ಒಬ್ಬ ಚಕ್ರವರ್ತಿ ಇದ್ದ. ಅವನಿಗೊಂದು ಅಭ್ಯಾಸ. ಆಸ್ಥಾನಕ್ಕೆ ಯಾರೇ ಬಂದರೂ ಬಗ್ಗಿ ನಮಸ್ಕಾರ ಮಾಡುತ್ತಿದ್ದ. ಮಂತ್ರಿಗೆ ಇರಿಸುಮುರಿಸು. ಚಕ್ರವರ್ತಿಯಾಗಿ ಬಂದವರಿಗೆ ತಲೆಬಾಗುವುದು ಸರಿಯಲ್ಲವೆಂದು. ಒಂದು ದಿನ ಚಕ್ರವರ್ತಿಯಲ್ಲಿ ಆತ ವಿನಂತಿ ಮಾಡಿಕೊಳ್ಳುತ್ತಾನೆ….. “ಪ್ರಭು ನೀವು ಚಕ್ರವರ್ತಿಯಾಗಿ ಈ ರೀತಿ ತಲೆಬಾಗುವುದು ತರವಲ್ಲ. ನಿಮ್ಮ ತಲೆಯ ಮೇಲೆ ರತ್ನದ ಮುಕುಟವಿದೆ. ಅಂತಹ ತಲೆಯನ್ನು ಬಂದವರಿಗೆಲ್ಲ ಬಾಗುವುದು ಸರಿಯಲ್ಲ” ಎಂದ. ರಾಜ ಹೇಳಿದ “ನಿನಗೆ ತಲೆಯ ಬೆಲೆ ಗೊತ್ತಿಲ್ಲ ಅದನ್ನು ನಿನಗೆ ತೋರಿಸುತ್ತೇನೆ” ಎಂದು. ಸ್ವಲ್ಪ ದಿನಗಳಲ್ಲಿ ಅಲ್ಲಿ ಒಬ್ಬ ಕೈದಿಗೆ ತಲೆ ಕಡಿಯುವ ಶಿಕ್ಷೆ ಕೊಡಲ್ಪಟ್ಟಿತು. ಆ ಕಡಿದ ತಲೆಯನ್ನು ಚಕ್ರವರ್ತಿ ಮಂತ್ರಿಗೆ ಕೊಟ್ಟು ಮಾರಿ ಬರಲು ಹೇಳಿದ. ರಾಜಾಜ್ಞೆ…. ವಿಚಿತ್ರವಾದರೂ ಏನೋ ಇರಬಹುದೆಂದು ಮಂತ್ರಿ ತೆಗೆದುಕೊಂಡು ಹೊರಟ. ಯಾರು ತೆಗೆದುಕೊಳ್ಳುತ್ತಾರೆ? ಕೊನೆಗೆ ಉಚಿತವಾಗಿ ಕೊಡುತ್ತೇನೆಂದ. ಆದರೂ ಯಾರೂ ತೆಗೆದುಕೊಳ್ಳಲಿಲ್ಲ. ಕೊನೆಗೆ ಮೇಲಿನಿಂದ ನಾನೇ ಹಣ ಕೊಡುತ್ತೇನೆ ತೆಗೆದುಕೊಳ್ಳಿ ಎಂದ. ಯಾರೂ ತೆಗೆದುಕೊಳ್ಳಲಿಲ್ಲ. ಬದಲಾಗಿ ಮಂತ್ರಿಗೆ ಬೈದರು…. ಇದನ್ಯಾಕೆ ತೆಗೆದುಕೊಂಡು ಬಂದೆ? ಎಂದು. ಹಿಂದಿರುಗಿ ಬಂದ ಮಂತ್ರಿಗೆ ರಾಜ ಕೇಳಿದ “ನಿನಗೆ ತಲೆಯ ಬೆಲೆ ಏನೆಂದು ತಿಳಿಯಿತೇ?” ಎಂದು .ಇಷ್ಟೇ ಬೆಲೆ ಇರುವುದು ತಲೆಗೆ. ಮತ್ತೆ ಬಾಗದೆ ಬೀಗುವುದರಲ್ಲಿ…. ಆಕಾಶ ನೋಡುವುದರಲ್ಲಿ ಅರ್ಥವೇನಿದೆ? ಎಂದು.

