ಮೊದಲು ನಮ್ಮ ಇಂದ್ರಿಯಗಳನ್ನು ಸ್ವಾಧೀನ ದಲ್ಲಿರಿಸಿಕೊಳ್ಳಬೇಕು ಇದು ಶಂಕರ ಸೂಕ್ತಿ . ನಮ್ಮ ದೇಹವೇ ದೇಶ ಅಂತಾದರೆ, ಆ ದೇಶಕ್ಕೆ ಆತ್ಮವೇ ರಾಜ….ಮಂತ್ರಿ ಮನಸ್ಸು …..ಇಂದ್ರಿಯಗಳು ಹಾಗೂ ಪ್ರಾಣ ಶಕ್ತಿಗಳೇ ಪ್ರಜೆಗಳು. ಅವುಗಳೆಲ್ಲವೂ ರಾಜನ ಸ್ವಾಧೀನದಲ್ಲಿ ಇರಬೇಕು. ಆ ರಾಜ್ಯದಲ್ಲಿ ರಾಜನ ಶಾಸನ ನಡೆಯಬೇಕು. ಅಂದರೆ ಆತ್ಮದ ಶಾಸನ ದೇಹದ ರಾಜ್ಯದಲ್ಲಿ ನಡೆಯಬೇಕು. ಹಾಗೆ ನಡೆದರೆ ಆ ದೇಹ ಒಂದು ರಾಮರಾಜ್ಯ….! ಹಾಗೆ ನಡೆಯದೇ ಇದ್ದರೆ ಅದು ಲಂಕೆ…! ನಮ್ಮ ಇಂದ್ರಿಯಗಳು ನಾವು ಹೇಳಿದ್ದನ್ನು ಕೇಳದೇ ಇದ್ದರೆ ಅವು ನಮ್ಮನ್ನು ಪ್ರಪಾತಕ್ಕೆ ಕೊಂಡೊಯ್ಯುತ್ತವೆ. ಇಂದ್ರಿಯಗಳನ್ನು ಬಹಳ ಕಡೆ ಕುದುರೆಗಳಿಗೆ ಹೋಲಿಸಿದ್ದಾರೆ. ದೇಹವು ರಥ… ಮನಸ್ಸು ಸಾರಥಿ…. ನಾವು ಯಜಮಾನರು ಅಂತ. ಈ ನಮ್ಮ ಶರೀರವೆಂಬ ಕಾರಿನ ಯಜಮಾನ ನಾವಾದರೆ ಮನಸ್ಸು ಕಾರಿನ ಡ್ರೈವರ್. ಆ ಡ್ರೈವರ್ ನಾವು ಹೇಳಿದ್ದನ್ನು ಕೇಳದೇ ಇದ್ದರೆ, ಅವನಿಗೆ ಬೇಕಾದಲ್ಲಿ ಅವನು ಕಾರು ತೆಗೆದುಕೊಂಡು ಹೋಗುವುದಾದರೆ ನಮ್ಮ ಅವಸ್ಥೆ ಏನಾಗಬಹುದು? ಹಾಗೆಯೇ ಇಂದ್ರಿಯಗಳೆಂಬ ಕುದುರೆಗಳು ಮನಸ್ಸೆಂಬ ಸಾರಥಿಯ ಮಾತು ಕೇಳದೆ ಎಲ್ಲೆಂದರಲ್ಲಿ ಓಡಿದರೆ ಮತ್ಯಾರಿಗೆ ಉಳಿವಿದೆ ? ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡೇ ಶಂಕರಾಚಾರ್ಯರು ಹೇಳಿದ್ದು ” ಮೊದಲು ಇಂದ್ರಿಯಗಳನ್ನು ನಮ್ಮ ಸ್ವಾಧೀನದಲ್ಲಿರಿಸಿ ಕೊಳ್ಳಬೇಕು” ಎಂದು. ನನ್ನ ಹೆಂಡತಿ ನಾನು ಹೇಳಿದ್ದನ್ನು ಕೇಳುತ್ತಾಳೆ ನನ್ನ ಮಕ್ಕಳು ನಾನು ಹೇಳಿದ್ದನ್ನು ಕೇಳುತ್ಕೇಳುತ್ತಾರೆ. ನೌಕರರು ನಾನು ಹೇಳಿದ್ದನ್ನು ಕೇಳುತ್ತಾರೆ. ಹೀಗೆ ಕೇಳಿಸಬೇಕು ಎಂದು ಪ್ರಯತ್ನ ಮಾಡುವ ಮೊದಲು ನಮ್ಮ ಇಂದ್ರಿಯಗಳನ್ನು ನಾವು ಸ್ವಾಧೀನದಲ್ಲಿರಿಸಿಕೊಳ್ಳಬೇಕು. ಹಾಗೆ ಇರಿಸಿಕೊಂಡರೆ ಜೀವನ ಸೊಗಸು…. ಇಲ್ಲದಿದ್ದರೆ ಜೀವನ ಆಪತ್ತಿನ ಆಗರವಾಗಿರುತ್ತದೆ.

