ನಾನಿರುವವರೆಗೂ ನನ್ನವರು ನನ್ನ ಜೊತೆ ಬರುತ್ತಾರೆ, ನನ್ನ ಜೊತೆ ಉಳಿಯುತ್ತಾರೆ ಎಂದು ನಾವಂದುಕೊಂಡಿದ್ದೇವೆ. ಆದರೆ ಅವರ್ಯಾರಿಗೂ ನಮ್ಮ ಮೇಲೆ ಪ್ರೀತಿ ಇಲ್ಲ. ನಮ್ಮ ಸಂಪತ್ತಿನ ಮೇಲೆ ಪ್ರೀತಿ. ಎಲ್ಲಿಯವರೆಗೆ ಆ ಸಂಪತ್ತು ನಮ್ಮೊಟ್ಟಿಗೆ ಇರುತ್ತದೆಯೋ ಅಲ್ಲಿಯವರೆಗೆ ಅವರು ನಮ್ಮೊಟ್ಟಿಗಿರುತ್ತಾರೆ. ಸಂಪತ್ತು ಕ್ಷಯಿಸಿ ಹೋದ ಮೇಲೆ ಅಥವಾ ಆ ಸಂಪತ್ತನ್ನು ಗಳಿಸುವ ಶಕ್ತಿ ಕ್ಷಯಿಸಿ ಹೋದ ಮೇಲೆ ಯಾರೂ ನಮ್ಮನ್ನು ಕೇಳುವವರಿಲ್ಲ. ವಿತ್ತ- ಪರಿವಾರ- ಕಾಳಜಿ ಈ ಮೂರು ಸಂಗತಿಗಳ ಕುರಿತು ಆಲೋಚನೆ ಮಾಡಿದಲ್ಲಿ ಕಂಡುಬರುವ ಸಂಗತಿ ಏನೆಂದರೆ ನಮ್ಮ ಮೇಲೆ ಪರಿವಾರದ ಕಾಳಜಿ ವಿತ್ತ ಇರುವವರೆಗೆ ಮಾತ್ರ ಎಂದು. ವಿತ್ತ ಕ್ಷಯಿಸಿದ ಮೇಲೆ ಎಲ್ಲಿ ಪರಿವಾರ ?ಎಲ್ಲಿ ಬಳಗ? ಎಲ್ಲಿ ಬಂಧು- ಮಿತ್ರರು?
ವಿತ್ತ ಎನ್ನುವುದೊಂದು ಅದ್ಭುತವಾದ ಸಂಗತಿ. ಅದೊಂದಿದ್ದರೆ ಮತ್ತೆ ಯಾವುದು ಇಲ್ಲದಿದ್ದರೇನು? ಎಂಬ ಭಾವನೆ ಎಲ್ಲರಲ್ಲಿದೆ. ಅದೊಂದು ಇಲ್ಲದಿದ್ದರೆ ಮತ್ತೆ ಯಾವುದು ಇದ್ದೇನು ಪ್ರಯೋಜನ ? ಎಂಬುದು ಸಾಮಾನ್ಯರ ಅಂಬೋಣ. ಯಾರಲ್ಲಿ ಹಣ ಉಂಟೋ ಅವನೇ ಕುಲವಂತ. ಹಣವಿದ್ದವರಿಗೆ ಏನೂ ಗೊತ್ತಿಲ್ಲದಿದ್ದರೂ ಪಂಡಿತನ ಪಟ್ಟ…..! ಅವನು ಬಲ್ಲವನು, ಗುಣವಂತ ಎಂದು ಹೊಗಳುತ್ತಾರೆ. ಅವನೇ ಮಹಾನ್ ವಾಗ್ಮಿ ಎನ್ನುತ್ತಾರೆ. ಯಾಕೆಂದರೆ ಎಲ್ಲ ಗುಣಗಳೂ ಹಣವನ್ನೇ ಆಶ್ರಯಿಸಿವೆ ಎಂದಿದೆ ಸುಭಾಷಿತ. ಅಂತಹ ವಿಚಿತ್ರ ಸಂಗತಿಯೇ ಹಣ. ಹಾಗಾದರೆ ಹಣವೆಂದರೇನು? ಯಾವುದನ್ನು ಸಂಪತ್ತೆಂದು ಕರೆದರು ಪ್ರಾಜ್ಞರು? ಎಂದರೆ ಯಾವುದು ಸುಖ ಸಾಧನವೋ ಅದೇ ಧನ
