ಶಂಕರಾಚಾರ್ಯರು ಹೇಳಿದರು “ಶರೀರವೆಂಬುದು ನೌಕೆ . ಈ ಶರೀರವೆಂಬ ನೌಕೆಯನ್ನು ನೀನು ಖರೀದಿ ಮಾಡಿದೆ. ಪುಣ್ಯದ ಹಣವನ್ನು ಕೊಟ್ಟು ಕೊಂಡುಕೊಂಡೆ. ಈ ಶರೀರ ನಿನಗೆ ಬರಬೇಕಾದರೆ ನಿನ್ನ ಪುಣ್ಯದ ರಾಶಿಯೇ ವ್ಯಯವಾಗಿದೆ. ನೀನು ನೌಕೆಯನ್ನು ಕೊಂಡುಕೊಂಡಿದ್ದು ಆಚೆ ದಡವನ್ನು ಸೇರಲು. ದುಃಖ ಸಾಗರದ….ಭವ ಸಾಗರದ ಆಚೆ ದಡವನ್ನು ನೀನು ಸೇರಬೇಕಾಗಿದೆ. ಆದರೆ ಈಗ ಏನು ಮಾಡುತ್ತಿದ್ದೀಯಾ? ಸಮುದ್ರದ ಮಧ್ಯದಲ್ಲಿ ಆಟ ಆಡುತ್ತಿದ್ದಿ….ಸಮುದ್ರ ದಾಟಬೇಕಾಗಿದೆ ನಾನು ಎನ್ನುವುದು ಮರೆತುಹೋಯಿತು. ಸುಮ್ಮನೆ ಅತ್ತಿಂದಿತ್ತ ಇತ್ತಿಂದತ್ತ ಸುತ್ತುತ್ತಾ ಇದ್ದೀಯಲ್ಲ. ಗೊತ್ತು ಗುರಿ ಇಲ್ಲದೆ ನಿನ್ನ ಬಾಳನೌಕೆ ಸಮುದ್ರದ ಮಧ್ಯದಲ್ಲಿ ಅಲೆಯುತ್ತಿದೆ. ನಿನಗೆ ಎಲ್ಲಿಂದ ಬಂದೆ ಎಲ್ಲಿಗೆ ಹೋಗಬೇಕಾಗಿತ್ತು ಎನ್ನುವುದು ಯಾಕೆ ಮರೆತು ಹೋಯಿತು? ದಾಟಿಬಿಡು…. ಯಾವಾಗ ಬೇಕಾದರೂ ನೌಕೆ ಒಡೆಯಬಹುದು. ಯಾವ ನೀರಿನಡಿಗೆ ಇನ್ನು ಯಾವ ನೀರ್ಗಲ್ಲಿದೆಯೋ ಯಾರಿಗೆ ಗೊತ್ತು. ಆ ನೌಕೆ ಒಡೆಯುವುದರ ಒಳಗಾಗಿ ದಡ ಸೇರು. ಅವಸರ ಮಾಡು. ತಡ ಮಾಡಬೇಡ. ದಡ ಬೇಕು ಅಂದರೆ ತಡ ಮಾಡಬೇಡ ಇಲ್ಲಿ ಬೇಡವಾದದ್ದು ತಡ…. ಬೇಕಾದದ್ದು ಒತ್ತಡ…! ಮನಸ್ಸಿಗೆ ತೀವ್ರತೆ ಬೇಕು ಎಂದು.
