ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀಮತಿ ಲಲಿತಾ ರಾಮು ಭಾಗವತ
ಜೀವನವೆಂದರೆ ಏನು?! ಎಂಬ ಒಂದೇ ಪ್ರಶ್ನೆಯ ಮೇಲೆ ಪರೀಕ್ಷೆ ಏರ್ಪಡಿಸಿದರೆ ಬರುವ ಎಲ್ಲಾ ಉತ್ತರಪತ್ರಿಕೆಗಳೂ ವಿಭಿನ್ನವಾಗೇ ಇರುತ್ತದೆ. ಅದಕ್ಕೆ ಮೌಲ್ಯಮಾಪಕರಿಗೆ ಒಂದೇ ಉತ್ತರವಿರುವ key answer ಕೊಟ್ಟಿರುವುದಿಲ್ಲ. ಸಂಗೀತಗಾರರಿಗೆ ಸಂಗೀತವೇ ಜೀವನ. ಶಿಕ್ಷಕರಿಗೆ ಮಕ್ಕಳ ಜೊತೆ ಕಲಿಸಿ ಕಲಿಯುವುದೇ ಜೀವನ. ಕಲಾವಿದನಿಗೆ ಮನರಂಜನೆ ನೀಡುವುದೇ ಜೀವನ. ಅಂಚೆಯವನಿಗೆ ಪತ್ರ ಹಂಚುವುದೇ ಜೀವನ. ಹೀಗೆ ಅವರ ಆಯುಷ್ಯದ ಬಹುತೇಕ ಭಾಗಗಳು ಒಂದು ವ್ಯವಸ್ಥೆಯಲ್ಲಿ ಕಳೆದುಹೋಗುತ್ತದೆ. ಇವ ಅವನನ್ನೂ ಅವ ಇವನನ್ನೂ ನೋಡಿ ಕರುಬುತ್ತಾ ಕುಳಿತುಕೊಂಡರೆ ಅದು ಜೀವನ ಎಂಬ ಪ್ರಶ್ನೆಗೆ ತಪ್ಪಾದ ಉತ್ತರ ಕೊಟ್ಟಂತೆ. ಏನೂ ಮಾಡದೇ ಭೂಮಿಗೆ ಭಾರವಾಗಿ ಬದುಕಿದರೆ ಖಾಲಿ ಪ್ರಶ್ನೆ ಪತ್ರಿಕೆಯನ್ನೇ ಹಿಂದಿರುಗಿಸಿ ಬಂದಂತೆ. ಬರೆಯಬೇಕು ನಾವು ಬರೆಯಲೇ ಬೇಕು. ಅದರೊಳಗೆ ನಮ್ಮ ಆಲೋಚನೆಗೆ ಸಿಲುಕುವ ಸುಂದರ ಅಕ್ಷರಗಳನ್ನು ಮೂಡಿಸಬೇಕು. ನಮ್ಮ ಉತ್ತರ ಪತ್ರಿಕೆ ಹಿಡಿಯುವವನಿಗೆ ನೋಡಿದ ಕೂಡಲೇ ದಿಲ್ ಖುಷ್ ಆಗಬೇಕು. ಜೀವನದಲ್ಲಿ ಪಾಸಾಗಬೇಕು. ನಾನು ಜೀವನದ ಪರೀಕ್ಷೆ ಬರೆಯುವುದನ್ನು ಪಕ್ಕದಲ್ಲೇ ನಿಂತು ನೋಡಿ ಖುಷಿಪಡುವ ಈತನಿಗೊಂದು ಒಳ್ಳೆಯದಾಗಲಿ ಎಂದು ಸದಾ ಹೃದಯದಿಂದ ಹರಸುವ ನನ್ನ ಸಹೋದ್ಯೋಗಿ ಸಹೋದರಿ ಲಲಿತಾ ರಾಮು ಭಾಗವತ ನನ್ನ ಇಂದಿನ ಅಕ್ಷರ ಅತಿಥಿ.