RELATED ARTICLES  ಕಾಲನ ಅಣತಿಯ ಬಗ್ಗೆ ಶ್ರೀಧರರ ನುಡಿಗಳು ಇವು.

ಶಂಕರರ ಮತ್ತೊಂದು ಸೂಕ್ತಿ ಬುದ್ಧಿ ಇಲ್ಲದವನಿಗೆ ಐಶ್ವರ್ಯವು ಅನರ್ಥವನ್ನೇ ಉಂಟುಮಾಡುತ್ತದೆ ಬುದ್ಧಿ ಎಂಬುದು ಬಹಳ ದೊಡ್ಡ ಸಂಪತ್ತು. ಆ ಸಂಪತ್ತಿದ್ದರೆ ಮತ್ತೆಲ್ಲ ಸಂಪತ್ತು ಉಪಯೋಗಕ್ಕೆ ಬರುತ್ತದೆ. ಆ ಸಂಪತ್ತಿಲ್ಲದಿದ್ದರೆ ಮತ್ತೆ ಯಾವ ಸಂಪತ್ತು ಇಲ್ಲ. ರಾವಣನಿಗೆ ಪ್ರಭುತ್ವ ಇತ್ತು. ಐಶ್ವರ್ಯವೆಂದರೆ ಪ್ರಭುತ್ವ. ಆ ಪ್ರಭುತ್ವ ಅವಿವೇಕಿ ಕೈಯಲ್ಲಿದ್ದರೆ ಅವನೂ ಹಾಳಾಗಿ ನಾಡನ್ನೂ ಹಾಳು ಮಾಡುತ್ತಾನೆ ಎಂಬುದಕ್ಕೆ ಉದಾಹರಣೆ ರಾವಣ. ಮತ್ತೊಂದು ಉದಾಹರಣೆ ದುರ್ಯೋಧನ. ಇಂಥವರನ್ನು ನೋಡಿಯೇ ಶಂಕರಾಚಾರ್ಯರು ಹೇಳಿದ್ದು ….”ಬುದ್ಧಿ ಇಲ್ಲದವನಿಗೆ ಐಶ್ವರ್ಯವು ಅನರ್ಥವನ್ನೇ ಉಂಟು ಮಾಡುತ್ತದೆ” ಎಂದು.

