ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀಮತಿ ಭಾರತಿ ರಾಘವೇಂದ್ರ – ಅಂಕೋಲಾ
ಜೀವನದ ದಿನಗಳು ರೈಲು ಸಂಚಾರವಿದ್ದಂತೆ. ಒಮ್ಮೊಮ್ಮೆ ಸಂತೋಷವಿದ್ದಾಗ ಅತ್ಯಂತ ವೇಗದಿಂದ ದಿನಗಳು ಓಡುತ್ತಿದ್ದಂತೆ ಭಾಸವಾಗುತ್ತದೆ. ಯಾವುದಾದರೂ ನಿಲ್ದಾಣ ಬರುವುದರಲ್ಲಿದ್ದಾಗ ಅಥವಾ ಅಲ್ಲಿಂದ ಹೊರಡುವಾಗ ನಿಧಾನಗತಿಯನ್ನು ತೋರುತ್ತದೆ. ಅದೆಷ್ಟೋ ಪ್ರಯಾಣಿಕರು ನಾವಿರುವ ರೈಲು ಭೋಗಿಯಲ್ಲಿಯೇ ಪ್ರಯಾಣಿಸುತ್ತಾರೆ. ಬಹುತೇಕ ಅವರ್ಯಾರು ಅಂತ ನಮಗೆ ಗೊತ್ತಿರುವುದಿಲ್ಲ. ನಾವ್ಯಾರು ಅಂತ ಅವರಿಗೆ ಬೇಕಾಗಿರುವುದಿಲ್ಲ. ನಮ್ಮ ಪ್ರಯಾಣದ ಊರು ಯಾವಾಗ ಬರುತ್ತದೆ ಎಂಬುದರ ಕಡೆಗೆ ಮಾತ್ರ ನಮ್ಮ ಗಮನ. ಆದರೂ ರೈಲು ಭೋಗಿಯಲ್ಲಿ ನಾವೊಬ್ಬರೇ ಪ್ರಯಾಣಿಸುವುದು ಅತ್ಯಂತ ಬೋರಿನ ಸಂಗತಿ. ಕಾಣುವುದಕ್ಕೋ ಕೇಳುವುದಕ್ಕೋ ಮಾತಾಡುವುದಕ್ಕೋ ಜನರಿರಬೇಕಯ್ಯಾ ಜನರಿರಬೇಕು. ಮನುಷ್ಯ ಸಂಘ ಜೀವಿ Man is a social animal….ಎಂಬುದು ಇದಕ್ಕೇ ಅಲ್ಲವೇ?! ? ಸಂಬಂಧಕ್ಕಿಂತ ಸಂಗೀತದ ಮೂಲಕವೇ ಹೆಚ್ಚು ಹತ್ತಿರವಾದ ಸಹೋದರಿ ಭಾರತಿ ನನ್ನ ಇಂದಿನ ಅಕ್ಷರ ಅತಿಥಿ.
ಶ್ರೀಮತಿ ಭಾರತಿ ಹೆಗಡೆ ಅಂಕೋಲಾ ನಿವಾಸಿ. ಪತಿ ರಾಘವೇಂದ್ರ ಭಟ್ಟ ಹಾಗೂ ಭಾರತಿ ಇಬ್ಬರೂ ಪ್ರತಿಭಾ ಸಂಪನ್ನ ಶಿಕ್ಷಕರು. ಭಾರತಿ ನನಗೆ ದೂರದ ಸಂಬಂಧಿ. ಅದಕ್ಕಿಂತ ಹೆಚ್ಚಾಗಿ ನಮ್ಮ ಪಂಡಿತ್ ಜಿ.ಆರ್.ಭಟ್ಟರ ಒಬ್ಬ ನಿಷ್ಠಾವಂತ ಶಿಷ್ಯೆ ಅವಳು. ಸಂಗೀತವನ್ನೇ ಜೀವನದ ಉಸಿರಾಗಿಸಿಕೊಂಡು ಅದೆಷ್ಟೋ ಜನರಿಗೆ ಬದುಕು ಕೊಟ್ಟ ಪಂಡಿತ ಜಿ.ಆರ್.ಭಟ್ಟರ ಶಿಷ್ಯರು ಅವರಿಂದ ಸಂಗೀತವನ್ನಷ್ಟೇ ಕಲಿತವರಲ್ಲ… ಸಜ್ಜನಿಕೆಯನ್ನೂ ಕಲಿತವರು. ಸಹೋದರಿ ಭಾರತಿಯೂ ಅಂಥವರಲ್ಲಿ ಒಬ್ಬಳು.
