ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀಯುತ ರಾಮ ನಾಗಪ್ಪ ಗೌಡ

ಪ್ರೀತಿ ವಿಶ್ವಾಸಗಳೇ ಬದುಕಿನ ಉಸಿರು. ಒಡನಾಟ ವ್ಯವಹಾರಕ್ಕಷ್ಟೇ ಸೀಮಿತವಾಗಿದ್ದರೆ ವ್ಯವಹಾರದ ನಂತರ ಅವರ್ಯಾರೋ ನಾವ್ಯಾರೋ? ಆದರೆ ವ್ಯವಹಾರವನ್ನೂ ಮೀರಿದ ವಿಶ್ವಾಸ ಪ್ರೀತಿಗಳು ಬದುಕಿನುದ್ದಕ್ಕೂ ಖುಷಿ ಕೊಡುತ್ತವೆ. ಧರ್ಮ ಜಾತಿಗಳ ಬಂಧ ಮೀರಿ ಬದುಕು ನಿಂತಿದೆ. ಒಂದೆರಡು ದಿನ‌ ಔಪಚಾರಿಕವಾಗಿ ಮಾತನಾಡಿಸಿ ಅವರಿಂದ ನಮಗೇನು ಲಾಭ ಸಿಗಬಹುದು? ಎಂಬುದನ್ನಷ್ಟೇ ನೋಡುವ ಸಾದಾ ಮನುಷ್ಯರು ಸಾವಿರ ಸಿಗುತ್ತಾರೆ. ಆದರೆ ಜೀವನವೆಂದರೆ ಅದಲ್ಲ. ಜೀವನದ ಕೊನೆಯವರೆಗೂ ಜೊತೆಯಾಗಿ ಸಾಗುವ ಕೆಲವೇ ಕೆಲವು ಜನರ ಆಪ್ತ ವಲಯ ನಮಗೆ ಗೆಲುವಾದಾಗ ಜೈ ಎನ್ನುತ್ತದೆ. ನೋವಾದಾಗ ಕಣ್ಣೀರು ಮಿಡಿಯುತ್ತದೆ. ಅಂಥವರು ಸಿಗುವುದು ತುಂಬಾ ಅಪರೂಪ.‌ ಅಂಥವರು ಸಿಕ್ಕಿದ್ದಾರೆಂದರೆ ಅದು ಬಹಳ ಜನ್ಮಗಳ ಪುಣ್ಯ ಎಂದೇ ನಾನು ಭಾವಿಸುತ್ತೇನೆ. ನಮ್ಮ ಮನೆಯದೇ ಒಬ್ಬ ಸದಸ್ಯನಂತಿರುವ ರಾಮನನ್ನು ನಾನಿಂದು ನಿಮಗೆ ಪರಿಚಯಿಸಬೇಕು.
ರಾಮ ಗೌಡರು ಹೊನ್ನಾವರ ತಾಲ್ಲೂಕಿನ ಹೊಸಾಕುಳಿಯವರು. ಕೃಷಿ ಕೂಲಿ ಇವರ ವೃತ್ತಿ. ಬಡತನದ ಬದುಕಿನಲ್ಲೂ ಸ್ವಾಭಿಮಾನಿಯಾಗಿ ಎದ್ದು ನಿಂತು ಇಂದು ಅಭಿಮಾನ ಪಡುವಂಥ ಬದುಕು ಕಟ್ಟಿಕೊಂಡವರು. ಒಂದು ಕಾಲಕ್ಕಿದ್ದ ಜೋಪಡಿಯ ಮನೆಯೀಗ ಸುಸಜ್ಜಿತವಾದ RCC ಆಗಿದೆ. ಈಶ್ವರ ಮತ್ತು ಶ್ರೀಧರ ಎಂಬ ಇಬ್ಬರೂ ಗಂಡು ಮಕ್ಕಳೂ ಸ್ವಂತ ದುಡಿಮೆ ಮಾಡುತ್ತಾರೆ. ಮಡದಿ, ಮಕ್ಕಳು ಮೊಮ್ಮಕ್ಕಳೊಂದಿಗೆ ರಾಮ ಗೌಡರು ಸುಖ ಸಂತೋಷದಿಂದ ಬಾಳ್ವೆ ನಡೆಸುತ್ತಿದ್ದಾರೆ. ಜಾನಪದ ಕಲೆ, ಭಾಷೆ, ಇವುಗಳಲ್ಲೆಲ್ಲಾ ತಮ್ಮದೇ ಆದ ವೈಶಿಷ್ಟ್ಯತೆ ಹೊಂದಿದ ಹಾಲಕ್ಕಿ‌ ಸಮಾಜದಲ್ಲಿ ಶಿಸ್ತಿನ ಜೀವನ ನಡೆಸಿದ ನಮ್ಮೂರಿನ ಹಿರಿಯರಲ್ಲಿ ರಾಮ ಗೌಡರು ವಿಶೇಷ ಸ್ಥಾನ ಪಡೆಯುತ್ತಾರೆ.