ಗುರುಗಳು ಶಿಷ್ಯರಿಗೆ ಪಾಠ ಮಾಡುವಾಗ ಹೇಳಿದರಂತೆ “ಕೃತಜ್ಞತೆಯನ್ನುವುದು ದೊಡ್ಡ ಗುಣ” ಶಿಷ್ಯರು ಗಾಂಪರು. ಒಂದು ಬಾರಿ ಅವರು ನದಿ ದಾಟಿ ಹೋಗುವ ಪ್ರಮೇಯ ಬರುತ್ತದೆ. ಆಗ ಅವರ ಜೊತೆ ಗುರುಗಳಿಲ್ಲ. ದೋಣಿಯಲ್ಲಿ ನದಿ ದಾಟಿದರು. ಅಷ್ಟೊತ್ತಿಗೆ ಗುರುಗಳ ಆ ಮಾತು ನೆನಪಾಯಿತು. “ಉಪಕಾರ ಮಾಡಿದವರನ್ನು ಮರೆಯಬಾರದು ಕೃತಜ್ಞರಾಗಿರಿ” ದೋಣಿ ನದಿ ದಾಟಿಸಿದೆ ನಮ್ಮನ್ನು. ನಾವು ಆ ದೋಣಿಗೆ ಕೃತಜ್ಞರಾಗಿರಬೇಕು. ಇಂತಹ ಉಪಕಾರ ಮಾಡಿದ ದೋಣಿಯನ್ನು ಬಿಟ್ಟು ಹೋಗುವುದುಂಟೇ?. ಹಾಗಾಗಿ ದೋಣಿಯನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ಅಂತ ನಿರ್ಣಯಿಸಿದರು. ಗೌರವಯುತವಾಗಿ ಕರೆದುಕೊಂಡು ಹೋಗಬೇಕು ಎಂದು ಆ ದೋಣಿಯನ್ನು ತಲೆಯ ಮೇಲೆ ಹೊತ್ತು ಸಾಗಿದರು. ಹಾಗೆ ಈ ಶರೀರ ಅದು ದೋಣಿ. ಭವಸಾಗರ ದಾಟಿದ ಮೇಲೆ ಅದು ನಮಗೆ ಬೇಕಾಗಿಲ್ಲ . ಆ ಶಿಷ್ಯರು ಮಾಡಿದಂತೆ ಮಾಡಬೇಕಿಲ್ಲ. ಶರೀರವೆಂಬ ದೋಣಿ ಯಾವ ಉದ್ದೇಶಕ್ಕೆ ಬಂತು ಆ ಉದ್ದೇಶ ಸಾಧಿಸಿದ ಮೇಲೆ ಈ ಶರೀರ ಬೇಕಾಗಿಲ್ಲ. ಅದನ್ನು ಬಿಟ್ಟು ಹೋಗಬಹುದು. ಮತ್ತೆ ಅದರ ಮೇಲೆ ಮೋಹ ತರವಲ್ಲ. ಶರೀರವನ್ನು ಮೋಹಿಸಿದರೆ ನಾವು ಆ ಶಿಷ್ಯರಂತೆ ಗಾಂಪರು ಎನಿಸಿಕೊಳ್ಳುತ್ತೇವೆ. ಆದರೆ ನಮಗೆ ಈ ಶರೀರ ಬಿಡಲು ಕಷ್ಟವಾಗುತ್ತದೆ. ಯಾಕೆಂದರೆ ಬಂದ ಕೆಲಸ ಸಾಧಿಸಿಲ್ಲ. ಕೆಲಸ ಆಗಿಲ್ಲ. ಜಲ ಮಧ್ಯದಲ್ಲಿ ದೋಣಿ ಒಡೆದರೆ ಭಯವಾಗುತ್ತದೆ. ಆದರೆ ದಡ ಸೇರಿದ ಮೇಲೆ ಭಯವಿಲ್ಲ. ಹಾಗಾಗಿ ದಡ ಸೇರಲು ಪ್ರಯತ್ನಿಸಿ . ಯಾಕೆ ಜನ ಮೃತ್ಯುವಿಗೆ ಭಯಪಡುತ್ತಾರೆ ಎಂದರೆ ದೇಹದಿಂದ ಆಗಬೇಕಾದದ್ದು ಆಗದೇ ಇರುವುದರಿಂದ. “ದೇಹ ಎಂದರೆ ಜಡ…. ಪ್ರಾಣವೆಂದರೆ ಕ್ರಿಯೆ” ಎಲ್ಲ ಕ್ರಿಯೆಗಳ ಮೂಲ ಪ್ರಾಣ. ಹಾಗಾಗಿ ಏನು ಮಾಡಬೇಕಿದೆಯೋ ಅದನ್ನು ಪ್ರಾಣವಿರುವಾಗ ಮಾಡಬೇಕು. ನಿಜವಾದ ಅಪ್ಪ ಅಮ್ಮ ನಿಜವಾದ ಅಣ್ಣ ತಮ್ಮ ನಿಜವಾದ ಗುರು ಎಲ್ಲವೂ ಪ್ರಾಣವೇ….!.
