ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಕೆರೆಮನೆ ಕುಟುಂಬ ( ಶ್ರೀ ಶಂಭು ಹೆಗಡೆ, ಶಿವಾನಂದ ಹೆಗಡೆ ದಂಪತಿ ಹಾಗೂ ಮಕ್ಕಳು )
ಮುಖವೇ ಮನಸ್ಸಿನ ಕನ್ನಡಿ ಎಂಬ ವಾಕ್ಯ ನನಗೆ ಎಲ್ಲಾ ಕಡೆ ಸರಿ ಕಂಡಿಲ್ಲ. ನನ್ನ ಕಣ್ಣಿನ ದೋಷವೂ ಇರಬಹುದು… ಕನ್ನಡಿಯ ದೋಷವೂ ಇರಬಹುದು.? ಆದರೆ ಕೆಲವರಿಗೆ ಮಾತ್ರ ಇದು 200% ಸತ್ಯ ಅನಿಸಿದ್ದು ಹೌದು. ಕೆಲವರ ಮುಖದ ಮೇಲೆ ಕಳೆ ಎದ್ದು ತೋರುತ್ತದೆ ಎನ್ನುತ್ತಾರೆ. ಈಗಿನ ಕೆಲವು ಹುಡುಗರನ್ನು ಕಂಡಾಗ ಅವರು ಬಹಳ ಕಾಲ ಬೆಳೆದ ಕಳೆಯನ್ನು ತೆಗೆಯದೇ ಇರುವುದರಿಂದ ಅದು ಎದ್ದು ಕಾಣುವುದು ಸತ್ಯ. ??? ಆದರೆ ಮುಖದ ತೇಜಸ್ಸು ಎನ್ನುವುದು ಭಗವಂತನ ಕೃಪೆಯೇ ಸರಿ. ಕೆಲವರನ್ನು ಕಂಡ ತಕ್ಷಣ ಕೈಯೆತ್ತಿ ಮುಗಿಯಬೇಕು ಎಂದು ಕಾಣುವುದು ಸುಳ್ಳಲ್ಲ. ಕೆಲವರನ್ನು ಕಂಡ ತಕ್ಷಣ ಬೇರೆ ರಸ್ತೆಯಲ್ಲಿ ಹೋಗೋಣ ಈ ರಸ್ತೆ ಬೇಡ ಅನಿಸುತ್ತದೆ. ?? ಕೆರೆಮನೆ ಎಂಬ ಊರನ್ನು ಅಳಿಸದ ಶಾಯಿಯಲ್ಲಿ ವಿಶ್ವ ನಕಾಶೆಯಲ್ಲಿ ಮೂಡಿಸಿದ ಅಪ್ರತಿಮ ಪ್ರತಿಭಾವಂತರ ಕುಟುಂಬದೊಂದಿಗೆ ನಾನಿವತ್ತು ನಿಮ್ಮೆದುರು ಹಾಜರಾಗುತ್ತಿದ್ದೇನೆ.
