ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ದೇವರು ಹೆಗಡೆ ಮತ್ತು ಶಾರದಾ ದಂಪತಿ – ಮಾಲಂಗೆರೆ
ಕೆಲವರಿಗೆ ಜೀವನದಲ್ಲಿ ಹತ್ತು ವರ್ಷಕ್ಕೇ ಜ್ಞಾನೋದಯವಾಗಿಬಿಡುತ್ತದೆ. ಕೆಲವರಿಗೆ ಇಪ್ಪತ್ತಾಗುತ್ತದೆ. ಕೆಲವರಿಗೋ ನಲವತ್ತಕ್ಕಾಗುತ್ತದೆ. ಕೆಲವರಿಗೆ ಎಪ್ಪತ್ತಾಗುತ್ತದೆ…ಆದರೆ ಎಪ್ಪತ್ತಕ್ಕೆ ಜ್ಞಾನ ಉದಯವಾದರೂ ಅವರು ಅಸ್ತಮಾನವಾಗುವ ಹಂತದಲ್ಲಿರುತ್ತಾರೆ. ಕೆಲವರಿಗೋ ಸಾಯುವವರೆಗೂ ಜ್ಞಾನೋದಯವಾಗುವುದೇ ಇಲ್ಲ.?? ಅವರು ಲಾಂಗೂ ಲಿಗಾಡಿ ಮಾಡಿ ಹೊರಟು ಹೋಗುತ್ತಾರೆ. ಪ್ರಯೋಜನಕ್ಕೆ ಬಾರದಂತೆ. ಸಸ್ಯಗಳಲ್ಲಿ ಹೇಗೆ ಸ್ವಾವಲಂಬಿ ಸಸ್ಯಗಳು ಮತ್ತು ಪರಾವಲಂಬಿ ಸಸ್ಯಗಳು ಎಂಬ ಎರಡು ಬಗೆಯಿರುತ್ತದೋ ಹಾಗೆಯೇ ಮನುಷ್ಯರಲ್ಲೂ….??. ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ಇವರು ಹಿಂದೆ ಹೀಗಿದ್ದದ್ದೇ ಸುಳ್ಳು ಎಂದು ಮಾಡಿ ತೋರಿಸಿದ ಸಾಧಕ ಶ್ರೀಯುತ ದೇವರು ಹೆಗಡೆ ಮಾಲೆಂಗರೆ ಹಾಗೂ ಶಾರದಕ್ಕ ನನ್ನ ಇಂದಿನ ಅಕ್ಷರ ಅತಿಥಿ.
ನಮ್ಮ ನಮ್ಮ ಬದುಕೇ ಹಲವು ವರ್ಷಗಳ ನಂತರ ನಮಗೆ ಇತಿಹಾಸ ಪುಸ್ತಕದಂತೆ ತೋರುತ್ತದೆ.? ಹೆಸರೇನೋ ದೇವರು. ಆದರೆ ಆ ದೇವರು ಮೂಡಿದ್ದು ಮಾತ್ರ ಅತ್ಯಂತ ಕಡು ಬಡತನದ ಕುಟುಂಬದಲ್ಲಿ…ಎಂದು ನಮ್ಮಪ್ಪ ಯಾವಾಗಲೂ ಹೇಳುತ್ತಿರುತ್ತಾರೆ. ದೇವರು ಹೆಗಡೆಯವರು ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮಾಲೆಂಗರೆಯವರು. ಮೂಲತಃ ಕೃಷಿಕರಾದ ಅವರು ಭಟ್ಟರಾದರೂ ಅವರು ಹಲವರಿಗೆ ಬಂಗಾರದ ಶೆಟ್ಟರು. ಚಾಮುಂಡೇಶ್ವರಿ ಜ್ಯೂವೆಲರಿ ಹೊನ್ನಾವರಕ್ಕೆ ಭೇಟಿ ನೀಡಿದ ಹಲವರಿಗೆ ಅವರ ಭಾಷೆ, ವ್ಯವಹಾರ ಕಂಡು ಇವರು ಅಸಾಮಾನ್ಯ ಎನ್ನಿಸದಿರಲಾರರು. ದೇವರು ಹೆಗಡೆಯವರು ಕೊಂಕಣಿ, ಉರ್ದು, ಕನ್ನಡ ಎಲ್ಲಾ ಭಾಷೆಗಳನ್ನು ಸುಸ್ಪಷ್ಟವಾಗಿ ಮಾತನಾಡುತ್ತಾ ಬಂಗಾರದ ಅಂಗಡಿಗೆ ಬಂದ ಗಿರಾಕಿಗಳನ್ನು ಥಟ್ಟನೆ ಆಕರ್ಷಿಸಿಬಿಡುತ್ತಾರೆ. ಬಂಗಾರದ ಕೊಡು ಕೊಳ್ಳುವಿಕೆಗೆ ಕೇವಲ ದುಡ್ಡಿದ್ದರೆ ಸಾಲದು. ನಂಬಿಕೆ ಬಹಳ ಪ್ರಾಧಾನ್ಯವಾಗಿರುತ್ತದೆ. ದೇವರು ಹೆಗಡೆಯವರ ನಂಬಿಕೆಯ ಮೇಲೆಯೇ ಚಾಮುಂಡಿ ಜ್ಯುವೆಲರ್ಸ ತುಂಬಿ ತುಳುಕುತ್ತದೆ. ಮಳೆಗಾಲವಿರಲಿ, ಕೊರೊನಾ ಇರಲಿ, ತೊಲೆಗೆ ಇಪ್ಪತ್ತಾಗಲೀ ಎಪ್ಪತ್ತಾಗಲೀ ಚಾಮುಂಡೇಶ್ವರಿ ಜ್ಯುವೆಲರ್ಸ ಹೌಸ್ ಫುಲ್.