ಊಸಿದರೆ ಹಾರಿ ಹೋಗುವ ಶರೀರವಾದರೂ ? ಶಾರೀರ ಮಾತ್ರ ದೇವರ ಅಪರೂಪದ ವರ ಅವಳಿಗೆ. ಚಿಕ್ಕಂದಿನಿಂದಲೇ ಸಂಗೀತದ ಆಸಕ್ತಿ ಬೆಳೆಸಿಕೊಂಡ ಭಾರತಿ ಅತ್ಯಂತ ಸುಶ್ರಾವ್ಯವಾಗಿ ಹಾಡಿ ಅನೇಕ ವಿದ್ಯಾರ್ಥಿಗಳಿಗೆ ಸಂಗೀತದ ಪಾಠವನ್ನೂ ಮಾಡಿದ್ದಾಳೆ. ನನ್ನ ಕನಸಿನ ಶಾಲೆಯ ಸಕ್ರಿಯ ಸಂಪನ್ಮೂಲ ಶಿಕ್ಷಕಿ ಆಗಿರುವ ಅವಳ ಭಾವಗೀತೆಗಳು ಎಂತಹ ಬೇಸರದ ಮುಖಗಳಲ್ಲೂ ಸಂತೋಷವನ್ನು ಚಿಮ್ಮಿಸಬಲ್ಲವು. ಭಾರತಿ ಭಾರತೀಯ ಸಂಪ್ರದಾಯದ ಹೆಣ್ಣುಮಗಳು.
ಹಾಗೆ ನೋಡಿದರೆ ಬದುಕಿನ ಪ್ರತಿಯೊಂದು ಪರೀಕ್ಷೆಯೂ ಅವಳಿಗೆ ಅತ್ಯಂತ ಕಠಿಣವಾದದ್ದು. ಯಾರೂ ಪಾಸಾಗಲಾರದ ಪ್ರಶ್ನೆಗಳನ್ನು ಅವಳಿಗೆ ಬದುಕು ಕೇಳಿತು. ಚಿಕ್ಕಂದಿನಲ್ಲೇ ಸಹೋದರನನ್ನು ಕಳೆದುಕೊಂಡ ಭಾರತಿ ತೀರಾ ಇತ್ತೀಚಿಗೆ ತಂದೆಯವರಿಗೆ ಹೊಸ ಕಣ್ಣು ಕೊಡಿಸಲು ಹೋಗಿ ತಂದೆಯವರನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ವಿಧಿಯಾಟವನ್ನು ತಡೆಯುವುದಕ್ಕೆ ಯಾರಾದರೂ ಶಕ್ಯ ಹೇಳಿ?! ಆದರೂ ಸಮಚಿತ್ತಳಾಗಿ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಅವಳು ಅತ್ಯುತ್ತಮ ನಿರೂಪಕಿ, ಭಾಷಾ ಸಂಪನ್ಮೂಲ ವ್ಯಕ್ತಿ, ಸಂಗೀತಗಾರ್ತಿ, ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಅತ್ಯುತ್ತಮ ಶಿಕ್ಷಕಿ.
