ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀ ಜಿ.ಆರ್.ನಾಯ್ಕ

ಸಂಭ್ರಮದ ಬದುಕನ್ನೇ ಎಲ್ಲರಿಗೂ ದೇವರು ಉಡುಗೊರೆಯಾಗಿ ಮೊದಲೇ ನೀಡಿರುವುದಿಲ್ಲ. ಕೆಲವೊಮ್ಮೆ ಬದುಕಿನ ಸಂಭ್ರಮವನ್ನು ನಾವೇ ಅರಸಬೇಕಾಗುತ್ತದೆ. ಕೆಲವೊಮ್ಮೆ ಬೇರೆಯವರ ಬದುಕಿಗೆ ನಾವು ಸಂಭ್ರಮವಾದರೆ ನಮಗೂ ಅದರಲ್ಲಿ ಪಾಲು ದೊರೆಯುತ್ತದೆ. ಡನ್ ಲೆಪ್ ಹಾಸಿಗೆಯ ಮೇಲೆ ಮಲಗುವವನಿಗೂ ದುಸ್ವಪ್ನಗಳು ಬೀಳಬಹುದು ಮತ್ತು ಮೋರಿಗಂಡಿಯಲ್ಲಿ ಮಲಗಿದವನಿಗೂ ಸುಖನಿದ್ರೆ ಬರಬಹುದು. ಎಷ್ಟೋ ಜನ ರಾತ್ರಿಗಳನ್ನು ಬಸ್ ಸ್ಟ್ಯಾಂಡಿನಲ್ಲೇ ಕಳೆಯುವುದಿಲ್ಲವೇ?! ಹೀಗಾಗಿ ಸಂಬಳ, ಅಂತಸ್ತು, ಬಂಗಾರ, ಇವುಗಳ ಮೇಲೆ ಒಬ್ಬ ವ್ಯಕ್ತಿಯ ಸಂತೋಷದ ಶ್ರೇಯಾಂಕ ನಿರ್ಧರಿತವಾಗುವುದಿಲ್ಲ. ಉನ್ನತ ಅಧಿಕಾರಿಗಳು ಎಷ್ಟೋ ಜನ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಗಮನಿಸಿದಾಗ ವ್ಯಕ್ತಿಯ ನೆಮ್ಮದಿಯ ಬಾಳ್ವೆಗಾಗಿ ಭಗವಂತನ ಆಶೀರ್ವಾದವೂ ಅಗತ್ಯ ಎಂಬುದು ನನ್ನ ನಂಬಿಕೆ. ಇಂದು ನನ್ನ ಆತ್ಮೀಯ ಗುರುಗಳಾದ ಶ್ರೀಯುತ ಜಿ.ಆರ್.ನಾಯ್ಕರು ಅಕ್ಷರ ಅತಿಥಿ.
ನನ್ನ ಜೀವನದಲ್ಲಿ ಸಿಕ್ಕ ಅತಿ ಕಿರಿಯ ವಯಸ್ಸಿನ ಗುರು ಶ್ರೀ ಜಿ.ಆರ್. ನಾಯ್ಕ ಸರ್. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಸಾಲಕೋಡ ನಿವಾಸಿಗಳಾಗಿರುವ ನಮ್ಮ ಸರ್ ಪ್ರಸ್ತುತ ಪ್ರಗತಿ ವಿದ್ಯಾಲಯ ಮೂರೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾನು S.S.L.C ಯಲ್ಲಿರುವಾಗ ಶ್ರೀಯುತ ಎ.ಕೆ.ಶೇಟ್ ಸರ್ ಅವರು ನಿವೃತ್ತಿ ಹೊಂದಿದ ಸ್ಥಳಕ್ಕೆ ಶ್ರೀಯುತ ಜಿ.ಆರ್.ನಾಯ್ಕ ಸರ್ ಅವರನ್ನು ನಿಯುಕ್ತಿಗೊಳಿಸಲಾಗಿತ್ತು. ಭೂಗೋಳ, ಅರ್ಥಶಾಸ್ತ್ರಗಳ ಕೆಲವೇ ಕೆಲವು ಅಧ್ಯಾಯಗಳು ಉಳಿದಿದ್ದು ಅದನ್ನು ಯಾರು ನಮಗೆ ಕಲಿಸುತ್ತಾರೆಂದು ಕಾದು ಕುಳಿತಿದ್ದವರಿಗೆ ಪ್ರತ್ಯಕ್ಷವಾದವರು ಶ್ರೀಯುತ ಜಿ.