ನಾವು ಜಾತ್ರೆಗೆ ಹೋಗುತ್ತೇವೆ. ಅಲ್ಲಿ ನಮಗನ್ನಿಸುವುದು… ಏನು ಅದ್ಭುತ ಜಾತ್ರೆ… ಜನವೋ ಜನ. ಎಷ್ಟು ಜನರನ್ನು ನೋಡುತ್ತೇವೆ. ಎಷ್ಟೋ ಊರಿನ ಜನರನ್ನು ನೋಡುತ್ತೇವೆ. ಮತ್ತೆ ಸಾಲು ಸಾಲು ಅಂಗಡಿಗಳನ್ನು ನೋಡುತ್ತೇವೆ. ಅಲ್ಲಿರುವ ತೊಟ್ಟಿಲಿನಂತಹ ಮೋಜಿ ನಾಟವನ್ನು ನೋಡುತ್ತೇವೆ. ಸಾಕಷ್ಟು ವಸ್ತುವನ್ನು ಕೊಳ್ಳುತ್ತೇವೆ. ಸಿಹಿ ತಿಂಡಿಗಳನ್ನು ತೆಗೆದುಕೊಳ್ಳುತ್ತೇವೆ. ಕೊನೆಗೆ ಯಾರಾದರೂ ದೇವರ ದರ್ಶನವಾಯಿತಾ? ಎಂದು ಕೇಳಿದರೆ…..ಓಹೋ…. ಅದೊಂದು ಮರೆತು ಹೋಯಿತು ಎನ್ನುತ್ತೇವೆ. ಹಾಗಾದರೆ ಜಾತ್ರೆಗೆ ಹೋಗಿ ಏನು ಮಾಡಿದಂತಾಯ್ತು? ಜಾತ್ರೆ ಶಬ್ದಕ್ಕೆ ಅರ್ಥವೇನು? ಸಂಸ್ಕೃತದ ಯಾತ್ರೆ ಕನ್ನಡದಲ್ಲಿ ಜಾತ್ರೆಯಾಗಿದೆ. ಜಾತ್ರೆ ಎಂದರೆ ಅದೊಂದು ಯಾತ್ರೆ…. ಪ್ರಯಾಣ. ಯಾರದ್ದು ? ಎಂದರೆ ದೇವರದ್ದು….! ಇಡೀ ವರ್ಷ ಗರ್ಭಗುಡಿಯ ಒಳಗಿರ ತಕ್ಕಂತೆ ಭಗವಂತ ವರ್ಷಕ್ಕೊಂದು ದಿವಸ ಭಕ್ತರ ಮೇಲೆ ಕರುಣೆ ತೋರಿ ತಾನೇ ಹೊರಗೆ ಬರುತ್ತಾನೆ. ಅವನ ಈ ಪ್ರಯಾಣಕ್ಕೆ ಜಾತ್ರೆ… ಯಾತ್ರೆ ಎಂದು ಹೆಸರು. ಅಂದು ಭಗವಂತ ಗರ್ಭಗುಡಿಯಿಂದ ಹೊರಬಂದು ಎತ್ತರದ ರಥದ ಮೇಲೆ ಕುಳಿತು ತನ್ನೆಲ್ಲ ಭಕ್ತರಿಗೆ ದರ್ಶನ ಕೊಡುತ್ತಾನೆ. ಅಂತಹ ಸಂದರ್ಭದಲ್ಲಿ ನಾವು ಮತ್ತೇನೋ ಮಾಡುತ್ತಿದ್ದರೆ… ಮತ್ತೇನೋ ನೋಡುತ್ತಿದ್ದರೆ… ಏನು ಪ್ರಯೋಜನ?