ನಚಿಕೇತನಿಗೆ ಅಪ್ಪ ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ ಎಂದನಂತೆ. ಹಾಗೆ ಮೃತ್ಯು ಲೋಕಕ್ಕೆ ಹೋದವನು ನಚಿಕೇತ . ಅಲ್ಲಿ ಹೋಗಿ ಮೃತ್ಯುವಿನೊಂದಿಗೆ ವಾದ ಮಾಡಿ ಮೃತ್ಯುವನ್ನೇ ಗೆದ್ದವನು ಅವನು. ಮೃತ್ಯುಲೋಕಕ್ಕೆ ಹೋಗಿ ಮೂರನೇ ದಿನ ಆ ಯಮ ಬಂದು ಏನು ಊಟ ಮಾಡಿದೆ? ಎಂದು ಕೇಳಿದ. ಮೂರು ದಿನ ಉಪವಾಸವಿದ್ದ ನಚಿಕೇತ ಮೊದಲನೇ ದಿನ ನಿನ್ನ ಪುಣ್ಯವನ್ನು ತಿಂದೆ… ಎರಡನೇ ದಿನ ನಿನ್ನ ಭವಿಷ್ಯವನ್ನು ತಿಂದೆ…. ಮತ್ತೊಂದು ದಿನ ನಿನ್ನ ಸಾಧನಗಳನ್ನು ತಿಂದೆ ಎಂದ. ಅಂದರೆ ಅತಿಥಿ ಉಪವಾಸವಿದ್ದರೆ ಏನು ತಿನ್ನುತ್ತಾನೆ ಎಂದರೆ ಅವನು ನಮ್ಮ ಭಾಗ್ಯವನ್ನು ತಿನ್ನುತ್ತಿರುತ್ತಾನೆ. ನಮ್ಮ ಭವಿಷ್ಯವನ್ನು ತಿನ್ನುತ್ತಿರುತ್ತಾನೆ. ನಮ್ಮ ಸಾಧನ ಸಲಕರಣೆಗಳನ್ನು ತಿನ್ನುತ್ತಿರುತ್ತಾನೆ. ಅದಕ್ಕೆ ಅತಿಥಿಗಳನ್ನು ಉಪವಾಸವಿಡ ಬಾರದು. ಅವರನ್ನು ಆಧರಿಸಿ ಸತ್ಕರಿಸಬೇಕು. ನಚಿಕೇತನಿಗೆ ಮೂರು ವರ ಕೊಟ್ಟ ಯಮ ಏನು ಬೇಕು ಕೇಳು ಎಂದ. ನಿನಗೆ ಅದು ಬೇಕಾ… ಇದು ಬೇಕಾ… ಇನ್ನೊಂದು ಬೇಕಾ ಎಂದು ನಚಿಕೇತನನ್ನು ಭೃಮೆ ಗೊಳಿಸಲು ಯಮ ಪ್ರಯತ್ನಿಸಿದ. ಯಾವುದನ್ನೂ ಒಪ್ಪಲಿಲ್ಲ ನಚಿಕೇತ. ಇದೆಲ್ಲ ಇಂದು ಇದ್ದು ನಾಳೆ ಇಲ್ಲದಂಥವು.. ಇವೆಲ್ಲ ಬೇಡ ಎಂದ. ನನಗೆ ಅದು ಕೊಡು… ಸತ್ತ ಮೇಲೆ ಮನುಷ್ಯ ಏನಾಗುತ್ತಾನೆ ಅದನ್ನು ಹೇಳು… ಆತ್ಮದ ಬಗ್ಗೆ ಹೇಳು ಎಂದ.