ನಮ್ಮ ಅಪ್ಪನದೂ…. ರಾಮನದೂ…. ಸರಿಸುಮಾರು ಒಂದೇ ವಯಸ್ಸು. ಹೀಗಾಗಿ ಅವರ ನಡುವೆ ಬಲುವೇ ದೋಸ್ತಿ. ಬದುಕಿನ ಬಂಡಿಯನ್ನು ಒಂದೇ ವೇಗದಲ್ಲಿ ಒಂದೇ ದಿಕ್ಕಿನಲ್ಲಿ ಸಾಗಿಸಿಕೊಂಡು ಬಂದ ಅವರಿಬ್ಬರೂ ಪರಸ್ಪರ ಬಾಂಧವ್ಯದಿಂದಲೇ ಬಾಲ್ಯ, ಯೌವ್ವನದ ಕಾಲಘಟ್ಟವನ್ನು ದಾಟಿ ಈಗ ಸುಂದರ ಬದುಕಿನ ಸಂಜೆಯಲ್ಲಿ ವಿಹರಿಸುತ್ತಿದ್ದಾರೆ. ರಾಮನೆಂಬುವನು ನಮ್ಮ ಬದುಕಿನಲ್ಲಿ ಶ್ರೀರಾಮನೇ ಅನುಗ್ರಹಿಸಿದ ಆಶೀರ್ವಾದ ಎಂದು ನಾನಾದರೂ ಭಾವಿಸುತ್ತೇನೆ.
ಉಂಡ ಮನೆಗೆ ಕನ್ನ ಹಾಕುವ, ನಮ್ಮ ಹತ್ತಿರ ಬಹಳ ಚೆನ್ನಾಗಿ ವ್ಯವಹರಿಸಿ, ನಕ್ಕು ತಿಂದುಂಡು ಹೋಗುವ ಜನ ಮನೆಯಿಂದಾಚೆ ಹೋಗುವ ಹೊತ್ತಿಗೆ ನಮ್ಮದೇ ಕಂತೆ ಪುರಾಣ ಹೇಳುತ್ತಾ…. ಅದು ಸರಿಯಲ್ಲ….. ಇದು ಸರಿಯಿಲ್ಲ….ಅವರು ಹಾಗೆ ಮಾಡಬಾರದಿತ್ತು…. ಹೀಗೆ ಮಾಡಬಾರದಿತ್ತು….ಅವರೇನೋ ಹಾಗಂತೆ…ಹೀಗಂತೆ….ಅಂತೆಲ್ಲಾ ಮಾತಾಡುತ್ತಾ ಹೋದ ಮನೆಯವರ ಕುರಿತಾಗಿಯೇ ಟೀಕೆ ಟಿಪ್ಪಣಿ ಮಾಡುತ್ತಾ ಇರುತ್ತಾರೆ. ನಮ್ಮ ರಾಮ ಅತ್ಯಂತ ಸೌಜನ್ಯಯುತ ಮನುಷ್ಯ. ಅವನ ಮಾತೂ ಕಡಿಮೆ. ಬೇರೆಯವರ ಮಾತುಗಳಂತೂ ಅವನಾಡುವುದೇ ಇಲ್ಲ.‌ ಕೆಲಸವೆಂದರೆ ಅಪಾರ ಶೃದ್ಧೆ ಅವನಿಗೆ. ಯಾವುದೇ ಕೆಲಸ ಮಾಡಿದರೂ ಅಚ್ಚುಕಟ್ಟುತನ ಮತ್ತು ನಿಷ್ಠೆ. ನಾನು ಅತ್ಯಂತ ಚಿಕ್ಕವನಿರುವಾಗಿನಿಂದಲೂ ನಮ್ಮ ಮನೆಯ ಕೃಷಿ ಕೆಲಸದ ಸಂಪೂರ್ಣ ಜವಾಬ್ದಾರಿ ನೋಡಿಕೊಂಡು ತನ್ನದೇ ಮನೆಯೆಂಬಂತೆ ಮಾಡಿಕೊಟ್ಟವನು ರಾಮ. ಶೇಂಗಾ, ಮೊಗೆ, ಗೇರು ಹೀಗೆ ವಿವಿಧ ಬೆಳೆಗಳ ಕುರಿತಾಗಿಯೇ ಅವನ ಕನಸು….ಮತ್ತು ಪರಿಶ್ರಮ.
