ಪುಸ್ತಕದಿದೊರೆತರಿವುಮಸ್ತಕದಿತಳೆದಮಣಿ
ಚಿತ್ತದೊಳು ಬೆಳೆದರಿವು ತರು ತಳೆದಪುಷ್ಪ
ವಸ್ತುಸಾಕ್ಷಾತ್ಕಾರವಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ-ಮಂಕುತಿಮ್ಮ
ಅರಿವು ಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅರಿವು ಹೇಗಿರಬೇಕು? ಜ್ಞಾನ ನಮಗೆ ಬೇಕೇ ಬೇಡವೇ? ಖಂಡಿತ ಬೇಕು. ಕತ್ತಲೆ ಯಾರಿಗೆ ಇಷ್ಟ. ನಾವು ನೆರಳಿನಲ್ಲಿ ಒಂದು ಗಿಡ ನೆಟ್ಟರೆ ಅದು ಸೂರ್ಯನ ಬೆಳಕಿರುವೆಡೆ ಬಾಗುತ್ತದೆ… ಬೆಳೆಯುತ್ತದೆ. ಸಾಯಂಕಾಲವಾದರೆ ಹುಳುಗಳು ಬೆಂಕಿಯಲ್ಲಿ ಬಿದ್ದು ಸಾಯುತ್ತವೆ. ದೀಪದ ಮೇಲೆ ಹೋಗಿ ಬೀಳುತ್ತವೆ ಅಂದರೆ ದೀಪದ ಆಕರ್ಷಣೆ ಅವಕ್ಕೆ. ಬೆಳಕು ಸೆಳೆದಾಗ ತಮ್ಮ ಪ್ರಾಣ ಹೋಗುವುದನ್ನು ಲೆಕ್ಕಿಸದೆ ಧಾವಿಸುತ್ತವೆ. ಎಲ್ಲ ಜೀವಿಗಳಿಗೂ ಸಹಜವಾಗಿರ ತಕ್ಕಂತ ಸೆಳೆತ ಅದು. ಅರಿವು ಹೇಗಿರಬೇಕು? ಹೇಗಿದ್ದರೆ ಚೆಂದ?. ಎರಡು ಬಗೆಯ ಅರಿವು ಇರುತ್ತದೆ ಒಂದು ಸ್ವಂತದ್ದು ಇನ್ನೊಂದು ಬಾಡಿಗೆ ಯದ್ದು. ಹಾಗೆಂದರೆ?…. ಕೆಲವು ಸ್ವಾನುಭವಗಳು ಇನ್ನು ಕೆಲವು ಅವರಿವರಿಂದ, ಪುಸ್ತಕದ ಓದಿನಿಂದ ಪಡೆದುಕೊಂಡಿರುವ ಅರಿವು. ಪುಸ್ತಕದಿಂದ ಬಂದ ಜ್ಞಾನ… ಅರಿವು ಹೇಗೆಂದರೆ ಅದು ತಲೆಯ ಮೇಲೆ ಮಣಿ ಇದ್ದಂತೆ ಚೆಂದ . ಆದರೆ ಸ್ವಾನುಭವ ಹೇಗಿರುತ್ತದೆಂದರೆ ಗಿಡಗಳಲ್ಲಿ… ಬಳ್ಳಿಯಲ್ಲಿ ಬೆಳೆದ ಹೂವಿನ ಹಾಗೆ ಎರಡೂ ಶೋಭೆಯೇ. ಒಬ್ಬಳು ಗೃಹಿಣಿ ಆಭರಣ ಧರಿಸಿದರೆ ಅದು ಶೋಭೆ ಹಾಗೆ ಒಂದು ಗಿಡದಲ್ಲಿ ಹೂವು ಬಿಟ್ಟಿದ್ದರೂ ಅದು ಶೋಭೆ. ಆದರೆ ಆ ಶೋಭೆಯಲ್ಲಿ ವ್ಯತ್ಯಾಸವಿದೆ ವ್ಯತ್ಯಾಸವೇನೆಂದರೆ ಗಿಡದಲ್ಲಿ ಬಿಟ್ಟ ಹೂ ಏನಿದೆ ಅದು ಅದರದ್ದೇ ಆದರೆ ಆಭರಣಗಳು ಸಹಜವಾಗಿ ಬಂದಿದ್ದಲ್ಲ.