ಆರ್.ನಾಯ್ಕ ಸರ್. ಅವರಿಗೆ ನಮಗಿಂತ ಸ್ವಲ್ಪ ದೊಡ್ಡ ಮೀಸೆ ಇತ್ತು ಅಷ್ಟೇ….? ಅತಿ ಚಿಕ್ಕ ವಯಸ್ಸಿನ ಮೇಷ್ಟ್ರು ಒಬ್ಬರನ್ನು ಕಂಡಾಕ್ಷಣ ನಾವೆಲ್ಲ ಒಂದು ಕ್ಷಣ ಆಶ್ಚರ್ಯಚಕಿತರಾದದ್ದು ಸುಳ್ಳಲ್ಲ. ನಾನು ಅವರು ಯಾವಾಗ ವರ್ಗಕೋಣೆಗೆ ಬರುತ್ತಾರೆಂಬುದನ್ನೇ ಕಾಯುತ್ತಿದ್ದೆ. ಅವರು ಮೊದಲ ಬಾರಿ ತರಗತಿಗೆ ಬಂದ ನೆನಪು ನನಗೀಗಲೂ ಇದೆ. ಅವರ ಧ್ವನಿಯೇ ಅತ್ಯಂತ ವಿಶೇಷವಾಗಿ ಕಂಡಿತು ನನಗೆ. ? ಅವರು ಬಾಯಿಯಿಂದ ಮಾತಾಡುತ್ತಿರಲಿಲ್ಲ. ಗಂಟಲಿನಿಂದ ಮಾತಾಡುತ್ತಿದ್ದರು. ? ಅವರ ಧ್ವನಿಯಲ್ಲಿ boss sound effect ಭರ್ಜರಿಯಾಗಿತ್ತು. ಹೀಗಾಗಿ ಅವರು ಕ್ಲಾಸಿನಲ್ಲಿ ಮಾತಾಡಿದರೂ ನಮಗೆ ಮೈಕಿನಲ್ಲಿ ಮಾತಾಡಿದಷ್ಟು ಸ್ಪಷ್ಟವಾಗಿ ಕೇಳುತ್ತಿತ್ತು. ಈ ಕಾರಣದಿಂದಲೇ ನನಗೆ ಅವರು ಕಲಿಸಿದ್ದು ನಾಲ್ಕೇ ಪಾಠವಾದರೂ ನಲವತ್ತು ವರ್ಷಗಳಾದರೂ ನೆನಪಿರುತ್ತದೆ. ?
ವರ್ಣಮಾತ್ರಂ ಕಲಿಸಿದಾತಂ ಗುರು…. ಗುರು… ಗುರು….ಎಂದು ನಮ್ಮ ಕನ್ನಡ ಮೇಷ್ಟ್ರು ನೂರಾರು ಬಾರಿ ಹೇಳಿದ್ದು ನನಗೆ ನೆನಪಿರುವುದರಿಂದ ಜಿ.ಆರ್. ನಾಯ್ಕ ಸರ್ ನನ್ನನ್ನು ಒಬ್ಬ ಆತ್ಮೀಯ ಗೆಳೆಯನಂತೆ ನಡೆಸಿಕೊಂಡರೂ ನನಗೆ ಅವರ ಬಗೆಗೆ ಈಗಲೂ ಭಯ ಭಕ್ತಿ. ಹೀಗಾಗಿ ಮೊದಲು ಸರ್ ಎಂದು ನಮಸ್ಕಾರ ಕೊಟ್ಟು ಮುಂದಿನ ಮಾತು ಪ್ರಾರಂಭಿಸುತ್ತೇನೆ.
ಜಿ.ಆರ್.ನಾಯ್ಕ ಸರ್ ಒಬ್ಬ ಪ್ರತಿಭಾ ಸಂಪನ್ನ ಗುರುಗಳು. ಕಾರ್ಯಕ್ರಮ ಸಂಘಟನೆ, ನಿರೂಪಣೆ, ಜವಾಬ್ದಾರಿಯುತ ನಡವಳಿಕೆ, ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಅವರು ಅಪಾರ ಸ್ನೇಹಿತರ ಬಳಗ ಹೊಂದಿದ್ದಾರೆ. ವಿದ್ಯಾರ್ಥಿಗಳಿಗೆ ಅವರು ಅಚ್ಚುಮೆಚ್ಚಿನ ಜಿ.ಆರ್. ಸರ್….. ಅವರು ಕ್ರಿಯಾಶೀಲವಾಗಿರಬೇಕೆಂಬ ಮನಸ್ಸು ಉಳ್ಳವರು ಮತ್ತು ಎಲ್ಲರ ಜೊತೆ ಅವರು ಅತ್ಯಂತ ಪ್ರೀತಿಯಿಂದ ಬೆರೆಯುತ್ತಾರೆ.
