.ಆತ್ಮೀಯ ಓದುಗ ಬಂಧುಗಳೇ……..

ನನ್ನ ಚಿಂತನ ಮಂಥನ ಅಂಕಣಕ್ಕಿಂದು ಸುವರ್ಣ ಸಂಭ್ರಮ. ಐವತ್ತು ದಿನ ನಿರಂತರವಾಗಿ ಬರೆದೆನೆಂದರೆ ನನ್ನನ್ನು ನಾನೇ ನಂಬಲಾಗುತ್ತಿಲ್ಲ. ಇದು ನನ್ನ ಯಶಸ್ಸು ಅಥವಾ ಸಾಧನೆ ಎನ್ನುವುದಕ್ಕಿಂತ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ನನ್ನಲ್ಲಿ ಅರಿಯುವ ಮತ್ತು ಬರೆಯುವ ಶಕ್ತಿ ತುಂಬಿ ಇದನ್ನು ಕೈಗೂಡಿಸಿದರೆಂದು ಭಾವಿಸಿದ್ದೇನೆ. ಶ್ರೀ ಸಂಸ್ಥಾನದವರ ಒಂದೊಂದು ಮಾತು ಅದು ಮುತ್ತು. ಅದು ನನ್ನ ಚಿತ್ತ ಪಟಲದಲ್ಲಿ ಅಚ್ಚೊತ್ತಿತ್ತು. ಅದಕ್ಕೊಂದು ಅಕ್ಷರ ರೂಪ ಕೊಟ್ಟು ನನ್ನ ಪ್ರೀತಿಯ ಸಂಸ್ಥಾನ ದ ನೀತಿ ಮಾತುಗಳು ಎಲ್ಲರನ್ನೂ ತಲುಪಬೇಕೆಂಬ ಮಹದಾಸೆಯಿಂದ ಮೂಡಿದ್ದು ಈ ಚಿಂತನ ಮಂಥನ ಇಪ್ಪತ್ತೈದು ದಿನ ಬರೆಯಬೇಕೆಂದು ಪ್ರಾರಂಭಿಸಿದ ಅಂಕಣಕ್ಕೆ ಓದುಗರಿಂದ ಬಂದ ಪ್ರತಿಕ್ರಿಯೆ ನನ್ನಲ್ಲಿ ಮತ್ತಷ್ಟು ಉತ್ಸಾಹ ತುಂಬಿ ಐವತ್ತರವರೆಗೆ ಬರೆಯುವಂತೆ ಪ್ರೇರೇಪಿಸಿತು. ನನ್ನ ಅಕ್ಷರಗಳು ನಿಮ್ಮನ್ನು ತಲುಪುವಲ್ಲಿ ವೇದಿಕೆಯಾಗಿದ್ದು ‘ಸತ್ವಾಧಾರ’ . ಇದರ ಮೂಲಕವಾಗಿ ಸಾವಿರಾರು ಓದುಗರನ್ನು ತಲುಪಿದ ತೃಪ್ತಿ ನನಗಿದೆ. ಅದಕ್ಕೆ ಮೂಲ ಕಾರಣವಾದ ನನ್ನ ಗೆಳೆಯ ಗಣೇಶ್ ಜೋಶಿಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ. ಕೆಡುಕಿನಲ್ಲಿ ಒಳಿತನ್ನು ಕಾಣುವ ಉದ್ದೇಶ ಹೊಂದಿರುವ ನಾನು ಕರೋನಾ ಸಂಕಷ್ಟದ ಈ ಸಮಯ ನನ್ನ ಬರೆಯುವ ಕೈಗಳಿಗೆ ಒಂದು ಅವಕಾಶ ಅಂತ ಭಾವಿಸಿ ಐದು ಕೃತಿಗಳನ್ನು ನಿಮ್ಮ ಮಡಿಲಿಗಿ ಡಲು ಬಯಸಿದ್ದೇನೆ. ಅವುಗಳಲ್ಲಿ ಈಗಾಗಲೇ ನಾಲ್ಕು ಕೃತಿಗಳು ಪೂರ್ಣವಾಗಿವೆ. ಐದನೇ ಕೃತಿಯ ವಿಷಯದೊಂದಿಗೆ ಮತ್ತೆ ಶೀಘ್ರದಲ್ಲಿ ನಿಮ್ಮೆದುರು ಬರಲಿದ್ದೇನೆ. ಓದಿ ಹರಸಿ ಎನ್ನುತ್ತಾ ನನ್ನ ಹೃದಯ ಸಿಂಹಾಸನಾಧೀಶ್ವರ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚರಣ ಕಮಲಗಳಲ್ಲಿ ಭಕ್ತಿಪೂರ್ವಕವಾಗಿ ಈ ಅಕ್ಷರ ನಮನವನ್ನು ಸಮರ್ಪಿಸುತ್ತಿದ್ದೇನೆ.
ನಿಮ್ಮವ…..
ರವೀಂದ್ರ ಭಟ್ಟ ಸೂರಿ.
9448028443.


