ಈ ಪ್ರಪಂಚದಲ್ಲಿ ನೆಮ್ಮದಿಯಿದೆ… ಸಂಸಾರದಲ್ಲಿ ನೆಮ್ಮದಿಯಿದೆ…. ವೈಭವದಲ್ಲಿ ಕೀರ್ತಿಯಲ್ಲಿ ನೆಮ್ಮದಿಯಿದೆ… ಎನ್ನುವುದೆಲ್ಲ ಬರೀ ಭ್ರಮೆ ಎನ್ನುವುದು ನಮಗೆ ಗೊತ್ತಾಗುವಂತೆ ಮಾಡಲು ಆ ಭಗವಂತ ಆಗಾಗ ಸಂಕಷ್ಟದ ಪರಿಸ್ಥಿತಿಯನ್ನು ನಮಗೆ ಎದುರಾಗುವಂತೆ ಮಾಡುತ್ತಾನೆ. ಅವನ ಸ್ಮರಣೆಯಲ್ಲಿ ಮಾತ್ರ ನೆಮ್ಮದಿ ಇದೆ ಎಂಬ ಅರಿವು ನಮಗೆ ಮೂಡುವಂತೆ ಮಾಡುತ್ತಾನೆ. ನಾವು ಪಕ್ಷಪಾತ ಮಾಡು ಎಂತಾ ದೇವನಲ್ಲಿ ಹೇಳಲು ಸಾಧ್ಯವಿಲ್ಲ. ಕಷ್ಟ ಸುಖ ಎರಡರಲ್ಲಿ ಕೇವಲ ಸುಖ ಮಾತ್ರ ಕೊಡು ಎನ್ನುವುದು ಸಾಧ್ಯವಿಲ್ಲ. ಅಥವಾ ನನಗೆ ಮಾತ್ರ ಸುಖ ಕೊಡು ಎನ್ನುವುದು ಸಾಧುವಲ್ಲ. ಯಾಕೆಂದರೆ ಇದು ಭೂಮಿ. ಸ್ವರ್ಗವಾದರೆ ಅಲ್ಲಿ ಕೇವಲ ಸುಖ…. ನರಕವಾದರೆ ಕೇವಲ ದುಃಖ ಸಹಜ. ಸುಖ ದುಃಖಗಳೆರಡನ್ನೂ ಹೊಂದಿರುವಂಥದ್ದು ಭೂಮಿ. ಈ ಭೂಲೋಕ. ಇದು ಭೂಮಿ ಅಂತ ಆಗಬೇಕಾದರೆ ಇಲ್ಲಿ ಎಳ್ಗೆ ಹೇಗೋ ಹಾಗೆ ಪತನ. ಸುಖ ಹೇಗೋ ಹಾಗೆ ದುಃಖ. ಸಮೃದ್ಧಿ ಹೇಗೋ ಹಾಗೆ ಸಂಕಷ್ಟ. ಅದು ಬರಲೇಬೇಕು… ಬರುತ್ತಲೇ ಇರುತ್ತದೆ. ಹಾಗಾಗಿ ಕಷ್ಟಗಳನ್ನು ಕೊಡಬೇಡ ಎಂದು ನಾವು ಕೇಳಬಾರದು. ನಿನ್ನ ನಿಯಮವನ್ನು ಬಿಡು ಎಂದು ನಾವು ದೇವನಿಗೆ ಹೇಳಬಾರದು. ನಿನ್ನ ನಿಯಮದ ಪ್ರಕಾರ ಏನೆಲ್ಲ ಕೊಡುತ್ತಿಯಾ ಅದನ್ನೆಲ್ಲ ಕೊಡು ಎಂದು ಹೇಳಬೇಕು. ಆದರೆ ಅದರ ಜೊತೆಗೆ ಆ ಕಷ್ಟಗಳನ್ನು ಸಹಿಸುವ ಸಹನೆಯನ್ನು ಕೊಡು ಎಂದು ಬೇಡಬೇಕು. ದೇವರು ಮೆಚ್ಚುವುದು ಈ ಪ್ರಾರ್ಥನೆಯನ್ನು. ಕಷ್ಟ ಕೊಡಬೇಡ ಎಂದರೆ ಆತ “ನೀನು ನನ್ನ ಕೈ ಕಟ್ಟುತ್ತೀಯಾ?” ಎನ್ನುತ್ತಾನೆ. ಅದಕ್ಕೆ ಕೊಡು ಆದರೆ ಅದರ ಜೊತೆ ಸಹಿಸುವ ಶಕ್ತಿಯನ್ನು ಕೊಡು ಎಂದು ಕೇಳಬೇಕು.