ದೇವರು ಹೆಗಡೆಯವರಿಗೆ ತೋಟದಲ್ಲಿ ತುಂಬಾ ಆಸಕ್ತಿ ಮತ್ತು ಅವರು ಅಪ್ಪಟ ಆಸ್ತಿಕರು. ಅವರಿಗೆ ಈ ಬಂಗಾರದ ನಂಟು ಬೆಳೆದದ್ದು ಹೇಗೋ ನಾ ಕಾಣೆ. ಆದರೆ ಶೆಟ್ಟರಿಗೇ ಮೀಸಲಾಗಿದ್ದ ಬಂಗಾರದ ವ್ಯವಹಾರವನ್ನು ಶೆಟ್ಟರಷ್ಟೇ ಚಾಣಾಕ್ಷತನದಲ್ಲಿ ಮಾಡಿ ತೋರಿಸುವ ಅವರು ತಾಲೂಕಿನ ಅಷ್ಟೇ ಏಕೆ ಜಿಲ್ಲೆಯ ಅನೇಕರಿಗೆ ಚಿರಪರಿಚಿತ. ನನಗಂತೂ ಅವರೊಬ್ಬ ಬಹುದೊಡ್ಡ ಸಾಧಕ.
ಸಾಧನೆ ಎಂದರೆ ಇಂಥದ್ದೇ ಅಥವಾ ಇಂತಿಷ್ಟೇ ಅಂತಿಲ್ಲ. ಅಪ್ಪನ ಆಸ್ತಿ ದುಡ್ಡು ಸಂಪತ್ತಿನಿಂದ ಮೆರೆಯುವವರು ಬಹಳಷ್ಟು ಇರಬಹುದು. ಆದರೆ ಸ್ವಂತ ಪರಿಶ್ರಮದಿಂದ, ಸ್ವಂತ ಕ್ರಿಯಾಶೀಲತೆಯಿಂದ, ಸ್ವಂತ ಪ್ರತಿಭೆಯಿಂದ ಸಾಧನೆ ಮಾಡಿದವರು ಅಲ್ಪವನ್ನೇ ಮಾಡಿದರೂ ಮಹತ್ತಾಗಿ ಕಾಣುತ್ತದೆ ನನಗೆ. ದೇವರು ಹೆಗಡೆಯವರು ದಿಲ್ ದಾರ್ ಮನುಷ್ಯರು. ಆತಿಥ್ಯಕ್ಕಾಗಲೀ, ನೆರವಿಗಾಗಲೀ ಅವರು ಎತ್ತಿದ ಕೈ. ಕೈ ಕಚ್ಚುವ ಜನ ಅಲ್ಲ ಅವರು.?? ನಾವು ಅತ್ಯಂತ ಬಡತನದಲ್ಲಿದ್ದಾಗ ಅಕ್ಕನ ಮದುವೆಗೂ ಹಾಗೂ ನನ್ನ ಮದುವೆಗೂ ಅತ್ಯಂತ ವಿಶ್ವಾಸದಿಂದ ಬಂಗಾರ ಮಾಡಿಕೊಟ್ಟವರು. ಹೆದರಬೇಡಿ ನಾನಿದ್ದೇನೆ ಎಂದು ಧೈರ್ಯ ತುಂಬಿದವರು. ಇವತ್ತಿಗೂ ನಮಗೆ ದೇವರು ಹೆಗಡೆಯವರು ಹೇಳಿದರೆ ಮುಗಿಯಿತು. ದೂಸರಾ ಮಾತಾಡುವುದಿಲ್ಲ. ಸಿರಿವಂತನಿಗೆ ಬಂಗಾರವೊಂದು ಬಂಡವಾಳ.