ಶಂಕರಾಚಾರ್ಯರು ಹೇಳಿದ್ದು ಇದನ್ನೇ ….ಬಾಲ್ಯ ಕ್ರೀಡೆಯಲ್ಲಿ ಹೋಯ್ತು… ಯವ್ವನ ಭೋಗ ಲೋಲುಪತೆಯಲ್ಲಿ ಹೋಯ್ತು… ವಿಷಯ ಸುಖದಲ್ಲಿ ಹೋಯ್ತು… ಇನ್ನು ಮುಪ್ಪು …ಮುಪ್ಪು ಬದುಕಿನಲ್ಲಿ ಮಾಡಿದ್ದನ್ನೆಲ್ಲ ನೆನೆಸಿಕೊಂಡು ಚಿಂತೆ ಮಾಡುವುದರಲ್ಲಿ ಹೋಯ್ತು…. ಕೊನೆಗೆ ಮೃತ್ಯು ಬಂದಾಗ ಕೈಯಲ್ಲಿ ಸೊನ್ನೆ… ಏನಿಲ್ಲ ಎಂದು. ಅದನ್ನೇ ಹೇಳಿದ್ದು ಬದುಕೊಂದು ಜಾತ್ರೆಯೆಂದು. ಈ ಶರೀರವೇ ರಥ… ಬದುಕು ರಥೋತ್ಸವ… ಇಲ್ಲಿ ಭಗವಂತ ನಮ್ಮ ಹೃದಯದಲ್ಲಿ ಬರುತ್ತಾನೆ. ನಮ್ಮ ಹೃದಯ ಪೀಠದಲ್ಲಿ ಕುಳಿತು ನಮಗೆ ದರ್ಶನ ಕೊಡಲು ಬಂದಿದ್ದಾನೆ. ಆದರೆ ನಾವು ಅವನ ದರ್ಶನ ಮಾಡದೆ ನಮ್ಮದೇ ಆದ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ. ಜಾತ್ರೆ ಪೇಟೆಗೆ ಯೋಗಿಯೊಬ್ಬ ಬಂದರೆ ಪಶ್ಚಾತ್ತಾಪ ಪಡುತ್ತಾ ನಂತೆ . ಅಯ್ಯೋ…. ಇಲ್ಲಿ ಇಷ್ಟೊಂದು ಜನರಲ್ಲಿ ಯಾರೂ ಭಗವಂತನ ದರ್ಶನ ಬಯಸಿ ಬರಲಿಲ್ಲವಲ್ಲ ಎಂದು. ಹಾಗೆಯೇ ಶಂಕರಾಚಾರ್ಯರು ಜಗತ್ತೆಂಬ ಜಾತ್ರೆ ಪೇಟೆ ಯನ್ನೊಮ್ಮೆ ನೋಡಿ ದುಃಖದಿಂದ ಮೇಲಿನ ಮಾತನ್ನು ಹೇಳಿದರು. ಭಗವಂತನಲ್ಲಿ ಸಕ್ತನಾಗಿ ರುವವರು…. ಆಸಕ್ತರಾಗಿರುವವರು ಈ ಜಗತ್ತಿನಲ್ಲಿ ಒಬ್ಬನೂ ಕಾಣಿಸುತ್ತಿಲ್ಲವಲ್ಲ. ಎಲ್ಲರೂ ವಿಷಯ ಸುಖಾಸಕ್ತರೆ ಇದ್ದಾರೆ ಎಂದು. ಜೀವನದಲ್ಲಿ ಎಲ್ಲರಿಗೂ ಯಾವಾಗಲೂ ಬೇಕಾದದ್ದು ಆ ಭಗವಂತನ ನೆನಪು . ಆದರೆ ಅದು ಇಂದು ಯಾರಿಗೂ ಬೇಕಾಗಿಲ್ಲ ಎಂದು. ಇದು ಶಂಕರಾಚಾರ್ಯರು ಇಡೀ ಸಮಾಜದ ಮೇಲೆ ಬರೆದ ನಿರ್ಣಯ. ಇದು ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿ.

RELATED ARTICLES  ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಕ್ಕಳಿಗೆ ಪರಿಸರ ಅಧ್ಯಯನ ಶಿಬಿರ