ಕಗ್ಗದ ಕವಿ ಹೇಳಿದ್ದು ಹೀಗೆ…..
ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ
ವಿಹಿತವಾಗಿರ್ಪುದು ಅದು ಸೃಷ್ಟಿ ವಿಧಿಯುಂ
ಸಯಿಸಿದಲ್ಲದೆ ಮುಗಿಯದು ಆವ ದೆಶೆ ಬಂದೊಡಂ ಎಂದು. ಸಹನೆ ವಜ್ರದ ಕವಚ ಆದ್ದರಿಂದ ಸಹನೆ ಕೊಡು. ಕಷ್ಟ ಸಹಿಸುವ ಶಕ್ತಿ ಕೊಡು ಎಂದು ಬೇಡಿಕೊಳ್ಳಬೇಕು. ಕಷ್ಟವನ್ನು ಒಪ್ಪದವರಿಗೆ ಮಾತ್ರ ಕಷ್ಟದ ಭಯ ಇರುವಂಥದ್ದು. ಕಷ್ಟವಾದರೇನು? ಇಷ್ಟವಾದರೇನು? ಎನ್ನುವವರಿಗೆ ಕಷ್ಟವೇ ಇಲ್ಲ ಪ್ರಪಂಚದಲ್ಲಿ. ಆ ಮನಸ್ಥಿತಿಗೆ ಬಂದರೆ ಎಂತಹ ಪರಿಸ್ಥಿತಿಯನ್ನಾದರೂ ಸಹಿಸಿಕೊಳ್ಳುವ ಶಕ್ತಿ ನಮಗೆ ಬರುತ್ತದೆ
ಶ್ರೀರಾಮನಿಗೆ ಬಂದಷ್ಟು ಕಷ್ಟ ಯಾರಿಗೂ ಬರಲು ಸಾಧ್ಯವಿಲ್ಲ. ಅದೆಲ್ಲವನ್ನೂ ಸಹನೆಯಿಂದಲೇ ಎದುರಿಸಿ ಗೆದ್ದ ರಾಮ. ನಮಗೆ ಬರುವ ಕಷ್ಟಕ್ಕಿಂತ ಇನ್ನೊಬ್ಬರಿಗೆ ಬರುವ ಕಷ್ಟ ಅದು ಹೆಚ್ಚು ನೋವನ್ನು ನಮಗೆ ನೀಡಬೇಕು….. ಶ್ರೀರಾಮನಂತೆ. ರಾವಣ ಬಿಟ್ಟ ಬಾಣಗಳು ತನ್ನ ದೇಹಕ್ಕೆ ನಾಟಿದಾಗಲೂ ನೋವನು ಭವಿಸಲಿಲ್ಲ ರಾಮ. ಅವನಿಗೆ ಕಷ್ಟವೆನಿಸಲಿಲ್ಲ. ಆದರೆ ರಾಮ ಯಾರ ಹೆಗಲೇರಿ ಯುದ್ಧ ಮಾಡುತ್ತಿದ್ದನೋ ಆ ಹನುಮನಿಗೆ ರಾವಣನ ಬಾಣ ತಾಗಿದಾಗ ರಾಮನಿಗೆ ಸಿಟ್ಟು ಬಂತು. ಆಗ ಅವನ ಮೊಗದ ನಗು ಮಾಸಿತಂತೆ. ನನ್ನವರಿಗೆ ಈ ರೀತಿಯೇ ಅಂತ. ಆ ಕ್ರೋಧದಲ್ಲಿ ರಾವಣನನ್ನು ನುಚ್ಚು ನೂರು ಮಾಡಿದನಂತೆ. ನಾವು ಆ ಹಂತವನ್ನು ತಲುಪುವ ಪ್ರಯತ್ನ ಮಾಡಬೇಕು. ಬೇರೆಯವರ ಕಷ್ಟ ನಮ್ಮ ಕಷ್ಟ… ಬೇರೆಯವರ ನೋವು ನಮ್ಮ ನೋವು…. ಬೇರೆಯವರ ದುಃಖ ನಮ್ಮ ದುಃಖ ಎನ್ನುವ ಭಾವ ನಮ್ಮದಾಗಬೇಕು. ಉತ್ತರರಾಮಚರಿತದಲ್ಲಿ ಸ್ವತಃ ರಾಮನೇ ಹೇಳಿಕೊಂಡಿದ್ದ… “ಕಷ್ಟ ಅನುಭವಿಸಲೇ ನಾನು ಹುಟ್ಟಿದ್ದು” ಅಂತ. ಹಾಗಾಗಿ ಕಷ್ಟಗಳು ಬದುಕಿನಲ್ಲಿ ಸಹಜ. ಅದನ್ನು ಸಹಜವಾಗಿಯೇ ಅನುಭವಿಸಬೇಕು.