‌ ಜಿ.ಆರ್ ನಾಯ್ಕ ಸರ್ ಮಾತನಾಡುವದರಲ್ಲೇ ಆಪ್ತತೆಯಿದೆ. ನನ್ನ ಅಂಕಣಗಳು, ಸಾಹಿತ್ಯಿಕ ಚಟುವಟಿಕೆಗಳನ್ನು ತುಂಬು ಹೃದಯದಿಂದ ಪ್ರೋತ್ಸಾಹಿಸುವ ಅವರು ಧನಾತ್ಮಕವಾಗಿ ಸ್ಪಂದಿಸುತ್ತಾರೆ. ನಮ್ಮ ಕನಸಿನ ಶಾಲೆಯಲ್ಲಿ ಕಗ್ಗವನ್ನು ವಿಶ್ಲೇಷಿಸುವ ಖಾಯಂ ಅಂಕಣಕಾರರು ಅವರು. ಹೀಗಾಗಿ ಜಿ. ಆರ್. ಸರ್ ಸಲಹೆಗಳನ್ನು ಆಗಾಗ ಕೇಳುತ್ತ ನಾನು ಮುನ್ನಡಿಯಿಡುತ್ತೇನೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

‌‌‌ ಜಿ.ಆರ್ ಸರ್ ಸಾಮಾಜಿಕವಾಗಿ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತಾರೆ. ಹಿರಿಯ ಕಿರಿಯರೆಂಬ ಬೇಧವಿಲ್ಲದೇ ಎಲ್ಲರ ಜೊತೆಗೆ ಒಂದಾಗುವ ಅವರು ಕಷ್ಟಗಳಿಗೆ ಸ್ಪಂದಿಸುವ ಗುಣವುಳ್ಳವರು. ಹೊಸತನ್ನು ಕಲಿಯಬೇಕೆಂಬ ಉತ್ಸಾಹ ಅವರಲ್ಲಿ ಯಾವಾಗಲೂ ಮನೆಮಾಡಿಯೇ ಇರುತ್ತದೆ. ಅವರ ಮಡದಿ ವನಿತಾ ಟೀಚರ್ ಕೂಡ ಒಬ್ಬ ಪ್ರತಿಭಾಸಂಪನ್ನ ಗುರುಮಾತೆ. ಚುರುಕಾದ, ಓದಿನ ಆಸಕ್ತಿ ಹೊಂದಿದ ಮಕ್ಕಳು. ನೆಮ್ಮದಿಯುತ ಬಾಳ್ವೆ ಅವರದ್ದು.
‌‌‌‌‌‌‌ ನನ್ನ ಈವರೆಗಿನ ಎಲ್ಲಾ ಸಂಚಿಕೆಗಳನ್ನೂ ಅತ್ಯಂತ ಆಸಕ್ತಿಯಿಂದ ಗಮನಿಸಿ ಪ್ರತಿಯೊಂದು ವ್ಯಕ್ತಿ ಚಿತ್ರವನ್ನೂ ಸದ್ಭಾವದಿಂದ ವಿಮರ್ಶಿಸುವ ಅವರು ನನ್ನ ಅಂಕಣಕ್ಕೆ ಅತ್ಯಂತ ವಿಷದವಾಗಿ ಪ್ರತಿಕ್ರಿಯೆ ನೀಡುವುದು ನನಗೊಂದು ಕಪ್ Boost energy ಕುಡಿದಷ್ಟು ಸಂತೋಷವಾಗುತ್ತದೆ.
ಜಿ.ಆರ್ ನಾಯ್ಕ ಸರ್ ಅವರಲ್ಲಿ ನಾನು ವಿಶೇಷವಾಗಿ ಗಮನಿಸುವುದು ಅವರ ಕೆಲಸದೊಳಗಿನ ಬದ್ಧತೆ. ಹಿಡಿದ ಕೆಲಸದಿಂದ ಅವರು ವಿಮುಖವಾಗುವುದಿಲ್ಲ.‌ ನಾನು ಅವರಿಂದ ಅದೆಷ್ಟೋ ಬಾರಿ ಪ್ರೇರಿತನಾಗುತ್ತೇನೆ.
A teacher is not only a teacher but also a good friend, philosopher ಎಂಬ ವಾಕ್ಯ ಜಿ ಆರ್. ಸರ್ ಅವರನ್ನು ನೋಡಿದ ಮೇಲೆ‌ ನನಗೆ ಸರಿಯಾಗಿ ಅರ್ಥವಾಗಿದೆ. ನನ್ನನ್ನು ಅವರು ತನ್ನ ವಿದ್ಯಾರ್ಥಿ ಎಂದು ಪರಿಚಯಿಸಿದರೆ ಅಪರಿಚಿತ ನೋಡುಗರಿಗೆ ಖಂಡಿತ ಆಶ್ಚರ್ಯ ಆಗದಿರದು.‌ ಆಗಾಗ ಅವರ ಜೊತೆ ಮಾತನಾಡಿ ಖುಷಿ ಪಡುತ್ತೇನೆ. ಅವರೂ ಆಗಾಗ ಮಾತನಾಡಿಸಿ ಖುಷಿ ತುಂಬುತ್ತಾರೆ.