ಕೆರೆಮನೆ ಹಲವರಿಗೆ ಕೆರೆಮನೆ. ಆದರೆ ನಮ್ಮ ಕುಟುಂಬದ ಪಾಲಿಗೆ ಅದು ನೆರೆಮನೆ. ದಿ|| ಶಂಭು ಹೆಗಡೆಯವರು ತಮ್ಮ ಜೀವನದಲ್ಲಿ ಅತಿ ಹೆಚ್ಚು ಬಾರಿ ಭೇಟಿ ಕೊಟ್ಟ ಸ್ಥಳಗಳಲ್ಲಿ ನಮ್ಮ ಮೇಲಿನಗಂಟಿಗೆ ಒಂದು. ನಮ್ಮ ದೊಡ್ಡಪ್ಪ ನಾರಾಯಣ ಭಟ್ಟರಿಗೂ ಶಂಭು ಹೆಗಡೆಯವರಿಗೂ ಬಲುವೇ ದೋಸ್ತಿ. ಒಂದೋ ಇವರು ಅಲ್ಲಿಗೆ ಹೋಗುವವರು. ಅಥವಾ ಅವರು ಇಲ್ಲಿಗೆ ಬರುವವರು. ನಮ್ಮ ಮನೆಯ ದಾರಿಯಲ್ಲಿ ಹೋಗುವಾಗ ಅದೆಷ್ಟೋ ಸಲ ಓ ಶಂಭು…. ಅಣ್ಣ ಇದ್ನನ ಮನೆಲಿ….ಎಂದು ನಮ್ಮಪ್ಪ ಶಂಭುವಿನ ಹತ್ತಿರ ಕೇಳಿ ಒಮ್ಮೆ ಕುಳಿತು ಯೋಗಕ್ಷೇಮ ವಿಚಾರಿಸಿ ಸಾಗುವವರು. ಅವರನ್ನು ನೋಡುವುದೇ ಕಣ್ಣಿಗೆ ಹಬ್ಬ. ಒಮ್ಮೊಮ್ಮೆ ಬೆಳಿಗ್ಗೆಯಿಂದ ಸಂಜೆಯವರೆಗೂ ಶಂಭು ಹೆಗಡೆಯವರು ಅನೇಕ ವಿಚಾರಗಳ ಬಗೆಗೆ ನಮ್ಮ ದೊಡ್ಡಪ್ಪನ ಬಳಿ ಚರ್ಚಿಸುತ್ತಿದ್ದರು. ಅನೇಕ ಬಾರಿ ಮಾತನಾಡುತ್ತಾ ಮಾತನಾಡುತ್ತಾ ಹೊರ ಜಗಲಿಯ ಮೇಲೇ ಹೆಜ್ಜೆ ಹಾಕಿ ರಂಜಿಸುತ್ತಿದ್ದರು. ವಿವಿಧ ಹಾವ ಭಾವ ಪೌರಾಣಿಕ ಪಾತ್ರ ಚಿತ್ರಣಗಳ ಬಗೆಗೆ ನಮ್ಮ ದೊಡ್ಡಪ್ಪನ ಬಳಿ ಗಂಭೀರವಾಗಿ ವಿಮರ್ಶಿಸುತ್ತಿದ್ದರು. ಇಡಗುಂಜಿ ಮಹಾಗಣಪತಿ ಯಕ್ಷಗಾನ ಮೇಳವನ್ನು ಸ್ಥಾಪಿಸಿ ನಮ್ಮ ದೊಡ್ಡಪ್ಪನನನ್ನೇ ಅದರ ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದ ಶಂಭು ಹೆಗಡೆಯವರಿಗೆ ಮೇಲಿನಗಂಟಿಗೆ…. ನೋವು ನಲಿವುಗಳನ್ನು ಹಂಚಿಕೊಳ್ಳುವ ಆತ್ಮೀಯ ಸ್ಥಳ ಆಗಿತ್ತು. ಯಕ್ಷಗಾನದ ಸುದ್ದಿ ಬಂದಾಗೆಲ್ಲ ನಮ್ಮಪ್ಪ…. ದೊಡ್ಡಪ್ಪ…. “ಶಿವರಾಮ ಹೆಗಡೆಯವರು ಹಾಗೆ ಮಾಡುತ್ತಿದ್ದರು….