ಸಹೋದರಿ ಭಾರತಿಗೆ ನನ್ನನ್ನು ಕಂಡರೆ ಅಷ್ಟೇ ಅಭಿಮಾನ ಪ್ರೀತಿ. ನನ್ನ ಅದೆಷ್ಟೋ ಹಾಡುಗಳಿಗೆ ಸ್ವತಃ ತಾನೇ ರಾಗ ಸಂಯೋಜಿಸಿ ಹಾಡುಗಳಿಗೆ ಧ್ವನಿಯಾಗುತ್ತಾಳೆ. ಭಾವಗೀತೆಗಳನ್ನು ಅತಿಯಾಗಿ ಇಷ್ಟ ಪಡುವ ನನಗೆ ಅವಳು ಹಾಡುವ ಯಾಕೋ ಕಾಣೆ ರುದ್ರವೀಣೆ, ಬರುವುದೆಲ್ಲ ಬರಲಿ ಬಿಡು… ಈ ಮುಂತಾದ ಭಾವಗೀತೆಗಳನ್ನು ಅವಳ ಧ್ವನಿಯಲ್ಲಿ ಕೇಳುವುದೇ ಸೊಗಸು.
ಭಾರತಿಯ ಮನೆಯವರು ಪ್ರಖ್ಯಾತ ಕೊಡ್ಲೆಕೆರೆ ಕುಟುಂಬದವರು. ಸಾಹಿತ್ಯ, ಸಂಗೀತ, ಪ್ರತಿಭಾವಂತರ ಕಣಜವೇ ಅವರ ಕುಟುಂಬದಲ್ಲಿ ತುಂಬಿಕೊಂಡಿದೆ. ಹೀಗಾಗಿ ಸಹಜವಾಗಿಯೇ ಭಾರತಿಗೂ ಸಂಪೂರ್ಣ ಅವಕಾಶ, ಸ್ವಾಯತ್ತತೆ ಕುಟುಂಬದಿಂದ ದೊರಕುತ್ತದೆ. ತಾನೂ ಏನಾದರೂ ಕಲಿಯಬೇಕು. ಕಲಿತದ್ದನ್ನು ನಾಲ್ಕು ಜನರಿಗೆ ಹಂಚ ಬೇಕೆಂಬ ಅವಳ ಉತ್ಸಾಹ ಒಬ್ಬ ಶಿಕ್ಷಕನಾಗಿ ನಾನು ಅವಳಲ್ಲಿ ಮೆಚ್ಚುವಂತದ್ದು. ಶಿಕ್ಷಕನೆಂದರೆ ಆತ ದಿನವೂ ವಿದ್ಯಾರ್ಥಿಯೇ.
ಭಾರತಿ ನಮ್ಮ ಕನಸಿನ ಶಾಲೆಯಲ್ಲಿ ಭಾವ ಲಹರಿ ನಡೆಸಿಕೊಡುವದರ ಮೂಲಕ ಮಕ್ಕಳಿಗೆ ಹೊಸ ಹೊಸ ಗೀತೆಗಳನ್ನು ಪರಿಚಯಿಸುತ್ತಾಳೆ. ಸಂಕೋಚ ಹಾಗೂ ಸ್ವಾರ್ಥ ಎರಡನ್ನೂ ತೋರದ ಭಾರತಿ ಅನ್ಯರ ಸುದ್ದಿ, ತಂಟೆ, ತಕರಾರಿಗೆ ಹೋಗದ ಸಭ್ಯ ಹೆಣ್ಣು ಮಗಳು.
ಪಂಡಿತ ಜಿ.ಆರ್.ಭಟ್ಟ ಬಾಳೆಗದ್ದೆ ಅವರ ಹತ್ತಿರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದ ಸಹೋದರಿ ಭಾರತಿ ಅವರಿಗೆ ಅಚ್ಚುಮೆಚ್ಚಿನ ಶಿಷ್ಯೆಯಾಗಿದ್ದಳು. ಅವಳು ಮತ್ತು ಅವರ ಬಳಗ ಇಂದಿಗೂ ಅವರನ್ನು ಸ್ಮರಿಸಿಕೊಂಡು ಸಂಗೀತ ಕಛೇರಿ ನಡೆಸುತ್ತಾ ನಾಲ್ಕಾರು ಮಕ್ಕಳಿಗೆ ಸಂಗೀತ ಹೇಳಿಕೊಡುವ ಪರಂಪರೆಯನ್ನು ಮುಂದುವರಿಸಿದ್ದಾರೆ.