ವೈಕುಂಠದಲ್ಲಿ ಎರಡು ಮಹಾನ್ ಶಕ್ತಿಗಳು. ಒಂದು ವಿಷ್ಣು… ಮತ್ತೊಂದು ಲಕ್ಷ್ಮಿ. ನಮ್ಮೆಲ್ಲರ ಸಂತೋಷದ ರೂಪವೇ ವಿಷ್ಣು. ಸುಖದ ಪರಿಪೂರ್ಣತೆ ಅವನು. ಮತ್ತೆ ಲಕ್ಷ್ಮೀ ಯಾರು ಎಂದರೆ ಆ ಸುಖದ ದಾರಿ. ಸುಖದ ಮಾಧ್ಯಮ ಅದು ಲಕ್ಷ್ಮಿ. ಜೀವಕ್ಕೆ ಸದಾ ದೇವನ ಬಯಕೆ. ದೇವ ಸುಖದ ರೂಪ. ನಮ್ಮ ಜೀವಕ್ಕೆ ಆ ಸುಖದ ರೂಪದ ದೇವರು ಸಿಗದಿದ್ದಾಗ ಇಲ್ಲಿ ಸಿಗುವ ಸುಖದ ತುಣುಕುಗಳಲ್ಲಿ ಸಮಾಧಾನ ಪಡಲು ಜೀವ ಹಾತೊರೆಯುತ್ತದೆ. ಹಾಗಾಗಿ ಜೀವ ಪ್ರಾಪಂಚಿಕ ಸುಖವನ್ನು ಬಯಸುತ್ತದೆ. ಸುಖ ಬೇಕು ಅಂದರೆ ಆ ಸುಖದ ಸಾಧನ ಗಳು ಬೇಕು. ಉದಾಹರಣೆಗೆ ಹಾಲು ಬೇಕು ಅಂದರೆ ಹಸು ಬೇಕು …ಹಸು ಬೇಕು ಎಂದರೆ…. ಹಗ್ಗಬೇಕು. ತೆಂಗಿನಕಾಯಿ ಬೇಕೆಂದರೆ ತೆಂಗಿನ ಮರ ಬೇಕು. ಆ ತೆಂಗಿನಕಾಯಿ ನಾರಾಯಣ ನಾದರೆ ತೆಂಗಿನ ಮರ ಲಕ್ಷ್ಮಿ ಸುಖ ನಾರಾಯಣನಾದರೆ ಸುಖದ ದಾರಿ ಲಕ್ಷ್ಮಿ. ನಾವು ಬೇಕುಗಳ ಸಾಮ್ರಾಜ್ಯದಲ್ಲಿ ಬದುಕುತ್ತಿದ್ದೇವೆ. ನಮಗೆ ಸಂತೋಷ ಪಡಲು ಏನೇನು ಬೇಕೋ ಆ ಎಲ್ಲಾ ಸಂಪತ್ತುಗಳನ್ನು ಈ ಜೀವ ಬಯಸುತ್ತದೆ. ಈ ಸಂಪತ್ತುಗಳ ಹಿಂದೆ ಜೀವಲೋಕವಿದೆ.
ಪರಿವಾರಕ್ಕೂ ವಿತ್ತಕ್ಕೂ ಅವಿನಾಭಾವ ಸಂಬಂಧ. ಪರಿವಾರ ನಮ್ಮ ಮುಖ ನೋಡಿ ಬಂದಿದ್ದಲ್ಲ. ಅದು ನಮ್ಮಲ್ಲಿರುವ ವಿತ್ತ ನೋಡಿ ಬಂದಿದ್ದು. ಪರಿವಾರಕ್ಕೂ ಹಿತವಾದದ್ದು ಬೇಕು. ಹಾಗಾಗಿ ನಮ್ಮ ಬಳಿ ಬಂದಿದ್ದಾರೆ.
ಯಾಜ್ಞವಲ್ಕ್ಯರು ಉಪನಿಷತ್ತಿನಲ್ಲಿ ಹೇಳಿದ್ದು ಇದನ್ನೇ…. ಪತಿ ಇಷ್ಟವಾಗ್ತಾನೆ ಅಂದ್ರೆ ಅದು ಪತಿಗಾಗಿ ಅಲ್ಲ ತನಗಾಗಿ…. ಪತ್ನಿ ಇಷ್ಟವಾಗುತ್ತಾಳೆ ಅಂದ್ರೆ ಅದು ಪತ್ನಿಗಾಗಿ ಅಲ್ಲ ತನಗಾಗಿ…. ಮಕ್ಕಳು ಇಷ್ಟವಾಗ್ತಾರೆ ಅಂದ್ರೆ ಅದು ಮಕ್ಕಳಿಗಾಗಿ ಅಲ್ಲ ಅದು ನಮಗಾಗಿ. ನಮ್ಮ ಸ್ವಾರ್ಥಕ್ಕಾಗಿ. ಮುಂದೊಂದು ದಿನ ನಮಗಾಗುತ್ತದೆ ಎಂದು. ಒಂದು ಹೂವು ನಮಗೆ ಇಷ್ಟವಾಗುತ್ತದೆ ಎಂದರೆ ಆ ಹೂವಿಗಾಗಿ ಅಲ್ಲ ನಮಗಾಗಿ. ಆ ಹೂವಿನ ಸುವಾಸನೆ ಸೌಂದರ್ಯ ನಮಗೆ ಸಂತೋಷ ಕೊಡುತ್ತದೆ ಹಾಗಾಗಿ ಇಷ್ಟ. ಅಂದರೆ ನಮ್ಮ ಸಂತೋಷ ನಮಗೆ ಇಷ್ಟ. ನಮಗೆ ಯಾರು ಸಂತೋಷ ಕೊಡುತ್ತಾರೋ ಅವರು ನಮಗೆ ಇಷ್ಟವಾಗುತ್ತಾರೆ ಎಂದು.