ಪಂಡಿತರ ಪ್ರಪಂಚದಲ್ಲಿ ಶಾಲು ಎಂದರೆ ಬಹಳ ಪ್ರೀತಿ. ಯಾರಿಗೆ ಹೆಚ್ಚು ಸನ್ಮಾನವಾಗಿದೆ.. ಯಾರಿಗೆ ಹೆಚ್ಚಿಗೆ ಶಾಲು ಸಿಕ್ಕಿದೆ ಅವನು ದೊಡ್ಡ ಪಂಡಿತ ಎಂದು. ಆದರೆ ಆ ಶಾಲು ಹೆಗಲಲ್ಲಿದ್ದಷ್ಟು ಹೊತ್ತು ಹೆಮ್ಮೆ ಪಡಬಹುದು. ಅದನ್ನು ತೆಗೆದು ಬೀರುವಿನಲ್ಲಿಟ್ಟರೆ ಹೆಮ್ಮೆ ಬೀರುವನ್ನು ಸೇರಿಕೊಳ್ಳುತ್ತದೆ. ಆ ಹೆಮ್ಮೆ ಶಾಲಿನಲ್ಲಿದೆ ಎಂದರೆ ಆ ಶಾಲನ್ನು ಮಡಚಿಟ್ಟರೆ ಹೆಮ್ಮೆಯನ್ನು ಮಡಚಿಟ್ಟಂತೆ. ಅದು ಪಂಡಿತರ ಸ್ವಂತದ್ದಲ್ಲ. ಅದು ಅವರಿಗೆ ಶೋಭೆ ಕೊಟ್ಟರೂ ಅದು ಅವರ ಸ್ವಂತ ಶೋಭೆಯಲ್ಲ. ಅದು ಇರುವಷ್ಟು ಹೊತ್ತು ಮಾತ್ರ. ಆಭರಣವೆಂದರೆ ಹಾಗೆ… ಅದು ಸ್ವಂತದ್ದಲ್ಲ ಆದರೆ ನಮ್ಮ ಅಂಗಾಂಗವೆಂದರೆ ಹಾಗಲ್ಲ.
ಬದುಕಿನ ಪರಮ ಲಕ್ಷ್ಯ ವಸ್ತು ಸಾಕ್ಷಾತ್ಕಾರ. ವಸ್ತು ಅಂದರೆ ಪರಮಾತ್ಮ. ಪರಮಾತ್ಮನ ಸಾಕ್ಷಾತ್ಕಾರವೇ ಪರಮ ಲಕ್ಷ್ಯ. ಎಲ್ಲರ ಆತ್ಮದ ಗುರಿ ಅದೊಂದೇ. ಅದು ದೊರೆಯುವುದು ಪುಸ್ತಕದ ಜ್ಞಾನದಿಂದ ಅಲ್ಲ. ಶಾಸ್ತ್ರಿ ತನದಿಂದ ಅಲ್ಲ. ಬದಲಾಗಿ ಅನುಭೂತಿಯಿಂದ. ಕಣ್ಣಲ್ಲಿ ನೋಡಿದ್ದು ಸತ್ಯ ಆದರೆ ಕಿವಿಯಲ್ಲಿ ಕೇಳಿದ್ದು ಯಾರೋ ಹೇಳಿದ್ದು ಅದು ಸುಳ್ಳಾಗಿರಬಹುದು. ಒಬ್ಬ ಕುರುಡ . ಆತನಿಗೊಂದು ಮಗುವಿತ್ತು. ಒಂದು ದಿನ ಆ ಮಗು ತೀರಿಕೊಂಡಿತು. ಹಾಲು ಕುಡಿಯುವಾಗ ಅನ್ನನಾಳದ ಬದಲು ಶ್ವಾಸನಾಳದಲ್ಲಿ ಹಾಲು ಹೋಗಿ ಅದು ಮರಣ ಹೊಂದಿತು. ಹೆಂಡತಿ ಗಂಡನಿಗೆ ಹೇಳಿದಳು “ಮಗು ತೀರಿಕೊಂಡಿತು” ಎಂದು. . ಗಂಡ ಕೇಳಿದ… ಏನಾಯ್ತು? ಹೆಂಡತಿ ಹೇಳಿದಳು….ಹಾಲು ಗಂಟಲಲ್ಲಿ ಸಿಕ್ಕಿ ಮಗು ಮರಣ ಹೊಂದಿತು ಎಂದು. ಆ ಕುರುಡ ಗಂಡ ಕೇಳಿದನಂತೆ ಹಾಲು ಹೇಗಿರುತ್ತದೆ?…. ಬೆಳ್ಳಗಿರುತ್ತದೆ. ಬಿಳಿ ಅಂದರೆ ?….ಕೊಕ್ಕರೆಯ ಬಣ್ಣದಲ್ಲಿ. ಕೊಕ್ಕರೆ ಹೇಗಿರುತ್ತದೆ?….. ಕೈ ಮಾಡಿ ತೋರಿಸಿದಳು…. ಅವನು ಆ ಕೈಯನ್ನು ಮುಟ್ಟಿದ. ಆತ ಹೇಳಿದ…. ಅಬ್ಬಾ…. ಇಂತಹ ದೊಡ್ಡದಾದ ಹಾಲನ್ನು ಅಷ್ಟು ಪುಟ್ಟ ಮಗುವಿಗೆ ಕುಡಿಸಿದರೆ ಮತ್ತೇನಾಗಬೇಡ ಎಂದನಂತೆ. ಅದೇನೆಂದರೆ ಇದು ಸ್ವಂತ ಜ್ಞಾನವಲ್ಲ . ಅವನಿಗೆ ಹಾಲು ಎಂದರೆ ಇದು ಅಂತ ಹಾಲನ್ನು ತಂದು ಕುಡಿಸಿದ್ದರೆ ತಪ್ಪು ಕಲ್ಪನೆ ಬರುತ್ತಿರಲಿಲ್ಲ. ಪ್ರಪಂಚದ ಎಲ್ಲ ವಸ್ತುಗಳ ಸಂಗತಿಗಳ ಸಾಕ್ಷಾತ್ಕಾರವೂ ಹೀಗೆ. ಅದನ್ನು ಸರಿಯಾಗಿ ಸರಿಯಾದ ದೃಷ್ಟಿಯಿಂದ ನೋಡಿದಾಗ ಮಾತ್ರ ಸ್ಪಷ್ಟ ಅರಿವು ಮೂಡಲು ಸಾಧ್ಯ .
ಒಬ್ಬ ಪಂಡಿತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಅಲ್ಲೊಂದು ಹೊಲ ಕಾಣಿಸಿತು ಆತನಿಗೆ . ಅಲ್ಲೊಂದು ಗಾಣ ಗಾಣವೆಂದ ಮೇಲೆ ಕೋಣ ವಿರಬೇಕು. ಕೋಣ ಗಾಣವನ್ನು ಎಳೆಯುತ್ತಿದೆ. ಆ ಗಾಣಕ್ಕಿಂತ ಸ್ವಲ್ಪ ದೂರದಲ್ಲಿ ಗಾಣದ ಒಡೆಯನ ಮನೆ. ನಿಂತು ಪಂಡಿತ ಗಮನಿಸಿದ… ಕೋಣವನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಅದರ ಪಾಡಿಗೆ ಅದು ಗಾಣವನ್ನು ಎಳೆಯುತ್ತಿದೆ. ಅಲ್ಲಿ ಮನುಷ್ಯರಿಲ್ಲ. ಯಜಮಾನ ಮನೆಯೊಳಗಿದ್ದ. ಈ ಪಂಡಿತನಿಗೆ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ಆ ರೈತನನ್ನು ಕೂಗಿ ಕರೆಯುತ್ತಾನೆ. ಬಂದ ರೈತನಿಗೆ ಬುದ್ಧಿ ಇದೆಯಾ ನಿನಗೆ? ಎಂದು ಗದರಿಸಿದ. ಕೋಣ ತಿರುಗುವುದನ್ನು ನಿಲ್ಲಿಸಿದರೆ ಏನು ಮಾಡುತ್ತೀಯಾ ?