ಸಾವಿರ ತಂದೆ ತಾಯಿಗಳನ್ನು ಸೇರಿಸಿದರೆ ಎಷ್ಟು ವಾತ್ಸಲ್ಯವೋ ಅದಕ್ಕಿಂತ ಹೆಚ್ಚು ವಾತ್ಸಲ್ಯವಿರುವುದು ಶಾಸ್ತ್ರಗಳಲ್ಲಿ. ಇದು ಶಂಕರಾಚಾರ್ಯರ ಮತ್ತೊಂದು ಸೂಕ್ತಿ . ಶಾಸ್ತ್ರ ನಮ್ಮ ಕೆಡುಕನ್ನು ಬಯಸಿ ಬಂದಿದ್ದಲ್ಲ. ಅದು ನಮ್ಮ ಶ್ರೇಯಸ್ಸನ್ನು ಬಯಸಿ ಬಂದದ್ದು. ಶಾಸ್ತ್ರದ ಒಂದೊಂದು ಪಂಕ್ತಿಯೂ ತುಂಬಾ ವಾತ್ಸಲ್ಯದಿಂದ ಬಂದಂತದ್ದು. ಅದು ನಮಗೆ “ಹೀಗೆ ಮಾಡು” ಎಂದು ವಿಧಿಸುತ್ತದೆ. ಮತ್ತು ತನ್ಮೂಲಕ ನಮ್ಮನ್ನು ಕಾಪಾಡುತ್ತದೆ. ಟ್ರಾಫಿಕ್ ರೂಲ್ಸ್ ಇದೆ. ಪ್ರಜೆಗಳನ್ನು ಪೀಡಿಸಬೇಕೆಂದು ಆ ಕಾನೂನು ಬಂದಿದೆಯಾ? ಆ ನಿಯಮಗಳು ರಸ್ತೆಯಲ್ಲಿ ವಾಹನ ಚಲಾಯಿಸುವವರಿಗೆ ಉಪದ್ರವವಾಗಬೇಕೆಂದು ಬಂದಿದೆಯಾ? ಒಂದೊಂದು ಬಾರಿ ನಮಗೆ ಹಾಗನ್ನಿಸುವುದುಂಟು. ಆದರೆ ಅದು ನಮ್ಮ ಒಳಿತಿಗೆ. ಸಂಚಾರ ನಿಯಮಗಳು ಇಲ್ಲದಿದ್ದರೆ ಅದೆಷ್ಟು ಅಪಘಾತವಾಗಬಹುದು? ಅದು ಆಗಬಾರದೆಂದು ಆ ನಿಯಮಗಳು. ಹಾಗೆ ನಮ್ಮ ಬದುಕಿನಲ್ಲಿ ಅವಘಡಗಳು ಆಗಬಾರದೆಂದೇ ಶಾಸ್ತ್ರಗಳು ಕೆಲವು ನಿಯಮಗಳನ್ನು ವಿಧಿಸಿದ್ದವು. ‘ ಹೀಗಿರು’ ‘ ಹೀಗಿರ ಬೇಡ’ ಎಂಬ ನಿಯಮಗಳು. ಒಂದು ನಮಗೆ ಸುಖವನ್ನು ಕೊಡಲಿಕ್ಕಿವೆ ಅಥವಾ ನಮಗೆ ದುಃಖ ಬರದೆ ಇರುವಂತೆ ಮಾಡಲಿಕ್ಕಾಗಿ ಇವೆ. ಯಾವುದನ್ನು ಮಾಡಬೇಕಾಗಿದೆಯೋ ಅದನ್ನು ಮಾಡು ಎಂದಿತು ಶಾಸ್ತ್ರ ಮಾಡಬಾರದ್ದನ್ನು ಮಾಡಬೇಡ ಎಂದಿತು. ಮಾಡು ಎಂದಿದ್ದಲ್ಲಿ ಏನೋ ಸುಖವಿದೆ… ಮಾಡಬೇಡ ಎಂದಿದ್ದಲ್ಲಿ ಏನೋ ಕಷ್ಟವಿದೆ…. ಏನೋ ಕ್ಲೇಶವಿದೆ. ಇದನ್ನು ಶಾಸ್ತ್ರ ಹೇಳಿದ್ದು ನಮ್ಮ ಮೇಲಿನ ವಾತ್ಸಲ್ಯದಿಂದ. ಅಂತಹ ಶಾಸ್ತ್ರಗಳು ಸರ್ವಮಾನ್ಯ…. ಸರ್ವ ದೇಶ ಸರ್ವ ವ್ಯಕ್ತಿಗಳಿಗೆ ಮಾನ್ಯ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

✍️ ಡಾ.ರವೀಂದ್ರ ಭಟ್ಟ ಸೂರಿ.
9448028443