ಎಲ್ಲಿಯವರೆಗೆ ನಾವು ಹಣ ಸಂಪಾದನೆ ಮಾಡುತ್ತಿರುವೆವೋ ಅಲ್ಲಿಯವರೆಗೆ ನಮ್ಮನ್ನು ಸುತ್ತುಗಟ್ಟಿರುವವರು ನಮ್ಮಲ್ಲಿ ಪ್ರೀತಿ ಇಟ್ಟಿರುತ್ತಾರೆ. ನಾವು ಜರ್ಜರಿತರಾದೆವು ಅಂತ ಆದ ಮೇಲೆ…. ನಮ್ಮ ಜೀವನದಲ್ಲಿ ಯಾವ ಸತ್ವವೂ ಉಳಿದಿಲ್ಲ ಅಂತಾದ ಮೇಲೆ ನಮ್ಮನ್ನು ಯಾರು ಅಂತ ಕೇಳುವವರಿಲ್ಲ. ಏನು ಅಂತ ಮಾತನಾಡಿಸುವವರಿಲ್ಲ.
ಒಂದು ಹೆಣ್ಣು ಮಂಗ…. ತನ್ನ ಮರಿಯ ಮೇಲೆ ಅದಕ್ಕೆ ತುಂಬಾ ಪ್ರೀತಿ . ಎಷ್ಟು ಪ್ರೀತಿಯೆಂದು ಪರೀಕ್ಷಿಸಲು ಒಬ್ಬ ಬಯಸಿದ. ಅವನು ಒಂದು ದೊಡ್ಡ ಪಿಪಾಯಿ ತಂದ. ಅದರಲ್ಲಿ ಮಂಗ ಮತ್ತು ಮರಿಯನ್ನು ಹಾಕಿದ. ನೀರು ತುಂಬಿಸುತ್ತಾ ಹೋದ. ನೀರು ಮೊಣ ಕಾಲಿಗೆ ಬಂದಾಗ ಮಂಗ ಮರಿಯನ್ನು ಮೇಲಕ್ಕೆತ್ತಿತು. ನೀರು ಸೊಂಟಕ್ಕೆ ಬಂತು ಮಂಗ ಮರಿಯನ್ನು ಹೆಗಲ ಮೇಲಿಟ್ಟು ಕೊಂಡಿತು. ನೀರು ಎದೆ, ಭುಜಕ್ಕೆ ಬಂತು. ನಂತರ ತುಟಿಗೆ ಬಂತು. ಮರಿಯನ್ನು ತನ್ನ ತಲೆಯ ಮೇಲಿಟ್ಟು ಕೊಂಡಿತು. ನಂತರ ನೀರು ಅದನ್ನು ಮುಳುಗಿಸುವ ಹಂತಕ್ಕೆ ಬಂದಾಗ ಆ ಮರಿಯನ್ನು ತನ್ನ ಕಾಲಡಿಗೆ ಹಾಕಿ ಅದರ ಮೇಲೆ ನಿಂತುಕೊಂಡಿತು. ಯಾಕೆಂದರೆ ಮತ್ತೆ ಸ್ವಲ್ಪ ಹೊತ್ತಾದರೂ ಬದುಕಬಹುದೆಂದು. ಮಂಗಕ್ಕೆ ಮರಿಯ ಮೇಲೆ ಪ್ರೀತಿ ಮರಿಗಾಗಿ ಅಲ್ಲ ಅದು ತನಗಾಗಿ…! ಹಾಗಾಗಿ ತನ್ನ ಬದುಕು ಎಲ್ಲಿಯವರೆಗೆ ನಷ್ಟವಾಗುವುದಿಲ್ಲವೋ ಅಲ್ಲಿಯವರೆಗೆ ಮರಿಯ ಮೇಲೆ ಪ್ರೀತಿ. ತನ್ನ ಜೀವಕ್ಕೆ ಅಪಾಯ ಬಂದಾಗ ಮರಿಯನ್ನು ಕಾಲಡಿಗೆ ಹಾಕಿ ಅದರ ಮೇಲೆ ನಿಂತಿದ್ದು ತನ್ನ ಜೀವದ ಮೇಲಿನ ಪ್ರೀತಿಗಾಗಿ. ಇಷ್ಟೇ ಬದುಕು. ಪ್ರಪಂಚವಿರುವುದು ಅದರ ಲಾಭಕ್ಕಾಗಿ. ಪ್ರತಿಯೊಬ್ಬರಿರು ವುದು ಅವರವರ ಲಾಭಕ್ಕಾಗಿ. ನಮಗಾಗಿ ಯಾರೂ ಇಲ್ಲ. ಇರುವುದು ಅವನೊಬ್ಬನೆ…. ಆ ದೇವ… ಅವನನ್ನು ಆಶ್ರಯಿಸೋಣ.
✍️ ಡಾ.ರವೀಂದ್ರ ಭಟ್ಟ ಸೂರಿ.
9448028443.