ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀ ಎಂ.ಜಿ.ಹೆಗಡೆ ಹಾಗೂ ಮುಕಾಂಬಾ ದಂಪತಿ

ನೀವೆಷ್ಟು ಅಲೆಗಳನ್ನು ಕಂಡಿರಿ, ಎಂತೆಂತಹ ಬಿರುಗಾಳಿಗಳನ್ನು ಎದುರಿಸಿದಿರಿ, ಎಂತೆಂತಹ ಬಂಡೆಗಲ್ಲುಗಳನ್ನು ದಾಟಿ ಬಂದಿರಿ ಎಂದು ಜಗತ್ತು ಕೇಳುವುದಿಲ್ಲ…ಹಡಗನ್ನು ಸುರಕ್ಷಿತವಾಗಿ ದಡಕ್ಕೆ ತಂದು ಮುಟ್ಟಿಸಿದಿರಾ ಎನ್ನುವುದನ್ನಷ್ಟೇ ಅದು ವಿಚಾರಿಸುತ್ತದೆ. ಸುಂದರವಾದ ಫೋಟೊವನ್ನಷ್ಟೇ ಜನ ನೋಡುತ್ತಾರೆಯೇ ಹೊರತು ಅದರ ಭಾರವನ್ನು ಹೊತ್ತ ಮೊಳೆಯನ್ನು ಯಾರು ನೋಡುತ್ತಾರೆ ಹೇಳಿ?! ದೊಡ್ಡ ಪರದೆಯ ಮೇಲೆ ಸಿನಿಮಾವನ್ನು ನೋಡುವಾಗ ಅವರು ಎಷ್ಟು ಕಷ್ಟಪಟ್ಟಿದ್ದಾರೆ? ಎನ್ನುವುದು ನೋಡುವವರ ಗಮನಕ್ಕೆ ಬರುವುದು ತುಂಬಾ ಕಡಿಮೆ. ಅವರು ಇಷ್ಟವಾಗುವಂತೆ ಸಿನಿಮಾ ಮಾಡಿದ್ದಾರಾ? ಎನ್ನುವುದಷ್ಟೇ ಪ್ರಾಮುಖ್ಯವಾಗಿರುತ್ತದೆ ಪ್ರೇಕ್ಷಕನಿಗೆ. ಪ್ರತಿ ನಗುವಿನೂರಿನಲು ದುಃಖದ ಬೀದಿ ಇದ್ದೇ ಇರುತ್ತದೆ. ನಮ್ಮ ಕ್ರಾಫ್ಟ ಸರ್ ಸಂಬಂಧದಲ್ಲಿ ಬಾವ ಎಂ.ಜಿ.ಹೆಗಡೆ ಮತ್ತು ಮುಕಾಂಬಕ್ಕ ದಂಪತಿಯನ್ನು ನಾನಿಂದು ಪರಿಚಯಿಸಬೇಕು.
ನಾವು ಅರೆಅಂಗಡಿ ಎಸ್.ಕೆ.ಪಿ.ಪ್ರೌಢಶಾಲೆಯಲ್ಲಿ ಓದುವ ಸಮಯಕ್ಕೆ ಎಂ.ಜಿ ಹೆಗಡೆ ಸರ್ ನಮಗೆ ಕ್ರಾಫ್ಟ್ ಗುರುಗಳು. ಶಾಸ್ತ್ರಿ ಸರ್ ಸಂಗಡ ದೈಹಿಕ ಶಿಕ್ಷಣಕ್ಕೆ ನೆರವಾಗುತ್ತಾ, ಶಾಲೆಯ ಕಲ್ಪವೃಕ್ಷಗಳ ಯೋಗಕ್ಷೇಮ ನೋಡಿಕೊಳ್ಳುತ್ತಾ ಬಹುತೇಕ ತಮ್ಮ ಈವರೆಗಿನ ಅರ್ಧಕ್ಕಿಂತ ಹೆಚ್ಚು ಆಯುಷ್ಯವನ್ನು ಅರೆಅಂಗಡಿಯಲ್ಲಿ ಕಳೆದ ನಮ್ಮ ಬಾವ ಅತ್ಯಂತ ಸಾಧು ಮನುಷ್ಯ. ಮುಕಾಂಬಕ್ಕ ( ಅಪ್ಪಕ್ಕ) ನನ್ನ ಅತ್ತೆಯ ಮಗಳು ಮತ್ತು S.K.P. Primary ವಿಭಾಗದ ಮುಖ್ಯೋಪಾಧ್ಯಾಯಿನಿ. ಕಳೆದ 25 ವರ್ಷಗಳ ಹಿಂದೆ ಪ್ರಾರಂಭಗೊಂಡ Convent ನ್ನು ಈ ಮಟ್ಟಿಗೆ ತಂದು ನಿಲ್ಲಿಸುವಲ್ಲಿ ಅವಳ ಪಾತ್ರ ವಿಶೇಷವಾದದ್ದು ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ನನಗೆ ಈ ನಿಟ್ಟಿನಿಲ್ಲಿ ಅವಳು ಸಹೋದರಿ ಎಂಬ ಅಂಧ ಶೃದ್ಧೆಗಿಂತ ನಾನೂ ಒಬ್ಬ ಶಿಕ್ಷಕನಾಗಿ ಅವಳು ಪಟ್ಟ ಪರಿಶ್ರಮವೇ ಕಣ್ಣ ಮುಂದೆ ಬರುತ್ತದೆ.