ಹೀಗೆ ಮಾಡುತ್ತಿದ್ದರು. ಶಂಭು ಹೆಗಡೆಯವರು ಹಾಗೆ ಮಾಡುತ್ತಿದ್ದರು. ಹೀಗೆ ಮಾಡುತ್ತಿದ್ದರು.” ಎಂಬ ಕ್ಯಾಸೆಟ್ಟನ್ನೇ ನನ್ನೆದುರಿಗೇ ಸುಮಾರು ಸಾವಿರಕ್ಕೂ ಹೆಚ್ಚು ಬಾರಿ ಹಾಕಿರಬಹುದು. ???? ನಾನಿಲ್ಲದಿರುವಾಗ ಲೆಕ್ಕವಿಲ್ಲ. ?? ರಾಮ ನಿರ್ಯಾಣದ ರಾಮ, ಹರಿಶ್ಚಂದ್ರ, ಈ ಪಾತ್ರಗಳನ್ನಂತೂ ಶಂಭು ಹೆಗಡೆಯವರನ್ನು ಮೀರಿಸಿದ ಮತ್ತೊಬ್ಬ ಇನ್ನೂ ಹುಟ್ಟಿಲ್ಲ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಏರಬಹುದಾದ ಉತ್ತುಂಗವನ್ನು ಏರಿ ರಂಗಸ್ಥಳದಲ್ಲಿಯೇ ಬಣ್ಣದ ಬದುಕಿಗೆ ವಿದಾಯ ಹೇಳಿದ ಶಂಭು ಹೆಗಡೆಯವರು ಸಿನಿಮಾಗಳಲ್ಲಿ ಕೂಡ ಅಭಿನಯಿಸಿ ಸೈ ಎನಿಸಿಕೊಂಡರು ಅನೇಕ ಪ್ರಶಸ್ತಿ ಪುರಸ್ಕಾರಗಳಿಗೆ ಅರ್ಹವಾಗಿಯೇ ಭಾಜನರಾದರು. ಕೆರೆಮನೆ ಶಿವರಾಮ ಹೆಗಡೆ ರಂಗ ಮಂದಿರ ನಿರ್ಮಿಸಿ ಸಾವಿರ ಸಾವಿರ ವಿದ್ಯಾರ್ಥಿಗಳಿಗೆ ಬೆಳಕಾದರು ಬದುಕಾದರು. ಕೆರೆಮನೆ ಎಂಬ ಹೆಸರನ್ನು ದಿಗ್ದಿಗಂತ ಮೊಳಗಿಸಿದ ಮಹಾತ್ಮ ಶಂಭು ಹೆಗಡೆಯವರ ಬಗ್ಗೆ ಬರೆದಷ್ಟೂ ಮುಗಿಯುವುದಿಲ್ಲ. ಎಷ್ಟೇ ಬರೆಯಲಿ ಅದು ಕಡಿಮೆಯೇ ಆಗಿ ತೋರುತ್ತದೆ.
ಶಂಭು ಹೆಗಡೆಯವರು ದಿವಂಗತರಾದ ಕಾಲಕ್ಕೆ ಬಹುತೇಕ ಕೆರೆಮನೆ ಪರಂಪರೆ, ಛಾಪು, ಪ್ರಸಿದ್ಧಿ, ಇಲ್ಲಿಗೇ ನಿಲ್ಲಬಹುದೇನೋ ಎಂದು ಅನೇಕ ಜನರು ಭಾವಿಸಿರಲಿಕ್ಕೆ ಸಾಕು. ಆದರೆ ರಾಷ್ಟ್ರವನ್ನೂ ಮೀರಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಯಕ್ಷಗಾನವನ್ನು ಕೊಂಡೊಯ್ದ ಶಿವಾನಂದ ಹೆಗಡೆಯವರು ಅಪ್ಪನಿಗೆ ತಕ್ಕ ಮಗನಾಗಿ ರಂಗ ಮಂದಿರವನ್ನು ಕಲಾ ಸರಸ್ವತಿಯ ಮಂದಿರವನ್ನೇ ಆಗಿ ಮಾಡಿಬಿಟ್ಟರು. ಸಜ್ಜನಿಕೆ, ಸರಳತೆ, ಕಲಾಪ್ರೌಢಿಮೆ, ಸಂಘಟನೆ, ಇವೆಲ್ಲಾ ಇಂದು ಶಿವಾನಂದ ಹೆಗಡೆಯವರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು ನಮ್ಮ ಹೊನ್ನೂರಿನ ಹೆಮ್ಮೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕಲಾವಿದರುಗಳಿಗೆ ವೇದಿಕೆ ಕಲ್ಪಿಸಿಕೊಡುವಲ್ಲಿ ಅವರು ಮಾಡಿದ ಸಾಹಸ ಅದು ಅವರ್ಣನೀಯ. ದೇಶದ ಹಲವಾರು ರಾಜ್ಯಗಳ ವಿಭಿನ್ನ ನೃತ್ಯ ಪ್ರಕಾರಗಳನ್ನು ರಾಷ್ಟ್ರೀಯ ನೃತ್ಯೋತ್ಸವದ ವೇದಿಕೆಯ ಮೂಲಕ ನಾಡೇ ಮೆಚ್ಚುವ ಕೆಲಸ ಮಾಡಿದ ಶಿವಾನಂದ ಹೆಗಡೆಯವರು ಒಬ್ಬ ವ್ಯಕ್ತಿ ಎನ್ನುವುದಕ್ಕಿಂತ ಅವರೊಬ್ಬ ಶಕ್ತಿ. ಕೆರೆಮನೆ ಕುಟುಂಬದ ಛಾಪನ್ನು ಅಳಿಸದ ಹಾಗೆ ನೋಡಿಕೊಂಡು, ಲೋಕ ವಿಖ್ಯಾತಿ ಗಳಿಸಿದರೂ ತಲೆಯ ಮೇಲೆರಡು ಕೋಡು ಕಟ್ಟಿಕೊಂಡು ತಿರುಗಾಡಿದ ಜನ ಅಲ್ಲ ನಮ್ಮ ಶಿವಾನಂದ ಹೆಗಡೆಯವರು. ಯಾರಾದರೂ ಆಕಸ್ಮಿಕವಾಗಿ ಭೇಟಿಯಾದರೆ ಓ ಅವರೇ ಇವರಾ ಅನ್ನುವಷ್ಟು ಸರಳ ಜೀವಿ. ಮೊನ್ನೆ ಮೊನ್ನೆ ನನ್ನದೊಂದು ಉಪನ್ಯಾಸ ಆಲಿಸಿ ಸಂದೀಪ ನೀನು ನಮ್ಮ ಕೆರೆಮನೆಯ ಹಿಸೆಯದ್ದೇ ಒಂದು ಭಾಗ ಎಂದು ನನ್ನನ್ನು ಪ್ರೋತ್ಸಾಹಿಸಿದರು. ಆಹಾ! ಅವರ ಸೌಜನ್ಯವೇ! ಒಡನಾಟ ಸಿಗುವುದಕ್ಕೂ ಪುಣ್ಯ ಮಾಡಿರಬೇಕು.
ಶಿವಾನಂದ ಹೆಗಡೆಯವರ ಮಡದಿ ರಾಜೇಶ್ವರಿ ಅಕ್ಕ ಕೂಡ ಪ್ರತಿಭಾ ಸಂಪನ್ನೆ. ಸೌಹಾರ್ದ ಬಳಗದ ಸಕ್ರಿಯ ಸದಸ್ಯೆ ಆಗಿರುವ ಅವಳ ಸಂಗೀತ, ಸಾಂಪ್ರದಾಯಿಕ ಹಾಡುಗಳು, ಎಲ್ಲವನ್ನೂ ಅತ್ಯಂತ ಹೆಮ್ಮೆಯಿಂದ ನಾನು ಆಸ್ವಾದಿಸುತ್ತೇನೆ. ಶಿವಾನಂದ ಹೆಗಡೆಯವರಿಗೆ ಸಾಥಿಯಾಗಿ ಮಕ್ಕಳಿಗೆ ಮಾರ್ಗದರ್ಶಕಿಯಾಗಿ ಅವಳು ತೋರುವ ಶೃದ್ಧೆ, ಕಾಳಜಿ ಮಾದರಿಯಾದದ್ದು.