ಒಳಗಿರುವ ಏಕೈಕ ಸಂಪತ್ತು ಪ್ರಾಣ . ಅದನ್ನು ಬಳಸಿಕೊಂಡು ಉಜ್ಜೀವನವನ್ನು ಸಾಧನೆ ಮಾಡು. ಸತ್ತ ನಂತರವೂ ಬದುಕಿರಬೇಕು ಅಂತಹ ಸಾಧನೆ ಮಾಡು. ಸಾವು ಸಾವಲ್ಲ ಅಮರತ್ವ ಬರಬೇಕು ಅಂತಹ ಸಾಧನೆ ಮಾಡು ಎಂದರು ಶಂಕರಾಚಾರ್ಯರು. ಧರ್ಮದಿಂದಲೇ ಅರ್ಥ… ಧರ್ಮದಿಂದಲೇ ಕಾಮ… ಧರ್ಮದಿಂದಲೇ ಮೋಕ್ಷ. ಹಾಗಾಗಿ ಧರ್ಮದಿಂದ ಬದುಕಬೇಕು . ಈ ಶರೀರವನ್ನು ಧರ್ಮ ಕಾರ್ಯಕ್ಕೆ ಬಳಸಿಕೊಳ್ಳಬೇಕು.
ಶರೀರವೆಂದರೆ ಆದಿ ವೃಕ್ಷ. ಇದಕ್ಕೆ ಒಂದೇ ಬೀಜ ಅದು ಮಾಯೆ. ಎರಡು ಹಣ್ಣು ಸುಖ ದುಃಖವೆಂಬ ಎರಡು ಹಣ್ಣು. ಅದಕ್ಕೆ ಮೂರು ಮೂಲಗಳು ವಾತ, ಪಿತ್ತ, ಕಫ ಎಂಬ ಮೂರು ಮೂಲಗಳು. ನಾಲ್ಕು ರಸಗಳು ಧರ್ಮ,ಅರ್ಥ,ಕಾಮ,ಮೋಕ್ಷಗಳೆಂಬ ನಾಲ್ಲು ರಸಗಳು. ಐದು ಬಿಳಲುಗಳು ಪಂಚ ಜ್ಞಾನೇಂದ್ರಿಯಗಳು. ಆರು ಸ್ವರೂಪ ಅದಕ್ಕೆ ಜನ್ಮ ಅಸ್ತಿತ್ವ ವೃದ್ಧಿ ವಿಪರಿಣಾಮ ಮತ್ತು ಅಪಕ್ಷಯ, ವಿನಾಶ. ಆರು ಭಾವಗಳು ಶೋಕ, ಮೋಹ ಮೃತ್ಯು, ಹಸಿವು ,ಮುಪ್ಪು ಬಾಯಾರಿಕೆ. ಏಳು ತೊಗಟೆಗಳು ಆ ವೃಕ್ಷಕ್ಕೆ ಅಂದರೆ ಏಳು ಚರ್ಮದ ಪದರುಗಳು. ಎಂಟು ಶಾಖೆಗಳು ಅಂದರೆ ಪಂಚಭೂತಗಳು ಮತ್ತು ಅಹಂಕಾರ, ಮನಸ್ಸು, ಬುದ್ಧಿ ಸೇರಿ ಎಂಟು. ಒಂಬತ್ತು ಕಣ್ಣು ಅಂದರೆ ನವ ರಂಧ್ರಗಳು. ಹತ್ತು ಎಲೆಗಳು ಅಂದರೆ ಹತ್ತು ವಾಯುಗಳು. ಎರಡು ಪಕ್ಷಿ…. ವೃಕ್ಷದಲ್ಲಿ ಎರಡು ಪಕ್ಷಿಗಳಿದ್ದಾವೆ… ಜೀವ ಪಕ್ಷಿಯೊಂದು… ದೇವ ಪಕ್ಷಿಯೊಂದು. ಜೀವಾತ್ಮ ಪರಮಾತ್ಮನೆಂಬ ಎರಡು ಪಕ್ಷಿಗಳು. ಇಷ್ಟು ಇರತಕ್ಕಂಥ ಶರೀರ ಇದು ಹೊತ್ತಿ ಉರಿದು ಹೋಗುವ ಮುನ್ನ ಕಾರ್ಯ ಸಾಧನೆ ಮಾಡಬೇಕು. ಬಾಳ ನೌಕೆಯನ್ನು ದಡ ಸೇರಿಸಬೇಕು.
✍️ ಡಾ.ರವೀಂದ್ರ ಭಟ್ಟ ಸೂರಿ.
9448028443