ಎಂ.ಜಿ.ಹೆಗಡೆಯವರನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿತ್ತು. ಮುಕಾಂಬಕ್ಕನೂ ಕೇವಲ 600 ರೂ ಗೆ ಶಿಕ್ಷಕಿಯಾಗಿ ಸೇರಿದವಳು. ಆದರೂ ಈವರೆಗೂ ಅವರು ಬೇರೆಯವರಿಗೆ ಕೈಯೆತ್ತಿ ಕೊಡುವರಾಗಿಯೇ ಬದುಕಿದವರೇ ಹೊರತು ತಮ್ಮ ಕಷ್ಟಗಳಿಗಾಗಿ ಗೋಗರೆದು ಬದುಕಿದವರಲ್ಲ. ಅನೇಕ ಜನ ಅವರನ್ನು ಹುಡುಕಿಕೊಂಡು ಹೋಗಿ ಅವರ ಮನೆಯಲ್ಲಿ ಕುಳಿತು ಗಂಟೆಗಟ್ಟಲೆ ಸುದ್ದಿ ಹೇಳಿ ಬರುವವರು. ಎಲ್ಲರ ಮನೆಗೂ ಎಲ್ಲರೂ ಹೋಗುವುದಿಲ್ಲ. ಆದರೆ ನಮ್ಮ ಅಕ್ಕ, ಬಾವನಿಗೆ ಜನರ ಬಳಕೆ ಜಾಸ್ತಿ. ಬಂದವರಿಗೆ ಚಹಾ, ಕಾಫಿ, ಕಷಾಯ ಏನನ್ನೂ ಕೊಡದೇ ಕಳುಹಿಸುವವಳೇ ಅಲ್ಲ ನಮ್ಮಕ್ಕ. ಗೋವುಗಳ ಪರಮ ಭಕ್ತರಾದ ನಮ್ಮ ಬಾವ ಮಕ್ಕಳಂತೆ ಅವುಗಳನ್ನು ಪಾಲನೆ ಪೋಷಣೆ ಮಾಡುತ್ತಾರೆ. ಗೋಪ್ರೇಮಿ ಅಂತ ಪ್ರಶಸ್ತಿ ಸಿಗುವುದಾದರೆ ಅದರ ಮೇಲ್ಪಂಕ್ತಿಯಲ್ಲಿ ಇರಬೇಕಾದ ಹೆಸರು ನಮ್ಮ ಬಾವನದ್ದು.
ನಮ್ಮ ಬಾವನಿಗೆ ಯಕ್ಷಗಾನ ಎಂದರೆ ಪರಮ ಪ್ರೀತಿ. ಸ್ವತಃ ಯಕ್ಷಗಾನ ಸಂಘಟಿಸುವ ಅವರು ಬಹುತೇಕ ಸುತ್ತ ಮುತ್ತ ನಡೆಯುವ ಯಕ್ಷಗಾನ ಪ್ರಸಂಗಗಳನ್ನು ನೋಡದೇ ಬಿಡುವರಲ್ಲ. ದೃಢಕಾಯರಾದ ನಮ್ಮ ಬಾವನ ಹೊಟ್ಟೆ ಹಿಡಿಯುವುದೆಂದರೆ ನನಗೆ ಬಲುವೇ ಪ್ರೀತಿ. ನನ್ನನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವ ಅವರು ಬದುಕಿನ ಅವಿಭಾಜ್ಯ ಅಂಗ.