ಒಂಬತ್ತು ರಂಧ್ರಗಳಿರುವ ಒಂದು ಪಂಜರ ಈ ಶರೀರ. ಈ ಪಂಜರದಲ್ಲಿ ಒಂದು ಗಿಳಿ ಇದೆ. ಆ ಗಿಳಿಗೆ ಜೀವ ಎಂದು ಹೆಸರು. ಜೀವ ಪಕ್ಷಿ. ಈ ಪಕ್ಷಿಯ ಇರುವಿಕೆಯೇ ಆಶ್ಚರ್ಯ. ಆ ಪಕ್ಷಿ ಇದ್ದಾಗ ನಮ್ಮ ಶರೀರ ವಿಚಿತ್ರವಾಗಿ ಕೆಲಸ ಮಾಡುತ್ತದೆ. ರಕ್ತ ಹರಿಯುತ್ತದೆ…. ಹೃದಯ ಬಡಿಯುತ್ತದೆ….. ನಾಡಿ ಮಿಡಿಯುತ್ತದೆ….. ಉಸಿರು ಆಡುತ್ತದೆ…. ಮೋಹ ,ಕ್ರೋಧ, ಲೋಭ, ಮತ್ಸರ ಎಲ್ಲಾ ಇದೆ….. ಮಾತಿದೆ… ಕೃತಿ ಇದೆ….. ಚಲನವಲನವಿದೆ…. ಸ್ಪಂದನವಿದೆ. ಏನು ಕಳಕಳಿ ಶರೀರ. ನಮಗೇನು ಕಳಕಳಿ ಶರೀರದ ಬಗ್ಗೆ. ಆ ಗಿಳಿಯೊಂದು ಶರೀರದಲ್ಲಿದ್ದರೆ ಶರೀರಕ್ಕೆ ಏನು ಷೋಡಶೋಪಚಾರ…..! ಬೆಳಿಗ್ಗೆಯಿಂದ ಸಂಜೆಯವರೆಗೆ ಸಂಜೆಯಿಂದ ಬೆಳಗಿನವರೆಗೆ ಅದು ಕೇಳಿದ್ದನ್ನೆಲ್ಲಾ ಕೊಡುತ್ತೇವೆ. ಪ್ರಪಂಚದಲ್ಲಿ ಯಾವ ಪಂಜರಕ್ಕೂ ಯಾವ ಗಿಳಿಗೂ ಈ ರೀತಿಯ ಉಪಚಾರ ಕಂಡು ಬರುವುದಿಲ್ಲ. ಈ ಶರೀರ ಎಲ್ಲ ಬಗೆಯ ಮಾಲಿನ್ಯಗಳ ತವರು. ನಮ್ಮ ಶರೀರದಿಂದ ಸ್ರವಿಸುವುದೆಲ್ಲ ಮಾಲಿನ್ಯವೇ. ಇಂತಹ ಶರೀರಕ್ಕೆ ನಮ್ಮ ರಾಜೋಪಚಾರ….! ಹಾಗಾದರೆ ನಮ್ಮಿಂದ ಇಷ್ಟೆಲ್ಲ ಮಾಡಿಸಿಕೊಳ್ಳುವ ಶರೀರ ಕೊನೆಗೆ ಉಳಿಯುತ್ತದೆಯೇ ಎಂದರೆ ಅದೂ ಇಲ್ಲ. ಅದು ವಿನಾಶಿ.. ಒಂದು ದಿನ ನಾಶವಾಗಿ ಹೋಗುತ್ತದೆ. ಇಂತಹ ಶರೀರಕ್ಕಾಗಿ ನಾವು ಪಾಪ ಮಾಡುತ್ತೇವೆ… ಎಷ್ಟು ಜನರಿಗೆ ಮೋಸ ಮಾಡುತ್ತೇವೆ…. ಎಷ್ಟು ಸುಳ್ಳು ಹೇಳುತ್ತೇವೆ…. ಎಷ್ಟು ಅನ್ಯಾಯ ಮಾಡುತ್ತೇವೆ… ಇದೆಲ್ಲ ಯಾಕೆ ಎಂದರೆ ನಮ್ಮ ಶರೀರಕ್ಕಾಗಿ. ಆದರೆ ಅಂತಹ ಮಾಲಿನ್ಯಗಳ ತವರಾದ ಶರೀರಕ್ಕೆ ಬೆಲೆ ಬರುವುದು ಯಾವಾಗ ಎಂದರೆ…. ಆ ಗಿಳಿ ಒಳಗಿದ್ದಾಗ. ಅದರ ಇರುವಿಕೆ ಎಷ್ಟು ಆಶ್ಚರ್ಯವೋ ಅದಕ್ಕಿಂತ ಹೆಚ್ಚು ಅದು ಪಂಜರ ಬಿಟ್ಟು ಹೊರಟಾಗ…. ಅದು ಅದ್ಭುತ….! ಹೋದ ಕೂಡಲೇ ಈ ಶರೀರ ಜಡ. ಅದಕ್ಕೇ ಅಂತ್ಯದಲ್ಲಿ ಸತ್ತು ಹೋದನು…. ಸತ್ತುಹೋದಳು….. ಸತ್ತು ಹೋಯಿತು ಎನ್ನುವರು. ಅಂದರೆ ‘ಸತ್’ ಅದು ಒಳಗಿನ ಬೆಳಕು… ಅವಿನಾಶಿ. ಅದು ಹೋಯ್ತು ಅಂತ. ಅದು ಹೋದರೆ ಈ ಶರೀರಕ್ಕೆ ಯಾವ ಬೆಲೆಯೂ ಇಲ್ಲ. ನಿಜವಾದ ಬೆಲೆ ಶರೀರಕ್ಕಲ್ಲ… ನಿಜವಾದ ಬೆಲೆ ಆತ್ಮಕ್ಕೆ. ಹಾಗಾಗಿ ಪ್ರೀತಿ ಇಡುವುದಿದ್ದರೆ ಆತ್ಮದ ಮೇಲಿಡಬೇಕು…. ಶರೀರದ ಮೇಲಲ್ಲಾ. ಬಣ್ಣ ನೋಡಿ… ಆಕಾರ ನೋಡಿ… ಮಾತು ನೋಡಿ…. ಮನಸ್ಸು ನೋಡಿ…. ಸಂಪತ್ತು ನೋಡಿ ಮರುಳಾಗಬಾರದು. ಅದೆಲ್ಲ ಅಶಾಶ್ವತ. ಇದು ಯಾವುದಕ್ಕೂ ಬೆಲೆಯಿಲ್ಲ. ಆತ್ಮದ ಪಾಶಕ್ಕೆ ಒಳಗಾಗಬೇಕು. ಆತ್ಮ ಆತ್ಮಗಳ ನಡುವೆ ಪ್ರೀತಿ ಇರಲಿ ದೇಹವನ್ನು ಮೀರಿದ ಆತ್ಮ ನೊಬ್ಬನಿದ್ದಾನೆ. ನಾವು ದೇಹವಲ್ಲ ….ನಾವು ಕಣ್ಣು, ಕಿವಿ, ಮೂಗು, ಇಂದ್ರಿಯವಲ್ಲ. ನಾವು ಪಂಚಭೂತಗಳಲ್ಲ. ನಾವು ಕೇವಲ ಆತ್ಮ. ಕೇವಲ ಮಂಗಲ ನಾವು. ಎನ್ನುವ ಭಾವ ನಮ್ಮಲ್ಲಿ ಮೂಡಬೇಕು. ನಾವು ಎಂದರೆ ದೇಹ ಎನ್ನುವ ಭಾವ ಹೋಗಬೇಕು. ದೇಹದ ಮೋಹ ಬಿಟ್ಟು ಆತ್ಮದ ಮೋಹ ಬೆಳೆಸಿಕೊಳ್ಳೋಣ. ಆತ್ಮೋದ್ಧಾರಕ್ಕೆ ಬೇಕಾದ ಸಾಧನೆಯೆಡೆಗೆ ಮುನ್ನಡೆಯೋಣ. ಅಂದಾಗ ಅರ್ಥಪೂರ್ಣ ಬದುಕು ನಮ್ಮದಾಗುತ್ತದೆ.

RELATED ARTICLES  ಬೇಲಿಯಂತೆ ಕಟ್ಟು ಪಾಡಿನ ಜೀವನ: ಭಾಗ-1

✍️ ಡಾ.ರವೀಂದ್ರ ಭಟ್ಟ ಸೂರಿ.
9448028443