ಲಲಿತಕ್ಕನ ಅಜ್ಜ ನನಗೆ ಮಾವಜ್ಜ. ಹೀಗಾಗಿ ನಾನು ಚಿಕ್ಕಂದಿನಿಂದಲೂ ಲಲಿತಕ್ಕ ಎಂದೇ ಕರೆದು ರೂಢಿ ಇರುವುದರಿಂದ ಶಾಲೆಯಲ್ಲಿ ಸಹೋದ್ಯೋಗಿಯಾಗಿ ಸಿಕ್ಕ ಕಾಲಕ್ಕೂ ಲಲಿತಕ್ಕ ಲಲಿತಕ್ಕೋರು ಆದದ್ದಷ್ಟೇ. ನನ್ನ ಈವರೆಗಿನ ಎಲ್ಲಾ ಕಾರ್ಯಗಳ ಯಶಸ್ಸಿನ ಹಾರ್ದಿಕ ಶ್ರೇಯಸ್ಸು ಅವಳಿಗೂ ಸಲ್ಲಬೇಕು. ಅತ್ಯಂತ ಸಮಾಧಾನದಿಂದ ವಿಷಯ ಭೇದ ತೋರದೇ ಮಾತಿನರ್ಥವನ್ನು ಮೊದಲೇ ಊಹಿಸಿ ಹೀಗೊಂದು ಆಗಬೇಕೆಂದರೆ ಥಟ್ಟನೆ ನೆರವಾಗುವ ಲಲಿತಕ್ಕ ಮನೆ, ಶಾಲೆ ಎರಡೂ ಕಡೆಗೂ ನಿಜವಾದ ಸಹೋದರಿಯ ಸ್ಥಾನ ತುಂಬುತ್ತಾಳೆ.
ಲಲಿತಕ್ಕ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ನೀಲಕೋಡ ಗ್ರಾಮ ನಿವಾಸಿ. ತಂದೆ ತಾಯಿಯರಿಗೆ ಅವರು 6 ಜನ ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಕಡುಬಡತನದಲ್ಲಿ ಕುಗ್ರಾಮದಲ್ಲಿಯೂ ಶಿಕ್ಷಣ ಪಡೆದು ತಾನು ಕಲಿತ ಶಾಲೆಯಲ್ಲಿಯೇ ಕಳೆದ 22 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಲಲಿತಕ್ಕ ತನ್ನ ಅಕ್ಕ ತಂಗಿಯರಿಗೆಲ್ಲಾ ನೆರವಾಗುತ್ತಾ ಕುಟುಂಬಕ್ಕೊಂದು ಆಧಾರವಾಗಿ ಬೆಳೆದು ಬಂದವಳು. ಜೇನುತುಪ್ಪ ಸವಿಯುವವರಿಗೆಲ್ಲಾ ಜೇನುಹುಳದ ಕಡಿತದ ಅನುಭವ ಆಗುವುದಿಲ್ಲ. ಆದರೆ ಕೆಲವರಿಗೆ ಕಡಿತದ ಅನುಭವ ಆದ ಮೇಲೆಯೇ ಜೇನು ಸಿಗುತ್ತದೆ. ಜೀವನದ ಸಂಕಷ್ಟದ ಹೆಜ್ಜೆಗಳನ್ನು ದಾಟಿ ದಿಟ್ಟ ಹಾದಿಯಲ್ಲಿ ನಡೆದ ಲಲಿತಕ್ಕನಿಗೆ ಅಕ್ಕಂದಿರ ಮದುವೆಯಾಗಿ ಮದುವೆಯಾಗುವ ಕಾಲಕ್ಕೂ ವಿಳಂಬವೇ. ಆದರೂ ಆ 6 ಜನ ಅಕ್ಕ ತಂಗಿಯರು ಇಂದಿಗೂ ಒಂದೇ ಬಳ್ಳಿಯಲ್ಲಿ ಆದ ಹೂವುಗಳಂತೆ ಇದ್ದಾರೆ. ಸಹೋದರನೂ ಅಷ್ಟೇ ಪರೋಪಕಾರಿ.