ಚಿಂತನ- ಮಂಥನ

ಆಗಿದ್ದೆಲ್ಲಾ ಒಳಿತೇ ಆಯಿತು

ಸೃಷ್ಟ ಸಂಕಲ್ಪ ಲಿಪಿಯೆಲ್ಲ ನಮ್ಮೆದುರಿಲ್ಲ.
ದೃಷ್ಟಿಗೋಚರವದರೊಳೊಂದುಗೆರೆಮಾತ್ರ
ಅಷ್ಟರಿಂದುದುನಷ್ಟವಿದುಶಿಷ್ಟವೆನ್ನುವುದು
ಕ್ಲಿಷ್ಟದ ಸಮಸ್ಯೆಯಿದು- ಮಂಕುತಿಮ್ಮ

ಕಗ್ಗದ ಕವಿ ಹೇಳಿದಂತೆ ಎಷ್ಟೋ ಬಾರಿ ಒಂದು ಘಟನೆಯನ್ನು ಕೆಟ್ಟದ್ದೆಂದು ತೀರ್ಮಾನ ಮಾಡುತ್ತೇವೆ. ವಾಸ್ತವವಾಗಿ ಅದು ಒಳಿತೇ ಆಗಿರುತ್ತದೆ. ಒಳಿತನ್ನು ಕೆಡುಕು ಎಂದು ತೀರ್ಮಾನ ಮಾಡುತ್ತೇವೆ. ಕೆಡುಕನ್ನು ಒಳಿತು ಎಂದು ತೀರ್ಮಾನ ಮಾಡುತ್ತೇವೆ. ಹೀಗೆ ಏಕಾಗುತ್ತದೆ ? ಎಂದರೆ ನಾವು ಪೂರ್ತಿ ನೋಡಿಲ್ಲ ಅದಕ್ಕೆ ಹಾಗೆ. ನಾವು ಅರೆಬರೆ ನೋಡಿ ತೀರ್ಮಾನ ಮಾಡುತ್ತಿದ್ದೇವೆ. ಯಾವುದೇ ಸಂಗತಿಯನ್ನಾದರೂ ನಾವು ಪೂರ್ತಿಯಾಗಿ ನೋಡಿದರೆ ಮಾತ್ರ ಸರಿಯಾಗಿ ಅರ್ಥವಾಗಲು ಸಾಧ್ಯ. ಆದರೆ ನಾವು ಪೂರ್ಣ ನೋಡದೆ ನಿರ್ಣಯಕ್ಕೆ ಬಂದರೆ ಅನರ್ಥವಾಗುತ್ತದೆ.

ಸೃಷ್ಟಿಸಿದವನ ಸಂಕಲ್ಪದ ಬರಹ ಅದು ನಮ್ಮೆದುರಿಗೆ ಇಲ್ಲ… ನಮ್ಮ ದೃಷ್ಟಿಗೆ ಗೋಚರಿಸುತ್ತಿರುವುದು ಅದರ ಒಂದು ಗೆರೆ ಮಾತ್ರ. ಅದರ ಹಿಂದೆ ಎಷ್ಟಿದೆಯೋ… ಮುಂದೆ ಎಷ್ಟಿದೆಯೋ ? ಅದು ಅಪಾರ… ಅನಂತ ಅಷ್ಟು ಮಾತ್ರ ನೋಡಿಕೊಂಡು ಇದು ಶಿಷ್ಟ ಇದು ನಷ್ಟ ಎನ್ನುವುದು ಕ್ಲಿಷ್ಟದ ಸಮಸ್ಯೆ. ಅದು ನಾವು ತಿಳಿದಷ್ಟು ಸುಲಭವಲ್ಲ. ಹಾಗಾಗಿ ಸರಿಯಾಗಿ ನೋಡದೆ ಸರಿಯಾಗಿ ಅರ್ಥೈಸಿಕೊಳ್ಳದೆ ಯಾವುದೇ ನಿರ್ಣಯಕ್ಕೆ ಬರುವುದು ಸರಿಯಲ್ಲ.