‌‌‌‌‌ ರಾಮನ ಮಕ್ಕಳಾದ ಈಶ್ವರ ಮತ್ತು ಶ್ರೀಧರ ಇಬ್ಬರೂ ನನ್ನ ಸಹಪಾಠಿಗಳು. ಈಶ್ವರ ಯಾಣದಲ್ಲಿ ಅಡಿಕೆ ತೋಟ ನೋಡಿಕೊಂಡರೆ ಶಿರಿ ಈ ಕಡೆಗೇ ವಾಹನ ಇಟ್ಟುಕೊಂಡು ವ್ಯವಹಾರ ಮಾಡುತ್ತಾನೆ. ರಾಮನಂತೆಯೇ ಮಕ್ಕಳಿಗೂ ನಮ್ಮ ಮನೆ, ಮನೆಯವರಂದರೆ ಅಷ್ಟೇ ಪ್ರೀತಿ. ನಡು ರಾತ್ರಿಯೇ ಹೋಗಿ ಎಬ್ಬಿಸಿದರೂ ಅವರು ಎದ್ದು ನಮ್ಮ ಜೊತೆ ಬರುತ್ತಾರೆ. ನಿಕಟ ವರ್ತಿಗಳಾಗಿ ನಮ್ಮ ಜೊತೆ ನಿಲ್ಲುತ್ತಾರೆ.
ನಮ್ಮ ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬ ಇತ್ತೇ ವಿನಹ ಮೂರ್ತಿ ತರುವ ಪದ್ಧತಿ ಇರಲಿಲ್ಲ. ಆದರೆ ನಮ್ಮ ರಾಮ ಹತ್ತಾರು ವರ್ಷಗಳ ಹಿಂದೆ ನಡುರಾತ್ರಿ ಬಂದು ನಮ್ಮ ಮನೆಯ ತುಳಸಿ ಕಟ್ಟೆಯ ಎದುರು ಮಣ್ಣಿನ ಗಣಪತಿ ಮೂರ್ತಿಯನ್ನು ತಂದಿಟ್ಟು ಯಾರಿಗೂ ಕಾಣದಂತೆ ಹೋಗಿದ್ದ. ಆ ವರ್ಷದಿಂದ ನಾವು ಗಣೇಶೋತ್ಸವವನ್ನು ಮತ್ತೂ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದೆವು. ಯಾರು ತಂದಿಟ್ಟು ಹೋಗಿರಬಹುದು ಎಂದು ನಾವು ವಿಚಾರಿಸುತ್ತಿದ್ದಾಗ ಚೌತಿ ದಿನದ ಸಂಜೆ ಪೂಜೆಯ ಪ್ರಸಾದ ತೆಗೆದುಕೊಂಡು ಹೋಗಲು ರಾಮ ಬಂದಿರುವುದನ್ನು ನೋಡಿ ನಮಗೆ ಅವನೇ ಇರಬಹುದೆಂದು