ಮುಕಾಂಬಕ್ಕ ವಿಶ್ವ ಹಿಂದೂ ಪರಿಷತ್ ಸ್ಕೂಲಿನಲ್ಲಿ ಕೊಡಗಿನ ಕುಶಾಲನಗರದಲ್ಲಿ ಮೊದಲು ಕಾರ್ಯ ನಿರ್ವಹಿಸಿದವರು. ಹೀಗಾಗಿ ಒಂದು ಸಂಸ್ಥೆಯನ್ನು ಹೇಗೆ ಶೈಕ್ಷಣಿಕವಾಗಿ ಹಾಗೂ ಆಡಳಿತಾತ್ಮಕವಾಗಿ ನಿಭಾಯಿಸಬೇಕೆನ್ನುವ ಕೌಶಲ್ಯ ಅವಳಿಗೆ ಬಹುಬೇಗ ಸಿದ್ಧಿಸಿದ್ದು. ಸುತ್ತಮುತ್ತಲಿನ ಊರುಗಳ ಮಕ್ಕಳನ್ನು ಪ್ರೀತಿಪೂರ್ವಕವಾಗಿ ಶಾಲೆಗೆ ಕರೆತಂದು, ಪಾಲಕರ ಮನಗೆದ್ದು, ಆಡಳಿತ ಮಂಡಳಿಯವರ ಮೆಚ್ಚುಗೆಗೂ ಪಾತ್ರಳಾದ ಅಕ್ಕನಿಗೆ ಶಾಲೆಯೇ ಮನೆಯಿದ್ದಂತೆ. ಮನೆಗಿಂತ ಹೆಚ್ಚು ಸಮಯವನ್ನು ಅವಳು ಶಾಲೆಗಾಗಿಯೇ ವಿನಿಯೋಗಿಸುತ್ತಾಳೆ ಮತ್ತು ಮನೆಗಿಂತ ಶಾಲೆ, ಹಾಗೂ ವಿದ್ಯಾರ್ಥಿಗಳ ವಿಷಯವೇ ಅವಳ ಮಾತಿನಲ್ಲಿ ಹೆಚ್ಚಾಗಿ ಇರುತ್ತದೆ. ವೃತ್ತಿ ಪ್ರೇಮ ಎಂದರೆ ಇದು ಎಂದು ಅನಿಸುವುದು ನನಗೆ. ಅದಕ್ಕಾಗಿಯೇ ಜೀವ ವಿಮಾ ನಿಗಮ (LIC) ಇವರಿಂದ ಕೊಡ ಮಾಡಲ್ಪಟ್ಟ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ನಮ್ಮಕ್ಕ ಅರ್ಹವಾಗಿಯೇ ಭಾಜನರಾದರು.
‌ ಸಾಕು…….ಎನಿಸುತ್ತದೆ. ಬರೆಯದಿದ್ದರೆ ಗುರುವಿನ ಬಗೆಗೆ ಬರೆಯದೇ ಹೋದ ಭಾವ ನನಗೆ ಕಾಡುವುದರಿಂದ ಬರೆದೆ. ಮತ್ತೆ ಬರೆದರೆ ನನ್ನ ಬದುಕೇ ಆದ ಅವರ ಬಗೆಗೆ ಉತ್ಪ್ರೇಕ್ಷೆ ಅದೀತೇನೊ ಅನಿಸುತ್ತದೆ.
ಸಣ್ಣ ಪುಟ್ಟ ತಪ್ಪುಗಳಿಗೂ ಲೇವಡಿ ಮಾಡುವಾಗ, ಹಂಗಿಸುವಾಗ, ಬೇರೆಯವರ ಬಗೆಗೆ ಹಗುರವಾಗಿ ಮಾತಾಡುವಾಗ ಅವರ ಕುರಿತಾಗಿ ನಮಗೇನು ತಿಳಿದಿದೆ ಎನ್ನುವುದು ನಮ್ಮ ಜ್ಞಾಪಕದಲ್ಲಿರಬೇಕು. ಮೇಲ್ನೋಟಕ್ಕೆ ನಾಲ್ಕು ದಿನ ಒಡನಾಡಿದ ಮಾತ್ರಕ್ಕೆ ಅವರ ಇಡೀ ಬದುಕನ್ನು ನಮ್ಮಿಂದ ಅಳೆಯಲಾಗುವುದಿಲ್ಲ. ಸದಾ ನಗುನಗುತ್ತಾ ಎಲ್ಲರನ್ನೂ ಗುರುತಿಸಿ ಗೌರವಿಸುವ ನಮ್ಮಕ್ಕ ಬಾವನಿಂದ ಇದ್ದೊಬ್ಬ ಮಗಳು ಮೇಧಾಳನ್ನೂ ಭಗವಂತ ಕರೆಸಿಕೊಂಡು ಬಿಟ್ಟ. ?
