ಎಲ್ಲಿಯವರೆಗೆ ನಮ್ಮ ಉಸಿರಿರುತ್ತದೆಯೋ ಅಲ್ಲಿಯವರೆಗೆ ನಮ್ಮವರು ಪ್ರೀತಿಯಿಂದ ನೋಡಿಕೊಂಡರೂ ನಮ್ಮ ಉಸಿರು ನಿಂತ ಮೇಲೆ ಆ ಪ್ರೀತಿಯೂ ನಿಂತು ಹೋಗುತ್ತದೆ. ಒಂದು ಸಾರಿ ಉಸಿರು ಹೋಗಿ ಶರೀರ ಜಡವಾದಾಗ ನಮ್ಮನ್ನು ಕೇಳುವವರಾರು..? ನಮ್ಮನ್ನು ಪ್ರೀತಿಸುವವರಾರು…? ಜೀವ ಇದ್ದಾಗ ಅದು ಪ್ರೀತಿಯ ಸೆಲೆ.. ಜೀವ ಹೋದ ಮೇಲೆ ಭೀತಿಯ ಸೆಲೆ ಎಲ್ಲಿ ಪ್ರೀತಿ ಇತ್ತೋ ಅಲ್ಲಿ ಭೀತಿ.

ಒಬ್ಬ ಗ್ರಹಸ್ಥ . ಅವನಿಗೆ ರಾಮಕೃಷ್ಣ ಪರಮಹಂಸರ ಬಗ್ಗೆ ಪ್ರೀತಿ. ಹಾಗಂತ ಹೆಂಡತಿಯ ಮೇಲೂ ಅಷ್ಟೇ ಪ್ರೀತಿ. ಯಾವುದು ಹೆಚ್ಚು ಯಾವುದು ಕಡಿಮೆ ಎನ್ನಲು ಸಾಧ್ಯವಿಲ್ಲ. ಪರಮಹಂಸರು ಏನು ಹೇಳಿದರೂ ತೆಗೆದುಹಾಕುವುದಿಲ್ಲವಾಗಿತ್ತು. ಹಾಗೆಯೇ ಹೆಂಡತಿ ಹೇಳಿದ್ದನ್ನೂ ತೆಗೆದು ಹಾಕುತ್ತಿರಲಿಲ್ಲ . ಆತ ಪರಮಹಂಸರ ಬಳಿ ಆಗಾಗ ಹೋಗುತ್ತಿದ್ದ. ಅವರ ಮಾತುಗಳು ಅವನಿಗೆ ಪ್ರಿಯ. ಅವರ ನುಡಿ ಅವನಿಗೆ ಪಥ್ಯ. ಪರಮಹಂಸರು ಅಧ್ಯಾತ್ಮದ ಬಗ್ಗೆ ಮುಕ್ತಿಯ ಬಗ್ಗೆ ಆತನಿಗೆ ಹೇಳುತ್ತಿರುತ್ತಿದ್ದರು. ಒಂದು ದಿನ ಪರಮಹಂಸರು ಆತನಿಗೆ ನೀನು ಈ ಸಂಸಾರವನ್ನು ತ್ಯಜಿಸಿ ಕಾಳಿಕಾ ಮಾತೆಯಲ್ಲಿ ಮನಸ್ಸನ್ನು ಕೇಂದ್ರೀಕರಿಸು ಮುಕ್ತಿ ಪಡೆಯುತ್ತೀಯಾ ಎಂದರಂತೆ. ಅದಕ್ಕೆ ಆತ ಹೇಳಿದ “ನಾನು ತೊರೆಯಲಿಕ್ಕೆ ಸಿದ್ಧ ಆದರೆ ಒಬ್ಬರನ್ನು ತೊರೆಯುವುದು ಕಷ್ಟ ನನಗೆ. ಅದು ನನ್ನ ಹೆಂಡತಿ” ಎಂದು. ಮತ್ಯಾರ ಬಗ್ಗೂ ಮೋಹವಿಲ್ಲ ಉಳಿದುದೆಲ್ಲವನ್ನೂ ತೊರೆಯಬಲ್ಲೆ… ಇದೊಂದು ಕಷ್ಟ ಎಂದನಂತೆ. ಆಗ ಪರಮಹಂಸರು ಹೆಂಡತಿಗೆ ನಿನ್ನಲ್ಲಿ ಮೋಹವೋ?… ನಿನಗೆ ಹೆಂಡತಿಯಲ್ಲಿ ಮೋಹವೋ? ಎಂದು ಕೇಳಿದರು. ಆಗ ಆತ ನನಗೆ ಹಾಗೇನಿಲ್ಲ ಆದರೆ ಅವಳಿಗೆ ನನ್ನನ್ನು ಬಿಟ್ಟು ಇರಲು ಸಾಧ್ಯವಿಲ್ಲ ಎಂದ. ನಾನೇನಾದರೂ ಮನೆ ಬಿಟ್ಟರೆ ಅವಳು ಸತ್ತೇ ಹೋಗುತ್ತಾಳೆ ಎಂದ. ಅವಳಿಗೇನೂ ನೋವಿಲ್ಲ ಅಂತಾದರೆ ನಾನು ಬಿಟ್ಟು ಬರಬಲ್ಲೆ ಎಂದ . ನಮ್ಮ ಜೀವನದಲ್ಲೂ ಇಂತಹ ಭ್ರಮೆಗಳಿರುತ್ತವೆ. ಪರಮಹಂಸರು ಹೇಳಿದರು ” ನೀನು ಹೇಳಿದಂತಿಲ್ಲ ವಿಷಯ…. ನಿನಗೆ ಅವಳ ಮೇಲೆ ಮೋಹ ಇರಬೇಕೇ ಹೊರತು ಅವಳಿಗೆ ನಿನ್ನ ಮೇಲೆ ಮೋಹವಿಲ್ಲ” ಎಂದು. ನೀನು ತಿಳಿದಂತಹ ಪ್ರೀತಿಯಲ್ಲ ನೀನಿಲ್ಲದೆ ಅವಳು ಇರಬಲ್ಲಳು ಎಂದರು. ಅವನು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಪರಮಹಂಸರು ಒಂದು ಪರೀಕ್ಷೆಯನ್ನು ಏರ್ಪಡಿಸಿದರು. ನಿನಗೊಂದು ಉಪಾಯ ಹೇಳುತ್ತೇನೆ… ಅದನ್ನು ನೀನು ಮಾಡು. ಆಗ ನಿನಗೆ ನಿನ್ನ ಹೆಂಡತಿಯ ಪ್ರೀತಿ ಗೊತ್ತಾಗುತ್ತದೆ ಎಂದರು. ಒಂದು ವೇಳೆ ಇಲ್ಲ ಎಂದರೆ ಬರಲು ಸಿದ್ಧನಿದ್ದೀಯಲ್ಲ ಎಂದರು. ಆಯಿತು ಎಂದ. ಪರಮಹಂಸರು ಆತನಿಗೆ ಕಿವಿಯಲ್ಲಿ ಒಂದು ಸಿದ್ಧಿಯನ್ನು ಹೇಳಿಕೊಟ್ಟರು. ಅದರಿಂದ ಸ್ವಲ್ಪ ಕಾಲ ಶವದಂತೆ ಬಿದ್ದಿರಲು ಸಾಧ್ಯವಿತ್ತು. ಆತ ಮನೆಗೆ ಹೋದ. ಒಮ್ಮೆಲೆ ಎದೆ ನೋವು ಎಂದು ಕೂಗುತ್ತಾ ಬಿದ್ದ… ಸತ್ತಂತೆ ಮಲಗಿದ್ದ. ಹೆಂಡತಿ ರೋದಿಸಿದಳು. ಎದೆಬಡಿದುಕೊಂಡಳು. ಇವನಿಗೆ ಒಳಗೊಳಗೇ ಖುಷಿ ತನ್ನ ಹೆಂಡತಿಯ ಪ್ರೀತಿ ನೋಡಿ. ಮುಂದಿನ ಕಾರ್ಯಕ್ಕೆ ಶರೀರವನ್ನು ತೆಗೆದುಕೊಂಡು ಹೋಗಬೇಕು ಎಂದರೆ ಬಾಗಿಲು ಚಿಕ್ಕದಾಗಿತ್ತು. ಶರೀರ ಸಾಗಿಸುವುದು ಸಾಧ್ಯವಿಲ್ಲವಾಗಿತ್ತು. ಆಗ ಅಲ್ಲಿದ್ದವರು ಬಾಗಿಲು ಒಡೆಯುವ ಎಂದರು. ಅಲ್ಲಿಯವರೆಗೆ ಅಳುತ್ತಿದ್ದ ಅವನ ಹೆಂಡತಿ ಇದ್ದಕ್ಕಿದ್ದಂತೆ… ತಡೆಯಿರಿ ಬಾಗಿಲು ಒಡೆಯುವುದು ಬೇಡ . ಹೊಸ ಮನೆ ಎಂದಳು. ಹಾಗಾದರೆ ಏನು ಮಾಡುವುದು? ಎಂದರೆ ಅನಿವಾರ್ಯವಾದರೆ ಕೈಕಾಲು ಕತ್ತರಿಸಿದರಾಯಿತು ಎಂದಳು. ಆತ ತಕ್ಷಣ ಎದ್ದು ಕುಳಿತ…! ಅಷ್ಟೇ ಅಲ್ಲ ಎದ್ದು ಹೊರಟೇ ಬಿಟ್ಟ . ಈ ಪ್ರೀತಿ… ಸಂಸಾರವೆಂದರೆ ಇಷ್ಟೇ ಎಂದು. ಆತ ಪರಮಹಂಸರೆಡೆಗೆ ವಾಲಿದ. ನಮ್ಮ ಬದುಕೂ ಹೀಗೆ . ಆದರೆ ಇದರ ಅರಿವಿಲ್ಲದೆ ನಾವು ಶಾಶ್ವತವೆಂಬಂತೆ ನಮ್ಮ ಸುತ್ತಮುತ್ತಲ ಪ್ರೀತಿ ,ಸಂಪತ್ತು, ಆಸ್ತಿ, ಅಧಿಕಾರ ಎಲ್ಲ ಶಾಶ್ವತವೆಂಬಂತೆ ವರ್ತಿಸುತ್ತೇವೆ.