ಖಾತ್ರಿಯಾಗಿತ್ತು. ಈಶ್ವರನಿಗೆ ಮದುವೆಯಾಗಿ ಬಹಳ ವರ್ಷಗಳಾದರೂ ಮಕ್ಕಳ ಭಾಗ್ಯ ಒದಗದೇ ಇರುವಾಗ ನಮ್ಮ ಮನೆಯ ಗಣಪತಿಯನ್ನು ಒಂದು ವರ್ಷ ತಾನೇ ಮಾಡಿಸಿಕೊಡುವುದಾಗಿ ಹರಕೆ ಹೊತ್ತಿದ್ದನಂತೆ. ಈಶ್ವರನಿಗೆ ಮಗ ಹುಟ್ಟಿದ ವರ್ಷ ಗಣಪತಿ ಹಬ್ಬ ಮಾತ್ರ ನಮ್ಮದು….ಅದರ ಸಂಪೂರ್ಣ ವೆಚ್ಚವನ್ನು ನಾನು ಏನಂದರೂ ಕೇಳದೇ ರಾಮನೇ ಕೊಟ್ಟಿದ್ದ. ಪ್ರತಿವರ್ಷ ದೀಪಾವಳಿಯ ದಿನ ದೊಡ್ಡ ಮೊಗೆಕಾಯಿ ಹಿಡಿದು ರಾಮ ಬರುತ್ತಾನೆ. ನಮ್ಮಮ್ಮ ಅವನಿಗಾಗಿಯೇ ಪ್ರತ್ಯೇಕ ಸಿಹಿತಿಂಡಿ ಮಾಡುತ್ತಾಳೆ ಮತ್ತು ಅವನಿಗೊಂದು ಹೊಸಬಟ್ಟೆ ನೀಡುವ ಪದ್ಧತಿ ನಮ್ಮ ಮನೆಯಲ್ಲಿದೆ.
ಏನೇ ಇರಲಿ. ರಾಮ ಬಂದರೆ ನಮಗಷ್ಟು ಖುಷಿ. ಅವನ ಜೊತೆ ನಾವೆಲ್ಲರೂ ಸೇರಿ ಹರಟುತ್ತೇವೆ. ಅವನೂ ಅಷ್ಟೇ ಗಾಡಿಪೂಜೆ, ಮನೆಯಲ್ಲಿ ಕಾರ್ಯ, ಏನೇ ಇರಲಿ ನಮ್ಮನ್ನು ಕರೆಯದೇ ಇರುವುದಿಲ್ಲ. ರಾಮಾ……..ಅಂದರೆ ಸಾಕು. ನಮ್ಮ ಮೇಲಿನ ಅಭಿಮಾನದಿಂದ ಅವನು ತಕ್ಷಣ ಹಾಜರ್. ವಿಶ್ವಾಸವೆಂದರೆ ಬರಿದೆ ಹೇಳುವದಲ್ಲ ಆಚರಿಸುವುದು.
ಮಧುಮೇಹ ಬಂದಾಗ ನಮ್ಮ ರಾಮ ಸ್ವಲ್ಪ ಕಂಗಾಲಾಗಿ‌ ಹೋಗಿದ್ದ. ನಮ್ಮಪ್ಪನ ಸಂಗಡ ಡಾಕ್ಟರ್ ಇದ್ದಲ್ಲಿಗೆ ಹೋಗಿ ಮಾನಸಿಕ ದೃಢತೆ ತಂದುಕೊಂಡ. ಊರಿನಲ್ಲೂ ರಾಮನಿಗೆ ಒಳ್ಳೆಯ ಹೆಸರಿದೆ. ಸಮಾಜಮುಖಿಯಾಗಿಯೂ ರಾಮ ತೊಡಗಿಸಿಕೊಳ್ಳುತ್ತಾನೆ. ಹಾಲಕ್ಕಿಗರಲ್ಲಿ ರಾಮ ಒಳ್ಳೆಯ ಮುಖಂಡ.
