟರಲ್ಲಿ ಏನೋ ಕರ….ಕರ ಶಬ್ದ ಕೇಳಿಸಿತು. ಮೇಲೆ ನೋಡಿದರೆ ಎರಡು ಇಲಿಗಳು ಒಂದು ಬಿಳಿ ಇಲಿ ಮತ್ತೊಂದು ಕಪ್ಪು ಇಲಿ. ಆ ಬಳ್ಳಿಯನ್ನು ಕಡಿಯುತ್ತಾ ಇದೆ. ಏತನ್ಮಧ್ಯೆ ಈತ ಬಾವಿಗೆ ಬೀಳುವಾಗ ಅಲ್ಲಿ ಕಟ್ಟಿದ್ದ ಜೇನುಗೂಡಿಗೆ ಮೈ ತಾಗಿದೆ. ಹುಳುಗಳು ಎದ್ದು ಈತನನ್ನು ಕಚ್ಚುತ್ತಿವೆ. ಇಷ್ಟೆಲ್ಲಾ ಆಗುವಾಗ ಜೇನುಗೂಡಿನಿಂದ ಜೇನು ತೊಟ್ಟಿಕ್ಕುತ್ತಾ ಇದೆ. ಆಗ ಆ ಕಷ್ಟ ಆತಂಕದ ನಡುವೆಯೂ ಆತ ತೊಟ್ಟಿಕ್ಕುವ ಜೇನಿಗೆ ನಾಲಿಗೆ ಒಡ್ಡಿದನಂತೆ. ನಮ್ಮೆಲ್ಲರ ಬದುಕು ಹೀಗೆಯೇ…! ಇದೇ ನಮ್ಮ ಬದುಕು.

RELATED ARTICLES  “ಜೀವನಕ್ಕೆ ಮಹದುದ್ದೇಶವಿದೆ”( ಶ್ರೀಧರಾಮೃತ ವಚನಮಾಲೆ’).

ಆ ಬಳ್ಳಿ ನಮ್ಮ ಆಯಸ್ಸು. ಮೊಸಳೆ ಮೃತ್ಯು. ಅದು ಬಾಯ್ತೆರೆದು ಕಾದಿದೆ. ಆ ಬಿಳಿ ಕಪ್ಪು ಇಲಿಗಳು ಹಗಲು ರಾತ್ರಿಗಳು. ಅವು ಕಡಿಯುತ್ತಾ ಇದೆ . ಅಂದರೆ ಆಯಸ್ಸನ್ನು ಕಳೆಯುತ್ತಿವೆ. ಏತನ್ಮಧ್ಯೆ ನಮ್ಮ ಬದುಕಿನಲ್ಲಿ ಎದುರಾಗುವ ಸುಖಕ್ಕೆ… ಆ ಜೇನಿಗೆ ನಾಲಿಗೆ ಒಡ್ಡಿದಂತೆ ಒಡ್ಡುತ್ತೇವೆ. ಆದರೆ ಆ ಸುಖದ ಹಿಂದೆ ಮುಂದೆ ಯಾವ ಸಮಸ್ಯೆ ಇದೆಯೋ ಯಾರಿಗೆ ಗೊತ್ತು. ಜೇನು ಕಡಿತವಿಲ್ಲದೇ ಜೇನು ಕುಡಿತವಿಲ್ಲ ಹಾಗೆಯೇ ಯಾವ ಕ್ಲೇಷವಿಲ್ಲದೆ ಬದುಕಿನಲ್ಲಿ ಸುಖವೆಂಬುದಿಲ್ಲ. ಎಲ್ಲರ ಬದುಕೂ ಇಷ್ಟೇ….!

ಸಾವಿಲ್ಲದ ಮನೆಯಿಂದ ಸಾಸಿವೆ ತಂದ ಕಥೆ ಇದಕ್ಕೆ ಉತ್ತಮ ಉದಾಹರಣೆ. ತನ್ನ ಸತ್ತ ಮಗುವನ್ನು ಹಿಡಿದುಕೊಂಡು ತಾಯಿಯೊಬ್ಬಳು ಬುದ್ಧನಲ್ಲಿ ಬಂದಳು. ಬದುಕಿಸಿಕೊಡಿ ಎಂದು. ಬುದ್ಧ ಅದಕ್ಕೆ…. ನನಗೆ ಸಾಸಿವೆ ಬೇಕು ಎಂದ. ಅವಳು ಹೊರಡಲನುವಾದಾಗ ಹೇಳಿದ… ಸಾವಿಲ್ಲದ ಮನೆಯ ಸಾಸಿವೆಯಾಗಬೇಕು ಎಂದು. ಅವಳು ಎಲ್ಲೆಲ್ಲಾ ಸುತ್ತಿದಳು. ಆದರೆ ಅವಳಿಗೆ ಸಾವಿಲ್ಲದ ಮನೆಯೇ ಸಿಗಲಿಲ್ಲ. ನೂರಾರು ಮನೆ ತಿರುಗಿದ ಮೇಲೆ ಅವಳಿಗೆ ಪ್ರಪಂಚ ಅರ್ಥವಾಯ್ತು. ಈಗ ನನ್ನ ಮಗುವನ್ನು ಬದುಕಿಸಿ ಕೊಡಿ ಎಂದು ಕೇಳುವ ಸ್ಥಿತಿಯಲ್ಲಿ ಅವಳಿರಲಿಲ್ಲ. ಇದು ಲೋಕ ನಿಯಮ ಎಂಬ ಅರಿವು ಮೂಡಿತ್ತು. ನೋವು ಮತ್ತು ಸಾವು ಅದು ಪ್ರತಿಯೊಬ್ಬರಿಗಿದೆ ಬದುಕಿರುವಾಗ ನೋವು ಬದುಕಿನ ಕೊನೆಗೆ ಸಾವು. ಅದಕ್ಕೆ ಪ್ರಾಜ್ಞರು ಹೇಳಿದ್ದು….. ಬದುಕಿರುವಾಗ ನೋವು ಬದುಕಿನ ಕೊನೆಗೆ ಸಾವಿದೆ ಮುಂದಿನದಕ್ಕಾಗಿ ಇಂದೇ ವ್ಯವಸ್ಥೆ ಮಾಡಿಕೊ. ಅ ಹರಿಯುವ ನೀರಿನ ಮೇಲೆ ಮನೆ ಕಟ್ಟುವ ಸಾಹಸ ಬೇಡ. ವಾಸ್ತವ ಅರಿತು ಭಗವಂತನಿಗೆ ಮೊರೆ ಹೋಗು ಎಂದು.

✍️ ಡಾ.ರವೀಂದ್ರ ಭಟ್ಟ ಸೂರಿ.