ನಮ್ಮೂರು ಹಾಗೂ ಭಗವಂತನ ಊರಿನ ನಡುವೆ ಒಂದು ಕೋಟೆಯಿದೆ. ಅದು ಮಾಯೆ ಎಂಬ ಕೋಟೆ. ಆದರೆ ಆ ಕೋಟೆ ಇದೆ… ಮಾಯೆ ಇದೆ… ಅಜ್ಞಾನವಿದೆ ಎಂಬುದೇ ಬಹಳ ಜನರಿಗೆ ಗೊತ್ತಿಲ್ಲ. ಅದು ಗೊತ್ತಿಲ್ಲ ಎಂಬುದು ನಮಗೆ ಗೊತ್ತಿಲ್ಲ ..! ಇದು ದೊಡ್ಡ ಸಮಸ್ಯೆ. ಅದು ಗೊತ್ತಾಯಿತು ಎಂದರೆ ಅಧ್ಯಾತ್ಮದ ಪ್ರಯಾಣ ಆರಂಭವಾಗುತ್ತದೆ. ಶ್ರೀಕೃಷ್ಣ ಹೇಳಿದ್ದು ಅದನ್ನೇ….. “ಲಕ್ಷಾಂತರ ಮನುಷ್ಯರಲ್ಲಿ ಯಾರೋ ಒಬ್ಬ ಮಾತ್ರ ಸಿದ್ಧಿಗಾಗಿ ಪ್ರಯತ್ನಿಸುತ್ತಿರುತ್ತಾನೆ.. ಮತ್ತೆಲ್ಲ ಪ್ರಸಿದ್ಧಿಗಾಗಿ ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಸಿದ್ಧಿಗಾಗಿ ಪ್ರಯತ್ನಿಸುವವರಲ್ಲಿಯೂ ಗುರಿ ತಲುಪುವವರು ಮತ್ತು ವಿರಳ” ಎಂದು.

RELATED ARTICLES  ಪ್ರಾಣಾಯಾಮಗಳ ಬಗ್ಗೆ ಶ್ರೀಧರರು ಹೇಳಿದ ಮಾತುಗಳಿವು

ನಮ್ಮ ಬಾಲ್ಯ ಯೌವನ ವೃದ್ಧಾಪ್ಯ ಎಲ್ಲವೂ ಕೈ ತಪ್ಪಿದ ಅವಕಾಶಗಳು. ಅವನ್ನೆಲ್ಲ ನಾವು ಕಳೆದುಕೊಂಡಿದ್ದೇವೆ. ಬಾಲ್ಯದಲ್ಲಿ ದೇವರು ಯಾವ ಯಾವ ರೂಪದಲ್ಲಿ ನಮ್ಮೆಡೆಗೆ ಬಂದಿರುತ್ತಾನೋ?…. ಯೌವ್ವನದಲ್ಲಿ ಇನ್ಯಾವ ರೂಪದಲ್ಲಿ ಬಂದಿರುತ್ತಾನೋ?… ವೃದ್ಧಾಪ್ಯದಲ್ಲಿ ಮತ್ಯಾವ ರೂಪದಲ್ಲಿ ಬಂದಿರುತ್ತಾನೋ? ಆದರೆ ಇದ್ಯಾವುದಕ್ಕೂ ನಾವು ಸ್ಪಂದಿಸದಿದ್ದರೆ ಕೊನೆಗೆ ಯಮಧರ್ಮನ ರೂಪದಲ್ಲಿ ನೇಣು ಹಿಡಿದು ಬರುತ್ತಾನೆ….! ಹಾಗಾಗಿ ಜೀವನದಲ್ಲಿ ಸಿಕ್ಕಿದ ಈ ಅವಕಾಶಗಳನ್ನು ಕಳೆದುಕೊಳ್ಳಬಾರದು. ಆ ಕಡೆಗೆ ನಮ್ಮ ಮನಸ್ಸನ್ನು ಕೊಡಬೇಕು… ಇಡಬೇಕು. ಇಲ್ಲದಿದ್ದರೆ ನೀರೆಲ್ಲ ಹರಿದು ಹೋದ ಮೇಲೆ ಕಟ್ಟೆ ಕಟ್ಟಿದಂತಾಗುತ್ತದೆ. ಊರನ್ನು ಕೊಳ್ಳೆ ಹೊಡೆದಾದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗುತ್ತದೆ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಹಾಗಾಗಿ ನಾವು ಬಾಲ್ಯದಲ್ಲಿರಲಿ… ಯೌವನ ದಲ್ಲಿರಲಿ…. ವೃದ್ಧಾಪ್ಯದಲ್ಲಿರಲಿ ಭಗವಂತನ ನೆನಪು ಸದಾ ನಮಗಿರಲಿ.

✍️ ಡಾ.ರವೀಂದ್ರ ಭಟ್ಟ ಸೂರಿ.
9448028443.