ನಮ್ಮ ರಾಮನನ್ನು ನಾವು ಎಂದೂ ಮರೆಯುವುದಿಲ್ಲ. ನನ್ನ ಮದುವೆಯಲ್ಲಿ ಮತ್ತು ಅಕ್ಕನ ಮದುವೆಯ ಸಂದರ್ಭದಲ್ಲಂತೂ ಅವನದು ಹೆಚ್ಚಿನ ಪರಿಶ್ರಮ. ದೊಡ್ಡ ದೊಡ್ಡ ಸ್ಟೀಲಿನ ಹರಿವಾಣ ಹಿಡಿದು ಅದರ ತುಂಬಾ ಹಣ್ಣುಗಳನ್ನು ತುಂಬಿ ಅವನು ನಮ್ಮ ಕೈ ಹಿಡಿಸಿದ ನೆನಪು ಸತ್ತರೂ ಸಾಯುವುದಲ್ಲ. ಅವನ ಹೃದಯ ಶ್ರೀಮಂತಿಕೆಯ ಮುಂದೆ ನನಗೆ ಶ್ರೀಮಂತರೂ ಬಡವರೆನಿಸುತ್ತಾರೆ. ಅವನನ್ನು ಬಹಳ ದಿನ ಕಾಣದಿದ್ದರೆ ಮನಸ್ಸು ಪರಿತಪಿಸುತ್ತದೆ. ಗಣಪತಿಯನ್ನು ಮೊದಲು ಹೊತ್ತುಕೊಂಡು ನಮ್ಮ ಮನೆಗೆ ತಂದಿಟ್ಟು ಹೋಗುತ್ತಿದ್ದ ರಾಮನನ್ನು ಈಗ ಕಾರಿನ ಮೇಲೆ ನಾನೇ ಕರೆದುಕೊಂಡು ಹೋಗಿ ಮೂರ್ತಿ ತೆಗೆದುಕೊಂಡು ಬರುತ್ತೇನೆ. ಮಾವಿನ ಎಲೆಯ ತೋರಣ ಅವನದ್ದೆ. ಸಂಭ್ರಮ ಸಡಗರದ ಒಂದು ಭಾಗ ಅವನು.
ಸಂಶಯ, ಅಪನಂಬಿಕೆ, ದ್ವೇಷ, ಜಗಳ, ಪ್ರತಿಷ್ಠೆ, ಒಣಜಂಭ, ದುರಹಂಕಾರ ಇವುಗಳನ್ನೆಲ್ಲಾ ತೊಡೆದು ರಾಮನಂತಹ ಮನುಷ್ಯರು ನಮಗೆ ಜನ್ಮ ಜನ್ಮಾಂತರಕ್ಕೂ ಸಿಗಲಿ ಎಂಬುದೇ ನನ್ನ ನಿತ್ಯ ಪ್ರಾರ್ಥನೆ. ನನಗೆ ಗೊತ್ತು ನನ್ನ Face book ನಲ್ಲಿ ಹತ್ತಿರ 5000 friends ಇದ್ದಾರೆ. ಅಲ್ಲಿ ಇಲ್ಲಿ ಅಂತ ಮತ್ತೆ 5000 ಪರಿಚಿತರಿರಬಹುದು. ಆದರೆ ಅಯ್ಯೋ ಎಂದ ದಿನ ನಿಲ್ಲುವ 5 ಜನರಲ್ಲಿ ರಾಮನೂ ಒಬ್ಬನಾಗಿರುತ್ತಾನೆ ಎಂಬುದು ಗೊತ್ತು ನನಗೆ. ನಾನೂ……ಅವನಿಗೆ ಹಾಗೆಯೇ………..
ಸದ್ಗುರು ಶ್ರೀಧರರ ಆಶೀರ್ವಾದ ರಾಮ ಹಾಗೂ ಅವರ ಕುಟುಂಬದ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ರಾಮನಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+919482212743

??????⚫⚪???????⚫⚪?????