ಎಂದು. ರೈತ ಉತ್ತರಿಸಿದನಂತೆ” ಕೋಣ ತಿರುಗುವುದನ್ನು ನಿಲ್ಲಿಸಿದರೆ ನನಗೆ ತಿಳಿಯುತ್ತದೆ ಅದರ ಕೊರಳಿಗೆ ಗಂಟೆ ಕಟ್ಟಿದ್ದೇನೆ. ಸದ್ದು ನಿಂತಾಗ ಮನೆಯೊಳಗಿಂದಲೇ ‘ಏಯ್’ ಎಂದರೆ ಮತ್ತೆ ತಿರುಗಲು ಪ್ರಾರಂಭಿಸುತ್ತದೆ” ಎಂದು. ಇಷ್ಟಕ್ಕೆ ಬಿಟ್ಟರೆ ತನ್ನ ಪಾಂಡಿತ್ಯಕ್ಕೇನು ಬೆಲೆ? ಎಂದು ಪಂಡಿತ ” ಕೋಣ ನಿಂತು ತಲೆ ಅಲ್ಲಾಡಿಸಿದರೆ ಆಗ ನೀನೇನು ಮಾಡುತ್ತೀ ? ಎಂದು ಕೇಳಿದ. ಆಗ ಪಂಡಿತನನ್ನು ಮೇಲಿನಿಂದ ಕೆಳಗಿನವರೆಗೆ ವೀಕ್ಷಿಸಿದ ರೈತ “ಪಂಡಿತರೇ ನನ್ನ ಕೋಣ ತರ್ಕಶಾಸ್ತ್ರ ಕಲಿತಿಲ್ಲ. ನೀವು ಕೂಡಲೇ ಜಾಗ ಖಾಲಿ ಮಾಡಿ ಯಾಕೆಂದರೆ ನೀವಿದ್ದರೆ ಇಲ್ಲಿ ಅದು ಶಾಸ್ತ್ರ ಕಲಿಯುವ ಸಂಭವವಿದೆ. ಕಲಿತರೆ ನನ್ನ ಹೊಟ್ಟೆಗೆ ಕಲ್ಲು ಬೀಳುತ್ತೆ” ಎಂದ. ಇಂತಹ ಪಂಡಿತರಿಗಿಂತ ಅಂತಹ ಕೋಣವೇ ವಾಸಿ…!
ಸ್ವಾನುಭವ… ಲೋಕಾನುಭವ ಅದು ಉಪಯೋಗಕ್ಕೆ ಬರುವಂತದ್ದು. ಅದಕ್ಕೆ ಶಾಸ್ತ್ರವನ್ನು ಬೆರೆಸಬೇಕು. ಯಾವ ಶಾಸ್ತ್ರ ಅನುಭವದಲ್ಲಿ ಪರ್ಯವಸಾನವಾಗುವುದಿಲ್ಲವೋ ಅದು ಯಾವ ಪ್ರಯೋಜನಕ್ಕೂ ಬಾರದು. ಆಭರಣಗಳು ಎಲ್ಲರಿಗೂ ಶೋಭೆಯನ್ನು ತರುವುದಿಲ್ಲ. ಎಲ್ಲಾ ಆಭರಣಗಳು ನಮಗೆ ಬೇಕಿಲ್ಲ. ಹಾಗೆಯೇ ಶಾಸ್ತ್ರಗಳು. ನಮ್ಮ ಉಪಯೋಗಕ್ಕೆ ಬಾರದ ಶಾಸ್ತ್ರ ನಮಗೆ ಬೇಕಿಲ್ಲ. ಬದುಕುವ ವಿದ್ಯೆ….ಬದುಕಿನಲ್ಲಿ ಈಜುವ ವಿದ್ಯೆ ಗೊತ್ತಿಲ್ಲದಿದ್ದರೆ ಮತ್ತೆಲ್ಲ ವ್ಯರ್ಥ. ಬದುಕೆಂಬ ಮಹಾ ಸಾಗರವನ್ನು ದಾಟಲು ಸ್ವಾನುಭವವೆಂಬ ಈಜು ಗೊತ್ತಿರಬೇಕು. ನಾವು ಕೇವಲ ಪುಸ್ತಕ ಪಂಡಿತರಾಗದೇ….. ಮಸ್ತಕ ಪಂಡಿತರಾಗೋಣ. ಸ್ವಾನುಭವ ಎಂಬ ಅರಿವು ನಮ್ಮ ಮಸ್ತಕ ಸೇರಲಿ.
✍️ ಡಾ.ರವೀಂದ್ರ ಭಟ್ಟ ಸೂರಿ.
9448028443