ನಮ್ಮಕ್ಕ ಬಾವನನ್ನು ಕಂಡರೆ ಸಂಬಂಧಿಗಳಿಗೆಲ್ಲ ತುಂಬಾ ಇಷ್ಟ ಹೀಗಾಗಿ ಸಂಬಂಧಿ ಸಹೋದರನೊಬ್ಬ ಇಬ್ಬರು ಮಕ್ಕಳನ್ನು ಕರೆದುಕೊಂಡು ಒಂದು ಚಿಕ್ಕ ಹೊಳೆಗೆ ಈಜಲು ಕರೆದುಕೊಂಡು ಹೋಗಿ ಮೇಧಾಳ ಜೊತೆಗೆ ತಾನೂ ಹೋಗಿಬಿಟ್ಟ. ದೃಢಕಾಯದ ಆತ ಹತ್ತು ಮಕ್ಕಳನ್ನಾದರೂ ಬದುಕಿಸಬಲ್ಲ ತಾಕತ್ತಿದ್ದವ. ಆದರೆ ವಿಧಿಯಾಟ ಮೇಧಾಳ ಓರಿಗೆಯ ಒಬ್ಬಳು ಬದುಕಿದಳು. ಮೇಧಾ ಅವನೊಟ್ಟಿಗೇ ಹೊರಟು ಹೋದಳು……ಕಾರಣ ಹೇಳದೇ ??????????
ನನ್ನ ಈವರೆಗಿನ ಬದುಕಿನಲ್ಲಿ ಮೂರೇ ತುತ್ತು ಉಂಡು ಹಾಕಿದ ಅನ್ನವನ್ನೆಲ್ಲಾ ಬಟ್ಟಲಿನಲ್ಲೇ ಬಿಟ್ಟು ಕೈತೊಳೆದು ಓಡಿದ ಆ ದಿನದ ಭೀಕರತೆ ಎಂದಿಗೂ ಮನಸ್ಸಿನಿಂದಾರುವುದೇ ಇಲ್ಲ. ನನ್ನಿಂದ ಏನಾದರೂ ಮಾಡಲಿಕ್ಕಾದೀತೇನೋ ಎಂಬ ಆಸೆ ಹೊಳೆಗೆ ಹೋಗಿ ನೊಡುವಾಗ ಭಗ್ನವಾಗಿ ಹೋಗಿತ್ತು. ಕುಸಿದು ಕುಳಿತರೆ ಅಕ್ಕ ಬಾವನನ್ನು ಸಂತೈಸುವವರು ಯಾರು?! ಬಣ್ಣದ ಮಾತುಗಳಿಂದ ಬೇರೆಯವರನ್ನು ಮೆಚ್ಚಿಸುವಷ್ಟು ಸುಲಭವಲ್ಲ ಸಂತೈಸುವುದೆಂದರೆ….. ನಮ್ಮ ಬಾವನ ಭೀಮ ಹೊಟ್ಟೆಯ ಮೇಲೆ ಮಲಗಿ ನಿದ್ರಿಸುತ್ತಿದ್ದ ಏಕೈಕ ಪುತ್ರಿ, ಅಪ್ರತಿಮ ಪ್ರತಿಭಾವಂತೆ ಮೇಧಾ ಆಗ ಆರನೇ ತರಗತಿಯ ವಿದ್ಯಾರ್ಥಿನಿ. ಮುತ್ತಿನಂಥ ಅಕ್ಷರ, ಕಂಚಿನ ಕಂಠ, ಗುರುಭಕ್ತಿ, ಮೇಧಾಪುಟ್ಟಿ ಊರಿನ ಎಲ್ಲರಿಗೂ ಚಿರಪರಿಚಿತೆ. ಅದಾಗಲೇ ಹಲವಾರು ಬಹುಮಾನಗಳನ್ನು ಗೆದ್ದಿದ್ದ ಆಕೆಯನ್ನೇ ಕರೆದುಕೊಂಡು ನಮ್ಮಕ್ಕ ಬಾವನಿಗೆ ತಡವಾಗಿ ಕೊಟ್ಟ ಒಂದೇ ಒಂದು ಬಹುಮಾನವನ್ನೂ ಆತ ಕಿತ್ತುಕೊಂಡುಬಿಟ್ಟ.?