ಆದರೆ ಬಡವನಿಗೆ ಅದೊಂದು ಬದುಕು. ಹೀಗಾಗಿ ಬದುಕಿನಲ್ಲಿ ಬಂಗಾರದ ಬಣ್ಣ ತುಂಬಿದ ದೇವರು ಹೆಗಡೆಯವರನ್ನು ನಾವು ಸ್ಮರಿಸುತ್ತೇವೆ. ತಂಗಿ…..ತಮ್ಮ ಎಂದು ಮನೆಯವರೇ ಮಾತಾಡಿಸಿದಂತೆ ಮಾತನಾಡುವ ದೇವರಣ್ಣ ನಮಗೆಂದೂ ಬಂಗಾರದ ಟೋಪಿ ಹಾಕಿದ್ದಿಲ್ಲ.?? ದೇವರು…..ನಮ್ಮ ಬದುಕಿನ ಕಷ್ಟಕಾಲದಲ್ಲಿ ನೆರವಾದ ದೇವರು.
ಶಾರದಕ್ಕ ನನ್ನ ಜೊತೆಗೆ ಸಹೋದ್ಯೋಗಿಯಾಗಿ ಕಾರ್ಯ ನಿರ್ವಹಿಸಿದವಳು. ತುಂಬಿದ ಕೊಡ. ಅವಳಿಗೆ ಸಿಟ್ಟು ಬಂದ ದೃಶ್ಯವನ್ನು ನಾನು ನೋಡಿಯೇ ಇಲ್ಲ.?? ವಿಪರೀತ ತಲೆ ಬಿಸಿ ಮಾಡಿಕೊಳ್ಳದ ಆರಕ್ಕೇರದ ಮೂರಕ್ಕಿಳಿಯದ ವ್ಯಕ್ತಿ ನಮ್ಮ ಶಾರದಕ್ಕ. ಅಂಕು ಡೊಂಕು ಡಿಂಗ್ ಡಾಂಗ್ ಮಾಡಿ ಅಧಿಕಾರಿಗಳನ್ನು ಮೆಚ್ಚಿಸಿ ಕೆಲಸದಿಂದ ನುಣುಚಿಕೊಂಡೂ ಪ್ರತಿಷ್ಠೆ ಮೆರೆಯುವ ಹಲವರನ್ನು ನೋಡಿದ್ದ ನನಗೆ.. ಶಾರದಕ್ಕ ಮನೆಯಲ್ಲಿ ಸದ್ಗೃಹಿಣಿಯಾಗಿ ಕಂಡರೆ ಶಾಲೆಯಲ್ಲಿ ಸಹನಾಮೂರ್ತಿಯೇ ಆಗಿ ಕಾಣುತ್ತಾಳೆ. ಒಂದೇ ಒಂದು ಮಗುವಿಗೂ ಅವಳು ರೇಗಿದ್ದನ್ನು ನಾನು ನೋಡಿಲ್ಲ. ಅತಿಯಾಗಿ ರೇಗುವವರ ಮನಸ್ಥಿತಿಯೂ ಸರಿಯಿರುವುದಿಲ್ಲ. ಒಂದೇ ಕುಟುಂಬದವರಂತೆ ಶಾಲೆಯಲ್ಲಿ ಕೂಡ ಮನೆಯ ವಾತಾವರಣ ಇದ್ದಾಗ ಕೆಲಸ ಮಾಡಲು ಖುಷಿ ಎನಿಸುತ್ತದೆ. ನನ್ನನ್ನು ಸದಾ ಕಾಲ ಪ್ರೋತ್ಸಾಹಿಸುವ ಶಾರದಕ್ಕ ನನ್ನೆಲ್ಲಾ ಪುಸ್ತಕಗಳನ್ನು ಕೊಂಡು ಓದಿ ಪ್ರೋತ್ಸಾಹಿಸಿದವಳು. ಖುಷಿಯಿಂದ ನಾಲ್ಕಾರು ಜನರಿಗೆ ಓದಲು ತಿಳಿಸಿ ನನ್ನ ಕುರಿತಾಗಿ ಹೆಮ್ಮೆ ಪಟ್ಟವಳು.