ಗಾಯನ ಕಲೆ ಎಲ್ಲರಿಗೂ ಒಲಿಯುವುದಲ್ಲ. ಸತತ ಅಭ್ಯಾಸದ ಜೊತೆಗೆ ದೇವರ ಆಶೀರ್ವಾದ ಕೂಡ ಬೇಕು. ಕಲಾವಿದರು ತಾವಷ್ಟೇ ರಂಜನೆ ಹೊಂದುವುದಿಲ್ಲ. ತಮ್ಮೆದುರು ಕುಳಿತ ಅಭಿಮಾನಿ ಶ್ರೋತೃಗಳನ್ನೂ ತಲೆದೂಗುವಂತೆ ಮಾಡುತ್ತಾರೆ. ಅಂತಹ ಸಾಧಕಿ ನಮ್ಮ ಸಹೋದರಿ ಆಗಲೆಂಬುದೇ ನಮ್ಮ ಶುಭ ಹಾರೈಕೆ.
ಬಹಳ ಜನ ಹಾಡುಗಾರರನ್ನು ನಾನು ಆತ್ಮೀಯವಾಗಿ ಗಮನಿಸುವಾಗ ಅವರಿಗೆ ತಮ್ಮ ಹಾಡುಗಳನ್ನು ಬೇರೆಯವರು ಕೇಳಬೇಕೆಂಬ ಆಕಾಂಕ್ಷೆಯೇ ಅಧಿಕವಾಗಿರುತ್ತದೆ ಮತ್ತು ಅವರು ಬೇರೆಯವರು ಹಾಡುವಾಗ ಎದ್ದು ನಡೆದು ಬಿಡುತ್ತಾರೆ. ? ಆದರೆ ಹಾಡಲು ಬರದ ನಮ್ಮಂಥ ಜನ ಕೊನೆಯವರೆಗೂ ರಸಗವಳ ಸವಿದಂತೆ ಗಾಯನವನ್ನು ಆಸ್ವಾದಿಸಿ ಕಲಾವಿದರಿಗೊಂದೆರಡು ಅಭಿಮಾನದ ಮಾತುಗಳನ್ನು ಹೇಳಲು ಉತ್ಸುಕರಾಗುತ್ತೇವೆ. ಸಮಾಜವನ್ನು ಸಂತೋಷವಾಗಿಡುವ ಕಲಾವಿದರ ಸಂಖ್ಯೆ ಬೆಳೆಯಲಿ. ಅಂತಹ ಕಲಾವಿದರುಗಳಿಂದ ನವ ನವೋಲ್ಲಾಸ ಸದಾ ಸಮಾಜಕ್ಕೆ ಸಿಗುವಂತಾಗಲಿ. ರಾಕ್ಷಸೀ ಪ್ರವೃತ್ತಿಗಳಿಂದ ಸಮಾಜದ ಸ್ವಾಸ್ಥ್ಯ ಕೆಡಿಸುವವರ ಸಂಖ್ಯೆ ಇಳಿಮುಖವಾಗಬೇಕು…. ಅಥವಾ ಸಂಪೂರ್ಣ ನಿರ್ನಾಮವಾಗಬೇಕು. ಸಂಗೀತಗಾರರಲ್ಲಿರುವ ವಿಧೇಯತೆ ಮತ್ತು ಗುರುಗಳನ್ನು ಅವರು ಗೌರವಿಸುವ ರೀತಿಯನ್ನು ನಾನು ಮತ್ತೆಲ್ಲೂ ನೋಡಿಲ್ಲ. ಕಲಾವಿದೆ, ಶಿಕ್ಷಕಿ, ಸಹೋದರಿ ಭಾರತಿಯ ಬಾಳು ಹಸನಾಗಿರಲಿ, ಹಸಿರಾಗಿರಲಿ. ಮಗನೂ ಮುಂದೊಂದು ದಿನ ಪ್ರಖ್ಯಾತ ಗಾಯಕನಾಗಲಿ ಎಂಬ ಸದಾಶಯ ನನ್ನದು.
ಸದ್ಗುರು ಶ್ರೀಧರರ ಆಶೀರ್ವಾದ ಭಾರತಿ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಭಾರತಿಗೆ ನನ್ನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
??????⚫⚪???????⚫⚪?????