ಬದುಕಿನಲ್ಲಿ ನೆಮ್ಮದಿಯನ್ನು ಖರೀದಿಸಲು ಸಾಧ್ಯವಿಲ್ಲ. ಅದು ಬೇಕೆಂದಾಗ ದೊರೆಯುವ ವಸ್ತುವಲ್ಲ. ನೆಮ್ಮದಿಯನ್ನು ನಾವೇ ಕಂಡುಕೊಳ್ಳಬೇಕು. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಂಡುಬರಬಹುದು. ಕೆಲವರಿಗೆ ಸಂಪತ್ತಿನಲ್ಲಿ ನೆಮ್ಮದಿ ಕಂಡರೆ… ಕೆಲವರಿಗೆ ಅಧಿಕಾರದಲ್ಲಿ ನೆಮ್ಮದಿ ಕಾಣಬಹುದು…. ಕೆಲವರಿಗೆ ಇನ್ನೊಬ್ಬರಿಗೆ ಕಾಟ ಕೊಡುವುದರಲ್ಲಿ ನೆಮ್ಮದಿ ಇರಬಹುದು….. ಮತ್ತೆ ಕೆಲವರಿಗೆ ದುಶ್ಚಟಗಳಲ್ಲಿ ನೆಮ್ಮದಿ ಸಿಗಬಹುದು. ಆದರೆ ಈ ಯಾವ ನೆಮ್ಮದಿಯೂ ಶಾಶ್ವತವಾದ ನೆಮ್ಮದಿಯಲ್ಲ. ಅದರಲ್ಲಿ ನೆಮ್ಮದಿಯನ್ನು ಕಾಣುವವರು ಭ್ರಮಾಲೋಕದಲ್ಲಿದ್ದಾರೆಂದೇ ಅರ್ಥ…! ನಿಜವಾದ ನೆಮ್ಮದಿ ಇರುವುದು…. ಶಾಶ್ವತವಾದ ನೆಮ್ಮದಿ ಇರುವುದು ಭಗವಂತನ ಸ್ಮರಣೆಯಲ್ಲಿ. ಅಥವಾ ಭಗವಂತನ ಪ್ರತಿರೂಪವಾದ ದೀನರಿಗೆ ಆರ್ತರಿಗೆ ಸಹಾಯ ಮಾಡುವುದರಲ್ಲಿ. ಭಗವಂತನ ಆಶೀರ್ವಾದ ದೀನರ ಆರ್ತರ ಹಾರೈಕೆ ನಮ್ಮ ಬದುಕಿಗೆ ಶಾಶ್ವತವಾದ ನೆಮ್ಮದಿಯನ್ನು ನೀಡುತ್ತದೆ. ಇದನ್ನು ಅರಿತು ಬದುಕನ್ನು ನೋಡುವ ನಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳೋಣ… ಶಾಶ್ವತ ನೆಮ್ಮದಿಯನ್ನು ನಮ್ಮದಾಗಿಸಿಕೊಳ್ಳೋಣ.
✍️ ಡಾ.ರವೀಂದ್ರ ಭಟ್ಟ ಸೂರಿ.
9448028443