ಒಬ್ಬ ರೈತ…. ಕಷ್ಟಪಟ್ಟು ದುಡಿಯುವ ಸ್ವಭಾವದವನು. ತನ್ನ ಹೊಲವನ್ನು ಸಮೃದ್ಧಗೊಳಿಸುತ್ತಾನೆ. ತನ್ನ ಪರಿವಾರವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಅವನಿಗೆ ಒಬ್ಬನೇ ಮಗ. ಬಹಳ ಚೆನ್ನಾಗಿ ಸಾಕುತ್ತಾನೆ. ಮಗನಿಗೂ ದುಡಿಮೆಯ ಸ್ವಭಾವ ಬಂದಿತ್ತು. ಅಪ್ಪ ಕೇವಲ ಹೊಲ ಕೊಟ್ಟಿದ್ದಷ್ಟೇ ಅಲ್ಲ ದುಡಿಮೆಯ ಸ್ವಭಾವವನ್ನು ಕೊಟ್ಟಿದ್ದ. ತಂದೆಯೂ ದುಡಿಯುತ್ತಿದ್ದ ಮಗನೂ ದುಡಿಯುತ್ತಿದ್ದ. ಇಬ್ಬರೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಸಂಪತ್ತು ಮತ್ತೂ ಹೆಚ್ಚಿತು. ಸಮೃದ್ಧಿಯೂ ಹೆಚ್ಚಾಯಿತು. ಕಾಲ ಕಳೆದಂತೆ ಮಗ ಬೆಳೆದ. ತಂದೆಯನ್ನು ಮುಪ್ಪು ಆವರಿಸುತ್ತಿತ್ತು. ಈಗ ಅಪ್ಪನಲ್ಲಿ ಮೊದಲಿನಷ್ಟು ಕೆಲಸ ಮಾಡುವ ಶಕ್ತಿ ಇಲ್ಲ. ಆದರೂ ದುಡಿಯುತ್ತಿದ್ದ. ಕೆಲಸದ ಪ್ರಮಾಣ ಕಡಿಮೆಯಾಯಿತು. ದಿನ ಕಳೆಯಿತು…. ದಿನ ಕಳೆಯಿತು. ಅಪ್ಪನಲ್ಲಿ ಕೆಲಸ ಮಾಡುವ ಶಕ್ತಿ ಮತ್ತಷ್ಟು ಕ್ಷೀಣಿಸಿತು. ಕೊನೆಗೊಂದು ಹಂತ ಬಂತು. ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂಬಂತಹ ಹಂತ. ಆಗ ಮನೆಯ ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ನೋಡುತ್ತಿರುತ್ತಿದ್ದ. ಆದರೆ ಮಗ ತುಂಬಾ ಕೆಲಸ ಮಾಡುತ್ತಿದ್ದ. ಹೋಗುತ್ತಾ ಬರುತ್ತಾ ಮಗ ತಂದೆಯನ್ನು ಗಮನಿಸುತ್ತಿದ್ದ. ತಂದೆ ನಿಷ್ಕ್ರಿಯ, ಜಡ ಏನೂ ಕೆಲಸ ಮಾಡುತ್ತಿಲ್ಲ. ನೋಡುತ್ತಾ….. ನೋಡುತ್ತಾ ಮಗನಲ್ಲಿ ಅಸಹನೆ ಬೆಳೆಯಿತು. ಅಪ್ಪ ಕೆಲಸಕ್ಕೆ ಬರದವನು ಎಂಬ ಅಸಹನೆ ಬೆಳೆದಿತ್ತು. ಎಷ್ಟು ಬೆಳೆಯಿತು ಎಂದರೆ ಇಂಥವರು ಬದುಕಿರಬಾರದು ಇಂಥವರಿಂದ ಏನು ಪ್ರಯೋಜನವಿದೆ? ಈ ಸೋಮಾರಿತನವನ್ನು ನನ್ನ ಮಕ್ಕಳು ಕಲಿತಾರು ಎಂದು ಯೋಚಿಸಿ ಅಪ್ಪನಿಗಾಗಿ ಮಗ ಒಂದು ಪೆಟ್ಟಿಗೆಯನ್ನು ಮಾಡಿಸಿದ. ಒಂದು ದಿನ ಅಪ್ಪನನ್ನು ಪೆಟ್ಟಿಗೆಯೊಳಗೆ ಮಲಗಿಸಿ ಬೆಟ್ಟದ ತುದಿಗೆ ಎತ್ತಿಕೊಂಡು ಹೊರಟ. ಬೆಟ್ಟದ ತುದಿ ತಲುಪಿದ. ಇನ್ನೇನು ಪೆಟ್ಟಿಗೆಯನ್ನು ನೂಕಬೇಕು ಎನ್ನುವಷ್ಟರಲ್ಲಿ ಪೆಟ್ಟಿಗೆಯೊಳಗಿನಿಂದ ಶಬ್ದವಾಯಿತು. ಮಗ ಪೆಟ್ಟಿಗೆಯ ಬಾಗಿಲು ತೆಗೆದ. ಅಪ್ಪ ಹೇಳಿದ ” ನೀನು ಈಗ ನನ್ನನ್ನು ಪ್ರಪಾತಕ್ಕೆ ನೂಕುತ್ತೀಯ.. ನನಗೆ ಗೊತ್ತು. ಅದಕ್ಕೆ ನಾನು ತಯಾರಿದ್ದೇನೆ. ಆದರೆ ಈ ಪೆಟ್ಟಿಗೆಯನ್ನು ತೆಗೆದಿಡು. ಸುಮ್ಮನೆ ಈ ಪೆಟ್ಟಿಗೆ ಹಾಳು ಮಾಡಬೇಡ. ನಿನ್ನ ಮಕ್ಕಳಿಗೆ ನಿನ್ನ ಮುಪ್ಪಿನಲ್ಲಿ ಇದು ಉಪಯೋಗಕ್ಕೆ ಬರುತ್ತದೆ.” ಎಂದು. ಆಗ ಮಗನ ಕಣ್ಣು ತೆರೆಯಿತು.

RELATED ARTICLES  ಕೊನೆಗೂ ಕೈಗೂಡಲಿಲ್ಲ 100 ಮಕ್ಕಳನ್ನು ಪಡೆಯುವ ಇವನ ಆಸೆ.

ಒಬ್ಬ ಹುಡುಗ ಒಬ್ಬ ಮುದುಕ ಎದುರು ಬದುರಾದರು. ಹುಡುಗ ಮುದುಕನಿಗೆ ಛೇಡಿಸಿದ…. “ಯವ್ವನ ಎಂದರೆ ಸ್ವರ್ಗ” ಎಂದು. ಆಗ ಮುದುಕ ಹುಡುಗನಿಗೆ ಹೇಳಿದ. ” ಮುದಿತನ ನಿಸರ್ಗ” ಅಂತ. ನೀನು ಯೌವ್ವನದಲ್ಲಿದ್ದೆ ಅಂತ ಮೆರೆಯಬೇಡ…. ನಿನಗೂ ಒಂದು ದಿನ ಮುದಿತನ ಎದುರಾಗಲಿದೆ. ಅದು ನಿಸರ್ಗ ನಿಯಮ” ಎಂದರಂತೆ.