ನಾನು 2011 ರಲ್ಲಿ ವರ್ಗಾವಣೆಗೊಂಡು ಈ ಶಾಲೆಗೆ ಬಂದಾಗ ನನ್ನ ಅಧಿಕೃತ ಆದೇಶವನ್ನು ಇಟ್ಟು ನನ್ನ ಮೊದಲ ದಿನದ ಸಹಿ ಮಾಡಿಸಿಕೊಂಡ ಲಲಿತಕ್ಕ ಈವರೆಗೂ ಒಂದೇ ಒಂದು ಕ್ಷಣ ಮುನಿಸು ತೋರಿದ್ದಿಲ್ಲ. ಮಾತು ಬಿಟ್ಟಿದ್ದಿಲ್ಲ. ಏರಿದ್ದಿಲ್ಲ. ಇಳಿದಿದ್ದಿಲ್ಲ. ನೀನು ಹೀಗೆ ಮಾಡಬೇಕಿತ್ತು. ಹಾಗೆ ಮಾಡಬಾರದಿತ್ತು… ಎಂದವಳಲ್ಲ. ಅಷ್ಟಕ್ಕೂ ಅವಳು ಸುಸಂಸ್ಕೃತ ತುಂಬು ಕುಟುಂಬದಲ್ಲಿ ಬೆಳೆದು ಬಂದವಳಾದ್ದರಿಂದ ಹಸಿವಿದ್ದೂ ಗೊತ್ತು. ಹಸಿದವರಿಗೆ ಕೊಟ್ಟೂ ಗೊತ್ತು. ಸ್ವಂತ ಸಹೋದರನಿಗಿಂತ ಹೆಚ್ಚಾಗಿ ಕಾಣುವ ಅವಳ ಬಗ್ಗೆ ಬರೆಯಲು ನನ್ನ ಅಕ್ಷರಗಳೇ ಸೋತು ಹೋಗುತ್ತವೆ.
ಕಾಳಜಿ ಎನ್ನುವುದು ಬರಿಯ ಬಾಯಿ ಮಾತುಗಳಲ್ಲಿ ಇರುವುದಿಲ್ಲ. ನಾವು ಮಾಡುವ ಕರ್ತವ್ಯ ಮತ್ತು ಕಾರ್ಯಗಳಲ್ಲಿ ಅಡಗಿರುತ್ತದೆ. ನಾನು ಈವರೆಗೂ ಬರೆದ ಪುಸ್ತಕದ ಮೊದಲ ಓದುಗ ಅವಳು. ಮತ್ತು ಅವುಗಳನ್ನು ಯಾವತ್ತೂ ಹಾಗೆಯೇ ತೆಗೆದುಕೊಂಡು ಅಭ್ಯಾಸವೇ ಇಲ್ಲ ಅವಳಿಗೆ. ಅಷ್ಟು ಖುಷಿ ಹಾಗೂ ಸಂಭ್ರಮದಿಂದ ಹರಸಿರುವುದಕ್ಕೇ ನಾನಿಂದು 25 ಕೃತಿಗಳನ್ನು ಬರೆದು ನಿಲ್ಲುವುದಕ್ಕೆ ಸಾಧ್ಯವಾಯ್ತು. ಮಕ್ಕಳಿಗೆ ಮೋಸ ಮಾಡದ ಕ್ರಿಯಾಶೀಲ ಶಿಕ್ಷಕಿ ಅವಳು. ಪ್ರತಿಭಾ ಕಾರಂಜಿ, ವಾರ್ಷಿಕೋತ್ಸವ ಬಂದರಂತೂ ಅವಳದ್ದು ವಿಶೇಷ ತಯಾರಿ. ಅವಳನ್ನು ಪ್ರೋತ್ಸಾಹಿಸಿ ಅವಳಿಗೆ ಅನುಕೂಲವಾಗಬಲ್ಲ ಸಾಮಗ್ರಿಗಳನ್ನು ಒದಗಿಸುವುದಷ್ಟೇ ನಮ್ಮ ಕೆಲಸ. ಅತಿ ಉತ್ಸಾಹದಿಂದ ಈವರೆಗೂ ಅವಳು ಅದನ್ನು ನಿರ್ವಹಿಸಿದ್ದಾಳೆ.