ನಮ್ಮ ಮನೆಯಲ್ಲೇ ಅಕ್ಕ ಬಾವನನ್ನು ತಂದಿರಿಸಿಕೊಂಡೆವು. ಹತ್ತು ಹದಿನೈದು ದಿನಗಳ ಕಾಲ ಯಾವ್ಯಾವುದೋ ಲೋಕಾಂತರ ಸುದ್ದಿ ಹೇಳಿ ಹುಚ್ಚರ ಹಾಗೆ ಅವರನ್ನು ನಗಿಸುವ ಪ್ರಯತ್ನ ಮಾಡಿದೆವು. ಮರಳಿ ಮನೆಗೆ ಹೋದ ಮೇಲೆ ತಂದೆಯವರೂ ನಾನೂ ಪಾಳಿ ಹಾಕಿಕೊಂಡು ಹೋಗಿ ರಾತ್ರಿ ಅವರನ್ನು ಕಾದೆವು. ಎಲ್ಲಿ ಬದುಕಿಗೇ ಪೂರ್ಣ ವಿರಾಮ ಇಟ್ಟು ನಮ್ಮಿಂದ ಕಾಣದ ಕಡೆಗೆ ಹೊರಟುಹೋದಾರು ಎಂಬ ಆತಂಕ ನಮ್ಮನ್ನು ಕಾಡುತ್ತಿತ್ತು. ಬದುಕೇ ಬೇಡವೆನಿಸಿದರೂ ಬದುಕಬೇಕು.
ನಮ್ಮಕ್ಕ, ಬಾವ ಚೇತರಿಸಿಕೊಂಡರು. ಶಾಲೆಯ ಮಕ್ಕಳನ್ನೇ ಅಕ್ಕ ತನ್ನ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಾಳೆ. ಬಾವ ನೋವಿನಲ್ಲಿ ನಾಲ್ಕು ಕವಳ ( ತಾಂಬೂಲ ) ಜಾಸ್ತಿ ಹಾಕುವುದನ್ನು ನಾವು ವಿರೋಧಿಸುವುದಿಲ್ಲ. ನಮಗೆ ನೂರು ಮಾತು ಹೇಳಿದರೂ ಸಹಿಸಿಕೊಂಡೇವು. ಅಕ್ಕ ಬಾವನ ಬಗ್ಗೆ ಮೂರೇ ಮೂರು ಮಾತುಗಳನ್ನು ಆಡಿದರೂ ಸಹಿಸಲಾರೆವು. ಯಾಕೆಂದರೆ ಅವರು ನಮ್ಮಷ್ಟು ಕೆಟ್ಟವರಲ್ಲ. ಅನಾರೋಗ್ಯದ ನಡುವೆಯೂ ಸ್ವಾವಲಂಬಿ, ಸ್ವಾಭಿಮಾನದ ಬದುಕು ಸಾಗಿಸುತ್ತಿರುವ ಅಕ್ಕ ಬಾವನನ್ನು ನೋಡಿದಾಗ ನನ್ನ ತಾಳ್ಮೆ ಜಾಗೃತವಾಗುತ್ತದೆ. ನಾನು ಬರೀ ಬರೆಯಬಲ್ಲೆ. ಅವರು ಬದುಕಿ ತೋರಿಸಿದರು. ನೋವನ್ನು ಮೆಟ್ಟಿ ನಿಂತು ಸಮಾಜದ ಇತರರಿಗೆ ಮಾದರಿಯಾದರು.
ಸದ್ಗುರು ಶ್ರೀಧರರ ಆಶೀರ್ವಾದ ಎಂ.ಜಿ.ಹೆಗಡೆ ಸರ್ ಹಾಗೂ ಮುಕಾಂಬಕ್ಕನ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

ಎಮ್. ಜಿ.ಹೆಗಡೆ ಹಾಗೂ ಮುಕಾಂಬಾ ದಂಪತಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?9480460029

??????⚫⚪???????⚫⚪?????