ನಮ್ಮ ತಂದೆ ತಾಯಿಯರು ಹಾಸಿಗೆ ಹಿಡಿದರು ಅಂತಾದರೆ… ಅವರು ಮಲಗಿದ್ದಲ್ಲೇ ಸೇವೆ ಮಾಡಬೇಕೆಂದರೆ ನಾವು ಎಷ್ಟು ಜನ ಅದಕ್ಕೆ ತಯಾರಿದ್ದೇವೆ. ಎಷ್ಟು ಜನ ಪ್ರೀತಿಯಿಂದ ಮಾಡುತ್ತೇವೆ. ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಾಗಿರುವವರು ಬಹಳ ಕಡಿಮೆ ಜನ. ಒಂದು ಅನ್ನದ ಮೂಟೆಯನ್ನು ತೆಗೆದುಕೊಂಡು ಹೋಗಿ ಬಯಲಲ್ಲಿ ಬಿಚ್ಚಿದರೆ ಕಾಗೆಗಳ ದಂಡು ಬರುತ್ತದೆ. ಯಾವಾಗ ಅನ್ನ ಖಾಲಿಯಾಯಿತೋ ಒಂದು ಕಾಗೆಯೂ ಇಲ್ಲ. ಅಧಿಕಾರ ಇರುವಾಗ ರಾಜಕಾರಣಿಗಳ ಸುತ್ತ ಜನವೋ ಜನ ಅಧಿಕಾರ ಹೋದರೆ ಅಲ್ಲಿ ಯಾರೂ ಇಲ್ಲ. ನಮ್ಮಲ್ಲಿ ಎಲ್ಲವೂ ಇದ್ದಾಗ ಸಂಬಂಧಗಳು ಗಟ್ಟಿಯಾಗುತ್ತವೆ. ಆದರೆ ಇಲ್ಲದಾಗ ವಾಸ್ತವ ನಮಗೆ ಅರ್ಥವಾಗುತ್ತದೆ. ಆದ್ದರಿಂದ ಆಸೆ ದೊಡ್ಡದು.

ಪರ್ವತಕ್ಕಿಂತ ಸಮುದ್ರ ದೊಡ್ಡದು…. ಸಮುದ್ರಕ್ಕಿಂತ ಆಕಾಶ ದೊಡ್ಡದು….. ಆಕಾಶಕ್ಕಿಂತ ದೊಡ್ಡದು ಭಗವಂತ… ಭಗವಂತನಿಗಿಂತ ದೊಡ್ಡದು ಆಸೆ. ಆಸೆ ಹೆಚ್ಚಾದಾಗ ನಮಗೆ ದೇವರು ಕಾಣುವುದಿಲ್ಲ. ದೇವರನ್ನೂ ಬಿಡುತ್ತೇವೆ. ಆದ್ದರಿಂದಲೇ ದುಡ್ಡೇ ದೊಡ್ಡಪ್ಪ ಎಂದಿದ್ದು. ಆಸೆ ಹೆಚ್ಚಾದಾಗ ಎಲ್ಲ ಸಂಬಂಧಗಳನ್ನು ತೊರೆಯುತ್ತೇವೆ. ಆಸೆ ನಮ್ಮನ್ನು ತಂದೆ ತಾಯಿಯರಿಂದ ದೂರ ಮಾಡುತ್ತದೆ. ಅಣ್ಣ ತಮ್ಮಂದಿರಿಂದ ದೂರ ಮಾಡುತ್ತದೆ. ಬಂಧು ಬಳಗದವರಿಂದ ದೂರ ಮಾಡುತ್ತದೆ. ಹಾಗಾದರೆ ದುಡ್ಡೇ ದೊಡ್ಡಪ್ಪ ಎನ್ನದ ಬಾಂಧವ್ಯ ಯಾವುದಿದೆ? ಅದನ್ನು ಮೀರಿದ ಬಾಂಧವ್ಯ ಯಾವುದಿದೆ? ಏನನ್ನೂ ಬಯಸದ ಬಾಂಧವ್ಯ ಯಾವುದಿದೆ? ಅಂಥವರು ಕೆಲವರಾದರೂ ನಮ್ಮೊಂದಿಗಿದ್ದಾರೆ…! ಆದರೆ ಅವರಿಗೂ ನಮ್ಮನ್ನು ಕಂಡರೆ ಸಂತೋಷವಾಗುತ್ತದೆ ಎನ್ನುವಷ್ಟು ಸ್ವಾರ್ಥವಿದೆ. ಅಷ್ಟೂ ಸ್ವಾರ್ಥವಿರಬಾರದು. ಅಲ್ಲಿ ಕೇವಲ ಪ್ರೀತಿ ಇರಬೇಕು. ಅಂತಹ ಬಾಂಧವ್ಯ ಯಾವುದು? ನೇರವಾಗಿ ಅದು ನಮ್ಮನ್ನು ಪ್ರೀತಿಸಬೇಕು… ನಮ್ಮ ರೂಪ, ಹಣ, ಅಧಿಕಾರ, ಗುಣ ,ಸ್ವಭಾವ ಇವುಗಳನ್ನು ನೋಡಿ ಪ್ರೀತಿಸುವವರಲ್ಲ. ಕೇವಲ ನಮ್ಮೊಳಗಿನ ಬೆಳಕನ್ನು…. ನಮ್ಮೊಳಗಿನ ಜೀವವನ್ನು ಮಾತ್ರ ಪ್ರೀತಿಸುವವರು ಯಾರು? ಅಂಥವರು ಸಿಕ್ಕಿದರೆ ಅವರನ್ನು ನಂಬಿಕೊಳ್ಳಬಹುದು. ಭಗವಂತ ಹೇಳುತ್ತಾನೆ ” ನನಗೆ ಯಾರನ್ನು ಅನುಗ್ರಹಿಸಬೇಕು ಅಂತ ಅನ್ನಿಸುತ್ತದೆಯೋ ಅಂಥವರ ಸಂಪತ್ತನ್ನು ಸುಖವನ್ನು ಹಲವು ಬಾರಿ ನಾನು ಕಿತ್ತು ಕೊಳ್ಳುತ್ತೇನೆ. ಅವರನ್ನು ಬಡವರನ್ನಾಗಿ ಮಾಡುತ್ತೇನೆ. ಆಗ ಉಳಿದವರೆಲ್ಲ ದೂರವಾಗುತ್ತಾರೆ. ಆ ಸಮಯದಲ್ಲಿ ಅವರು ನನಗೆ ಹತ್ತಿರವಾಗುತ್ತಾರೆ. ಸಂಪತ್ತು ನನ್ನಿಂದ ನನ್ನ ಭಕ್ತರನ್ನು ದೂರ ಮಾಡುತ್ತದೆ. ಹಾಗಾಗಿ ಕೆಲವು ಸಾರಿ ನಾನು ನನ್ನ ಭಕ್ತರಿಗೆ ವಿಪತ್ತು ಕೊಡುತ್ತೇನೆ. ಸಂಪತ್ತು ಬಂದಾಗ ಅವರಿಗೆ ಜನ ಹತ್ತಿರವಾಗುತ್ತಾರೆ. ವಿಪತ್ತು ಬಂದಾಗ ಅವರು ನನಗೆ ಹತ್ತಿರವಾಗುತ್ತಾರೆ ಎಂದು. ನಾವು ದೇವರಿಗೆ ಹತ್ತಿರವಾಗಬೇಕು ಎಂದರೆ ಈ ಬದುಕು ನಿಸ್ಸಾರ ಎನ್ನುವುದು ನಮಗೆ ಅರಿವಾಗಬೇಕು. ಇದು ಸಾಕು ಅದು ಬೇಕು ಎನ್ನುವ ಭಾವ ನಮಗೆ ಬರಬೇಕು. ಈ ಅಂಟು ಕಳಚಿ ಆ ನಂಟು ಬೆಳೆಯಬೇಕು . ಸಂಸಾರವನ್ನು ಪ್ರೀತಿಸೋಣ ಆದರೆ…. ಆ ಸತ್ಯದ ಅರಿವಿರಲಿ… ಕೊನೆಯಲ್ಲಿ ನಮ್ಮೊಡನೆ ಯಾರಿಲ್ಲವೆಂದು…!

✍️ ಡಾ.ರವೀಂದ್ರ ಭಟ್ಟ ಸೂರಿ.
9448028443

RELATED ARTICLES  ತೃಪ್ತಿ-ನೆಮ್ಮದಿ, ಸಂತೋಷ-ಸಮಾಧಾನ ಭಾಗ-2