ಶಾರದಕ್ಕನ ಹತ್ತಿರ ನಾನು A to Y ಸುದ್ದಿ ಹೇಳುತ್ತಿದ್ದೆ. ನಕ್ಕ ದಿನಗಳಿಗಂತೂ ಲೆಕ್ಕವೇ ಇಲ್ಲ ನಮಗೆ. ಅವಳು ಯಾರ ಜೊತೆಗೂ accident ಮಾಡಿಕೊಳ್ಳದ ಮನುಷ್ಯ. ತಾನಾಯ್ತು ತನ್ನ ಕೆಲಸವಾಯ್ತು. ಇದೀಗ ನಮ್ಮದೇ ಊರಿನಲ್ಲಿ ನಾನು ಕಲಿತ ಶಾಲೆಯಲ್ಲಿಯೇ ಕಲಿಸುತ್ತಿರುವ ಶಾರದಕ್ಕ ನಿಸ್ವಾರ್ಥ ಜೀವಿ ಮತ್ತು ಯಾರೇ ಬಂದು ಕಿವಿಯೂದಿದರೂ ಬದಲಾಗುವವಳಲ್ಲ. ಹಿಂದೊಂದು ಮುಂದೊಂದು ಮಾತಾಡುವ ಲೀಸ್ಟಿನಲ್ಲಿ ಅವಳ ಹೆಸರಿಲ್ಲ.??
ಶಾರದಕ್ಕ ದಂಪತಿಯ ಮನೆಗೆ ಹೋದರೆ ಕನಿಷ್ಠ ಎರಡು ಗಂಟೆ ಬೇಕು. ಯಾಕೆಂದರೆ ಅವರು ಅವರ ಮಗ ವಿನಾಯಕ ಎಲ್ಲರೂ ನನ್ನನ್ನು ಅತ್ಯಂತ ಗೌರವಾದರಗಳಿಂದ ನಡೆಸಿಕೊಳ್ಳುತ್ತಾರೆ. ವಿನಾಯಕ ಅತ್ಯಂತ ಪ್ರತಿಭಾವಂತ. B.E ಮುಗಿಸಿ ಇದೀಗ ಖಾಸಗಿ ಕಂಪನಿಯ ಉದ್ಯೋಗಿ. ಅಪಾರ ದೈವ ಶೃದ್ಧೆ, ಅತಿಥಿಗಳನ್ನು ಉಪಚರಿಸುವ ರೀತಿ, ಸಮಾಜದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ತಲೆ ಎತ್ತಿ ಬಾಳುವ ಅವರ ಬದುಕಿನ ಶೈಲಿ, ನಿರ್ವಿವಾದ ಜೀವನಕ್ರಮ, ವಿಶಾಲ ಹೃದಯ, ಜಿಪುಣತೆ ತೋರದ ನಡತೆ, ಮನೆಗೆ ಬಂದವರನ್ನು ಎಲ್ಲರೂ ಒಟ್ಟಾಗಿ ಮಾತನಾಡಿಸುವ ಸಹೃದಯತೆ, ವರ್ತಮಾನಕ್ಕೆ ಅಪರೂಪವಾದದ್ದೆ. ಅತ್ಯಂತ ಕೆಳಹಂತದಿಂದ ಜೀವನದಲ್ಲಿ ಗೆದ್ದು ಬಂಗಾರದ ಬದುಕು ಕಟ್ಟಿಕೊಂಡ ಅವರಿಗೆ ಜಯವಾಗಲಿ. ಬಂಗಾರದ ಬೆಲೆ ಏರಿದಂತೆ ಅವರ ಬದುಕಿನ ಬೆಲೆಯೂ ಏರುತ್ತಲೇ ಇರಲಿ. ? ಒಳ್ಳೆಯತನ ಸದಾ ಗೆಲ್ಲುತ್ತದೆ ಎಂಬುದಕ್ಕೆ ಉದಾಹರಣೆ ಈ ಜನ. ಅದಕ್ಕೆ ಮತ್ಯಾವ ಪರೀಕ್ಷೆಯೂ ಬೇಡ.
ಸದ್ಗುರು ಶ್ರೀಧರರ ಆಶೀರ್ವಾದ ದೇವರು ಹೆಗಡೆಯವರು, ಶಾರದಕ್ಕ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ದೇವರಿಗೆ ಮತ್ತು ಶಾರದಕ್ಕನಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
?+91 87621 50554
??????⚫⚪???????⚫⚪?????