RELATED ARTICLES  ಕಾವ್ಯಾವಲೋಕನ-೩ ದ್ರೌಪದಿಯ ಸ್ವಯಂವರ

ಒಬ್ಬ ಬಡ ಯುವಕ ಶ್ರೀಮಂತನ ಬಳಿ ಹೋಗಿ ದುಡ್ಡು ಕೇಳಿದನಂತೆ. ಆಗ ಶ್ರೀಮಂತ ನಿನ್ನ ಬಳಿ ಎಲ್ಲ ಇದೆ ನಾನು ನಿನಗೇಕೆ ಸಹಾಯ ಮಾಡಬೇಕು ಎಂದು ಕೇಳಿದ. ಹಣವನ್ನು ಹಾಗೆಲ್ಲ ಕೊಡಲು ಸಾಧ್ಯವಿಲ್ಲ ನಿನ್ನ ಕೈಕೊಡು ಒಂದು ಲಕ್ಷ ಕೊಡುತ್ತೇನೆ… ನಿನ್ನ ಕಾಲು ಕೊಡು ಐದು ಲಕ್ಷ ಕೊಡುತ್ತೇನೆ… ನಿನ್ನ ಕಣ್ಣು ಕೊಡು ಹತ್ತು ಲಕ್ಷ ಕೊಡುತ್ತೇನೆ ಎಂದು. ಆತ ಅಯ್ಯೋ…. ಅದೆಲ್ಲ ಸಾಧ್ಯವಿಲ್ಲ ಎಂದ. ಆಗ ಶ್ರೀಮಂತ ನೋಡು ನೀನು ಎಷ್ಟೇ ಕೊಟ್ಟರೂ ನಿನ್ನ ಅಂಗ ಕೊಡುವುದಿಲ್ಲ ಎನ್ನುತ್ತೀಯಾ ಅಂದರೆ ನಿನ್ನ ದೇಹ ಕೋಟಿ ಬೆಲೆ ಬಾಳುವಂಥದ್ದು. ಹೀಗಿರುವಾಗ ನೀನು ಬಡವ ಹೇಗೆ ? ಎಂದ. ನಾವು ಈ ಶರೀರಕ್ಕಾಗಿ ಎಷ್ಟೆಲ್ಲ ಖರ್ಚು ಮಾಡುತ್ತೇವೆ. ನಾವು ತೊಡುವ ಬಟ್ಟೆ… ಉಣ್ಣುವ ಅನ್ನ… ತಿನ್ನುವ ಆಹಾರ… ಆರೋಗ್ಯಕ್ಕಾಗಿ ಮಾಡುವ ಖರ್ಚೆಷ್ಟು ಅಂದರೆ ಈ ಶರೀರ ಎಷ್ಟೆಲ್ಲ ಬೆಲೆಬಾಳುವಂಥದ್ದು……! ಇಷ್ಟೆಲ್ಲ ಬೆಲೆಬಾಳುವಂಥದ್ದು ಶರೀರ ಎಂದುಕೊಳ್ಳುತ್ತೇವೆ. ಆದರೆ ಉಸಿರು ನಿಂತ ಮೇಲೆ ಈ ಶರೀರಕ್ಕೆ ಯಾವ ಬೆಲೆಯೂ ಇರುವುದಿಲ್ಲ .