ಎಷ್ಟೋ ಸಲ ಶಾಲೆಯ ವಾರ್ಷಿಕೋತ್ಸವ ನಡೆಯುವಾಗ ಕಾರ್ಯಕ್ರಮ ನಿರ್ವಹಣೆ ಅದೂ ಇದೂ ಜವಾಬ್ದಾರಿ ನಡುವೆ ನೀರು ಕುಡಿಯುವುದಕ್ಕೂ ಪುರುಸೊತ್ತು ಇರುವುದಿಲ್ಲ….. ಮತ್ತು ಮನರಂಜನೆಯನ್ನು ಸವಿಯುತ್ತಿದ್ದವರಿಗೆ ಅದರ ಹಿಂದಿನ ಕಷ್ಟ ಬೇಕಾಗಿಯೂ ಇರುವುದಿಲ್ಲ. ಆ ವೇಳೆಯಲ್ಲೂ ಮನೆಯಿಂದಲೇ ಊಟ ತಂದು ಅದನ್ನು ಶಾಲೆಯ ಕೋಣೆಯ ಮೂಲೆಯಲ್ಲಾದರೂ ಮುಚ್ಚಿಟ್ಟು ಮಧ್ಯೆ ಬಂದು ನೆನಪಿಸಿ ಹೋಗುವ ಲಲಿತಕ್ಕ ಈ ಕಾರಣಕ್ಕಾಗಿಯೇ ಬಹಳ ಆಪ್ತವಾಗುತ್ತಾಳೆ. ಬಾವ ರಾಮು ಭಾಗವತ ಕೂಡ ಒಬ್ಬ ಪ್ರಾಮಾಣಿಕ ಶಿಕ್ಷಕ. ಮನೆಗೆ ಹೋದರಂತೂ ಅವರ ಆತಿಥ್ಯ ನಮ್ಮಿಂದಾಗುವಂಥದಲ್ಲ. ಮಗ ಶೋಧನ ಪ್ರತಿಭಾ ಸಂಪನ್ನ.
ನನ್ನ 88 ನೇ ಸಂಚಿಕೆ ಇದಾದರೂ ನಾಳೆ ನನಗೇನಾದರೂ ಆದರೂ ನನ್ನ ಸುತ್ತು ನಿಲ್ಲುವ 8 ಜನರಲ್ಲಿ ಇವಳೂ ಒಬ್ಬಳು. ನಾನೂ. ಲಲಿತಕ್ಕ ಮನಸ್ಸಿಗೆ ಥಟ್ಟನೆ ಬೇಸರ ಹಚ್ಚಿಕೊಳ್ಳುವ ಸ್ವಭಾವದವಳು. ಅನಾರೋಗ್ಯದ ನಡುವೆಯೂ ಸ್ವಾಭಿಮಾನಿಯಾಗಿ ಸಹೃದಯಿಯಾಗಿ ಪ್ರಾಮಾಣಿಕ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುವ ಅವಳು ಛಲವಾದಿ. ತಾನು ತನ್ನ ಕೆಲಸವನ್ನು ಉತ್ತಮಗೊಳಿಸುವ ಪ್ರಯತ್ನ ಅವಳಿಂದ ನಡೆದೇ ಇರುತ್ತದೆ.
ತಾನು ವಿಶೇಷ ತಿಂಡಿಯನ್ನು ಮಾಡಿದರೂ ಸಂದೀಪ ಬಂದೋಗೋ ಎಂದು ಫೋನಾಯಿಸಿ ಹೇಳುವ ಅವಳ ಮಮತೆಗೆ ನಾನು ಸಣ್ಣವನಾಗುತ್ತೇನೆ. ಕೇವಲ ಶಾಲೆ, ಪುಸ್ತಕ, ಬೋಧನೆ, ಇವಿಷ್ಟೇ ಆಗಿದ್ದರೆ ಶಾಲೆಯಲ್ಲಿ ಒಮ್ಮೊಮ್ಮೆ ನಿರ್ಜೀವವಾಗಿ ಬಿಡುತ್ತೇವೆ. ಒಮ್ಮೊಮ್ಮೆ ನಮ್ಮೊಳಗಿನ ಮಾತು, ಹಾಸ್ಯ, ವಿಷಯಗಳ ಸಂವಹನ, ನಮ್ಮನ್ನು ಮತ್ತಷ್ಟು ಉತ್ಸಾಹಿಯಾಗಿ ಪಾಠ ಮಾಡುವುದಕ್ಕೆ ಪೂರಕ ವಾತಾವರಣ ಕಲ್ಪಿಸುತ್ತದೆ.