ಸಾಕು ಎಂಬ ತೃಪ್ತಿ ಇರುವವನಿಗೆ ಬದುಕನ್ನು ಹೆಚ್ಚಾಗಿ ಅನುಭವಿಸುವುದಕ್ಕೆ ಸಾಧ್ಯ. ಬೇಕು ಎಂಬ ಹಪಹಪಿಕೆಯ ಮನುಷ್ಯನ ಮಕ್ಕಳು ಹೆಚ್ಚು ಸುಖಿ. ಅವರು ಅಪ್ಪನ ಆಸ್ತಿಯನ್ನೇ ಭೋಗಿಸಿ ಐಷಾರಾಮಿ ಬದುಕು ಮಾಡುತ್ತಾರೆ. ಜಿ.ಆರ್ ನಾಯ್ಕ ಸರ್ ಬಡತನದಿಂದ ಮೇಲೆದ್ದು ಬಂದ ವ್ಯಕ್ತಿ. ಹೀಗಾಗಿಯೇ ಅವರದ್ದು ಕರುಣೆ ತುಂಬಿದ ಹೃದಯ. ಅವರ ಕಾರ್ಯಗಳನ್ನು ನಾನು ಅವರೊಬ್ಬ ವಿದ್ಯಾರ್ಥಿಯಾಗಿ ಸದಾ ಬೆಂಬಲಿಸುತ್ತೇನೆ….ಹಾಗೆಯೇ ಅವರೂ ನನ್ನನ್ನು ಅಷ್ಟೇ ಆದರದಿಂದ ಕಾಣುತ್ತಾರೆ. ಜಿ.ಆರ್. ನಾಯ್ಕರಿಗೆ ಅವರದೇ ಆದ ಆತ್ಮೀಯ ಅಭಿಮಾನಿ ವಿದ್ಯಾರ್ಥಿ ಬಳಗ ಇದೆ. ಅವರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತಾ ಅವರನ್ನು ದಡ ಹತ್ತಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ. ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಿದರೂ ಅಲ್ಲಿ ತಮ್ಮ ಹೆಜ್ಜೆ ಗುರುತನ್ನು ಅವರು ಮೂಡಿಸಿಯೇ ಮೂಡಿಸುತ್ತಾರೆ. ಆಗಾಗ ಆತ್ಮೀಯರನ್ನು ಭೇಟಿ ಮಾಡುತ್ತಾ ಅವರ ಆರೋಗ್ಯ ವಿಚಾರಿಸಿ ಅವರ ನೋವು ನಲಿವುಗಳಲ್ಲಿ ಭಾಗಿಯಾಗುವ ನಮ್ಮ ಸರ್ ಅನೇಕರಿಗೆ ಕುಟುಂಬದ ಒಬ್ಬ ಸದಸ್ಯರಿದ್ದಂತೆ. ಜಿ.ಆರ್. ನಾಯ್ಕರ ಆದರ್ಶಗಳು ಅನುಕರಣೀಯವಾದದ್ದು. ಅನುಸರಣೀಯವಾದದ್ದು. ಸಂಸಾರದ ಬಂಧನಕ್ಕಷ್ಟೇ ಸೀಮಿತವಾಗದೇ ಸಮಾಜಮುಖಿಯಾಗಿ ಕಾರ್ಯ ತತ್ಪರವಾಗುವ ಅವರು ಸದಾ young and energetic ಆಗಿಯೇ ಕಾಣುತ್ತಾರೆ. ನನ್ನ ಗುರುವಾದ ಅವರಿಗೆ ನನ್ನ ಮಗಳಿಗಿಂತ ಚಿಕ್ಕ ಮಗನಿದ್ದಾನೆ. ? ನಮ್ಮ ಸರ್ ಗೆ ಜಯವಾಗಲಿ. ಜಯವಾಗುತ್ತಲೇ ಇರಲಿ.
ಸದ್ಗುರು ಶ್ರೀಧರರ ಆಶೀರ್ವಾದ ಜಿ.ಆರ್ ನಾಯ್ಕ ಸರ್ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಇರುವುದೆಲ್ಲವ ಬಿಟ್ಟು ಇಲ್ಲದುದರೆಡೆಗೆ...

ಶ್ರೀ ಜಿ ಆರ್ ನಾಯ್ಕ ಸರ್ ಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 94803 40723

??????⚫⚪???????⚫⚪?????