RELATED ARTICLES  ಅಪೇಕ್ಷೆ ಅನೇಕ; ಮೂಲವೊಂದೇ! ಅದೇ, ಅನಂತ-ಅಖಂಡ ಸುಖದ ಅಜ್ಞಾತ ಸೆಳೆತ!

ಒಬ್ಬ ಸೂಫಿ ಸಂತನಿದ್ದ …ಯುವಕ. ದರೋಡೆಕೋರರು ಆತನನ್ನು ಅಪಹರಿಸಿದ್ದರು. ಅವನನ್ನು ಮಾರಿ ಒಂದಿಷ್ಟು ಹಣ ಗಳಿಸಲು ಅವರು ಬಯಸಿದ್ದರು. ಒಬ್ಬ ವ್ಯಾಪಾರಿಗೆ ಮಾರಲು ಹೋದರೂ ಆತ ಹತ್ತು ದಿನಾ ರಿಗೆ ಆತನನ್ನು ಕೇಳಿದ. ಆಗ ಯುವ ಸಂತ ಹೇಳಿದ ಇಷ್ಟಕ್ಕೆಲ್ಲಾ ಮಾರಬೇಡಿ ಇನ್ನೂ ಹೆಚ್ಚು ಬೆಲೆ ಸಿಗುತ್ತದೆ ಇದಕ್ಕೆ ಅಂದ . ಹೌದೇನೋ ಅಂದುಕೊಂಡು ಸಂತೆಯಲ್ಲಿ ಅವನನ್ನು ಮಾರಾಟಕ್ಕೆ ಇಟ್ಟರು. ಅಲ್ಲೊಬ್ಬ ಐವತ್ತು ದಿನಾರು ಕೊಡುತ್ತೇನೆಂದ. ಆಗ ಆ ಸಂತ ಹೇಳಿದ ಇನ್ನೂ ಹೆಚ್ಚು ಬೆಲೆಯಿದೆ ಅಷ್ಟಕ್ಕೇ ಕೊಡಬೇಡಿ ಎಂದ. ನಂತರ ಇನ್ನೊಬ್ಬ ನೂರು ದಿನಾರು ಕೇಳಿದ. ಮತ್ತೆ ಸಂತ ಹಾಗೇ ಹೇಳಿದ… ಅಷ್ಟರಲ್ಲಿ ದಾರಿ ಮಧ್ಯದಲ್ಲಿ ದನಗಾಹಿ ಒಬ್ಬ ಸಿಕ್ಕಿದ. ಆತ ತಲೆ ಮೇಲಿರುವ ಹುಲ್ಲು ಕಟ್ಟು ಕೊಡುತ್ತೇನೆ ಇವನನ್ನು ಕೊಡಿ ಎಂದ. ಸಂತ ಕೂಡಲೇ ಹೇಳಿದ “ನಿಜವಾದ ಬೆಲೆ ಇದು ಕೂಡಲೇ ಮಾರಿ ಎಂದ. ಅಂದರೆ ಆ ಯುವ ಸಂತನಿಗೆ ಈ ಶರೀರದ ನಿಜವಾದ ಬೆಲೆ ಗೊತ್ತಿತ್ತು. ಆತ್ಮವನ್ನು ಹೊರತುಪಡಿಸಿ ಬರೀ ಶರೀರಕ್ಕೆ ಇರುವ ಬೆಲೆ ಹುಲ್ಲಿನಷ್ಟು ಮಾತ್ರ. ಅಥವಾ ಅದಕ್ಕಿಂತಲೂ ಕಡಿಮೆ. ಹುಲ್ಲು ಕಟ್ಟನ್ನು ಅಥವಾ ಒಂದು ಚಪ್ಪಲಿಯನ್ನು ಯಾರಾದರೂ ನಮ್ಮ ಮನೆಯಲ್ಲಿಡುತ್ತೇವೆ ಎಂದರೆ ನಾವು ಒಪ್ಪಬಹುದು. ಆದರೆ ಒಂದು ಹೆಣವನ್ನು ಇಡುತ್ತೇವೆಂದರೆ ಯಾರೂ ಒಪ್ಪುವುದಿಲ್ಲ. ಅಷ್ಟು ಕೂಡ ಬೆಲೆ ಇಲ್ಲ. ಉಸಿರೊಂದು ಕಳೆದ ಮೇಲೆ ಶರೀರಕ್ಕೆ ಯಾವ ಬೆಲೆಯೂ ಇಲ್ಲ.

✍️ ಡಾ.ರವೀಂದ್ರ ಭಟ್ಟ ಸೂರಿ.
9448028443