RELATED ARTICLES  "ದೇವರು ಇದ್ದಾನೆಯೇ?" (‘ಶ್ರೀಧರಾಮೃತ ವಚನಮಾಲೆ’).

ಒಂದು ರಾಜ್ಯ. ಅಲ್ಲೊಬ್ಬ ರಾಜ. ಅವನಿಗೊಬ್ಬ ಮಂತ್ರಿ. ಆ ಮಂತ್ರಿಗೆ ಒಂದು ಸ್ವಭಾವ ಯಾರು ಏನೇ ಹೇಳಿದರೂ ‘ಒಳ್ಳೆಯದಾಯ್ತು’ ಎನ್ನುವುದು ಯಾರು ಒಳ್ಳೆಯದನ್ನು ಹೇಳಲಿ ಕೆಟ್ಟದ್ದನ್ನ ಹೇಳಲಿ ಆತ ಮಾತ್ರ ‘ಒಳ್ಳೆಯದಾಯ್ತು’ ಎನ್ನುತ್ತಿದ್ದ. ಇದರಿಂದ ರಾಜನಿಗೆ ರೋಸಿ ಹೋಗಿತ್ತು. ಒಂದು ದಿನ ಆಕಸ್ಮಿಕವಾಗಿ ರಾಜನ ಒಂದು ಬೆರಳು ತುಂಡಾಯಿತು. ಮಂತ್ರಿ ಮಾಮೂಲಿ ಅಭ್ಯಾಸದ ಪ್ರಕಾರ ‘ಒಳ್ಳೆಯದಾಯ್ತು’ ಎಂದ. ರೋಷ ನೆತ್ತಿಗೇರಿತು ರಾಜನಿಗೆ. ಈ ಮೂರ್ಖನನ್ನು ಸೆರೆಮನೆಗೆ ತಳ್ಳಿ ಎಂದು ರಾಜ ಅಪ್ಪಣೆ ಮಾಡಿದ. ಮಂತ್ರಿ ಅದಕ್ಕೂ ‘ಒಳ್ಳೆಯದಾಯ್ತು’ ಎಂದ. ಕೆಲವು ಸಮಯ ಕಳೆಯಿತು ರಾಜ ಒಮ್ಮೆ ಬೇಟೆಗೆ ಹೋಗಿದ್ದ. ಬೇಟೆಯಾಡುವಾಗ ಆಕಸ್ಮಿಕವಾಗಿ ಒಬ್ಬಂಟಿಯಾದ. ದರೋಡೆಕೋರರ ಗುಂಪಿಗೆ ಸಿಕ್ಕಿದ. ಆ ದರೋಡೆಕೋರರು ಕಾಳಿಯ ಉಪಾಸಕರು. ಅವರಿಗೆ ನರಬಲಿಯೊಂದನ್ನು ಕೊಡಬೇಕಿತ್ತು . ರಾಜ ಸಿಕ್ಕಿದ್ದರಿಂದ ಆತನನ್ನೇ ನರಬಲಿ ಕೊಡಲು ತೀರ್ಮಾನಿಸಿದರು. ಬಲಿಗೆ ಎಲ್ಲ ಸಿದ್ಧವಾಗಿತ್ತು. ಇನ್ನೇನು ಬಲಿ ಕೊಡಬೇಕು ಎನ್ನುವಾಗ ಕಾಳಿಯ ಪೂಜಕ ಹೇಳಿದ “ಬಲಿ ಕೊಡುವ ವಸ್ತುವನ್ನು ಸರಿಯಾಗಿ ನೋಡಬೇಕು” ಎಂದು. ಆಗ ರಾಜನಿಗೆ ಒಂದು ಬೆರಳಿಲ್ಲದಿರುವುದು ಕಂಡು ಬಂತು. ಪೂಜಕ ಹೇಳಿದ ಇದು ವರ್ಜ್ಯ…. ದೇವರಿಗೆ ನಾವು ಕೊಡುವುದು ಪೂರ್ಣವಾಗಿರಬೇಕು. ಇವನನ್ನು ಬಲಿ ಕೊಡಲು ಸಾಧ್ಯವಿಲ್ಲ ಬಿಟ್ಟುಬಿಡಿ ಎಂದ. ರಾಜನನ್ನು ಬಿಟ್ಟು ಬಿಟ್ಟರು. ಆಗ ರಾಜನಿಗೆ ಮಂತ್ರಿಯ ನೆನಪಾಯಿತು . ಆವತ್ತು ಬೆರಳು ಹೋಗದಿದ್ದರೆ ಇವತ್ತು ಕೊರಳು ಹೋಗ್ತಿತ್ತು ಮಂತ್ರಿ ಹೇಳಿದ ‘ಒಳ್ಳೆಯದಾಯ್ತು’ ಸರಿಯಾಗಿಯೇ ಇದೆ ಎಂದು. ರಾಜ್ಯಕ್ಕೆ ಹಿಂದಿರುಗಿ ಮಂತ್ರಿಯನ್ನು ಸೆರೆಯಿಂದ ಬಿಡುಗಡೆ ಮಾಡಿದ. ಮತ್ತೆ ಕೇಳಿದ ” ನೀನು ಹೇಳಿದ ಮಾತು ಸತ್ಯವಾಯಿತು . ಅದು ನನ್ನ ವಿಷಯದಲ್ಲಿ. ಆದರೆ ನನಗೊಂದು ಸಂದೇಹ ನಿನ್ನನ್ನು ಸೆರೆಗೆ ತಳ್ಳು ಎಂದಾಗಲು ನೀನು ‘ಒಳ್ಳೆಯದಾಯಿತು’ ಎಂದೆಯಲ್ಲ ಅದು ಯಾಕೆ? ಎಂದು. ಆಗ ಮಂತ್ರಿ ಹೇಳಿದ ” ಪ್ರಭು ನನ್ನನ್ನು ನೀವು ಸೆರೆಗೆ ತಳ್ಳದೆ ಇದ್ದಿದ್ರೆ ನಿಮ್ಮ ಜೊತೆ ನಾನೂ ಬರುತ್ತಿದ್ದೆ ಬೇಟೆಗೆ. ನಿಮ್ಮ ಜೊತೆ ನಾನೂ ಕೂಡ ದರೋಡೆಕೋರರ ಪಾಲಾಗುತ್ತಿದ್ದೆ. ನನ್ನ ಬೆರಳು ಹೋಗಿಲ್ಲ ಹಾಗಾಗಿ ಕೊರಳು ಹೋಗುತ್ತಿತ್ತು ಎಂದು. ಈಗ ರಾಜನಿಗೆ ಅರ್ಥವಾಯ್ತು. ಕೇವಲ ಬೆರಳು ಹೋಯಿತು…. ಸೆರೆಮನೆಗೆ ತಳ್ಳಲಾಯಿತು ಇಷ್ಟನ್ನೇ ನೋಡಿ ಒಳಿತು ಕೆಡುಕುಗಳ ತೀರ್ಮಾನ ಮಾಡಿದರೆ ಅದು ಪರಿಪೂರ್ಣ ತೀರ್ಮಾನವಾಗುತ್ತಿರಲಿಲ್ಲ. ಯಾಕೆಂದರೆ ಅದರ ಹಿಂದೆ ಮುಂದೆ ಗೊತ್ತಿಲ್ಲದೆ ಮಾಡುವ ತೀರ್ಮಾನವದು. ಈಗ ಅದರ ಪರಿಣಾಮ ಸ್ಪಷ್ಟವಾಗಿರುವುದರಿಂದ ಒಳಿತು ಯಾವುದು? ಕೆಡುಕು ಯಾವುದು? ಎಂಬುದು ಕೂಡ ಸ್ಪಷ್ಟವಾಗಿದೆ.

ನಮ್ಮ ಬದುಕಿನಲ್ಲೂ ಹಾಗೇ… ಎಷ್ಟೋ ಬಾರಿ ನಮಗೆ ಬಸ್ ತಪ್ಪಿತು… ವಿಮಾನ ತಪ್ಪಿತು ಎಂದು ಬೇಸರವಾಗುತ್ತದೆ. ಆದರೆ ಒಂದೊಮ್ಮೆ ಅದು ಅಪಘಾತಕ್ಕೀಡಾದರೆ ಆಗ ಕೊನೆಯ ಕ್ಷಣದಲ್ಲಿ ತಪ್ಪಿದ್ದು ಅದಲ್ಲ ಮೃತ್ಯು ಎಂದು ಅರಿವಾಗುತ್ತದೆ. ಮೊದಲು ಕೆಡುಕೆನಿಸಿದ್ದು ನಂತರ ಒಳಿತೆಂದು ಅರಿವಾಗುತ್ತದೆ. ಹಾಗಾಗಿ ಹಿಂದೆ ಮುಂದೆ ಯೋಚಿಸದೆ ಒಳಿತು ಕೆಡಕುಗಳ ನಿರ್ಣಯ ಮಾಡಬಾರದು. ನಮ್ಮ ಕಣ್ಣಿಗೆ ಕಂಡ ಒಂದು ಗೆರೆಯ ಆಧಾರದ ಮೇಲೆ ಅದು ಒಳ್ಳೆಯದು ಕೆಟ್ಟದ್ದು ಎಂದು ತೀರ್ಮಾನ ಮಾಡಬಾರದು. “ಆಗುವುದೆಲ್ಲ ಒಳಿತು” ಎಂದು ಭಾವಿಸಬೇಕು. ಯಾಕೆಂದರೆ ತಾನಾಗಿ ನಮ್ಮ ಜೀವನದಲ್ಲಿ ನಡೆಯುವುದೆಲ್ಲ ಒಳ್ಳೆಯದೇ…! ಕೆಟ್ಟದ್ದೇನಿದ್ದರೂ ನಾವೇ ಕೈಯಾರೆ ಮಾಡಿಕೊಳ್ಳುವುದು ಮಾತ್ರ. ತಾನಾಗಿ ಆಗುವುದೆಲ್ಲ ಭಗವಂತ ಮಾಡುವಂಥದ್ದು. ಅದು ಕೆಟ್ಟದ್ದಾಗಿರಲು ಸಾಧ್ಯವಿಲ್ಲ.