ಲಲಿತಕ್ಕ ತಂದೆ ತಾಯಿಗಳಿಬ್ಬರನ್ನೂ ಕೆಲವೇ ದಿನಗಳ ಅಂತರದಲ್ಲಿ ಕಳೆದುಕೊಂಡು ಅನಾಥ ಪ್ರಜ್ಞೆ ಅನುಭವಿಸುವಾಗ ಮನಸ್ಸಿನೊಳಗೇ ನೊಂದವರು ನಾವು. ಪಾರ್ವತಕ್ಕ, ಗೀತಕ್ಕ, ಚಿತ್ರಕ್ಕ, ಶಿಲ್ಪಾ, ಶೃತಿ, ಶ್ರವಣ ಇವರೆಲ್ಲರೂ ಕುಟುಂಬದ ಸದಸ್ಯರಂತೇ ಕಾಣುತ್ತಾರೆ. ಊರಿನಲ್ಲೂ ಸಭ್ಯರಾಗಿ ಬದುಕುತ್ತಾರೆ. ತುಂಬು ಕುಟುಂಬದ ಒಗ್ಗಟ್ಟು, ಒಬ್ಬರಿಗೊಬ್ಬರು ಅವರು ಆಗುವ ರೀತಿ ಮಾದರಿಯಾದದ್ದು.
ಭಗವಂತ ಸಮಾಧಾನದಿಂದ ಬದುಕುವುದಕ್ಕೆ ಮಾಡಿಕೊಟ್ಟ ವ್ಯವಸ್ಥೆಯಲ್ಲಿ ಲಲಿತಕ್ಕಳದೂ ಒಂದು ಪ್ರಮುಖ ಪಾತ್ರ. ಕಷ್ಟ, ನಷ್ಟ, ನೋವು, ನಲಿವಿನ ಬಹುತೇಕ ಅಂಶಗಳನ್ನು ಅವಳು ಬಲ್ಲವಳಾಗಿರುತ್ತಾಳೆ. ನನ್ನ A.T.M secret number ಒಂದು ಗೊತ್ತಿಲ್ಲ ಅವಳಿಗೆ. ???
ಜೀವನವೇ ಹಾಗೆ ತಲೆ ನೇವರಿಸುವ ತಂದೆ, ಅತ್ತಾಗ ತೊಡೆಯ ಮೇಲೆ ಮಲಗಿಸಿಕೊಳ್ಳುವ ತಾಯಿ, ಸುಖದುಃಖಗಳಲ್ಲಿ ಸಮಾನವಾದ ಅರ್ಧಾಂಗಿ, ಸಾಂತ್ವನ ಹೇಳುವ ಸಹೋದರಿ, ಒಟ್ಟಿಗೆ ಆಡುವ ಅಣ್ಣ ತಮ್ಮಂದಿರು, ಸ್ನೇಹಿತರ ಬಳಗ, ಇವೆಲ್ಲವೂ ಬದುಕಿನ ರಂಗೇರಿಸುತ್ತದೆ. ಮರುಭೂಮಿಯಾಗಲು ಬಿಡದೆ ಕಾಯುವ ಇವರೆಲ್ಲರ ಶುಭ ಹಾರೈಕೆ ಇರುವಷ್ಟೂ ದಿನ ನಾನು ಜಗತ್ತಿನ ಅತಿ ಶ್ರೀಮಂತ.
ಸದ್ಗುರು ಶ್ರೀಧರರ ಆಶೀರ್ವಾದ ಲಲಿತಕ್ಕ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಲಲಿತಕ್ಕನಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
??????⚫⚪???????⚫⚪?????