ಮಕ್ಕಳೂ ಬೆಳೆವ ಸಿರಿ ಮೊಳಕೆಯಲ್ಲಿ ನೋಡು ಎಂಬುದನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ಮಗ ಶ್ರೀಧರನಂತೂ ಯಕ್ಷಗಾನ ವೇಷ ಹಾಕಿದರೆ ಶಂಭು ಹೆಗಡೆಯವರೇ ಮತ್ತೊಮ್ಮೆ ಹುಟ್ಟಿಬಂದು ರಂಗಸ್ಥಳಕ್ಕಿಳಿದಂತೆ ಭಾಸವಾಗುತ್ತದೆ. ಕೆರೆಮನೆ ಎಂಬುದು ನಿಜವಾಗಿ ಗುಣವಂತೆಯ ಸಮೀಪ ನಾಲ್ಕಾರು ಮನೆಗಳಿರುವ ಕೇರಿ. ಆದರೆ ಅದನ್ನು ನಾಡಿನ ಕಲಾ ರಾಜಧಾನಿಯನ್ನಾಗಿ ಮಾಡಿದ ಶ್ರೇಯಸ್ಸು ಈ ಕುಟುಂಬದ್ದು.
ಮತ್ತೂ ಬರೆಯಬಹುದಿತ್ತು ಎಂದು ಅಂದುಕೊಳ್ಳಬೇಡಿ. ಇಡೀ ಪುಸ್ತಕವನ್ನೇ ಅವರಿಗೆ ಮೀಸಲಾಗಿಟ್ಟರೂ ಬರೆದು ಮುಗಿಯುವುದಿಲ್ಲ. ನನ್ನ ಮೇಲೆ ಅವರಿಟ್ಟ ಪ್ರೀತಿ ವಿಶ್ವಾಸಕ್ಕೆ ನಾಲ್ಕಕ್ಷರವನ್ನು ಪ್ರೀತಿಯಿಂದ ಬರೆಯ ಬೇಕೆನಿಸಿತು. ಬರೆದೆ. ಕೆರೆಮನೆ ಕುಟುಂಬ ವಿಶಾಲ ಮರದ ಹಾಗೆ. ಅದು ಅನೇಕರಿಗೆ ಆಶ್ರಯ ಕೊಟ್ಟಿದೆ. ಹಣ್ಣು ಕೊಟ್ಟಿದೆ, ನೆರಳಾಗಿದೆ, ದೂರದಿಂದಲೇ ಕಲ್ಲು ಹೊಡೆದು ಹಣ್ಣು ಉದುರಿಸಿದವರೂ ಇದ್ದಾರೆ. ಕಲ್ಲು ಹೊಡೆದವರಿಗೂ ಅದು ಸಿಹಿಯಾದ ಹಣ್ಣುಗಳನ್ನೇ ಕೊಡುತ್ತದೆ. ಕಲಾ ಆರಾಧಕರ ಅವಿಚ್ಛಿನ್ನ ಪರಂಪರೆ ಆಚಂದ್ರಾರ್ಕವಾಗಿ ಬೆಳೆಯಲಿ, ಉಳಿಯಲಿ. ನಿಮ್ಮೆಲ್ಲರಿಗೆ ಜಯವಾಗಲಿ, ಜಯವಾಗುತ್ತಲೇ ಇರಲಿ. ಮರದ ಬೇರಿಗೆ ನನ್ನದೂ ಒಂದು ಬೊಗಸೆ ನೀರನ್ನು ಅಕ್ಷರಗಳ ರೂಪದಲ್ಲಿ ಸಲ್ಲಿಸಿ ಧನ್ಯನಾಗಿ ಲೇಖನಿ ವಿರಮಿಸುತ್ತದೆ.
ಸದ್ಗುರು ಶ್ರೀಧರರ ಆಶೀರ್ವಾದ ಕೆರೆಮನೆ ಶಿವಾನಂದ ಹೆಗಡೆಯವರು, ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಶಿವಾನಂದ ಹೆಗಡೆಯವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
?+91 94805 16300
??????⚫⚪???????⚫⚪?????