RELATED ARTICLES  ದೃಷ್ಟಿ ಬದಲಿಸು… ದೃಶ್ಯ ಬದಲಾದೀತು….!

ಪಾಂಡವರು ವನವಾಸ ಮಾಡುತ್ತಿದ್ದರು. ದುರ್ಯೋಧನ ಭವನವಾಸ ಮಾಡುತ್ತಿದ್ದ. ವನವಾಸ ಮಾಡುತ್ತಿದ್ದ ಪಾಂಡವರು ನೆಮ್ಮದಿಯಿಂದಿದ್ದರು ಆದರೆ ಭವನವಾಸ ಮಾಡುತ್ತಿದ್ದ ದುರ್ಯೋಧನನಿಗೆ ನೆಮ್ಮದಿ ಇರಲಿಲ್ಲ. ಹೇಗಾದರೂ ಮಾಡಿ ಪಾಂಡವರನ್ನು ಮುಗಿಸಿಬಿಡಬೇಕು ಎನ್ನುವ ಯೋಚನೆ ಅವನದ್ದು. ಅವರನ್ನು ಪರಾಕ್ರಮದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ವಾಮಾಚಾರವನ್ನು ಆಶ್ರಯಿಸುತ್ತಾನೆ. ಕಣಿಕನೆಂಬ ಮಾಂತ್ರಿಕನನ್ನು ಕರೆಸಿ ವಾಮಾಚಾರ ಮಾಡಿಸುತ್ತಾನೆ. ಆ ಸಂದರ್ಭದಲ್ಲಿ ಒಂದು ದುಷ್ಟ ಶಕ್ತಿಯ ಆವಿರ್ಭಾವವಾಯ್ತು. ಅದರ ಹುಟ್ಟಿನ ಸಂಕಲ್ಪವೇ ಪಾಂಡವರನ್ನು ತಿನ್ನುವುದು. ಅದನ್ನು ಪಾಂಡವರ ಮೇಲೆ ಪ್ರಯೋಗ ಮಾಡುತ್ತಾನೆ . ಅತ್ತ ವನವಾಸದಲ್ಲಿ ಒಂದು ಜಿಂಕೆ ಬ್ರಾಹ್ಮಣನ ಯಜ್ಞ ಪಾತ್ರೆಯನ್ನು ತೆಗೆದುಕೊಂಡು ಓಡಿ ಹೋಯಿತು. ಆ ಬ್ರಾಹ್ಮಣ ಪಾಂಡವರಲ್ಲಿ ಬಂದ. ಯಜ್ಞ ಪಾತ್ರೆ ಕೊಡಿಸಿ ಎಂದು. ಪಾಂಡವರು ಜಿಂಕೆಯನ್ನು ಬೆನ್ನಟ್ಟಿಕೊಂಡು ಬಹುದೂರ ಹೋದರು. ಬಾಯಾರಿದರು ಬಳಲಿದರು. ಸಾವು ಸಮೀಪದಲ್ಲಿದ್ದಂತೆ ಅನ್ನಿಸಿತು. ನೀರಿಗಾಗಿ ಹುಡುಕಿದರು. ಕೊಳ ಕಂಡಿತು. ನೀರು ತರಲು ಹೋದ ಸಹದೇವ, ನಕುಲ, ಅರ್ಜುನ, ಭೀಮ ಎಲ್ಲರೂ ಸತ್ತರು. ಧರ್ಮರಾಜನಿಗೆ ಯಕ್ಷಪ್ರಶ್ನೆ ಎಲ್ಲದ್ದಕ್ಕೂ ಧರ್ಮರಾಜ ಉತ್ತರಿಸಿದ. ಒಬ್ಬನನ್ನು ಬದುಕಿಸುತ್ತೇನೆ ಎಂದಾಗ ನಕುಲನನ್ನ ಬದುಕಿಸು ಎಂದ ಧರ್ಮರಾಜ. ಕುಂತಿಯ ಹಿರಿಯ ಮಗನಾದ ನಾನು ಮಾದ್ರಿಯ ಹಿರಿಯ ಮಗ ನಕುಲ ಇಬ್ಬರು ತಾಯಂದಿರಿಗೂ ಮಕ್ಕಳಿಲ್ಲ ಎಂದಾಗಬಾರದು ಇದು ನ್ಯಾಯ ಎಂದ ಧರ್ಮರಾಜ. ಯಕ್ಷನ ರೂಪದಲ್ಲಿದ್ದ ಧರ್ಮಕ್ಕೆ ಸಂತೋಷವಾಯಿತು. ಎಲ್ಲರನ್ನೂ ಬದುಕಿಸಿದ ಧರ್ಮ ಹೇಳಿತು ” ಮೇಲ್ನೋಟಕ್ಕೆ ನಿನಗೆ ಈ ಘಟನೆ ಕೆಡುಕು ಎಂದು ತೋರಬಹುದು… ಆದರೆ ನಿಮ್ಮೆಲ್ಲರನ್ನೂ ತಿನ್ನಲು ಹಸ್ತಿನಾವತಿಯ ದುಷ್ಟ ಶಕ್ತಿ ಬಂದಿತ್ತು… ಅದು ನಿಮ್ಮ ಐವರನ್ನು ತಿನ್ನಬೇಕಿತ್ತು. ಆದರೆ ಅದು ಸತ್ತವರನ್ನು ತಿನ್ನುವುದಿಲ್ಲ. ಮತ್ತು ಧರ್ಮದ ಜಿಜ್ಞಾಸೆಯಲ್ಲಿದ್ದ ನಿನ್ನನ್ನು ತಿನ್ನಲಿಕ್ಕೆ ಅದಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಅದು ಹೋಗಿ ‘ಕಣಿಕ’ ನನ್ನು ತಿಂದಿದೆ. ಯಾರು ಕಳಿಸಿದ್ದನೋ ಅವನನ್ನೇ ತಿಂದಿದೆ.

ಮೇಲ್ನೋಟಕ್ಕೆ ನಾಲ್ವರು ತಮ್ಮಂದಿರು ಸತ್ತರು ಎಂದರೆ ಎಷ್ಟು ದುಃಖದ ವಿಷಯ. ಆದರೆ ಸಂಕಲ್ಪ ಲಿಪಿ ಬೇರೆಯೇ ಇತ್ತು. ಪಾಂಡವರು ಬದುಕಬೇಕು ಎಂದರೆ ಒಮ್ಮೆ ಸಾಯಬೇಕಿತ್ತು…..! ಅಂದರೆ ಕೆಡುಕೆಂದು ತೋರುವುದರಲ್ಲಿ ಒಳಿತಿತ್ತು. ಹಾಗಾಗಿ ನಾವು ಮೇಲ್ನೋಟಕ್ಕೆ ಕಷ್ಟ ನಷ್ಟಗಳಾ ದಾಗ ಅದು ಕೆಡುಕು ಎಂದು ತೀರ್ಮಾನ ಮಾಡಬಾರದು. ಅದರೊಳಗೆ ಎಷ್ಟು ಶುಭ ವಿದೆಯೋ ?…ಎಂತಹ ಶ್ರೇಯಸ್ಸಿದೆಯೋ ? ಯಾರಿಗೆ ಗೊತ್ತು. ಎಲ್ಲವೂ “ಒಳ್ಳೆಯದೇ ಆಯ್ತು ” ಎಂಬ ಭಾವ ಇರಲಿ.

✍️ ಡಾ.ರವೀಂದ್ರ ಭಟ್ಟ ಸೂರಿ
9448028443